ಲೇಖಕಿ ಭುವನಾ ಹಿರೇಮಠ ಅವರ ಕವನ ಸಂಕಲನ-ʼಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆʼ ಕೃತಿಗೆ ಮುನ್ನುಡಿ ಬರೆದ ವಿಮರ್ಶಕ ಡಾ. ಓ.ಎಲ್. ನಾಗಭೂಷಣಸ್ವಾಮಿ ಅವರು ‘ಲೇಖಕಿಯು ಕವಿತೆಯ ದನಿಯಲ್ಲೂ ಸೂಕ್ಷವಾದ ಪಲುಕು ತರುವುದಕ್ಕೆ ಗಮನ ಕೊಟ್ಟಿದ್ದಾರೆ. ತತ್ವಪದ ಹಾಗೂ, ಜಾನಪದ ಅಂಶಗಳ ನೆರಳು ಇರುವಂಥ ಹಲವು ರಚನೆಗಳು ಈ ಸಂಕಲನದಲ್ಲಿದೆ. ಈ ಸಂಕಲನದ ಮೊದಲ ಹತ್ತು ರಚನೆಗಳು ಪಾರಂಪರಿಕವೆನ್ನಬಹುದಾದ ರೂಪ ಮತ್ತು ಆಧುನಿಕವೆನ್ನಬಹುದಾದ ಸಂವೇದನೆಗಳ ಮಿಶ್ರಣದ ಪ್ರಯೋಗಗಳಾಗಿ ಕಾಣುತ್ತವೆ. ದೇವರು, ಹೆಣ್ಣಿನ ಸ್ಥಿತಿ, ಗಂಡು ಹೆಣ್ಣುಗಳ ಆಪ್ತಲೋಕ, ಸಹಿಸಲು ಆಗದು ಅನಿಸುವ ವಾಸ್ತವಲೋಕ, ಸಾವು, ಕಾಮ, ಸ್ವಪ್ನಸ್ಥಿತಿ, ಈ ವಿಷಯ ವಸ್ತುಗಳು ಸಂಕಲನದಲ್ಲಿ ಮತ್ತೆ ಶೋಧನೆಗೆ ಒಳಪಡುವಂಥಹ ಹತ್ತು ರಚನೆಗಳಾಗಿ ಓದುಗರಿಗೆ ದೊರೆಯುತ್ತದೆ. ಸರಳಗೊಳಿಸಿ ಹೇಳಬಹುದಾದ ಮಾತೆಂದರೆ, ಆಪ್ತಲೋಕ, ವಾಸ್ತವಲೋಕ, ಮತ್ತು ಮೇಲೆ ಹೇಳಿರುವ ಹಲವು ಅಂಶಗಳು ಈ ಸಂಕಲನದ ರಚನೆಯಲ್ಲಿ ಮತ್ತೆ ಮತ್ತೆ ಶೋಧಕ್ಕೆ ಒಳಗಾಗುತ್ತವೆ. ಅದೇ ಕಾರಣಕ್ಕೆ ಈ ಕೃತಿಯಲ್ಲಿ ಭುವನಾ ಅವರ ಕಾವ್ಯಾಸಕ್ತಿ ಗಹನವಾದದ್ದು ಅನಿಸುತ್ತದೆ ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭುವನಾ ಹಿರೇಮಠ ಅವರ ಪೂರ್ಣ ಹೆಸರು ಭುವನೇಶ್ವರಿ ರಾಚಯ್ಯ ಹಿರೇಮಠ. ಹುಟ್ಟೂರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮನಟ್ಟಿ ಎಂಬ ಪುಟ್ಟ ಹಳ್ಳಿ. ತಂದೆ- ರಾಚಯ್ಯ (ಪ್ರವಚನಕಾರರು), ತಾಯಿ - ಶಿವಗಂಗಾ. ಸದ್ಯ ಬೆಳಗಾವಿ ಜಿಲ್ಲೆಯ ಹಿರೇನಂದಿಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆಯ ಹವ್ಯಾಸವಿರುವ ಭುವನಾ ಹಿರೇಮಠರ ಮೊದಲ ಕವನ ಸಂಕಲನ ಟ್ರಯಲ್ ರೂಮಿನ ಅಪ್ಸರೆಯರು ಕೃತಿ ಪ್ರಕಟಣೆಗೊಂಡಿದೆ. 2020ರಲ್ಲಿ ಅವರ 'ಹಸಿರು ಪೈಠಣ ಸೀರಿ' ಕಥೆಗೆ ವಿಜಯ ಕರ್ನಾಟಕ ಯುಗಾದಿ ಕತಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ದೊರೆತಿದೆ. ...
READ MORE