‘ಕಂಡದಾರಿ’ ಲೇಖಕ, ವಿಮರ್ಶಕ ಡಾ. ರವಿಕುಮಾರ್ ನೀಹ ಅವರ ಸಾಂಸ್ಕೃತಿಕ ಲೇಖನಗಳ ಸಂಕಲನ. ಸಾಂಸ್ಕೃತಿಕ ನಿಷ್ಟ ವಿಮರ್ಶೆಯಲ್ಲಿ ಹೆಚ್ಚು ನಂಬಿಕೆ ಇಟ್ಟವರು ರವಿಕುಮಾರ್ ನೀಹ. ಅವರ ಸಾಹಿತ್ಯದ ಕುರಿತಾದ ಲೇಖನಗಳಲ್ಲಿ ಇದು ಸುವ್ಯಕ್ತವಾಗಿದೆ. ಕೆ.ಬಿ.ಯವರ ಕಾವ್ಯ ಕುರಿತ ಲೇಖನದಲ್ಲಾಗಲಿ ಅಥವಾ ಕುಸುಮಬಾಲೆಯನ್ನು ಕುರಿತ ಲೇಖನದಲ್ಲಾಗಲಿ ಈ ಅಂಶವನ್ನು ಗುರುತಿಸಬಹುದು. ಸಾಂಸ್ಕೃತಿಕ ವಿಮರ್ಶೆಯ ಒಳ್ಳೆಯ ಮಾದರಿಗಳು ಈ ಲೇಖನಗಳು. ಆದರೆ ಕಸಿ ಕಥಾ ಸಂಕಲನವನ್ನು ಕುರಿತು ಬರೆಯುವಾಗ ಮಾತ್ರ ಕಥಾ ಸಂಕಲನಕ್ಕಿಂತ ಹೆಚ್ಚಾಗಿ ಸಂಸ್ಕೃತಿಯ ವಿಶ್ಲೇಷಣೆಯ ಕಡೆಗೆ ಮುಖ ಮಾಡಿಬಿಡುತ್ತಾರೆ. ಇಂಥ ಕಡೆಗಳಲ್ಲಿ ಪಠ್ಯ ಮತ್ತು ಸಂಸ್ಕೃತಿಯ ನಡುವಿನ ಸಂಬಂಧದ ಪ್ರಶ್ನೆ ಹಲವು ಸಂದಿಗ್ಧತೆಗಳನ್ನು ಹುಟ್ಟಿಹಾಕುತ್ತದೆ. ಸಾಹಿತ್ಯ ವಿಮರ್ಶಕನಾದವನು ಪಠ್ಯದ ಮುಖಾಂತರವೇ ಅಥವಾ ಅದರಲ್ಲಿನ ಸಾಂಸ್ಕೃತಿಕ ವಿವರಗಳ ಮುಖಾಂತರವೆ ವಿಶ್ಲೇಷಣೆಗೆ ಅಥವಾ ಅದರಲ್ಲಿನ ಸಾಂಸ್ಕೃತಿಕ ವಿವರಗಳ ಮುಖಾಂತರವೆ ವಿಶ್ಲೇಷಣೆಗೆ ತೊಡಗಿದಾಗ ಅಂಥ ಲೇಖನ ಮಹತ್ವದ್ದಾಗುತ್ತದೆ. ಇಂಥ ಮಹತ್ವವಾದದ್ದರ ಕಡೆ ಹೋಗುವ ಸೂಚನೆ ಇರುವ ಹಲವು ಲೇಖನಗಳು ಕೂಡ ಈ ಸಂಕಲನದಲ್ಲಿವೆ.
ಕನ್ನಡದ ಬಹುವಿಸ್ತಾರದ ವಿಮರ್ಶಾಲೋಕದಲ್ಲಿ ಹೊಸ ಹೆಜ್ಜೆ-ಹೊಳಹುಗಳಿಂದ ಗಮನಸೆಳೆದಿರುವ ಡಾ. ರವಿಕುಮಾರ್ ನೀಹ ಅವರು ಹಳ್ಳಿಗಾಡಿನ ಪ್ರತಿಭೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೋಕಿನ ನೀಲಗೊಂಡನಹಳ್ಳಿಯಲ್ಲಿ ಜನನ. ತಂದೆ- ಎನ್.ಸಿ. ಹನುಮಂತಯ್ಯ, ತಾಯಿ ದೊಡ್ಡಕ್ಕ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ರವಿಕುಮಾರ್ ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ.ಪದವಿಗಳಿಸಿದ್ದಾರೆ. ಆನಂತರ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ. ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಪುಸ್ತಕ ವಿಮರ್ಶೆಯ ಸ್ವರೂಪ’ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ಬರಹದ ಪಯಣದಲ್ಲಿ ವಿಮರ್ಶೆಯ ಮಾರ್ಗ ಹಿಡಿದಿರುವ ರವಿಕುಮಾರ್ ನೀಹ ಸಂಶೋಧನೆ, ಖಂಡಕಾವ್ಯಗಳೆಡೆಗೂ ಗುರುತಿಸಿಕೊಂಡವರು. ...
READ MORE