‘ಮಹಿಳೆ ಮತ್ತು ಅಸಾಂಪ್ರದಾಯಿಕತೆ’ ಡಾ. ಧರಣೀದೇವಿ ಮಾಲಗತ್ತಿ ಅವರ ಲೇಖನ ಸಂಕಲನ. ಪ್ರಪಂಚದ ಅರ್ಧದಷ್ಟಿರುವ ಮಹಿಳಾ ಸಮುದಾಯ ಬದಲಾಗುತ್ತಿರುವ ಸಾಮಾಜಿಕ ಸ್ಥಿತಿಗತಿಯ ಜೊತೆಗೆ ಹೊಸ ಹೊಸ ಸವಾಲುಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಿದೆ. ತಾತ್ವಿಕ ನೆಲೆಗಟ್ಟಿನಾಚೆಗೆ ವಾಸ್ತವದ ಪರ-ವಿರೋಧ ನೆಲೆಗಳನ್ನು ಆರಿಸಿ ಬಗೆಹರಿಸುವ ಅವಕಾಶಗಳು ಮಹಿಳಾ ಚಿಂತನೆಯೆಡೆಗೆ ಇನ್ನಷ್ಟು ಆಳವಾಗಿ ನೋಡುವೆಡೆಗೆ ಪ್ರೇರೇಪಿಸಿವೆ. ಸಮಾನತೆಯ ಆಶಯಗಳು ಬರಿಮಾತಿನ ಬಂಧನದಿಂದ ಬಿಡಿಸಿಕೊಂಡು ಬದುಕಿನ ಬಯಲಲ್ಲಿ ಉಸಿರಾಡಬೇಕಿದೆ. ಬದುಕಿನ ರಾಜಮಾರ್ಗದಲ್ಲಿ ಸಿದ್ಧಾಂತಗಳು ದಾರಿದೀಪವಾಗಬಹುದು. ಆದರೆ ಬದುಕಿನ ಸಂತೆಯಲ್ಲಿ ಸಿದ್ಧಾಂತಗಳ ಬೆಲೆ ಬಿಡುಗಾಸಿನಷ್ಟು ಮಾತ್ರ ಇದು ಆಕ್ಷೇಪಾರ್ಹ ನುಡಿಯೆಂದು ಭಾವಿಸಬಾರದು. ಸಿದ್ಧಾಂತಗಳನ್ನೆಷ್ಟೇ ಖರ್ಚು ಮಾಡಿದರೂ ಮಹಿಳಾಮೂಲದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಸಂತೆಯಿಂದ ರಾಜಮಾರ್ಗಕ್ಕೆ ಕಾಲಿಡಲು ಎಲ್ಲರಿಗೂ ಅವಕಾಶ ಸಿಗುವುದು ದುಸ್ತರ. ಮಹಿಳೆಯ ಸಾಂಪ್ರದಾಯಿಕ ಗುಣವೇ ಆಕೆಯನ್ನು ಕಟ್ಟಬಹುದು. ಹಾಗಾಗಿ ವ್ಯವಸ್ಥೆಯ ಹಲಬಗೆಯ ವಿರೋಧಗಳನ್ನು ಎದುರಿಸುವ, ನಿಭಾಯಿಸುವ, ಹೊಂದಾಣಿಕೆ ಮಾಡಿಕೊಳ್ಳುವ, ಸಮತೋಲನ ಕಾಯ್ದುಕೊಳ್ಳುವ ಅಸಾಂಪ್ರದಾಯಿಕತೆಯ ಗೂಡನ್ನು ಬೆಚ್ಚಗೆ ಕಟ್ಟಿ ಗಟ್ಟಿಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಇದೊಂದು ಚಿಂತನೆಗೆ ಹಚ್ಚುವ ಕೃತಿ. ಇಲ್ಲಿ ಅಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ಮಹಿಳೆ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಮಹಿಳಾ ವಿಮೋಚನೆ, ಪರಂಪರೆ, ಆಧುನಿಕತೆ ಮತ್ತು ಮಹಿಳೆ, ಲಿಂಗಾನುಪಾತದಲ್ಲಿ ಇಳಿಕೆ- ಒಂದು ವಿಶ್ಲೇಷಣೆ, ವಿಪತ್ತು ನಿರ್ವಹಣೆ ಮತ್ತು ಮಹಿಳಾ ಕಾಳಜಿ, ಅಂತರ್ಜಾತೀಯ ವಿವಾಹಗಳ ಕುರಿತ ಹೊಸ ವಿರೋಧದ ನೆಲೆಗಳು, ಕನ್ನಡ ಮನಸ್ಸು-ಮಹಿಳಾ ಚಳವಳಿಗಳು ಎಂಬ 7 ಲೇಖನಗಳು ಸಂಕಲನಗೊಂಡಿವೆ.
ಕವಿ, ಮಹಿಳಾಪರ ಸಾಹಿತಿ ಧರಣೀದೇವಿ ಮಾಲಗತ್ತಿ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಉದ್ದೆಗಳನ್ನು ನಿರ್ವಹಿಸಿ ಸದ್ಯ ಐ.ಪಿ.ಎಸ್. ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವರಾದ ಧರಣೀದೇವಿಯವರ ತಂದೆ- ಪಿ.ದೂಮಣ್ಣ ರೈ, ತಾಯಿ- ದೇವಕಿ ಡಿ.ರೈ. ಕುಕ್ಕಾಜೆ. ಬಿಬಿಎಂ ಹಾಗೂ ಎಂ.ಕಾಂ. ಕನ್ನಡ ಎಂ.ಎ ಪದವೀಧರೆಯಾಗಿರುವ ಅವರು ನಿರ್ವಹಣಾ ಶಾಸ್ತ್ರದಲ್ಲಿ ಪಿ.ಹೆಚ್.ಡಿಯನ್ನು ಪಡೆದಿದ್ದಾರೆ. 1990ರಿಂದ 1991 ರ ವರೆಗೆ ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಿಯಾಗಿ, 1991 ರಿಂದ 1993 ರ ವರೆಗೆ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, 1993ರಿಂದ 94ರ ವರೆಗೆ ...
READ MORE