ಈ ಕತೆಯ ನಾಯಕ ಆರೋಗ್ಯವಂತ, ಸದೃಢ ವ್ಯಕ್ತಿ. ತನ್ನ ಮೊದಲನೇ ವಿವಾಹ ವಾರ್ಷಿಕೊತ್ಸವದ ದಿನ ಅಚಾನಕವಾಗಿ ತನ್ನ ಕಾಲಿನ ಸ್ವಾಧೀನ ಕಳೆದುಕೊಳ್ಳುತ್ತಾನೆ. ದೇಶ ವಿದೇಶಗಳ ವೈದ್ಯರ ಚಿಕಿತ್ಸೆ ಮಾಡಿದರೂ, ಅವರ ಕಲಿಕೆಗೂ ಸವಾಲಾಗಿ ನಿಲ್ಲುತ್ತದೆ ಭಾನುಚಂದ್ರನ ಕಾಲಿನ ನೋವು. ಕುಟುಂಬ ವೈದ್ಯರು ಹವೆ ಬದಲಾಯಿಸುವ ಸಲಹೆ ಇತ್ತಾಗ ನಗರ ಬಿಟ್ಟು ಹಳ್ಳಿಗೆ ಬರುತ್ತಾರೆ. ಅಲ್ಲಿ ಒಬ್ಬ ಸ್ವಾಮೀಜಿಯವರ ಚಿಕಿತ್ಸೆ ಮಾಡಲಾರಂಭಿಸುತ್ತಾರೆ. ಸ್ವಾಮೀಜಿಯವರು ಹೆಂಡತಿ ಮಾಲಿನಿಗೆ ಭಾನುಚಂದ್ರನ ಕಾಲಿಗೆ ಎಣ್ಣೆ ಹಚ್ಚುವ ಕೆಲಸ ವಹಿಸಿದರೆ ಮಾಡಲು ನಿರಾಕರಿಸುತ್ತಾಳೆ. ಮಡದಿ ಮಾಲಿನಿ ಅವನಲ್ಲಿ ಆತ್ಮವಿಶ್ವಾಸ ತುಂಬುವ ಬದಲು ಅತ್ತು ಕರೆದು ಗೋಳಾಡಿ ಕಿರಿಕಿರಿಯನ್ನೇ ಉಂಟು ಮಾಡುತ್ತಾಳೆ. ಹಳ್ಳಿಯಲ್ಲಿ ನಿಲ್ಲಲು ಇಷ್ಟಪಡದ ಅವಳು ನಗರಕ್ಕೆ ಹೋಗಲು ಇಚ್ಛಿಸುತ್ತಾಳೆ.ಭಾನುಚಂದ್ರರ ತಂದೆ ಫಣೀಂದ್ರರು ಒಬ್ಬ ಬಡ ಹೆಣ್ಣು ಸಂಧ್ಯಾಳ ಜೊತೆ ಭಾನುವಿನ ಮದುವೆ ಮಾಡಲು ನಿರ್ಧರಿಸುತ್ತಾರೆ. ಅವರ ಉದ್ದೇಶದ ಹಿಂದೆ ಸ್ವಾರ್ಥ ಇದ್ದರೂ, ಆಗಿನ ಪರಿಸ್ಥಿತಿಯಲ್ಲಿ ಅವರಿಗೆ ಮಗ ಗುಣಮುಖವಾಗುವುದು ಎಲ್ಲಕ್ಕಿಂತ ಮುಖ್ಯವಾಗಿರುತ್ತದೆ. ಹೀಗೆ ಭಾನುಚಂದ್ರನ ಮಡದಿಯಾಗಿ ಬಂದ ಸಂಧ್ಯಾ, ಹಗಲಿರುಳು ಗಂಡನ ಸೇವೆ ಮಾಡುತ್ತಾ ಅವನಲ್ಲಿ ಗುಣವಾಗುತ್ತದೆಂಬ ಆತ್ಮವಿಶ್ವಾಸ ತುಂಬುತ್ತಿರುತ್ತಾಳೆ.ಸಂಧ್ಯಾಳ ನಿಸ್ವಾರ್ಥ ಸೇವೆ,ಸ್ವಾಮೀಜಿಯವರ ಚಿಕಿತ್ಸೆ ಫಲಕಾರಿಯಾಗುತ್ತದೆ. ಭಾನುಚಂದ್ರನ ನೋವು ಸಂಪೂರ್ಣವಾಗಿ ಗುಣವಾಗಿ,ಅವನ ಕಾಲು ಸ್ವಾಧೀನ ಪಡೆದುಕೊಳ್ಳುತ್ತದೆ.ಭಾನುಚಂದ್ರ ಮರಳಿ ನಗರಕ್ಕೆ ಹೊರಡುತ್ತಾನೆ,ಹೊರಡುವ ಸಮಯದಲ್ಲಿ ಕಣ್ಣಿಗೆ ಬೀಳದ ಸಂಧ್ಯಾಳ ಬಗ್ಗೆ ಕೇಳಿದಾಗ ಅವಳು ತವರಿಗೆ ಹೋಗಿದ್ದಾಳೆ ಎಂಬ ಉತ್ತರ ಬರುತ್ತದೆ.ಸಂಧ್ಯಾಳಿಂದ ದೂರವಾದರೂ ಭಾನುವಿಗೆ ಹಗಲಿರುಳು,ಕನಸು ಮನಸ್ಸಿನಲಿ ಸಂಧ್ಯಾಳೇ ಕಾಣುತ್ತಾಳೆ. ಅವನಿಗೆ ಅರಿವಿಲ್ಲದೇ ಅವನು ಸಂಧ್ಯಾಳನ್ನು ಪ್ರೀತಿಸುತ್ತಿರುತ್ತಾನೆ. ಮುಂದೆ ಅವರಿಬ್ಬರ ಭೇಟಿಯನ್ನು ತಡೆಯಲು ಸಾಕಷ್ಟು ಕುಕೃತ್ಯಗಳು ನಡೆಯುತ್ತವೆ. ಅಚಾನಕವಾಗಿ ಕಣ್ಮರೆಯಾದ ಅವಳು ಈ ಜಗತ್ತಿನಲ್ಲೇ ಇಲ್ಲ ಎಂದು ಭಾನುಚಂದ್ರನನ್ನು ನಂಬಿಸುವ ಪ್ರಯತ್ನವೂ ನಡೆಯುತ್ತದೆ.ಭಾನುಚಂದ್ರನ ಸತತ ಪ್ರಯತ್ನಗಳ ಫಲವಾಗಿ ಮರಳಿ ದೊರಕಿದ ಸಂಧ್ಯಾ ತನ್ನ ಮಾನಸಿಕ ಸಮತೋಲನ ಕಳೆದುಕೊಂಡು ಕ್ರೈಸ್ತ ಸನ್ಯಾಸಿಯಾಗಲು ಹೊರಟಿರುತ್ತಾಳೆ.ಅವಳ ಮಾನಸಿಕ ಸ್ಥಿತಿ ಸರಿಪಡಿಸಲು ಭಾನುಚಂದ್ರ ಸಾಕಷ್ಟೂ ಪ್ರಯತ್ನ ಮಾಡುತ್ತಾನೆ, ಆದರೆ ಒಂದು ದಿನ ಅವಳನ್ನೇ ಕಳೆದುಕೊಳ್ಳುತ್ತಾನೆ.ಸಂಧ್ಯಾಳ ಕಣ್ಮರೆಯ ಹಿಂದೆ ಇರುವ ಕಾಣದ ಕೈ ಯಾರದು? ಅವಳು ಮಾನಸಿಕ ಸ್ವಾಸ್ಥ್ಯ ಕಳೆದುಕೊಳ್ಳಲು ಕಾರಣ ಯಾರು? ಸಂಧ್ಯಾಳ ಸಾವಿನ ಬಳಿಕ ಭಾನುಚಂದ್ರ ಅವಳನ್ನು ಮರೆತು ಮಾಲಿನಿ ಜೊತೆ ಜೀವನ ನಡೆಸುತ್ತಾನಾ? ಎಂಬ ಪ್ರಶ್ನೆಗಳ ಉತ್ತರ"ಸುಮಧುರ ಸಂಗಮ" ಕಾದಂಬರಿಯಲ್ಲಿದೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE