ಹೆಣ್ಣು ಮಕ್ಕಳು ಜೀವನದಲ್ಲಿ ಬಾಲ್ಯ ಕಳೆದು ಹರೆಯಕ್ಕೆ ಕಾಲಿಡುತ್ತಿದ್ದಂತೆ ಮುಂದಿನ ತಮ್ಮ ಜೀವನದ ಬಗ್ಗೆ ನೂರಾರು ಕನಸು ಕಾಣುವುದು ಸಹಜ. ಇದಕ್ಕೆ ಪೋಷಕರೂ ಜೊತೆಗೂಡಿ ಮಗಳ ಬಾಳು ಒಳ್ಳೆಯದಾಗಲಿ ಎಂದು ಹಾರೈಸಿ ಶತ ಪ್ರಯತ್ನ ಮಾಡಿ ಒಳ್ಳೆಯ ಸಂಬಂಧ ಹುಡುಕಿ ಮದುವೆ ಮಾಡುತ್ತಾರೆ. ಆದರೆ ಹುಟ್ಟುವಾಗಲೇ ತಾಯಿಯನ್ನು ಕಳೆದುಕೊಂಡು ಮಲತಾಯಿಯ ಕಿರುಕುಳದಲ್ಲಿ ಮನೆಯಲ್ಲಿ ಪ್ರೀತಿಯನ್ನೇ ಕಾಣದೇ ಬೆಳೆಯುತ್ತಿದ್ದ ಹೆಣ್ಣು ಹದಿ ಹರೆಯದ ವಯಸ್ಸಿನಲ್ಲಿರುವಾಗ ಹೊರಗಿನವರು ಸ್ವಲ್ಪ ಪ್ರೀತಿಯನ್ನು ತೋರಿದರೂ ಅದಕ್ಕೆ ಬಲಿಯಾಗುತ್ತಾಳೆ. ಹೀಗೆ ಮನೆಯಲ್ಲಿ ಪ್ರೀತಿ ವಂಚಿತಳಾದ ಹೆಣ್ಣು ಕಾಲೇಜಿನಲ್ಲಿ ಒಬ್ಬ ಅಯೋಗ್ಯನ ಬೂಟಾಟಿಕೆಯ ಪ್ರೀತಿಗೆ ಮರುಳಾಗಿ ಅವನೊಂದಿಗೆ ಹೋಗಿ ಪಡಬಾರದ ಕಷ್ಟಗಳನ್ನು ಪಡುತ್ತಾಳೆ. ಕೊನೆಯವರೆಗೂ ಜೀವಿಸುವುದಕ್ಕಾಗಿ ಸೆಣಸಾಡಿ ಕೊನೆಗಾಲಕ್ಕೆ ಒಂಟಿಯಾಗುಳಿದು ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುತ್ತ ಪರಿತಪಿಸುತ್ತ ಸಾವನ್ನು ಬಯಸುತ್ತಾ ಜೀವಿಸುತ್ತಿರುವ ಒಂದು ಹೆಣ್ಣಿನ ಸತ್ಯ ಕಥೆ. ಹೆಸರು ಬದಲಾಯಿಸಿದ್ದರೂ ಘಟಿಸಿದ ಘಟನೆಗಳು ನೂರಕ್ಕೆ ನೂರರಷ್ಟು ಸತ್ಯ. ಕಾಲೇಜಿನಲ್ಲಿ ಗಂಡು ಹುಡುಗರು "ಐ ಲವ್ ಯೂ" , ಮೈ ಲವ್" , "ಸುಂದರವಾಗಿದ್ದೀರಿ" ಎಂದೆಲ್ಲ ಛೇಡಿಸುತ್ತ ಹಿಂದೆ ಬೀಳುವ ಪಡ್ಡೆ ಹುಡುಗರನ್ನು ನಂಬಿ ಹೋಗಿ ತಮ್ಮ ಬಾಳನ್ನು ಹಾಳು ಮಾಡಿಕೊಳ್ಳದಿರಲಿ ಅಂತ ನನ್ನ ಗೆಳತಿಯ ಆಶಯವಾಗಿತ್ತು. "ನೀನು ಚನ್ನಾಗಿ ಬರೆಯುತ್ತೀಯಾ ನೀನು ನನ್ನ ಕಥೆಯನ್ನು ಬರೆಯಲೇಬೇಕು. ಹದಿಹರೆಯದಲ್ಲಿ ತಪ್ಪು ಮಾಡುವ ಹುಡುಗಿಯರಿಗೆ, ಮತ್ತು ಮನೆಯಲ್ಲಿ ಮಕ್ಕಳಿಗೆ ಸಮಯ ಕೊಡದೇ ಪ್ರೀತಿ ವಾತ್ಸಲ್ಯ ತೋರದೇ ದೂರವಿಟ್ಟು ಅವರ ಮನಸ್ಸನ್ನರಿಯದೇ ದಂಡಿಸುವ ಪೋಷಕರಿಗೆ ಇದು ಒಂದು ಪಾಠವಾಗಬೇಕು" ಎಂಬ ಅವಳ ಆಸೆಯ ಫಲವೇ ನನ್ನ ಈ ಚೊಚ್ಚಿಲ ಕಾದಂಬರಿ . ದಯವಿಟ್ಟು ತಾವೆಲ್ಲ ಈ ಪುಸ್ತಕವನ್ನು ಓದಿ ಪ್ರೋತ್ಸಾಹಿಸುತ್ತೀರಿ ಎಂದು ನಂಬಿರುವೆನು ಎಂದು ಲೇಖಕಿಯರ ನುಡಿಯಲ್ಲಿ ಜುಬೇದಾ ನಾಯಕ್ ಹೇಳಿದ್ದಾರೆ.
ಜುಬೇದಾ ನಾಯಕ್.ಅವರು ಹುಟ್ಟಿದ ಊರು ಘಟಪ್ರಭಾ. ಪ್ರಸ್ತುತ ಹಾವೇರಿಯಲ್ಲಿ ನೆಲಸಿದ್ದಾರೆ. ಜುಬೇದಾ ಅವರ ತಂದೆಯ ಹೆಸರು, ಹುಸೇನ್ ಸಾಬ್ ಶೇಖ್. ಸ್ನಾತಕೋತ್ತರ ಪದವಿ ಮಾಡಿದ್ದಾರೆ. ಜುಬೇದಾರವರು ಹಿಂದಿ ಭಾಷೆಯ ಪ್ರವೀಣ ಪದವಿ ಪಡೆದಿದ್ದಾರೆ. ಇವರು ಹಾವೇರಿ ವಲಯದ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ತಮ್ಮ 32 ವರ್ಷಗಳ ಸೇವಾವಧಿಯಲ್ಲಿ ಸುಮಾರು ಹತ್ತು ಲಕ್ಷ ಗಿಡಗಳನ್ನು ನೆಟ್ಟು ಬೆಳೆಸಿ ಪರಿಸರ ಸೇವೆ ಮಾಡಿದ್ದಾರೆ. "ಹದಿಹರೆಯದ ಪ್ರೀತಿ" ಇವರ ಚೊಚ್ಚಲ ಕೃತಿ, ಎರಡನೇ ಕೃತಿ "ಕಥೆಯಲ್ಲವಿದು ಜೀವನ" ಕಾದಂಬರಿಯಾಗಿದೆ. ...
READ MORE