ಕಾಲೇಜಿನ ಆವರಣದಲ್ಲಿ ನಡೆಯುವ ಹಲವು ವಿಚಾರಗಳನ್ನು ಜೊತೆ ಜೊತೆಗೆ ಕಟ್ಟಿಕೊಡುವ ಸುಚೇತನ್ ರಂಗಸ್ವಾಮಿ ಅವರ ‘ಸ್ವಾಭಿಮಾನ ದುರಭಿಮಾನವಾದಾಗ’ ಕೃತಿಯು ನಮ್ಮ ಸುತ್ತಮುತ್ತಲು ನಡೆಯುವ ಅನೇಕ ವಿಷಯಗಳನ್ನು ಕೇಂದ್ರಿಕರಿಸುತ್ತದೆ. ಕೃತಿಯಲ್ಲಿನ ಒಂದು ತುಣುಕು ಹೀಗಿದೆ: ‘ಕಾಲೇಜು ಸಮಯ ಮುಗಿದು ಮನೆಗೆ ಹೊರಟಾಗ ಯಾರೋ ಬಂದಂತಾಗಿತ್ತು. ಒಮ್ಮೆ ಯಾರು ಎಂದು ತಿರುಗಿ ನೋಡೋಣ ಅನ್ನಿಸಿತು ಬೇಡವೆಂದು ಹಾಗೆ ಮನೆಯ ದಾರಿ ಹಿಡಿದಳು ಸರೋಜಾ. ಇನ್ನೇನು ಊರಿಗೇ ದೊಡ್ಡದೆನಿಸಿದ ಅವಳ ಬಂಗಲೆಯಂತಹ ಮನೆಯ ದಾರಿಗೆ ತಿರುಗುವಷ್ಟರಲ್ಲಿ ಸರು ಎಂದು ಕರೆದ ಸಂತೋಷ್. ತನ್ನ hero ranger cycle ಅನ್ನು ತಳ್ಳುತ್ತಾ ನಡೆದು ಬರುತ್ತಿದ್ದ ಸಂತೋಷ್ನನ್ನು ನೋಡಿ ಕೋಪ ನೆತ್ತಿಗೇರಿತ್ತು ಸರೂಗೆ. “ನೀನು ಆಗ್ಲಿಂದ ನನ್ನ ಹಿಂದೆಯೇ ಬರ್ತಾ ಇದ್ದೀಯಾ?” ಎಂದು ಕೇಳಿದಳು. ಧ್ವನಿ ಸ್ವಲ್ಪ ಜೋರಾಗಿಯೇ ಇತ್ತು. ಇನ್ನೆಲ್ಲಿ ಕೂಗಿ ಕಿರುಚಿ ರಂಪ ಮಾಡ್ತಾಳೋ ಅಂತ ಸಂತೋಷ ಹೆದರಿದ್ದ. ಆದರೆ ಸರು ಸರಸರನೇ ಅವನ ಬಳಿ ಬಂದು ಏನೋ, ಮಜುನುನಾ ನೀನು, ಒಳ್ಳೆ ಫಿಲ್ಮಿ ಶೈಲಿಯಲ್ಲಿ ನನ್ನ ಹಿಂದೆ ಬಿದ್ದು ಡುಯೆಟ್ ಹಾಡ್ಬೇಕು ಅನ್ಕೊಂಡಿದ್ದೀಯಾ? ಎಂದು ಕೇಳಿದಳು. ನ,, ನಂಗೆ ಹಾಡೋಕೆ ಬರಲ್ಲ ಆ ಮಾತು ಹೇಳುವಾಗ ಅವನ ಮುಗ್ಧತೆಯನ್ನು ಸರು ಗಮನಿಸಿದಳು. ಒಂದು ಸುಂದರವಾದ ನಗು ಅವಳಿಗೆ ತಿಳಿಯದೆ ಅವಳ ಮುಖದಲ್ಲಿ ಮೂಡಿತ್ತು ನಗುವನ್ನು ಮರೆಸುವಷ್ಟರಲ್ಲಿ ಸಂತೋಷನು ಆ ನಗುವನ್ನು ನೋಡಿ ಆಗಿತ್ತು. ಕಂದು ಬಣ್ಣದ ಕಣ್ಣು, ನೀಳವಾದ ರೆಪ್ಪೆ, ತಿದ್ದಿದಂತಹ ಹುಬ್ಬು, ಕಡುಕಂದು ಬಣ್ಣದ ರೇಷ್ಮಯಂತಹ ಕೂದಲು, ನೀಳವಾದ ಮೂಗು, ಆಗ ತಾನೇ ಮೂಡುತ್ತಿದ್ದ ಮೀಸೆ, ಅಲ್ಲೊಂದು ಇಲ್ಲೊಂದು ಪುರುಚಲು ಗಡ್ಡ, ಹಿಂಜರಿಕೆಯಿಂದ ಅದರುತ್ತಿದ್ದ ಗುಲಾಬಿ ಬಣ್ಣದ ತುಟಿ, ಒಟ್ಟಾರೆ ತಿದ್ದಿದಂತಹ ಸುಂದರ ಮುಖ. ಪರವಾಗಿಲ್ಲ ಸುರದ್ರೂಪಿ ಹುಡುಗ ಎಂದು ಮನಸ್ಸಿನಲ್ಲಿಯೇ ಎಂದುಕೊಂಡಳು ಸರೋಜಾ. ಅವನ ಮುಖವನ್ನು ನೋಡುತ್ತಾ ತನ್ನ ಭಾವನಾಲಹರಿಯಲ್ಲಿ ಕಳೆದು ಹೋಗಿದ್ದ ಸರೋಜಳನ್ನು ಒಮ್ಮೆ ಗಂಟಲು ಸರಿ ಮಾಡಿ ವಾಸ್ತವಕ್ಕೆ ಕರೆತಂದ ಸಂತೋಷ. ಇಬ್ಬರೂ ಸಮ್ಮತಿಯ ನಗೆ ಬೀರಿದರು ಒಂದೆರಡು ಹೆಜ್ಜೆ ಒಟ್ಟಿಗೆ ನಡೆದರು. ನನಗೆ ಏನಾಗಿದೆ ನನ್ನ ಜೀವನದ ಲಕ್ಷ್ಯವನ್ನು ಸಾಧಿಸುವವರೆಗೂ ಪ್ರೀತಿ ಪ್ರೇಮ ಎಂದು ವಿಚಲಿತಳಾಗುವುದಿಲ್ಲ ಎಂಬ ನಿರ್ಧಾರ ಏನಾಯಿತು? ಎಂದೆಲ್ಲಾ ಅವಳ ಅಂತರಾತ್ಮ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕತೊಡಗಿತ್ತು’.