About the Author

ಲೇಖಕ ಡಾ. ಆರ್. ವೆಂಕಟರೆಡ್ಡಿ ಅವರು ಮೂಲತಃ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ರುದ್ರಾವರಂ ಗ್ರಾಮದವರು. ತಂದೆ ಶಂಭುರೆಡ್ಡಿ, ತಾಯಿ ಅಯ್ಯಮ್ಮ. ಎಂ.ಎ (ಮನೋವಿಜ್ಞಾನ), ಎಂ.ಇಡಿ ಹಾಗೂ ಪಿಎಚ್ ಡಿ  ಪದವೀಧರರು.  ವಿದ್ಯಾರ್ಥಿಗಳಿಗೆ ಆಪ್ತಸಮಾಲೋಚನೆ, ಸೈಕೋಥೆರಪಿ, ಲೈಂಗಿಕವಾದ ಸಾಮಾನ್ಯ ದುರ್ಬಲತೆಗಳು ಹಾಗೂ ಲೈಂಗಿಕ ಥೆರಪಿ, ಎಚ್ ಐವಿ/ಏಡ್ಸ್ ಶಿಕ್ಷಣ, ಗ್ರಾಮೀಣ ಸಂಶೋಧನಾ ವಿಧಾನ, ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಮಾನಸಿಕ ಆರೋಗ್ಯದಲ್ಲಿ ವಿಷಯಗಳಲ್ಲಿ ಬೆಂಗಳೂರು, ಹೈದ್ರಾಬಾದ್, ಮುಂಬೈ, ಮೈಸೂರು ಹೀಗೆ ವಿವಿಧೆಡೆ ತರಬೇತಿ ಪಡೆದಿದ್ದಾರೆ. ‘ಕಾಲೇಜು ವಿದ್ಯಾರ್ಥಿಗಳ ಬಡತನ ಹಾಗೂ ವ್ಯಕ್ತಿತ್ವ ವಿಕಸನ’ ಎಂಬುದು ಇವರ ಪಿಎಚ್ ಡಿ ವಿಷಯ. ಕಲಬುರಗಿಯ ಶ್ರೀ ಶರಣ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಮನೋವಿಜ್ಞಾನದ ಸಹ ಪ್ರಾಧ್ಯಾಪಕರಾಗಿದ್ದಾರೆ. ಕಲಬುರಗಿ ಜಿಲ್ಲೆ ಅಫಜಲಪುರ ಹಾಗೂ ಜೇವರ್ಗಿ ಸರಕಾರಿ ಪದವಿ  ಮಹಾವಿದ್ಯಾಲಯದಲ್ಲೂ ಅವರು ನಿಯೋಜನೆ ಮೇರೆಗೆ  ಸೇವೆ ಸಲ್ಲಿಸಿದ್ದಾರೆ.  ಗುಲಬರ್ಗಾ ವಿ.ವಿ. ವ್ಯಾಪ್ತಿಯಲ್ಲಿ ಮನೋವಿಜ್ಞಾನ ವಿಭಾಗದಲ್ಲಿ ಸಂಶೋಧನಾ ಮಾರ್ಗದರ್ಶಕರಿದ್ದು, ಈವರೆಗೆ 10 ಜನ ವಿದ್ಯಾರ್ಥಿಗಳು ಪಿಎಚ್ ಡಿ ಪಡೆದಿದ್ದಾರೆ.

ಸಾರ್ವಜನಿಕ ವಲಯದಲ್ಲಿ  ಪಲ್ಸ್ ಪೋಲಿಯೋ, ಎಚ್ ಐವಿ/ಏಡ್ಸ್ ಶಿಕ್ಷಣ ಕುರಿತು ಜಾಗೃತಿ, ರಾಷ್ಟ್ರೀಯ ಐಕ್ಯತಾ ಶಿಬಿರ, ರಾಷ್ಟ್ರೀಯ ಸೇವಾ ಯೋಜನೆ ಗಳಲ್ಲಿ ಭಾಗಿಯಾಗಿ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದಾರೆ. ಕಲಿಕೆ, ಪ್ರೇರಣೆ, ಸ್ಮರಣೆ, ವ್ಯವಸ್ಥಾಪನೆ, ವ್ಯಕ್ತಿತ್ವ ವಿಕಾಸ, ಸಂವಹನ, ಬೋಧನಾ ಜಾಣ್ಮೆ, ಸ್ಪರ್ಧಾತ್ಮಕ ಪರೀಕ್ಷೆ ಹೀಗೆ ಹತ್ತು ಹಲವು ವಿಷಯಗಳಲ್ಲಿ ರಾಷ್ಟ್ರಮಟ್ಟದಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ಪೊಲೀಸ್ ಮನೋವಿಜ್ಞಾನ, ನರ್ಸಿಂಗ್ ಮನೋವಿಜ್ಞಾನ, ಶೈಕ್ಷಣಿಕ ಮನೋ ವಿಜ್ಞಾನ  ಕುರಿತಂತೆ ಕಲಬುರಗಿಯ ಪೊಲೀಸರಿಗೆ, ನಸಿಂಗ್ ವಿದ್ಯಾರ್ಥಿಗಳಿಗೆ ಹಾಗೂ ಬೋಧಕರಿಗೆ ಪ್ರೇರಣಾತ್ಮಕ ಉಪನ್ಯಾಸಗಳನ್ನು ನೀಡಿದ್ಧಾರೆ.    

ಕೃತಿಗಳು: ಸಮರ್ಥ ವಿದ್ಯಾರ್ಥಿ ಆಗುವುದು ಹೇಗೆ? : ಒಂದು ಮನೋವೈಜ್ಞಾನಿಕ ಮಾರ್ಗ (2016ರಲ್ಲಿ ಈ ಕೃತಿಗೆ ಗುಲಬಗಾ ವಿ.ವಿ. ರಾಜ್ಯೋತ್ಸವ ಪ್ರಶಸ್ತಿ ನೀಡಿದೆ), ಜ್ಞಾನಾರ್ಜನೆ ಮತ್ತು ಫಲಿತಾಂಶ ಹೆಚ್ಚಿಸುವುದು ಹೇಗೆ? ಶಿಕ್ಷಣ, ಮಾರ್ಗದರ್ಶನ ಮತ್ತು ತರಬೇತಿ. ಸಾಮಾನ್ಯ ಮನೋವಿಜ್ಞಾನ, ಆಧುನಿಕ ಶೈಕ್ಷಣಿಕ ಮನೋವಿಜ್ಞಾನ ಅಲ್ಲದೇ, ಮನೋವಿಜ್ಞಾನಕ್ಕೆ ಸಂಬಂಧಿಸಿ ಇಂಗ್ಲಿಷಿನಲ್ಲಿ ಶೈಕ್ಷಣಿಕ ಮನೋವಿಜ್ಞಾನ, ಸಾಮಾನ್ಯ ಮನೋವಿಜ್ಞಾನ, ಆಪ್ತ ಸಮಾಲೋಚನೆ, ಸಾಮಾಜಿಕ ಮನೋವಿಜ್ಞಾನ, ಅಪಸಾಮಾನ್ಯ ಮನೋವಿಜ್ಞಾನ, ಆರೋಗ್ಯ ಮನೋವಿಜ್ಞಾನ ಹೀಗೆ ವಿವಿಧ ವಿಷಯಗಳಲ್ಲಿ ಸುದೀರ್ಘ ಲೇಖನಗಳನ್ನು ಬರೆದಿದ್ದಾರೆ. 

 ಪ್ರಶಸ್ತಿ-ಪುರಸ್ಕಾರಗಳು: ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ಸುಮಾರು 6 ಬಾರಿ  ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಕಲಬುರಗಿಯ ಜಾಲಿಹಾಳ ಪ್ರತಿಷ್ಠಾನದಿಂದ ಬೆಸ್ಟ್ ಸೈಕೋಲಜಿಸ್ಟ್ ಪ್ರಶಸ್ತಿ (2012), ಕಲಬುರಗಿಯ ಕಲಾವಿದರ ಸಂಘದಿಂದ ಶಿಕ್ಷಣ ತಜ್ಞ ಪ್ರಶಸ್ತಿ (2019)ಲಭಿಸಿವೆ. 

ಆರ್. ವೆಂಕಟರೆಡ್ಡಿ

(25 Nov 1961)