'ಮಾನವತಾವಾದಿ ಬಸವಣ್ಣ' ಎಂ. ಬಸವಣ್ಣನವರ ಕೃತಿ. ಈ ಕೃತಿಯ ಕುರಿತು ಬರೆದಿರುವ ಅವರು ನಾನೊಬ್ಬ ಮನೋವಿಜ್ಞಾನದ ವಿದ್ಯಾರ್ಥಿ. ಏನಾದರೂ ಬರೆಯುವುದಿದ್ದರೆ ಅದು ಮನೋಜ್ಞಾನವನ್ನು ಕುರಿತಾಗಿಯೆ. ಕಲ್ಯಾಣದ ಬಸವಣ್ಣನನ್ನು ಕುರಿತು ಬರೆಯಬೇಕಾಗಿ ಬಂದದ್ದು ಆಕಸ್ಮಿಕ ಎಂದಿದ್ದಾರೆ. ಜೊತೆಗೆ ಅದು ನಡೆದದ್ದು ಹೀಗೆ. ನಾನು 2015ರಲ್ಲಿ ಭಕ್ತಿಯನ್ನು ಕುರಿತು ಒಂದು ಲೇಖನ ಬರೆಯಬೇಕಾಗಿ ಬಂತು. ನನ್ನ ಪ್ರಕಾರ ಭಕ್ತಿ ಒಂದು ಮಾನಸಿಕ ಪ್ರಕ್ರಿಯೆ. ಅದನ್ನು ಬರೆಯುವಾಗ ಭಕ್ತಿ ಎಂದರೇನು? ಅದು ಎಲ್ಲಿ ಹುಟ್ಟಿ, ಹೇಗೆ ಬೆಳೆಯಿತು, ಮುಂತಾದ ವಿವರಗಳನ್ನೆಲ್ಲಾ ಬರೆಯುವಾಗ, 12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಭಕ್ತಿ ಪಂಥವನ್ನು ಬೆಳಗಿಸಿದ ಭಕ್ತಿ ಭಂಡಾರಿ ಬಸವಣ್ಣನವರನ್ನು ಕುರಿತು ಹತ್ತಾರು ವಾಕ್ಯಗಳನ್ನು ಬರೆದಿದ್ದೆ. ಆ ಲೇಖನ ನನ್ನದೊಂದು ಪುಸ್ತಕದಲ್ಲಿ ಪ್ರಕಟವಾಯಿತು. ಆ ಪುಸ್ತಕ ನಾಲ್ಕಾರು ಸಾರಿ ಮರುಮುದ್ರಣಗೊಂಡು ಕನ್ನಡ ಓದುಗರ ಮೆಚ್ಚುಗೆಗೆ ಪಾತ್ರವಾಯ್ತು. ಅದನ್ನು ಓದಿದ ಕೆಲವರು ಬಸವಣ್ಣನನ್ನು ಕುರಿತು ಒಂದು ಲೇಖನ ಬರೆಯುವಂತೆ ನನ್ನನ್ನು ಒತ್ತಾಯಿಸಿದರು. ಅದರ ಪರಿಣಾಮವಾಗಿ ಒಂದು ಸುದೀರ್ಘವಾದ ಲೇಖನವನ್ನು ಬರೆದೆ. ಅದನ್ನು ನೋಡಿದ ಯುವ ಪ್ರಕಾಶಕ ಶ್ರೀ ಕೃಷ್ಣ ಚಂಗಡಿ ಒಂದು ಪುಟ್ಟ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿರುವರು. ಪರಿಣಾಮ ನಿಮ್ಮ ಮುಂದಿದೆ. ನನ್ನೆಲ್ಲಾ ಪುಸ್ತಕಗಳನ್ನು ಓದಿ ಪ್ರೋತ್ಸಾಹಿಸುತ್ತಿರುವ ಕನ್ನಡಿಗರು ಇದನ್ನೂ ಸ್ವೀಕರಿಸುವರೆಂದು ನಂಬಿದ್ದೇನೆ ಎಂದಿದ್ದಾರೆ.
ಎಂ.ಬಸವಣ್ಣ- ಹುಟ್ಟಿದ್ದು 1933, ಚಾಮರಾಜನಗರ ಜಿಲ್ಲೆಯ ಮಂಗಲ ಗ್ರಾಮದಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಾಯೋಗಿಕ ಮನಃಶಾಸ್ತ್ರದಲ್ಲಿ 1955ರಲ್ಲಿ ಎಂ.ಎ.ಪದವಿ. ಕ್ಲಿನಿಕಲ್ ಮನಃಶಾಸ್ತ್ರದಲ್ಲಿ ನಿಮ್ಯಾನ್ಸ್ ನಿಂದ 1958ರಲ್ಲಿ ಡಿಪ್ಲೊಮಾ. 1970ರಲ್ಲಿ ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ. ಇದೇ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇರಿ 1993ರಲ್ಲಿ ಪ್ರಾಧ್ಯಾಪಕರಾಗಿ ವಿಶ್ರಾಂತರಾದರು. ತಮ್ಮ ಸಂಶೋಧನಾ ಲೇಖನಗಳನ್ನು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಿಸಿದರು. ಅಧ್ಯಾಪಕ ವೃತ್ತಿಯನ್ನು ಪ್ರೀತಿಸುವ ಬಸವಣ್ಣನವರು ವ್ಯಕ್ತಿತ್ವ ವಿಕಾಸದ ಬಗ್ಗೆ ವಿಶೇಷ ಆಸಕ್ತಿಯನ್ನು ವಹಿಸಿ, ದೇಶದ ಉದ್ದಗಲಕ್ಕೂ ಉಪನ್ಯಾಸಗಳನ್ನು ಕಮ್ಮಟಗಳನ್ನು ನಡೆಸಿದ್ದಾರೆ. ಗುಲ್ಬರ್ಗಾ, ಕರ್ನಾಟಕ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ...
READ MORE