`ಭಾವಪ್ರಣತಿ’ ಕೃತಿಯು ಸುಮಾ ವೀಣಾ ಅವರ ಕಿರು ಲೇಖನಾವಳಿ ಕೃತಿಯಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಎನ್. ರಾಮನಾಥ್ ಅವರು, 'ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಗಸು' ಎಂಬ ಸಾಲು 'ಭಾವ ಪ್ರಣತಿ'ಯ ಪುಟಗಳನ್ನು ತಿರುವಿಹಾಕಿದಾಗ ಆಗಾಗ್ಗೆ ಚಿತ್ತಭಿತ್ತಿಯಲ್ಲಿ ಮೂಡಿತು. ಶಿಷ್ಟ ಪ್ರಾಚೀನತೆಗೆ ಸ್ಪಷ್ಟ ಆಧುನಿಕತೆ ಬೆರೆತು ಸುಖಾವಹ ಸಮಾಜ ಸೃಷ್ಟಿಯಾಗಲು ಅವಶ್ಯದ ಮೂಲಮಂತ್ರಗಳು ಕಂಡುಬರುತ್ತವೆ. ಉಪನ್ಯಾಸಕಿ, ಲೇಖಕಿ ಸುಮಾ ವೀಣಾ ಹೊರತರುತ್ತಿರುವ ಈ ಲೇಖನಗಳ ಸಂಗ್ರಹದಲ್ಲಿ ಸುಮದ ಘಮವೂ, ವೀಣೆಯ ನಾದವೂ ಮೇಳೈಸಿರುವುದು ವೇದ್ಯ. ನನಗೆ ಈ ಸಂಗ್ರಹದಲ್ಲಿ ವಿಶೇಷವೆನಿಸಿದ್ದು ವಿಷಯ ವೈಪುಲ್ಯ. ಮಾಯಾಮೃಗವಾಗಿ ಗೋಚರಿಸುವ ಹಣದ ನವರಂಗಿ ಆಟಗಳಿಂದ ಹಿಡಿದು ಅಮ್ಮನ ವರೆಗೆ ಹಲವಿರುವ ಇವರ ಭಾವಲಹರಿ, ಚಿತ್ತಲಹರಿ, ಭಾಷಾಲಹರಿಗಳು ಕೆಲವೊಮ್ಮೆ ಕ್ಲುಪ್ತವೆನಿಸಿದರೂ ಆಪ್ತವೆಂದೂ ಅನಿಸುತ್ತವೆ. ಸಂವಹನ ದೋಷ ಮತ್ತು ಪ್ರತಿಯೊಬ್ಬರಿಗೂ ಬೇಕು ಶಬ್ದ ಸಂಪತ್ತು ಲೇಖನಗಳಲ್ಲಿ ಮೂಡಿದೆ. ಇಂದಿನ ದಿನಗಳಲ್ಲಿ ನಮಗೆ ದೊರೆಯುತ್ತಿರುವ ಏಕೈಕ ಶಬ್ದ ಸಂಪತ್ತೆಂದರೆ, ಶಬ್ಧಮಾಲಿನ್ಯ ಎಂಬುದು ನಿಜಕ್ಕೂ ವಿಷಾದನೀಯ. ಸಂಶಯವೆಂಬ ಹುತ್ತದ ಅನಾಹುತಗಳ ಬಗ್ಗೆ ಸಹಿಷ್ಣುತೆ ಮತ್ತು ಮೌನಗಳ ಸಕಾರಾತ್ಮಕತೆಯ ಬಗ್ಗೆ, ಕ್ಷಮೆ ಎಂಬ ಅತ್ಯದ್ಭುತ ಮಾನವ ಗುಣವನ್ನು ಕುರಿತು ಬರೆದ ಲೇಖನಗಳು 'ಧೈರ್ಯಂ ಸರ್ವತ್ರ ಸಾಧನಂ' ಎಂಬುದರ ಪ್ರತಿಪಾದನೆಯಂತೆ ತೋರುವ 'ಧೈರ್ಯ ಎಂಬ ಮಧುಪಾನ' ಲೇಖನ ಮುಂತಾದವು ಗಮನಾರ್ಹವಾಗಿವೆ’ ಎಂದು ಪ್ರಶಂಸಿಸಿದ್ದಾರೆ.
ಪ್ರಬಂಧಗಾರ್ತಿ ಸುಮಾ ವೀಣಾ ಅವರು ಉಪನ್ಯಾಸಕಿ. ತಂದೆ ಪುಟ್ಟರಾಜು, ತಾಯಿ ಲಲಿತಾ. ಹಾಸನದ ಹೇಮಗಂಗೋತ್ರಿಯಲ್ಲಿ ಕನ್ನಡ ಎಂ. ಎ ಅಧ್ಯಯನ. ವಿದ್ಯಾರ್ಥಿ ದಿಸೆಯಿಂದಲೇ ರಾಜ್ಯ ಮತ್ತು ರಾಷ್ಟ್ರಿಯ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. ಅವರ ಬರೆಹಗಳು ವಿಜಯವಾಣಿ, ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟವಾಗಿವೆ. ವಚನ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ. ಕೃತಿಗಳು: ನಲಿವಿನ ನಾಲಗೆ (ಪ್ರಬಂಧಗಳ ಸಂಕಲನ), ಶೂರ್ಪನಖಿ ಅಲ್ಲ ಚಂದ್ರ ನಖಿ (ಕವನ ಸಂಕಲನ), ಮನಸ್ಸು ಕನ್ನಡಿ (ಪ್ರಬಂಧಗಳ ಸಂಕಲನ). ...
READ MORE