ಭಾರತದ ಕರಾವಳಿ, ದಕ್ಷಿಣ ಆಫ್ರಿಕಾ, ಜರ್ಮನಿ, ಪೋರ್ಚುಗಲ್, ಸ್ಪೇನ್ ಮತ್ತು ಬೆಲ್ಜಿಯಂನಲ್ಲಿ ನಡೆಯುವ ಈ ಕಾದಂಬರಿಯ ಪ್ರತಿಯೊಂದು ಘಟನೆ ಮತ್ತು ಪ್ರತಿ ಪಾತ್ರದ ನಡುವೆಯೂ ಕುತೂಹಲಕಾರಿಯಾದ ಕೊಂಡಿಯಿದೆ. ಈ ಕಾದಂಬರಿಯನ್ನು ಯಾವುದೋ ಒಂದೇ ಪ್ರಕಾರಕ್ಕೆ ಸೀಮಿತಗೊಳಿಸಲು ಬಾರದು. ಯಾಕೆಂದರೆ ಪ್ರೇಮಿಗಳ ನಡುವಿನ ಪ್ರಣಯ, ಪ್ರಖ್ಯಾತ ಕಳ್ಳನ ಮುಗ್ದತೆ, ಅಮಾಯಕನೊಬ್ಬನ ಅಪ್ರತಿಮ ಸಾಹಸ, ವಿಕೃತ ಸೇನಾಧಿಕಾರಿ, ಸರ್ಕಾರಿ ಮಾನ್ಯತೆ ಪಡೆದ ವೇಶ್ಯಾಗೃಹಗಳ ಮಾದಕತೆ ಮತ್ತು ಇವೆಲ್ಲಾವನ್ನು ನಿಯಂತ್ರಿಸುತ್ತಿರುವ ಮೊದಲ ಮತ್ತು ಎರಡನೆ ಮಹಾ ಯುದ್ಧಗಳು, ಕರಾವಳಿಯ ಸಂಸ್ಕೃತಿ, ಭಾರತದ ಸ್ವಾತಂತ್ರ್ಯ ಹೋರಾಟ, ವಾಸ್ಕೋಡಗಾಮ, ಕೊಲಂಬಸ್ ಎಲ್ಲಾವನ್ನು ಒಂದೇ ಕಾದಂಬರಿಯಲ್ಲಿ ತನ್ನೊಳಗೆ ಹಿಡಿದಿಡುವ ಈ ಪುಸ್ತಕವನ್ನು ಯಾವುದೊ ಒಂದು ಪ್ರಕಾರಕ್ಕೆ ಸೀಮಿತಗೊಳಿಸಿದರೆ ಅದು ಪಕ್ಷಪಾತವಾಗುತ್ತದೆ. ಈ ಪುಸ್ತಕ ಓದಿದ ಓದುಗರು ಈ ಮಾತಿಗೆ ಸಾಕ್ಷಿಯಾಗುತ್ತಾರೆ.
ಸುಧಾಕರ ರಾಮಯ್ಯ ಮೂಲತಃ ತುಮಕೂರು ಜಿಲ್ಲೆಯವರು. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಮತ್ತು ರೈತರು ಆಗಿರುವ ಇವರು ರಚಿಸಿರುವ ಮೊದಲ ಐತಿಹಾಸಿಕ ಕಾದಂಬರಿ 'ವಿಂಟರ್ಸ್ ಆಫ್ ಲಯನ್ ಗಾರ್ಟನ್'. ...
READ MOREPustakamare prasada
ನಿಮಗೆ ಡೊಮಿನೊಸ್ ಎಫೆಕ್ಟ್ ಬಗ್ಗೆ ಗೊತ್ತ? ಇಲ್ಲ ಅಂದ್ರೆ ಕೇಳಿ ನಾನೇ ಹೇಳ್ತೀನಿ. ಒಂದು ವಿಷಯ ಅದಕ್ಕೆ ಸಂಬಂಧವೆ ಇಲ್ಲದ ಇನ್ನೊಂದು ವಿಷಯಕ್ಕೆ ಕಾರಣವಾಗೋದು. ( onething leads to another ). ಈಗ ನಾನೊಂದಿಷ್ಟು ವಿಷಯ, ಹೆಸರಗಳನ್ನ ಹೇಳ್ತೀನಿ. ಎರಡನ್ನೂ ಸೇರಿಸಿ ಕಲ್ಪನೆ ಮಾಡಿಕೊಳ್ಳಿ.
ವಿಶ್ವಮಹಾಯುದ್ಧ, ಜರ್ಮನಿ, ನಾಜಿ ಕ್ಯಾಂಪ್, ವಾಸ್ಕೋಡಿಗಾಮ, ಗೋವಾ, ಕಾಸರಗೋಡು, ಮೊಂಬಾಸ್ (ಕೀನ್ಯಾ), ಸಮುದ್ರಯಾನ, ಆಫ್ರಿಕಾ ಗುಲಾಮರು ಹೀಗೆ ಹತ್ತು ಹಲವು. ಏನಾದರೊಂದು ಯೋಚನೆ ಬಂತ?
ತಡೀರಿ ಒಂದು ನಿಮಿಷ ಈಗೊಂದು ಕಥೆಯ ಚಿಕ್ಕ ಪರಿಮಳ ಸಿಗುವ ಹಾಗೆ ಇನ್ನೊಂದಿಷ್ಟು ಪದಗಳ ಹೇಳುವೆ ಸರಿಯಾಗಿ ಕೇಳಿಸಿಕೊಳ್ಳಿ.
ದರೋಡೆ, ಕಳ್ಳತನ, ವರ್ಜೀನಿಟಿ (ನಿವಂದುಕೊಂಡದ್ದಲ್ಲ), ವಜ್ರ, ಕೋಳಿ, ಸಂಜೆ, ಹೆಪ್ಪುಗಟ್ಟಿದ ನೆಕ್ಕರ್ ನದಿ, ಮೂಳೆ ಕೊರೆಯುವ ಚಳಿ, ಹಿಮಪಾತ, ಸೂಳೆಗಾರಿಕೆ, ಸಮುದ್ರಯಾನ, ಪೈರೇಟ್ಸ್, ಹಿಮದಿಂದ ಮುಚ್ಚಿಹೋದ ಪರ್ವತ ಇವೆಲ್ಲದರ ನಡುವೆ ಪ್ರೀತಿ, ಪ್ರೇಮ, ಕಾಮ, ಸ್ನೇಹ, ಕರುಣೆ, ಕಠೋರ, ದ್ವೇಷ, ಸೇಡು, ವಾತ್ಸಲ್ಯ, ಹುಡುಕಾಟ, ದುರಾಸೆ ಇವೆಲ್ಲವೂ ಇತಿಹಾಸದೊಂದಿಗೆ ತುಳುಕು ಹಾಕಿಕೊಳ್ಳೋದು.
ಹೌದಾ? ಇತ್ತೀಚೆಗೆ ಓದಿದ ಬೆಲ್ಲ ಹಂಪಮ್ಮ ತೇಜೋ ತುಂಗಭದ್ರ ನೆನಪಿಗೆ ಬಂತ. ಅಂತದ್ದೆ ಅಮೋಘ ಅನುಭವ ಈ ಕಾದಂಬರಿಯನ್ನ ಓದಿದ ಮೇಲೆ ಸಿಗೋದು.
ಹಂಗಿದ್ಹಾಂಗೆ ಓದಿದಾಗ ಹಾಯ್ ಎನಿಸುವ, ಭಾವನೆಗಳ ಅಲ್ಲೋಲಕಲ್ಲೋಲದ ಥ್ರಿಲ್ಲರ್ ಡ್ರಾಮಾ ಒಂದು ಅದ್ಭುತ ಛಾಯಾಗ್ರಹಣದ ಮೂಲಕ ಐತಿಹಾಸಿಕ ಘಟನೆಗಳ ಸುತ್ತ ವೇಗವಾಗಿ ನಡೆಯುವ ಸಿನೆಮಾ ನೋಡಿದ ಅನುಭವ ಈ ಕಾದಂಬರಿಯದು. ಹೊಸ ಲೇಖಕ, ಹೊಸ ಕೃತಿ, ಹೊಸ ಪ್ರಕಾಶನದ ಸಾಮಾನ್ಯ ನಿರೀಕ್ಷೆಗಳಿಂದ ಬಹುದೂರ ನಿಂತಿದೆ ಈ ಕೃತಿ. ಕಾವ್ಯಾತ್ಮಕ ಹಿಡಿತದ ಬರವಣಿಗೆ ಕಾದಂಬರಿಯನ್ನ ಹತ್ತಿರದಿಂದ ಪ್ರೀತಿಸುವಂತೆ ಮಾಡುತ್ತೆ. ಹೊಸಬರ ಹೊಸಕೃತಿಯಂತ ದೇವರಾಣೆ ಅನಿಸಲ್ಲ. ಪ್ರೀತಿ, ಇತಿಹಾಸ, ಡ್ರಾಮಾದ ಮಿಕ್ಸು " ಉಳಿದವರು ಕಂಡಂತೆ ಮತ್ತು ವಾಂಟೆಜ್ ಪಾಯಿಂಟ್ " ರೀತಿಯಲ್ಲಿ ಸಾಗುವ ಶೈಲಿ ಬಹಳ ಆಶ್ಚರ್ಯ ಹುಟ್ಟಿಸುತ್ತೆ. ಓದುತ್ತಾ ಹೋದಂತೆ ಬರಿಯ ಪಾತ್ರಗಳು ತೆರೆದುಕೊಂಡಿದೆ ಅನಿಸಿದರೂ ಕತಯಿರೋದೆ ಅವುಗಳ ನಡುವೆ. ಪಾತ್ರಗಳೋ ಹೆಚ್ಚಿನವೂ ಮುಖ್ಯವಾಗೆ ಕಾಣಿಸುತ್ತವೆ. ಅವುಗಳ ಪಾತ್ರ ಕಾದಂಬರಿಯಲ್ಲಿ ಸರಿಯಾಗಿ ತೂಗಿಸಿಕೊಂಡು ಹೋಗುವಂತೆ ಬರೆದಿದ್ದಾರೆ ಲೇಖಕ. ಇಂತದ್ದೊಂದು ಕೃತಿ ನಮ್ಮಲ್ಲಿ ಬೇಕಿತ್ತು.
ಪ್ರೀತಿಯಿಂದ ಪುಸ್ತಕಮರೆ:)