ಸೃಜನಾತ್ಮಕ ಕವಿ ಎಚ್. ಎನ್. ಈಶಕುಮಾರ್ ಅವರ ಕವಿತೆಗಳ ಗುಚ್ಛ ’ದಡವ ಹಡೆದ ನದಿ’. ಆತ್ಮೀಯತೆ, ನಿಷ್ಕಲ್ಮಶ ಪ್ರೇಮ, ಉದ್ರೇಕರಹಿತ ಭಾವುಕತೆಗಳಿಂದ ಕೂಡಿದ ಚೊಕ್ಕದಾದ ಕವಿತೆಗಳನ್ನು ತಮ್ಮ ಚೊಚ್ಚಲ ಪುಸ್ತಕದಲ್ಲಿ ತಂದು ಕಾವ್ಯ ಪ್ರಪಂಚಕ್ಕೆ ಒಂದು ವಿಶಿಷ್ಟ ಕಾವ್ಯಾನುಭವ ನೀಡಿದ್ದಾರೆ. ಸೂಕ್ಷ್ಮಾತಿಸೂಕ್ಷ್ಮ ವೇದನೆಗಳನ್ನು ಅಪ್ಯಾಯಮಾನವಾಗಿ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಪ್ರತಿಯೊಂದು ಪದ್ಯದಲ್ಲೂ ಒಂದೊಂದು ಪ್ರತಿಮೆಗಳ ಮೂಲಕ ಜೀವನದ ದಣಿವು ಹಾಗೂ ನಲಿವುಗಳಲ್ಲಿ ಕಾವ್ಯದ ಹುಟ್ಟು ಕಾಣುತ್ತದೆ.
ಮನುಷ್ಯರು ಧರ್ಮದ ಹಾದಿಯಲಿ/ಅಮಲೇರಿ ಶವವಾದರೂ
ಶವದ ಮೇಲಿನ ಚರ್ಚೆಗೆ ಕೊನೆಯಿಲ್ಲ/ಕೊಂದವರು ಕೊಲೆಗಡುಕರಲ್ಲ
ಧರ್ಮದ ಸೇವಕರಾದರಿಲ್ಲಿ/ದೇವರ ರಕ್ಷೆಗೆ ಪಣತೊಟ್ಟು ನಿಂತ
ಧೀರೋದಾತ್ತರು
(ಕವಿತೆ – ನಿಷೇಧಾಜ್ಞೆ ಜಾರಿಯಲ್ಲಿದೆ )
ಎಂಬಂತಹ ಈಶಕುಮಾರ್ ಕವಿತೆಯು ಹಿಂಸೆಯನ್ನು ಉದಾತ್ತೀಕರಿಸಿ ಮನುಷ್ಯತ್ವವನ್ನು ಮರೆಮಾಚುವ ರಾಜಕೀಯ ಹುನ್ನಾರವನ್ನು ಹೆಣೆದಿದೆ.
ಕವಿ ಎಚ್. ಎನ್. ಈಶಕುಮಾರ್ ಅವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹುಲಿಕೆರೆಯಲ್ಲಿ 1983 ಫೆಬ್ರುವರಿ 20ರಂದು ಜನಿಸಿದರು. ತಮ್ಮ ಶಾಲಾ ದಿನಗಳಲ್ಲೇ ಸಾಹಿತ್ಯದ ಬಗ್ಗೆ ಒಲವು ಮೂಡಿದ್ದರಿಂದ ಮುಂದೆ ಸ್ನಾತಕೋತ್ತರ ಪದವಿಗೆ ಸಾಹಿತ್ಯ ವಿಭಾಗವನ್ನೇ ಆಯ್ಕೆ ಮಾಡಿಕೊಂಡರು. ಕಾವ್ಯ ಪ್ರಕಾರದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಅವರು ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ. ಆರ್. ನಗರದಲ್ಲಿ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ‘ದಡವ ಹಡೆದ ನದಿ’ ಕವನ ಸಂಕಲನ 2018ರಲ್ಲಿ ಪ್ರಕಟವಾಗಿದೆ. ...
READ MORE