‘ನನ್ನವರ ಹಾಡು’ ಲೇಖಕ ಬಸವರಾಜ ಸಬರದ ಅವರ ಕವನ ಸಂಕಲನ. ಈ ಕೃತಿಗೆ ಚಂದ್ರಶೇಖರ ಪಾಟೀಲರ ಬೆನ್ನುಡಿ ಬರಹವಿದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘1976ರ ಹೋರಾಟ ಕವನ ಸಂಕಲನದ ಮೂಲಕ ಉತ್ತರ ಕರ್ನಾಟಕದ ಗಂಡು ಕನ್ನಡದ ಮೇಲಿನ ತಮ್ಮ ಹಿಡಿತವನ್ನು ಸಾಬೀತುಗೊಳಿಸಿದ ಬಸವರಾಜ ಸಬರದ ಈ ನಾಲ್ಕು ವರ್ಷಗಳಲ್ಲಿ ಬದುಕಿನ ಬಗ್ಗೆ ತಮ್ಮ ನಿಲುವುಗಳನ್ನು ಸ್ಪಷ್ಟಗೊಳಿಸಿಕೊಳ್ಳುವ ಹೋರಾಟದಲ್ಲಿ ತೊಡಗಿದ್ದಾರೆ. ನನ್ನವರ ಹಾಡು ಸಂಕಲನದಲ್ಲಿ ವೈಯಕ್ತಿಕ ನೋವು-ನಲಿವುಗಳನ್ನು ಮೀರಿದ ಸಾಮೂಹಿಕ ಅನುಭವಕ್ಕೆ ದನಿಕೊಡುವ ಪ್ರಯತ್ನವಿದೆ. ರಕ್ತ ಮಾಂಸದ ಕವಿತೆ ಬೇಕಾಗಿದೆ, ಹೊಗಳು ಭಟ್ಟರ ಹಾಡು ಸಾಕಾಗಿದೆ ಎನ್ನುವಲ್ಲಿ ಜನಮನ ಮುಟ್ಟುವ ಹಂಬಲವಿದೆ. ‘ಕೆಳಗಿನವರು’. ‘ರೂಢಿಸಿಕೊಂಡವರು’ ಕವನಗಳಲ್ಲಿ ಯಥಾಸ್ಥಿತಿಯ ವಿಷಾದವಿದೆ, ಜೊತೆಗೆ ಈ ಗುಡಿಸಲುಗಳಲ್ಲೀಗ ಬೆಂಕಿಯ ಉಂಡೆಗಳು, ಸಿದ್ಧಗೊಳ್ಳುತ್ತಿವೆ ಎಂಬ ಸಾಲುಗಳಲ್ಲಿ ಕ್ರಾಂತಿಯ ಮೊದಲ ಹಂತದ ಲಕ್ಷಣಗಳಿವೆ, ಜನಪದ ಕಾವ್ಯದ ಅಭಿವ್ಯಕ್ತಿಯ ರೀತಿಗಳನ್ನು ಮೈಗೂಡಿಸಿಕೊಳ್ಳುವುದು ಇಂದಿನ ಅನಿವಾರ್ಯತೆಯಾಗಿದೆ. ಈ ದೃಷ್ಟಿಯಿಂದ ಬಸವರಾಜರ ರಕ್ತಮಾಂಸದ ಹಾಡು ಹಾಗೂ ರಕುತದ ಕಾಲೀವಿ ಹರಿದಾವೋಗಳು ಅತ್ಯಂತ ಸ್ವಾಗತಾರ್ಹ ಪ್ರಯೋಗಗಳಾಗಿವೆ ಎಂದು ಚಂಪಾ ಮೆಚ್ಚುಗೆ ಸೂಚಿಸಿದ್ದಾರೆ.
ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ನನ್ನವರ ಹಾಡು, ಹೋರಾಟ, ...
READ MORE