ಅಡಗುದಾಣ

Author : ಒಕ್ಕುಂದ ಎಂ.ಡಿ.

Pages 130

₹ 100.00




Year of Publication: 2019
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಅಂಚೆ, ಎಮ್ಮಿಗನೂರು (ವಯಾ) ಬಳ್ಳಾರಿ-583113

Synopsys

ಲೇಖಕ, ಬರಹಗಾರ ಎಂ.ಡಿ ಒಕ್ಕುಂದ ಅವರ ಕವನ ಸಂಕಲನ ’ ಅಡಗುದಾಣ’.

ಈ ಕವನ ಸಂಕಲನದಲ್ಲಿ ಒಟ್ಟು 56  ಕವಿತೆಗಳಿವೆ. ಇಲ್ಲಿರುವ ಅನೇಕ ಕವಿತೆಗಳು ಸರಳವಾದ, ನೇರವಾದ ಭಾವ ತುಂಬಿದ ಆರ್ದ್ರ ಕವಿತೆಗಳ ಗುಚ್ಛವಾಗಿದೆ. ಜಾತೀ ವ್ಯವಸ್ಥೆಯನ್ನು ಪ್ರಶ್ನಿಸುವ, ಯುದ್ದ ಕುರಿತಾದ ಕವನಗಳು, ಜಾತಿ ಧರ್ಮ ಇವುಗಳನ್ನು ಮೀರಿದ ಕವನಗಳು ಕವಿತೆಯ ವಸ್ತುವನ್ನು ಓದುಗರಲ್ಲಿ ಮನಮುಟ್ಟುವಂತೆ ಮಾಡುತ್ತದೆ. ’ಹಸಿವು ಬತ್ತಲೆ ಮತ್ತು ಕವಿತೆ’, ಹೊಲೆಯರ ಗಡಬಡೆ, ನೋವು ಎಂಬ ಕವಿತೆಗಳು ಬಡತನವನ್ನು ಕುರಿತ ರಚನೆಗಳಾಗಿವೆ. ಕೆಲವು ಕವಿತೆಗಳು ವೈಚಾರಿಕ ವಿವೇಕವನ್ನು ಎಚ್ಚರಿಸುವ ಕವಿತೆಗಳು ಸೂಕ್ಷ್ಮವಾಗಿವೆ. ಮನುಷ್ಯ ಪ್ರಜ್ಞೆಯ ಆಳಕ್ಕೆ ಇಳಿಯುವ, ಯೋಚನೆಗೆ ಹಚ್ಚುವ ಕವಿತೆಗಳು ಇಲ್ಲಿ ಓದುಗರ ಮನ ತಟ್ಟುತ್ತದೆ.

About the Author

ಒಕ್ಕುಂದ ಎಂ.ಡಿ.
(15 January 1967)

ಕವಿ- ಲೇಖಕ ಎಂ.ಡಿ.ಒಕ್ಕುಂದ ಅವರು ಕನ್ನಡ ಅಧ್ಯಾಪಕರಾಗಿದ್ದಾರೆ. ಅವರು ಧಾರವಾಡ ಜಿಲ್ಲೆ/ತಾಲೂಕಿನ ಅಮ್ಮಿನಭಾವಿಯಲ್ಲಿ 1967 ರ ಜೂನ್ 15 ರಂದು ಜನಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಗದಗ ಜಿಲ್ಲೆಯ ನರಗುಂದದ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ರೆಕ್ಕೆ ಗರಿಗಳ ಬಿಚ್ಚಿ, ತುಳುಕು ಅವರ ಕವನ ಸಂಕಲನವಾಗಿದೆ.    ...

READ MORE

Reviews

ಸಾಮಾಜಿಕ ಕಾವ್ಯದ ಶಕ್ತಿ-ದೌರ್ಬಲ್ಯಗಳು

ಭಾಷೆಯ ಸೂಕ್ಷ್ಮವನ್ನು ಬಲ್ಲ ಕವಿ ಸವಕಲು ಪದಗಳನ್ನು ಕೈಗೆತ್ತಿಕೊಂಡು ಅವಕ್ಕೆ ಜೀವ ತುಂಬಬಲ್ಲ;ಅರ್ಥವನ್ನು ಪಲ್ಲಟಿಸಿ ಈ ಸವಕಲು ಪದಗಳಿಗೆ ಮತ್ತೆ ಹೊಸ ಚಲಾವಣೆಯನ್ನು ನೀಡಬಲ್ಲ. ಭಾಷೆಗೆ ಹೊಳಪು ಮತ್ತು ಜೀವ ಸತ್ವ್ತ ದೊರೆಯುವುದು ಇಂಥ ಕವಿಗಳಿಂದಲೇ. ಪ್ರಸಕ್ತ ಸಂಕಲನದಲ್ಲಿ ಇಂಥ ಒಂದು ಪ್ರಯೋಗ ನಡೆದಿರುವುದನ್ನು ಓದುಗರು ಗಮನಿಸಬಹುದಾಗಿದೆ.

ಆಧುನಿಕ ಬದುಕಿನಲ್ಲಿ ಬೆಚ್ಚಿಬೀಳಿಸುವ - 'ಅಡಗುದಾಣ' ಮತ್ತು 'ಸ್ಫೋಟ'-ಪದಗಳನ್ನು ಕವಿ ಎಂ.ಡಿ. ಒಕ್ಕುಂದ ನಡೆಸಿರುವ ಪರಿಯನ್ನು ಗಮನಿಸಿದರೆ ('ಅಡಗುದಾಣ' ಈ ಸಂಕಲನದ ಹೆಸರೂ ಆಗಿದೆ) ಭಾಷೆಗೆ ಕವಿಯ ಕೊಡುಗೆ ಏನು ಎಂಬುದು ತಿಳಿಯುತ್ತದೆ. ೨೧ನೇ ಶತಮಾನದ ಜಗತ್ತಿಗೆ ಆಘಾತವನ್ನುಂಟು ಮಾಡುತ್ತಿರುವ ಈ “ಅಡಗುದಾಣ'ವನ್ನು ಒಕ್ಕುಂದ, ೧೨ನೇ ಶತಮಾನಕ್ಕೆ ತೆಗೆದುಕೊಂಡು ಹೋಗುತ್ತಾರೆ. ಉಗ್ರರನ್ನು ಕಣ್ಮುಂದೆ ತರುವ ಈ ಪದಕ್ಕೆ ಬೇರೆಯೇ ಆಯಾಮವನ್ನು ನೀಡಿ, ಅಧ್ಯಾತ್ಮದ ಅಕ್ಕನನ್ನು ಕಣ್ಮುಂದೆ ನಿಲ್ಲಿಸುತ್ತಾರೆ. ಅಕ್ಕನ ಅಡಗುತಾಣ-'ಚನ್ನಮಲ್ಲಿಕಾರ್ಜುನನಂಥ ಆತ್ಮಸಂಗಾತಿ. ಅಲ್ಲಿಂದಲೇ ಅಕ್ಕ ಸ್ಫೋಟಗೊಳ್ಳುವುದು. ಈ ಸ್ಫೋಟವೇ ಅಕ್ಕನ ಹಂಬಲ. ಈ ಹಂಬಲವನ್ನು ಮನುಕುಲದ ಹಂಬಲವಾಗಿ ಮಾಡುವ ಶಕ್ತಿ ಅಕ್ಕನ 'ಸ್ಫೋಟಕ' ಶಕ್ತಿ, ತನ್ನನ್ನು ತಾನು ಸ್ಫೋಟಿಸಿಕೊಳ್ಳುವುದು, ಪೂರ್ಣವಾಗಿ ಕೊಟ್ಟುಕೊಳ್ಳುವುದು, ಈ ಬಲಿದಾನವನ್ನೇ ಮನುಕುಲದ ಹಂಬಲವಾಗಿ ಮಾಡುವುದು ಮತ್ತು ಆ ಮೂಲಕ ಮನುಷ್ಯರ ಬಾಳಿಗೆ ಹೊಸ ಬೆಳಕನ್ನು ನೀಡುವುದು ಅಕ್ಕನ ಸ್ಫೋಟದ ಹಿಂದಿನ ಆಶಯ.

’ಮಗು ಮಲಗಿದೆ ಎದೆಯ ಮೇಲೆ' ಸಂಕಲನದ ೧೩ ವರ್ಷಗಳ ನಂತರ ಪ್ರಕಟವಾಗಿರುವ ಒಕ್ಕುಂದ ಅವರ ಈ 'ಅಡಗುದಾಣ'ದಲ್ಲಿ ಕವಿಯ ನೆಲೆಯನ್ನು, ನಂಬಿಕೆಯನ್ನು ಪ್ರಕಟಿಸುವ ಹಲವು ಪದ್ಯಗಳಿವೆ. ಕವಿಯ ನಿಲುವು ಸ್ಪಷ್ಟವಾದದ್ದು ಮತ್ತು ನೇರವಾದದ್ದು. 'ಪ್ರಣಾಳಿಕೆ' ಎನ್ನುವ ಕವಿತೆ ಇದನ್ನು ತೋರಿಸುತ್ತದೆ:

ಜಗತ್ತಿನ ಎಲ್ಲ ಅರಮನೆಗಳು ನೆಲಸಮವಾಗಲಿ

ಬೀದಿಯಲ್ಲೇ ಬೆಳಕು ಕಾಣುವವರಿಗೆ ಸೂರು ಸಿಗಲಿ

ಬಂಗಾರದ ಸಿಂಹಾಸನ ವಜ್ರದ ಕಿರೀಟ ಹರಾಜಾಗಲಿ

ಈ ಸಮಾಜವಾದಿ ಆಶಯಕ್ಕೆ ಬದ್ಧರಾಗಿರುವ ಒಕ್ಕುಂದ ಈ ನೆಲೆಯಲ್ಲಿಯೇ ಕೆಲವು ಸಮರ್ಥ ಕವಿತೆಗಳನ್ನು ಸೃಷ್ಟಿಸಿದ್ದಾರೆ. ಹೊಲೆಯರ ಗಡಗಡೆ', 'ಇರುವೆ ದಾಸಯ್ಯ', 'ಪ್ರೇಮದ ಕೊಲೆ ಅಜರಾಮರ!'ಗಳಂಥ ಪದ್ಯಗಳನ್ನು ಇದಕ್ಕೆ ಉದಾಹರಣೆಯಾಗಿ ಕೊಡಬಹುದು. ಒಕ್ಕುಂದ ಅವರ ಸಾಮಾಜಿಕ ಮತ್ತು ರಾಜಕೀಯ ತಲ್ಲಣಗಳನ್ನು ಬಿಂಬಿಸುವ ಕವಿತೆಗಳು ಈ ಸಂಕಲನದಲ್ಲಿವೆ. 'ಕಸಬರಿಗೆ'ಯಂಥ ಕುತೂಹಲ ಹುಟ್ಟಿಸುವ ಪ್ರಯೋಗಗಳು, 'ಮಹಾತ್ಮಾಗಾಂಧಿ ರಸ್ತೆ ಮತ್ತು ಸೈಕಲ್ ಸವಾರ', 'ಅವರಿಗೆ ನಾಯಿಗಳೆಂದರೆ ಅಪಾರ ಪ್ರೀತಿ'ಯಂಥ ಮೊನಚು ವ್ಯಂಗ್ಯದ ಕವಿತೆಗಳೂ ಇಲ್ಲಿವೆ. ಅಪರೂಪದ ಕವಿತೆ ಎನ್ನಬಹುದಾದ, 'ಮರಳಿ ಬರುವನೆ ಪೋರ...', ಸಮಕಾಲೀನ ಜಗತ್ತಿನ ತಲ್ಲಣವನ್ನು ತೀವ್ರ ಸ್ಪಂದನವಾಗಿಸುವ 'ಪಾರಿವಾಳ'ದಂಥ ಸೂಕ್ಷ್ಮ ಸಂವೇದನೆಯ ಕವಿತೆಗಳು ಒಕ್ಕುಂದ ಅವರ ಕಾವ್ಯದ ಬಗ್ಗೆ ಆಶೆ ಹುಟ್ಟಿಸುತ್ತವೆ. ಆದರೆ ಹೆಚ್ಚು ಆಯಾಮಗಳಿಲ್ಲದ, ಕಾವ್ಯದ ನಿಜವಾದ ತಂತಿಯನ್ನು ಮೀಟಲಾಗದ ಸಪಾಟು ಪದ್ಯಗಳೇ ಈ ಸಂಕಲನವನ್ನು ಹೆಚ್ಚಾಗಿ ತುಂಬಿರುವುದು ಸೋಜಿಗ ಹುಟ್ಟಿಸುತ್ತದೆ. ಯಾವಾಗ ಬರುವಿ ಅಪ್ಪಾ' ಎನ್ನುವ ಸುದೀರ್ಘ ಪದ್ಯವನ್ನು ಓದಿದರೆ ಈ ಮಾತಿನ ಅರ್ಥ ತಿಳಿಯುತ್ತದೆ. ಕಾವ್ಯ ಎನ್ನುವುದು ಎಷ್ಟು ಸೂಕ್ಷ್ಮವಾದದ್ದು ನಿಜವಾದ ಕಾವ್ಯದ ಜಾಡು, ನಡೆದೂ ನಡೆದೂ ಸವಕಲಾದ ಜಾಡಾಗಿರುವುದಿಲ್ಲ. ಪ್ರತಿಬಾರಿಯೂ ಕವಿ ಕಂಡುಕೊಳ್ಳಬೇಕಾದ ಹಾದಿಯಾಗಿರುತ್ತದೆ. ಇದು ಎಂಥ ಸವಾಲಿನ ಕೆಲಸ!

-ಜಿ.ಪಿ. ಬಸವರಾಜು

ಕೃಪೆ : ಹೊಸ ಮನುಷ್ಯ (ಏಪ್ರಿಲ್ 2019)

Related Books