ನಂದಿನಿ ಹೆದ್ದುರ್ಗ ಅವರ ಲೇಖನಗಳ ಸಂಕಲನ ‘ಬ್ರೂನೊ ದಿ ಡಾರ್ಲಿಂಗ್’. ಸಾಹಿತಿ ಕೆ.ಸತ್ಯನಾರಾಯಣ ಮುನ್ನುಡಿ ಬರೆದಿದ್ದು,‘ ಇಲ್ಲಿಯ ಬರವಣಿಗೆ ಓದುಗ ಸ್ನೇಹಿಯಾಗಿದೆ. ಭಾವನೆಯಲ್ಲಾಗಲೀ, ವಿಚಾರದಲ್ಲಾಗಲೀ ಕೃತಕತೆಯಿಲ್ಲ. ಓದುಗನ ದಿನನಿತ್ಯದ ಅನುಭವ ಪ್ರಪಂಚಕ್ಕೆ ಸಮೀಪವಾಗಿದೆ. ಹಾಗೆಂದು ಓದುಗರನ್ನು ರಂಜಿಸಲು ಲೇಖಕಿ ಹೊರಟಿಲ್ಲ. ಈ ಕಾಲದ ಜೀವನಶೈಲಿ, ವ್ಯಕ್ತಿತ್ವದ ಸ್ವರೂಪ, ಇವುಗಳ ಬಗ್ಗೆ ಕೂಡ ಗಂಭೀರವಾದ ಪ್ರಶ್ನೆಗಳನ್ನು ಕೇಳುತ್ತಾರೆ, ಸೂಚಿಸುತ್ತಾರೆ. ಒಳ್ಳೆಯಬರವಣಿಗೆಯಿಂದ ಮತ್ತೆ ಯಾವ ಗುಣಸ್ವಭಾವಗಳನ್ನು ನಿರೀಕ್ಷಿಸಬೇಕು ? ಎಂಬುದಾಗಿ ಹೇಳಿದ್ದಾರೆ. ಪತ್ರಕರ್ತ, ಲೇಖಕ ಬಿ.ಎಂ ಹನೀಫ್ ಬರೆದಿರುವಂತೆ ಈ ಸಂಕಲನದಲ್ಲಿ ನಂದಿನಿ ಹೆದ್ದುರ್ಗ ಅವರು ಕಥನ ಲಾಲಿತ್ಯ ಮತ್ತು ಲಘು ಹಾಸ್ಯ ಎರಡನ್ನೂ ಬೆರೆಸಿ, ದಹೊಸ ದಾರಿಯಲ್ಲಿ ನಡೆದಿದ್ದಾರೆ. ಬರವಣಿಗೆಯ ಪ್ರಾಮಾಣಿಕತೆ ಮತ್ತು ಕಾವ್ಯಮಯ ಭಾಷೆ ನಂದಿನಿಯವರ ಪ್ಲಸ್ ಪಾಯಿಂಟ್. ವೈಯಕ್ತಿಕ ನೆಲೆಯ ಪ್ರಸಂಗಗಳ ನಿರೂಪಣೆಯನ್ನು ನಗೆಯುಕ್ಕಿಸುವಂತೆ ಬರಹಕ್ಕಿಳಿಸುವ ಚಾತರ್ಯ ಎದ್ದುಕಾಣುತ್ತಿದೆ’ ಎಂದಿದ್ದಾರೆ.
ಸಕಲೇಶಪುರದ ಹೆದ್ದುರ್ಗದ ಕಾಫೀ ಬೆಳೆಗಾರ್ತಿ ನಂದಿನಿ ಹೆದ್ದುರ್ಗ ಅವರು ಕೃಷಿಕ ಮಹಿಳೆ. ತಮ್ಮ 16 ನೇ ವಯಸ್ಸಿನಲ್ಲಿಯೇ ಮದುವೆಯಾಗಿ ಬದುಕಿನ ಸುಖ ದುಃಖಗಳನ್ನು ಕಂಡುಂಡವರು. ಕಳೆದ ಕೆಲವು ವರ್ಷಗಳಿಂದ ಕಾವ್ಯ ರಚನೆಯ ಮೂಲಕ ಕಾವ್ಯ ಲೋಕ ಪ್ರವೇಶಿಸಿದ್ದಾರೆ. ಅವರ ಎರಡು ಸಂಕಲನಗಳು ಪ್ರಕಟವಾಗಿವೆ. ಪ್ರೀತಿ ಪ್ರೇಮಗಳೇ ಇವರ ಕಾವ್ಯದ ಪ್ರಮುಖ ವಸ್ತು. ನಿರ್ಭಿಡೆಯಿಂದ ಹೆಣ್ಣಿನ ಅಂತರಂಗದ ಭಾವನೆಗಳನ್ನು ತಮ್ಮ ಕವಿತೆಗಳಲ್ಲಿ ಹೊರ ಹಾಕುವ ನಂದಿನಿ ಅವರು ಯಾವುದೇ ಮುಲಾಜಿಲ್ಲದೇ ಅಭಿವ್ಯಕ್ತಿಸುವುದು ವಿಶೇಷ. ...
READ MORE