ಲೇಖಕ ವೈಲೇಶ್ ಪಿ ಎಸ್ ಅವರ ಲೇಖನ ಮಾಲೆ ಮನದ ಇನಿದನಿ. ಹೆಸರೇ ಹೇಳುವಂತೆ ಮನದೊಳಗೆ ಮೂಡಿರುವ ಹಲವಾರು ಯೋಚನೆಗಳನ್ನು ತಮ್ಮದೇ ದನಿಯಾಗಿಸಿ ಅದಕ್ಕೊಂದು ಸ್ಪಷ್ಟ ರೂಪ ಕೊಟ್ಟು ಓದುಗರಿಗೆ ತಲುಪಿಸುವ ಉತ್ತಮ ಕಾರ್ಯದಲ್ಲಿ ಮನದ ಇನಿದನಿ ಮಹತ್ತರ ಪಾತ್ರ ವಹಿಸುತ್ತದೆ..ತನ್ನ ನಿತ್ಯ ಜೀವನದಲ್ಲಿ ಕಂಡು ಕೇಳಿದಂಥ ಹಲವಾರು ಸನ್ನಿವೇಶಗಳನ್ನು ತರ್ಕಬದ್ಧವಾಗಿ ವಿಶ್ಲೇಷಿಸಿ ಅದಕ್ಕೊಂದು ಚೌಕಟ್ಟು ಹೆಣೆದು ಓದುಗರಿಗೆ ತಲುಪಿಸುವ ಕಾರ್ಯಕ್ಕೆ ಮೆಚ್ಚಲೇಬೇಕು. ತಾನೊಬ್ಬ ಚಾಲಕರಾಗಿ ಹಲವಾರು ಊರು ನೋಡಿ ಜನಜೀವನವನ್ನು ಹತ್ತಿರದಿಂದ ಕಂಡು ಮನದಲ್ಲಿ ಮೂಡಿದ ಅನಿಸಿಕೆಗಳ ಮೊತ್ತವೇ ಈ ಮನದ ಇನಿದನಿ. ಈ ಕೃತಿಯಲ್ಲಿ ಒಟ್ಟು ಮೂವತ್ತೊಂಭತ್ತು ಲೇಖನಗಳಿದ್ದು ಎಲ್ಲವೂ ಭಿನ್ನ ಭಿನ್ನವಾದ ವಿಷಯಾಧಾರಿತ ಸಂಗ್ರಹವಾಗಿವೆ. ಕನ್ನಡ ಭಾಷೆಯಿಂದ ಹಿಡಿದು ಮಕ್ಕಳ ಪೋಷಣೆ, ಅತ್ಯಾಚಾರ, ಅಪಪ್ರಚಾರ ಮುಂತಾಗಿ ಯಾವ್ಯಾವ ವಿಭಾಗಗಳಲ್ಲಿ ಏನೇನು ನಡೆಯುತ್ತಿದೆ, ಅದು ಸಹ್ಯವೋ, ಅಸಹ್ಯವೋ, ಹೇಗಿರಬೇಕಿತ್ತು, ಯಾವ ದಿಕ್ಕಿಗೆ ಸಾಗುತ್ತಿದೆ ಎಂಬ ವಿಚಾರಗಳನ್ನು ಸೂಕ್ಷ್ಮವಾಗಿ ತಿಳಿಯುವಂತೆ ಪ್ರಸ್ತುತಪಡಿಸಿದ್ದಾರೆ. ಮತದಾನ ಮಾಡದೇ ಹೋದಲ್ಲಿ ಎಂತಹ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ, ಮತ ನೀಡದವನಿಗೆ ಮಾತಾಡುವ ಹಕ್ಕೆಲ್ಲಿ ಎಂಬುದಾಗಿ ಮತದಾನದ ದಿನ ದೂರದೂರಿಗೆ ಪ್ರವಾಸಕ್ಕೆ ತೆರಳುವ ಜನರನ್ನು ಪ್ರಶ್ನಿಸಿದ್ದಾರೆ. ಆಟೋ ಚಾಲಕರನ್ನು ಕೂಡಾ ಇಲ್ಲಿ ಸ್ಮರಿಸಿರುವುದು ಔಚಿತ್ಯಪೂರ್ಣವೇ ಆಗಿದೆ. ಕೆಲವರ ಹೊರತಾಗಿ ಜನರನ್ನು ಸರಿಯಾದ ಜಾಗಕ್ಕೆ ಕರೆದೊಯ್ಯುವ ಆಟೋಗಳು ಸ್ಥಗಿತಗೊಂಡರೆ ಜನಜೀವನ ಹೇಗೆ ಅಸ್ತವ್ಯಸ್ತ ಎಂಬುದನ್ನು ಚಿತ್ರಿಸಿದ್ದಾರೆ. ಅಲ್ಲದೆ ಶಿಕ್ಷಣ ವ್ಯವಸ್ಥೆಯನ್ನು ಪ್ರಶ್ನಿಸಿದ ಲೇಖಕರು ಎಂತಹ ಶಿಕ್ಷಣದ ಅಗತ್ಯವಿದೆ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸಿದ್ದಾರೆ..
ಲೇಖಕ ವೈಲೇಶ್ ಪಿ. ಎಸ್ ಅವರು ಮೂಲತಃ ಕೊಡಗಿನವರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರಾಗಿದ್ದಾರೆ. ಕೃತಿಗಳು: ಅಮ್ಮ ನಿನಗಾಗಿ (2018) , ಕಣ್ಮರೆಯಾದ ಹಳ್ಳಿ(2020), ಬೊಮ್ಮಲಿಂಗನ ಸಗ್ಗ(2021) (ಕವನಸಂಕಲನ) ...
READ MORE