‘ನೆಟ್ ನೋಟ’ ಸುಧೀಂದ್ರ ಹಾಲ್ದೊಡ್ಡೇರಿ ಅವರ ವಿಜ್ಞಾನ ಕುರಿತ ಅಂಕಣ ಬರಹಗಳಾಗಿವೆ. ಕೃತಿಗೆ ಬೆನ್ನುಡಿ ಬರೆದಿರುವ ಟಿ. ಆರ್. ಅನಂತರಾಮು ಅವರು, ವಿಜ್ಞಾನಲೋಕವನ್ನು ಬಗೆಗಣ್ಣಿನಲ್ಲಿ ನೋಡಿ ಓದುಗರಲ್ಲಿ ಬೆರಗು ಹುಟ್ಟಿಸಿದ ಮೋಡಿಗಾರ ಸುಧೀಂದ್ರ ಹಾಲ್ದೊಡ್ಡೇರಿ. ಜನಸಾಮಾನ್ಯರ ಎದೆಯೊಳಕ್ಕೆ ಹನಿಹನಿಯಾಗಿ ನೇರವಾಗಿ ಜಿನುಗುವ ಭಾಷೆ, ಪುಟಪುಟಗಳಲ್ಲೂ ಪುಟಿಯುವ ಶಬ್ದಲಾಲಿತ್ಯ, ಸಮಕಾಲೀನ ವಿಜ್ಞಾನ ತಂತ್ರಜ್ಞಾನಗಳತ್ತ ನೆಟ್ಟ ನೋಟ, ಸಂಶೋಧನೆಗಳಿಗೆ ಕಥೆಯ ಹಂದರ ತೊಡಿಸಿ ಓದನ್ನು ಸುಭಗಗೊಳಿಸಿದ ಲೇಖಕ. ಎಲ್ಲ ಮಾಧ್ಯಮಗಳೂ ಅವರ ಇರುವನ್ನು, ಬರುವನ್ನು, ಬರಹವನ್ನು ನಿರೀಕ್ಷಿಸುತ್ತಿದ್ದವು. ಅವರ ಯೋಚನಾಲಹರಿಯ ಬೀಸು, ವಿಸ್ತಾರ ಎರಡೂ ಹೈಜಂಪ್, ಲಾಂಗ್ಜಂಪ್ಗೆ ಹಾತೊರೆಯುತ್ತಿದ್ದವು. ಕನ್ನಡ ಸಾಹಿತ್ಯದ ಬಹುರೂಪಿ ಗುಣವನ್ನು ವಿಜ್ಞಾನ ಸಾಹಿತ್ಯಕ್ಕೆ ಯುಕ್ತವಾಗಿ ಬಳಸಿಕೊಂಡ ಜಾಣೆ ಅವರದು. ಬರಹದಲ್ಲಿ ವಚನಗಳ ಸಾಲು ಇಣುಕಿದವು-ದಾಸರ ಕೀರ್ತನೆಗಳು ಕುಣಿದವು. ಕನ್ನಡ ಕವಿಗಳ ಪ್ರಸಿದ್ದ ಸಾಲುಗಳು ಮಿಂಚಿದವು, ಸಿನಿಮಾ ಹಾಡುಗಳಿಗೂ ಪ್ರವೇಶ ಕಲ್ಪಿಸಿದರು. ಆದರೆ ಎಲ್ಲೂ ಅದು ವಿಜ್ಞಾನಕ್ಕೆ ಕೃತಕ ಎನ್ನಿಸಲಿಲ್ಲ, ಅಲಂಕಾರದ ಮಾತಾಗಲಿಲ್ಲ, ಬದಲು ಲೇಖನದ ಸೊಗಡನ್ನು ಹೆಚ್ಚಿಸಿದವು. ಅವರ ಲೇಖನಗಳ ರೇಂಜ್? ನ್ಯಾನೋ ತಂತ್ರಜ್ಞಾನದಿಂದ ಹಿಡಿದು ಜೀನ್ ಎಡಿಟಿಂಗ್ವರೆಗೆ, ಸೊಳ್ಳೆಯಿಂದ ಹಿಡಿದು ಯುದ್ಧ ವಿಮಾನಗಳವರೆಗೆ ಅವರು ಸ್ಪರ್ಶಿಸದ ವಿಜ್ಞಾನ ವಿಷಯಗಳೇ ಇಲ್ಲ. ವಿಜ್ಞಾನವನ್ನು ವಜ್ರದೇಹಿ ಎಂಬ ಆರೋಪದಿಂದ ಮುಕ್ತಗೊಳಿಸಿ, ಅದರ ವಿಸ್ಮಯದ ಬಾಗಿಲನ್ನು ತೆರೆದರು. ಡಿ.ಆರ್.ಡಿ.ಓ. ಸಂಸ್ಥೆಯಲ್ಲಿ ಸುಧೀಂದ್ರ ಮಾಡಿದ್ದು ಸಂಶೋಧನೆ, ವಿಜ್ಞಾನ ಸಾಹಿತ್ಯದಲ್ಲಿ ಬರವಣಿಗೆಯ ನಿಗೂಢ ಆಯಾಮಗಳ ಶೋಧನೆ. ಇದರಿಂದ ಲಾಭವಾದದ್ದು ಕನ್ನಡ ಓದುಗರಿಗೆ ಕಳೆದ ನಾಲ್ಕು ದಶಕಗಳಿಂದ ಅವರು ಬರೆದ ವಿಜ್ಞಾನ ಲೇಖನಗಳನ್ನೆಲ್ಲ ಸಂಗ್ರಹಿಸಿ ಪ್ರಕಟಿಸಿದರೆ ಅದೇ ವಿಜ್ಞಾನದ ವಿಶ್ವಕೋಶ ಸಂಪುಟಗಳಾಗಬಹುದು, ಹೊಸ ತಲೆಮಾರಿನ ಲೇಖಕರಿಗೆ ಸ್ಫೂರ್ತಿಯ ಸೆಲೆಯಾಗಬಹುದು ಎಂದಿದ್ದಾರೆ.
ಈ ಕೃತಿಯು ಒಟ್ಟು 30 ಪರಿವಿಡಿಗಳನ್ನು ಹೊಂದಿದೆ. ಕೋವಿಡ್ ವಿರುದ್ದ ಲಸಿಕೆಯ ವಿರುದ್ದ ಕೊನೆಯಾಗಲಿದೆ ಹೋರಾಟ, ಬಯಲಾದ ಚೀನಾ ಹುನ್ನಾರ, ಮುಂದುವರಿದ ಕೊರುನಾ ಸಮರ, ರಾಜಕಾರಣ ಬದಿಗಿರಲಿ ನಮ್ಮ ವೈರತ್ವ ವೈರಸ್ ವಿರುದ್ಧ ಮಾತ್ರವಿರಲಿ, ಮುನ್ನಡೆಗೆ ಸ್ವಾವಲಂಬನೆಯ ಹೊರತು, ಅನ್ಯಮಾರ್ಗವಿಲ್ಲ, ಕೊರೊನಾ ಕುತ್ತಿಗೆಗೆ ಹಾಕಬಹುದೇ ವಿಟಮಿನ್ ಡಿ ಕುಣಿಕೆ, ಇಂದಿನಿಂದ ಆಗಸದಲ್ಲಿ ಧೂಮಕೇತು ದರ್ಶನ, ಕೊರೊನ ಲಸಿಕೆಯ ಮೇಲೆ ಸೈಬರ್ ದಗಾಕೋರರ ಕಣ್ಣು, ಚೀನಾ ದಾಳಿ ಎದುರಿಸಲು ನಾವು ಸಜ್ಜಾಗಿದ್ದೇವೆಯೇ, ಪ್ರತಿರೋಧವೇ ತೋರದ ವಿದ್ಯುತ್ ವಾಹಕ, ಬೆಳ್ಳಿಚುಕ್ಕಿಯಲ್ಲಿ ಕಂಡ ಜೀವಧಾತು, ಆತ್ಮನಿರ್ಭರದ ಮೊದಲ ಕನಸುಗಾರ ವಿಕ್ರಮ್ ಸಾರಾಭಾಯ್, ಕಾಫಿ ಚಟ ಅನುವಂಶಿಕವೇ ಪರಿಸರ ಪ್ರೇರಿತವೇ ಮುಂತಾದ ಅಧ್ಯಾಯಗಳನ್ನು ಪರಿವಿಡಿಯಲ್ಲಿ ಹೊಂದಿದೆ.
ಸುಧೀಂದ್ರ ಹಾಲ್ದೊಡ್ಡೇರಿ ಖ್ಯಾತ ವಿಜ್ಞಾನ ಬರೆಹಗಾರರು. ಬೆಂಗಳೂರಿನ ಯು.ವಿ.ಸಿ.ಇ ಯಿಂದ ಬಿ.ಇ. ಹಾಗೂ ಮದ್ರಾಸಿನ ಐಐಟಿ ಯಿಂದ ಎಂ.ಟೆಕ್ ಪದವೀಧರರು. ಪ್ರತಿಷ್ಠಿತ ಸಂಸ್ಥೆಗಳಾದ ಐಐಎಸ್ ಸಿ, ಡಿ.ಆರ್ ಡಿಓ, ಎಚ್.ಎ.ಎಲ್ ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ವೈಮಾಂತರಿಕ್ಷ ಕಂಪನಿಯ ತಾಂತ್ರಿಕ ಸಲಹೆಗಾರರಾಗಿದ್ದರು. ಲೋಕಶಿಕ್ಷಣ ಟ್ರಸ್ಟ್ ನ ಕಸ್ತೂರಿ ಮಾಸಪತ್ರಿಕೆಯಲ್ಲಿ ‘ನವನವೋನ್ಮೇಷ’ ಶೀರ್ಷಿಕೆಯ ಹಾಗೂ ಸಂಯುಕ್ತ ಕರ್ನಾಟಕದಲ್ಲಿ ‘ಸೈನ್ಸ್ ಕ್ಲಾಸ್’ ಮತ್ತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ‘ನೆಟ್ ನೋಟ’ ಶೀರ್ಷಿಕೆಯ ಅಂಕಣಕಾರರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯರೂ ಆಗಿದ್ದರು. ಏಳು ವರ್ಷ ಕಾಲ ಅವರು ವಿವಿಧ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬೋಧನೆ ಮಾಡಿದ್ದಾರೆ. ಕೃತಿಗಳು: ಸದ್ದು! ಸಂಶೋಧನೆ ನಡೆಯುತ್ತಿದೆ, ...
READ MORE