ಕಾದಂಬರಿಗಾರ್ತಿ ರಾಧಾದೇವಿಯವರ ಸಾಮಾಜಿಕ ಕಾದಂಬರಿ ‘ಸಿರಿದೇವಿ ನಕ್ಕಾಗ’.ಈ ಕಾದಂಬರಿಯ ಮುನ್ನುಡಿಯಲ್ಲಿ ,ಲೇಖಕಿ ಶ್ರೀಮತಿ ಹೆಚ್.ಜಿ. ರಾಧಾದೇವಿಯವರು ಹಿರಿಯರ ಸೂಕ್ತಿಯನ್ನು ಉದಾಹರಿಸುತ್ತಾ ಹೇಳುತ್ತಾರೆ , ಲಕ್ಷ್ಮೀದೇವಿ ಮನುಷ್ಯನಿಗೆ ಸುಮ್ಮನೇ ಒಲಿಯುವುದಿಲ್ಲ . ಅವನಲ್ಲಿ ಏನಾದರೂ ಒಳ್ಳೆ ಗುಣ ಕಂಡರೆ ಒಲಿಯುತ್ತಾಳೆ ಎಂದು . ಈ ಇಡೀ ಕಾದಂಬರಿಯ ಕಥೆ ಇದೊಂದೇ ಅಂಶದ ಮೇಲೆ ಚಿತ್ರಿತವಾಗಿದೆ .
ಕಥಾನಾಯಕ ವಿಜಯ್ ಹುಟ್ಟಾ ಶ್ರೀಮಂತನಲ್ಲ . ಸಿನಿಮಾ ನಟನಾಗಿ ರಾಶಿ ರಾಶಿ ಹಣ ಗಳಿಸಿ , ಆಸ್ತಿ -ಪಾಸ್ತಿ ಸಂಪಾದಿಸಿದವನು .ನಟನಾಗಬೇಕು ಎಂದು ಅವನೇನು ಮನೆ ಬಿಟ್ಟು ಬಂದು , ನಿರ್ಮಾಪಕರ ಬಾಗಿಲು ಕಾಯುತ್ತಾ ಅವಕಾಶಗಳಿಗೆ ಅಂಗಲಾಚಿದವನಲ್ಲ . ಓದು ಮುಗಿಸಿ ಜವಾಬ್ದಾರಿಯಿಂದ ಉದ್ಯೋಗಕ್ಕೆ ಸೇರಿಕೊಂಡು , ತಂದೆ ತಾಯಿಗಳನ್ನು ಸಲಹುತ್ತಿದ್ದಾತ .ಅವನ ನಟನಾ ಪ್ರತಿಭೆ ನೋಡಿ , ಸಿನಿಮಾ ನಿರ್ಮಾಪಕರು ಮನೆ ತನಕ ಹುಡುಕಿಕೊಂಡು ಬಂದು , ಅವನಿಗೆ ಅವಕಾಶಗಳು ನೀಡಿ ಪ್ರೋತ್ಸಾಹಿಸುತ್ತಾರೆ . ತಾನಾಗಿ ತಾನೇ ಅವಕಾಶಗಳು ಅರಸುತ್ತಾ ಬರಲು , ಸಿರಿ ಸಂಪತ್ತು ಹುಡುಕಿಕೊಂಡು ಬರಲು ವಿಜಯನಲ್ಲಿದ್ದ ಒಳ್ಳೆ ಗುಣಗಳಾದರೂ ಏನು ? ಯಾರನ್ನೂ ದ್ವೇಷಿಸದೇ , ತನಗಿದ್ದ ಅನುಕೂಲದಲ್ಲೇ ಎಲ್ಲರನ್ನೂ ಸಲಹುವ ಗುಣ , ಯಾರಿಂದಲೂ ಏನನ್ನೂ ನಿರೀಕ್ಷಿಸದೆ ಎಲ್ಲರನ್ನೂ ನಮ್ಮವರೇ ಎಂದು ಬಗೆದು ಅವರ ಕಷ್ಟ ಕಾಲದಲ್ಲಿ ನೆರವಾಗುವ ಗುಣದಿಂದಲೇ ಲಕ್ಷ್ಮೀ ದೇವಿ ಕಥಾ ನಾಯಕ ವಿಜಯನಿಗೆ ಆಶಿರ್ವದಿಸುತ್ತಾಳೆ . ಕಥೆ ಶುರುವಾಗುವುದು ವಿಜಯನ ತಾಯಿ ರಾಜಮ್ಮನ ಜೀವನದಿಂದ . ಅತ್ಯಂತ ಬೇಜವಾಬ್ದಾರಿ ಗಂಡನನ್ನು ಕಟ್ಟಿಕೊಂಡು ರಾಜಮ್ಮ ನಾನಾ ಪಡಿಪಾಟಲು ಪಡುತ್ತಾರೆ . ಕೈ ಹಿಡಿದ ಹೆಂಡತಿಗೆ , ಎರಡು ಹೊತ್ತು ಊಟವೂ ಹಾಕದೆ ಸಂಪಾದಿಸಿದ ಹಣವೆಲ್ಲ ಕುಡಿತ ಇಸ್ಪೀಟಿನ ಚಟಕ್ಕೆ ಬಡಿಯುವ ದುರುಳ . ರಾಜಮ್ಮ ನೆಂಟರಿಷ್ಟರ ಮನೆಗಳಲ್ಲಿ ದುಡಿತಕ್ಕೆ ಹೋಗಿ , ಅಪಮಾನಿತರಾಗಿ , ಕೊನೆಗೆ ಬೇರೆಯರ ಮನೆಗಳಲ್ಲಿ ಸಂಬಳಕ್ಕೆ ದುಡಿದರೂ ಚಿಂತೆಯಿಲ್ಲ ಬಂಧುಗಳ ಮನೆಗೆ ಹೋಗುವುದಿಲ್ಲ ಎಂದು ನಿರ್ಧರಿಸುತ್ತಾರೆ . ಅಂತೆಯೇ ಹೆಚ್ಚಿನ ವಿದ್ಯಾಭ್ಯಾಸವೇನೂ ಇರದ ಆಕೆ ಬೇರೆಯವರ ಮನೆಗಳಲ್ಲಿ ಕೆಲಸದವಳಾಗಿ ದುಡಿದು , ಮಗನನ್ನು ಓದಿಸಿ ವಿದ್ಯಾವಂತನನ್ನಾಗಿ ಮಾಡುತ್ತಾಳೆ . ದುಡಿಮೆಯ ಕಾರಣಕ್ಕೇ ಅದೇ ಊರಿನ ಶ್ರೀಮಂತರೊಬ್ಬರ ಮನೆಯಲ್ಲಿ ನೆಲೆಸುತ್ತಾರೆ . (ಮನೆಯಿಂದ ಹೋಗಿ ಬರುವುದು ದೂರವಾಗುತ್ತದೆ ಎನ್ನುವ ಕಾರಣಕ್ಕೆ ) ರಾಜಮ್ಮನ ಪತಿ ಶೇಷಾದ್ರಿ ಆಕೆಯೊಂದಿಗೆ ಬರಲು ಒಪ್ಪದ ಕಾರಣ , ಒಂದೇ ಊರಲ್ಲಿದ್ದರೂ ಸತಿ ಪತಿಗಳಿಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಾ ದಶಕಗಳೇ ಕಳೆಯುತ್ತಾರೆ . ವಿಜಯ್ ಬೆಳೆದು ದೊಡ್ಡವನಾಗಿ , ಅದೇ ಊರಿನಲ್ಲಿ ಕಾಲೇಜು ಲೆಕ್ಚರರ್ ಕೆಲಸ ಗಿಟ್ಟಿಸಿ ತಾಯಿಯೊಂದಿಗೆ ಸುಖ ಜೀವನ ನಡೆಸುತ್ತಿರುತ್ತಾನೆ . ಹೀಗಿರುವಾಗ ಒಮ್ಮೆ ಕಂಠ ಪೂರ್ತಿ ಕುಡಿದ ಶೇಷಾದ್ರಿ , ರಸ್ತೆಯಲ್ಲೇ ಬಿದ್ದು , ತಲೆಯೊಡೆದುಕೊಂಡಿರುತ್ತಾನೆ .ದಾರಿಹೋಕರ್ಯಾರೋ ಆತನನ್ನು ಆಸ್ಪತ್ರೆಗೆ ಸೇರಿಸಿ , ಅಲ್ಲಿಲ್ಲಿ ವಿಚಾರಿಸಿ ವಿಜಯನಿಗೆ ಸುದ್ದಿ ಮುಟ್ಟಿಸುತ್ತಾರೆ . ವಿಜಯ್ ಹಳೆ ವಿಷಯಗಳ್ಯಾವುದೂ ಮನಸ್ಸಿನಲ್ಲಿಟ್ಟುಕೊಳ್ಳದೆ , ತಾಯಿಯೊಂದಿಗೆ ಆಸ್ಪತ್ರೆಗೆ ಹೋಗಿ , ತಂದೆಗೆ ಚಿಕಿತ್ಸೆ ಕೊಡಿಸಿ , ಮನೆಗೆ ಕರೆತರುವುದಷ್ಟೇ ಅಲ್ಲದೆ , ಉದ್ಯೋಗ ,ಆರೋಗ್ಯ ಎರಡೂ ಕಳೆದುಕೊಂಡ ತಂದೆಗೆ , ಯಾವುದೇ ರೀತಿಯಲ್ಲೂ ಮನಸ್ಸು ನೋಯಿಸದೆ , ಹಳೆ ವಿಷಯಗಳೇನೂ ಕೆದಕದೆ ಪ್ರೀತಿಯಿಂದ ಸಲಹುತ್ತಾನೆ . ತಾಯಿಯ ಅಸಮಾಧಾನಕ್ಕೂ ಸಾಂತ್ವನ ನೀಡುತ್ತಾನೆ . ಕಾಲೇಜು ವಾರ್ಷಿಕೋತ್ಸವದಂದು ವಿಜಯ್ ಒಂದು ನಾಟಕದಲ್ಲಿ ಅಭಿನಯಿಸುತ್ತಾನೆ . ಅವನ ಅಭಿನಯ ಮೆಚ್ಚಿ , ಒಂದು ಹವ್ಯಾಸಿ ನಾಟಕ ತಂಡದಿಂದ ಅಭಿನಯಕ್ಕೆ ಆಹ್ವಾನ ಬರುತ್ತದೆ . ಅದಕ್ಕೆ ಒಪ್ಪಿದ ವಿಜಯ್ ಕಾಲೇಜಿಗೆ ಬಿಡುವಿದ್ದಾಗಲೆಲ್ಲ ಹೋಗಿ ಅಭಿನಯಿಸಿ ಬರುತ್ತಿರುತ್ತಾನೆ . ಅದರಿಂದಲೇ ಆತ ಸಿನೆಮಾ ನಿರ್ದೆಶಕರ ಕಣ್ಣಿಗೆ ಬಿದ್ದು , ತಾರೆಯೂ ಆಗುತ್ತಾನೆ .
ಮುಂದಿನದ್ದೆಲ್ಲ ಕಥೆಯ ಶೀರ್ಷಿಕೆಯೇ ಹೇಳುವಂತೆ , ಸಿರಿದೇವಿ ಅವನ ಮೇಲೆ ಪ್ರಸನ್ನಳಾಗುವ ಕಥೆಯೇ .ಚಿತ್ರರಂಗದಲ್ಲಿ ವಿಜಯನ ವಿಜಯಯಾತ್ರೆ ಸತತವಾಗಿ ಮುಂದುವರೆಯುತ್ತದೆ .ಅವನ ಬಾಳಿನಲ್ಲಿ ಬರುವ ಇಬ್ಬರು ಹುಡುಗಿಯರು ವೈಶಾಲಿ ಹಾಗು ವೈಜಯಂತಿ ಇಬ್ಬರ ಪೈಕಿ ಯಾರು ಅವನ ಜೀವನ ಸಂಗಾತಿಯಾಗುತ್ತಾರೆ , ಈ ಕುತೂಹಲ ಕಥೆ ಓದಿಯೇ ತಿಳಿಯಬೇಕು .
ಈ ಕಾದಂಬರಿ ಗೀತಾ ಏಜೆನ್ಸೀಸ್ ರಿಂದಾ 1982ರಲ್ಲಿ ಮೊದಲ ಮುದ್ರಣ ,1993ಯಲ್ಲಿ ಕೀರ್ತಿ ಪ್ರಕಾಶನದವರಿಂದ ಎರಡನೇ ಮುದ್ರಣ ,ಹಾಗು 2010ರಲ್ಲಿ ಲಕ್ಷ್ಮಿ ವೆಂಕಟೇಶ್ವರ ಪ್ರಕಾಶನದಿಂದ ಮೂರನೇ ಮುದ್ರಣ ಕಂಡಿದೆ .
ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...
READ MORE