ನಾ. ಮೊಗಸಾಲೆ ಅವರ ಕಾದಂಬರಿ ಉಲ್ಲಂಘನೆ. ತೋರಿಕೆಗೆ ಇದು ಗುತ್ತಿನ ಬಂಟರ ಮನೆಯೊಂದು ತನ್ನನ್ನು ತಾನು ಇವತ್ತಿನ ಸ್ಥಿತ್ಯಂತರ ಮತ್ತು ಸಾಂಸ್ಕೃತಿಕ ಪಲ್ಲಟಗಳ ಸವಾಲಿಗೆ ಒಡ್ಡಿಕೊಳ್ಳುವಂತೆ ಕಂಡರೂ, ಭೂಮಸೂದೆಯ ಪರಿಣಾಮದಿಂದ ಬದಲಾದ ಭೂಮಾಲಿಕತ್ವವು ಹೊಸ ಜಗತ್ತಿನ ಆರ್ಥಿಕ ವ್ಯವಸ್ಥೆಗೆ ಗಾಂಧೀಯುಗದ ಮೂಲಕ ಬಂದು, ಆಮೇಲೆ ನಿಧಾನವಾಗಿ ಭೋಗಮುಖಿ ಯುಗಕ್ಕೆ ತಾನಾಗಿಯೇ ತೆರೆದುಕೊಳ್ಳುವ ನಮ್ಮ ಇಡೀ ಸಮಾಜದ ಸಂಕಥನವೂ ಹೌದು.
ಕೈಫಿಯತ್ತುಗಳ ಹಾಗೆ ದಾಖಲಾಗಬಲ್ಲ ಇಲ್ಲಿನ ಎಲ್ಲ ಸಂಗತಿಗಳನ್ನು ಕತೆಯ ಸ್ವರೂಪದಲ್ಲಿ ಕಟ್ಟಿಕೊಟ್ಟ ಮೊಗಸಾಲೆಯವರ ಪರಿಶ್ರಮ ಮತ್ತು ಪ್ರತಿಭೆ ಅದ್ಭುತ. ಹೃದ್ಯವಾಗುವ ಭಾಷೆ, ಆಪ್ತವಾಗುವ ಸಂಗತಿಗಳು ಕಾದಂಬರಿಯ ರಚನೆ ಮತ್ತು ಫಲಶ್ರುತಿಯ ಮೇಲೆ ಅನನ್ಯವಾದ ಪರಿಣಾಮ ಬೀರಿ ತನಗೆ ತಾನೇ ಸಾರ್ಥಕ್ಯ ಪಡೆದಿವೆ. ಪ್ರತಿ ಪಾತ್ರಗಳು ಇದಿರಾಗುವ ಸವಾಲನ್ನು ಅನಿವಾರ್ಯವಾಗಿ ಸ್ವೀಕರಿಸಲೆಂಬಂತೆ ಎದ್ದು ಬಂದು ತಾವು ಸದಾ ಜೀವಂತ ಇರುವವರು ಎಂಬುದನ್ನು ಕಾದಂಬರಿಯನ್ನು ಓದಿ ಮುಗಿಸಿ ಕೆಳಗಿಟ್ಟ ಮೇಲೂ, ಹೇಳುವಂತೆ ರೂಪುಗೊಂಡಿವೆ. ಯಾವುದೇ ಸಿದ್ಧಾಂತದ ಬದ್ಧತೆಗೆ ಒಳಗಾಗದೇ, ಆದರೆ ಸಾಹಿತ್ಯದ ಎಲ್ಲಾ ಆಶಯಗಳನ್ನು ಒಳಗೊಂಡು ಮಾನವೀಯ ನೆಲೆಯಲ್ಲೇ ಪಕ್ವವಾಗುವ ಇಲ್ಲಿನ ಎಲ್ಲಾ ಪಾತ್ರಗಳು ಈ ಕಾದಂಬರಿಯನ್ನು ಈಚೆಗಿನ ದಿನಗಳ ಸಮಾಜ ಶಾಸ್ತ್ರೀಯ ಕಾದಂಬರಿಗಳಲ್ಲಿ ಬಹುಮುಖ್ಯವಾಗಿಸಿದೆ.
ಬೃಹತ್ ಗಾತ್ರದ ಮತ್ತು ಬೃಹತ್ ಮೌಲ್ಯದ ಸಂಸ್ಕೃತಿಯೊಂದರ ಅನಾವರಣದಲ್ಲಿ ಸಾಹಿತ್ಯದಲ್ಲಿ ಯಾವುದೇ ಪರಿಬೇಧ ಸಲ್ಲದು ಮತ್ತು ಒಂದು ವರ್ಗದ ಲೇಖಕನು ಇನ್ನೊಂದು ವರ್ಗದ ಸಂಸ್ಕೃತಿಯ ಒಳಗೆ ಪ್ರವೇಶಿಸಿ - ಅದಕ್ಕೆ ಚೂರೂ ಅಪಚಾರವಾಗದಂತೆ - ಅದರ ಎಲ್ಲ ಸೂಕ್ಷ್ಮತೆ, ರೂಕ್ಷತೆ, ವಿನ್ಯಾಸ, ವೈಭವಗಳನ್ನು ಹೇಗೆ ಸಮಗ್ರವಾಗಿ ಹಾಗೂ ಸಶಕ್ತವಾಗಿ ಅನಾವರಣ ಮಾಡಬಲ್ಲ ಎಂಬುದಕ್ಕೆ ಈ ಕಾದಂಬರಿಯು ಸಾಕ್ಷಿಯಾಗುತ್ತದೆ. ಇದು ಕುಡ್ಲದ (ಮಂಗಳೂರಿನ) ಕಡಲಿನ ಹಾಗೆ, ಅಬ್ಬರದ ತೆರೆಗಳ ನಡುವೆ ನಿಡುಸುಯ್ಯುವ ಚಿಕ್ಕಚಿಕ್ಕ ಅಲೆಗಳಿಗೂ ಆಶ್ರಯ ನೀಡಿದೆ.
ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ 2008