‘ಮಾತು- ಚಿಟ್ಟೆ ಬೆಂಕಿ- ಬೆರಳು ಮುರಿದ ಮುಳ್ಳಿನಂತೆ ಜ್ಞಾನ’ ಕೃತಿಯು ಸಂಧ್ಯಾದೇವಿ ಅವರ ಕವನಸಂಕಲನವಾಗಿದೆ. ಕೃತಿಗೆ ಮುನ್ನಡಿ ಬರೆದಿರುವ ಕಿ.ರಂ ನಾಗರಾಜ ಅವರು, ಕಾವ್ಯವನ್ನು ಆಪ್ರಚಿಂತನೆಯ ಗಂಭೀರ ಧ್ಯಾನವನ್ನಾಗಿ ಸ್ವಂತದ ಅನಾವರಣಕ್ಕಾಗಿ ಭಿತ್ತಿಯಾಗಿಸಿಕೊಳ್ಳುವ ನೆಲೆಗೆ ಒಂದು ಪರಂಪರೆಯೇ ಇದೆ. ತನ್ನ ಸ್ವಂತವನ್ನು ಯಾವ ಹಂಗುಗಳಿಲ್ಲದೆ ಆಪ್ತವಾಗಿ ಅಭಿವ್ಯಕ್ತಿಸುವುದು ಅಷ್ಟು ಸುಲಭವಲ್ಲ, ಇದು ಕೆಲವೊಮ್ಮೆ ಸಹಜವಾಗಿ ಮೂಡಬಹುದು. ಹಾಗಲ್ಲದಿದ್ದರೆ ಕವಿಯ ನಿರಂತರ ಪ್ರಯತ್ನಶೀಲತೆಯಿಂದ ಸಾಧಿಸಲು ಸಾಧ್ಯ, ಸಂಧ್ಯಾದೇವಿಯವರು ತಮ್ಮ 'ಮಾತು - ಚಿಟ್ಟೆ', 'ಬೆಂಕಿ - ಬೆರಳು', 'ಮುರಿದ ಮುಳ್ಳಿನಂತೆ ಜ್ಞಾನ ಎಂಬ ಹೆಸರಿನ ತಮ್ಮ ಕವಿತೆಗಳನ್ನು ಕಾವ್ಯಾಸಕ್ತರ ಹತ್ತಿರಕ್ಕೆ ಒಯ್ದಿದ್ದಾರೆ. ಅವರು ಈ ಹಿಂದೆ ಯಾವ ಕವಿತೆಗಳನ್ನೂ ಪ್ರಕಟಿಸಿದವರಲ್ಲ. ಅವರು ಬರೆದ ಕವಿತೆಗಳನ್ನು ಕಾವ್ಯಾಸಕ್ತರೊಂದಿಗೆ ಓದುತ್ತ ಬಂದಿದ್ದರು. ಈಗ ಸಹೃದಯರು ಅವರ ಕವಿತೆಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಕವಿತೆಗಳ ಹರಹು ತುಂಬ ವ್ಯಾಪಕವಾದದ್ದು, ಕೆಲವು ಕವಿತೆಗಳಿಗೆ ಶೀರ್ಷಿಕೆಗಳಿವೆ. ಮತ್ತಷ್ಟು ಕವಿತೆಗಳಿಗೆ ಶೀರ್ಷಿಕೆಗಳಿಲ್ಲ. ಆದರೂ ಕವಿತೆಗಳನ್ನು ಓದಿ ಅನುಭವಿಸಲು ಯಾವ ಅಡ್ಡಿ ಆತಂಕಗಳೂ ಇಲ್ಲ. ಈ ಕವಿತೆಗಳು ಸಂವಾದರೂಪಿ ಕವಿತೆಗಳು, ಕವಯಿತ್ರಿ ತನ್ನೊಂದಿಗೆ ಮಾತನಾಡಿಕೊಳ್ಳುತ್ತಿರುವಂತೆಯೇ ತನ್ನ ಸುತ್ತಣ ಅಸಂಖ್ಯ ಆಗುಹೋಗುಗಳೊಂದಿಗೆ ಸಂವಾದಿಸುತ್ತಿದ್ದಾರೆ. ಹಾಗೆ ನೋಡಿದರೆ ಇಡೀ ಪರಿಸರ ಇವರ ಕಾವ್ಯಕ್ಕೆ ಧಾತುಗಳನ್ನು ಒದಗಿಸಿಕೊಟ್ಟಿದೆ. ನೋಡುವಿಕೆಯ ಹಲವು ಪರಿಗಳು ಅಲೆಗಳಂತೆ ಅಸಂಖ್ಯ ವೈವಿಧ್ಯಮಯ ರೂಪಗಳನ್ನು ಕಾಣಿಸುತ್ತ ಹರಡಿಕೊಂಡಿವೆ. ಪ್ರೀತಿ, ವಿರಹ, ಸ್ನೇಹ, ಸೂರ್ಯ - ಚಂದ್ರ, ನಕ್ಷತ್ರ, ಗಾಳಿ, ಬೆಳಕು, ಕತ್ತಲೆ, ಹಕ್ಕಿ - ಹೀಗೆ ದಟ್ಟವಾದ ವಿವರಗಳ ವಸ್ತು ಜಗತ್ತು ಈ ಕವಯಿತ್ರಿಯ ಧ್ಯಾನಶೀಲ ವಲಯದಲ್ಲಿ ಕ್ರಿಯಾಶೀಲವಾಗಿ ವಿಕಾಸಗೊಳ್ಳುತ್ತದೆ. ಅಸ್ತಿತ್ವದ ಕೇಂದ್ರದಲ್ಲಿ ನಿಂತು ಎಲ್ಲ ಬಗೆಯ ರಹಸ್ಯಮಯತೆಗೆ ಎದುರಾಗಬೇಕೆಂಬ ತಹತಹಕ್ಕೆ ಕೊನೆಯಿಲ್ಲವೆಂದ ಕವಯಿತ್ರಿ ಭಾವಿಸಿದ್ದಾರೆ. ಮೊದಲೆ ಹೇಳಿದ ಈ ಸಂವಾದಕ್ಕೆ ಹಲವು ಆಯಾಮಗಳಿವೆ. ಈ ಸಂವಾದ ಮನುಷ್ಯನ ಅಸ್ತಿತ್ವದಲ್ಲಿ ನಿರಂತರವಾಗಿ ಕಾಡುವ ಪ್ರಶ್ನೆಗಳ ಒಂದು ದೊಡ್ಡ ಸರಪಳಿ, ಪ್ರಶ್ನೆಗಳನ್ನು ಎದುರಿಸುವುದರಿಂದ ಉತ್ತರಗಳನ್ನು ಕಂಡುಕೊಳ್ಳಲೇಬೇಕೆಂಬ ಹಠವಿರುವುದಿಲ್ಲ. ಹಾಗೊಂದು ವೇಳೆ ಉತ್ತರ ಎನ್ನಿಸಿದ್ದು ಮತ್ತೆ ಪ್ರಶ್ನೆಗಳಾಗಿ ಪ್ರತ್ಯಕ್ಷವಾಗುತ್ತವೆ. ಹೀಗೆ ಹುಟ್ಟುವ ಪ್ರಶ್ನೆಗಳಿಗೆ ಉತ್ತರಗಳಿವೆ ಎನ್ನುವುದಾಗಲಿ, ಪ್ರಶ್ನೆಗಳು ಶಾಶ್ವತವಾಗಿ ಇಲ್ಲವಾಗುತ್ತವೆ ಎನ್ನುವ ಸಂದರ್ಭಗಳಾಗಲಿ ಇರುವುದಿಲ್ಲ. ಇಂತಹ ಗಾಢವಾದ ನಂಬಿಕೆ ಇಲ್ಲದ ಸಂದರ್ಭದಲ್ಲಿಯ ಮಹತ್ವದ ಕಾವ್ಯ ಹುಟ್ಟುತ್ತದೆ ಎನಿಸುತ್ತದೆ. ಇಲ್ಲಿನ ಕವಿತೆಗಳು ವಿಶಿಷ್ಟ ಬಗೆಯ ಮನೋಶೋಧನೆಯ ಆಶಯದಿಂದ ರೂಪುಗೊಂಡಂಥವುಗಳು. ಈ ಶೋಧನೆಗೆ ವೈವಿಧ್ಯಮಯ ಆಸಕ್ತಿಗಳಿವೆ. ದೇಹ ಮನಸ್ಸು ಹಾಗೂ ತನ್ನ ಸುತ್ತಣ ಜಗತ್ತಿನ ವಿವರಗಳ ಮೂಲಕ ಕಂಡುಕೊಂಡ ಅನುಭೂತಿಗಳನ್ನು ತನ್ನ ಪ್ರಜ್ಞೆಯ ಮೂಲಕ ಅವಸ್ಥಾಂತರಗೊಳಿಸುವ ಆಶಯವಿದೆ. ಬಹುತೇಕ ಕವಿತೆಗಳಿಗೆ ಅಂತರಂಗದ ಶ್ರದ್ಧೆಯ ದಾರಿ ಮುಖ್ಯಪ್ರಾಣವೆಂಬಂತ ಬೆಸೆದುಕೊಂಡಿದೆ. ಹೀಗಾಗಿ ಇಲ್ಲಿನ ಸಂವಾದಗಳನ್ನು ಓದುತ್ತ ಹೋದಂತೆಲ್ಲ ಸೂಕ್ಷ್ಮವಾದ ಅಂತರ್ನಾಟಕವೊಂದು ಶಬ್ದ ಚಿತ್ರಗಳ ಮೂಲಕ ಬಯಲಾಗುತ್ತದೆ. ನಿರೂಪಕಿ ತಾನು ಅನುಭವಿಸಿದ ಈ ಅಂತರಂಗದ ನಾಟಕವನ್ನು ಓದುಗರ ಮನೋರಂಗಕ್ಕೆ ದಾಟಿಸುವ ಪ್ರಕ್ರಿಯೆ ಇಲ್ಲಿನ ಕವಿತೆಗಳಲ್ಲಿ ಕಾಣಿಸುತ್ತದೆ. ಈ ಸಾಲುಗಳನ್ನು ನೋಡಿ : ಮನಸ್ಸು ಗುಟ್ಟಾಗಿ ನಡುಗಿದರೆ ಮೈಯೂ ನಡುಗುತ್ತದೆ. ಕಂಪನಕ್ಕೆ ಕಂಪನದ ಸ್ನೇಹ ನಾವು ಹಚ್ಚ ಬೇಕಿಲ್ಲ ಹತ್ತಿರ ಹತ್ತಿರವಾದರೆ ಅದೇ ಹೊತ್ತಿಕೊಳ್ಳುತ್ತದ ದೀಪ. ಕದ್ದು ಮುಟ್ಟಿದರೂ ಮುಚ್ಚಿಕೊಳ್ಳುವುದಿಲ್ಲ ಬೆಳಕು ಉನ್ಮೀಲನದ ನೀಲ - ಕಡು ರಾತ್ರಿಯಾಕಾಶದ ನೀಳ ನೀಹಾರಿಕೆ. ಇವೆಲ್ಲಾವುಗಳು ಈ ಕೃತಿಯಲ್ಲಿ ಅಡಕವಾಗಿದೆ.
ಕವಯಿತ್ರಿ ಸಂಧ್ಯಾದೇವಿ ಮೂಲತಃ ಪುತ್ತೂರಿನವರು. `ಮಾತು ಚಿಟ್ಟೆ, ಬೆಂಕಿ ಬೆರಳು, ಮುರಿದ ಮುಳ್ಳಿನಂತೆ ಜ್ಞಾನ' ಅವರ ಮೊದಲ ಕವನ ಸಂಕಲನ. ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಹಲವಾರು ಕವಿತೆಗಳು ಮಯೂರ, ಸುಧಾ, ಹೊಸ ಮನುಷ್ಯ ಮುಂತಾದ ಮಾಸಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಝಳಕ್ಕೆ ಮುಖ ಬೆಳಗುತ್ತದೆ ಮತ್ತು ‘ನೆನಪಿನ ಬೂದಿಗೆ ಜೀವ ಬರಲಿ’ ಅವರ ಮತ್ತೆರಡು ಕವನ ಸಂಕಲನ. ...
READ MORE