ಮಹಿಳೆಯರಿಗೆ ಸಂಬಂಧಿಸಿದ ಭ್ರಮೆ ಮತ್ತು ವಾಸ್ತವಗಳ ಚಿಂತನೆ ಅಗತ್ಯ ಹಾಗೂ ಉಪಯುಕ್ತ ಎನ್ನುವ ‘ಮಹಿಳೆ ಭ್ರಮೆ ಮತ್ತು ವಾಸ್ತವ’ ಕೃತಿಯು ಬಿ. ರಾಜಶೇಖರಮೂರ್ತಿ ಹಾಗೂ ಎ.ವಿ. ಲಕ್ಷ್ಮೀನಾರಾಯಣ ಅವರ ಸಂಪಾದಿತ ಲೇಖನಸಂಕಲನವಾಗಿದೆ. ಭಾರತದ ಸಂದರ್ಭದಲ್ಲಿ ಇದೊಂದು ಸತ್ಯಶೋಧ ಎನ್ನುವ ಈ ಕೃತಿಯು, ಪುರುಷ ಪ್ರಧಾನ ಸಾಮಾಜಿಕ ಆರ್ಥಿಕ ವ್ಯವಸ್ಥೆಯ ಫಲವಾಗಿ ತಾಳಮೇಳವಿಲ್ಲದ ಅಸಮಾನತೆಗೆ ಸಾಕ್ಷಿಯಾದ ಭಾರತದ ಬದುಕು, ಮಾತು ಮತ್ತು ಮೌನಗಳ ಮುಖಾಮುಖಿಯಲ್ಲಿ ಸರಿದಾರಿಗೆ ಬರಲು ಸೆಣಸುತ್ತಲೇ ಇದೆ ಎನ್ನುವುದನ್ನು ತಿಳಿಸುಯತ್ತದೆ. ಮಹಿಳೆಯರ ಬದುಕಿನ ಬೆಂಕಿ ಪಯಣಕ್ಕೆ ಅವಕಾಶ ಕೊಡದ ವಾಸ್ತವದ ಉರಿಯಲ್ಲಿ ನರಳುವಂತಾಗಿದೆ. ಈ ‘ಉರಿಯ ಉಯ್ಯಲೆ’ಯ ಅನುಭವವು ಸಾಹಿತ್ಯಾದಿ ಕಲೆಗಳಲ್ಲಿ ಸಮರ್ಥವಾಗಿ ಅಭಿವ್ಯಕ್ತಗೊಂಡಿದೆ ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕೃತಿಯಲ್ಲಿ 15 ಪರಿವಿಡಿಗಳಿದ್ದು, ರಾಜಶಾಹಿ ವ್ಯವಸ್ಥೆ ಮತ್ತು ಮಹಿಳೆ(ಗೀತಾ ವಸಂತ), ಪರಂಪರೆ ಮತ್ತು ಆಧುನಿಕತೆ: ಮಹಿಳಾ ನೆಲೆಗಳು(ಎನ್.ಕೆ. ಲೋಲಾಕ್ಷಿ), ಭಾರತದ ಸ್ವಾತಂತ್ಯ್ರ ಚಳವಳಿ ಮತ್ತು ಮಹಿಳೆ(ಹಸೀನಾ ಎಚ್.ಕೆ), ಕರ್ನಾಟಕ ಏಕೀಕರಣ ಚಳವಳಿ ಮತ್ತು ಮಹಿಳೆ(ನಾಗಭೂಷಣ ಬಗ್ಗನಡು), ಮಹಿಳೆ ಮತ್ತು ಅಭಿವೃದ್ಧಿ(ಟಿ.ಆರ್. ಚಂದ್ರಶೇಖರ), ಕುಟುಂಬ ಮತ್ತು ಮಹಿಳೆ(ಲಕ್ಷ್ಮಿ ಜಿ.ಎಸ್), ಮಹಿಳೆ ಮತ್ತು ಶಿಕ್ಷಣ(ಪುಪ್ಪಭಾರತಿ ಆರ್.ಎ), ದಲಿತ ಮಹಿಳೆಯರು(ಬಿ.ರಾಜಶೇಖರಮೂರ್ತಿ), ಮಹಿಳೆ, ದುಡಿಮೆ ಮತ್ತು ಸವಾಲುಗಳು(ಗೀತಾ ಎಸ್.ಕೆ), ಕೃಷಿ ಮತ್ತು ಮಹಿಳೆ(ಶ್ವೇತಾರಾಣಿ ಎಚ್), ಲೈಂಗಿಕ ಜೀತಪದ್ಧತಿ-ವಿಮುಕ್ತಿಯ ದಾರಿಗಳ ಹುಡುಕಾಟ(ರೂಪಾ ಹಾಸನ), ಮಹಿಳೆ, ಮಾಧ್ಯಮ ಮತ್ತು ಜಾಹೀರಾತು(ಕಲಾವತಿ ಬಿ.ಜಿ), ಮಹಿಳೆ, ಮೀಸಲಾತಿ ಮತ್ತು ರಾಜಕೀಯ ಪ್ರಾತಿನಿಧ್ಯ(ಎಚ್.ಎಸ್. ಅನುಪಮಾ), ಮಹಿಳೆ ಮತ್ತು ಕಾನೂನು(ಗೀತಾ ಕೃಷ್ಣಮೂರ್ತಿ), ಜನಪದ ಸಾಹಿತ್ಯದಲ್ಲಿ ಹೆಣ್ಣಿನ ನಿಜ ಬಿಂಬ(ಕೆ.ಆರ್. ಸಂಧ್ಯಾರೆಡ್ಡಿ) ಬರಹಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ.