ಜನರು ಬುದ್ದಿವಂತರಾದಂತೆಯೇ ತಮ್ಮೊಳಗೆ ವ್ಯವಸ್ಥೆಯೊಂದನ್ನು ರೂಪಿಸಿಕೊಂಡು ಬಳಿಕ ಅದರೊಳಗೇ ಸಿಲುಕಿ ಚಡಪಡಿಸುತ್ತಾರೆ. ಈ ನಡುವೆ ಬಲಿಷ್ಠರಾದವರು ತಮಗನುಕೂಲವಾಗುವಂತೆ ನ್ಯಾಯ, ಅನ್ಯಾಯಗಳ ಪಟ್ಟಿ ಸಿದ್ಧಪಡಿಸಿ ಸಾರ್ವಜನಿಕರಿಗಾಗಿ ಬಿಡುಗಡೆ ಗೊಳಿಸುತ್ತಾರೆ. ಕುಟ್ಟಿಚ್ಚರಾದಲ್ಲಿ ಆದದ್ದೂ ಇದುವೆ, ತಮ್ಮ ಮರ ಬಿದಿರಿನ ವ್ಯಾಪಾರದಲ್ಲಿ ಅರಬ್ ಸ್ಥಾನದ ಬಂಗಾರ ಬೇಟೆ ಆರಂಭಿಸಿದ ಸಾಹುಕಾರರು ಒಂದು ಕಡೆಯಾದರೆ, ತಮ್ಮ ಹೊಟ್ಟೆಪಾಡಿಗಾಗಿ ಸಾಹುಕಾರರುಗಳ ಎದುರು ಹುಲ್ಲುಗಿಂಜುತ್ತ, ಅವರ ಅರಬ್ ಗಿರಾಕಿಗಳ ಸಲುವಾಗಿ ಹೆಣ್ಣು ಪೂರೈಸುವ ದಲ್ಲಾಳಿಗಳು ಮತ್ತೊಂದು ಕಡೆ. ತಮ್ಮ ನಾಡಿನಲ್ಲಿ 'ಮಹರ್' ನೀಡಲಾಗದೆ ಮದುವೆಗಾಗಿ ಕಾತರಿಸುವ ಅರಬೀ ಗಂಡುಗಳು ಒಂದು ಕಡೆಯಾದರೆ, ಇಲ್ಲಿ ವರದಕ್ಷಿಣೆ ಕಾಟದಿಂದಾಗಿ ಮದುವೆ ಬಗ್ಗೆ ಕನವರಿಸಲೂ ಭಯಪಡುವ ಹೆಣ್ಣುಗಳು ಇನ್ನೊಂದು ಕಡೆ. ಈ ಹೋರಾಟದಲ್ಲಿ ಯಾರು ಗೆದ್ದರು, ಯಾರು ಸೋತರು ಎಂಬುದಾಗಲೀ, ಯಾರು ಸರಿ, ಯಾರು ತಪ್ಪು ಎಂಬುದಾಗಲೀ ಮುಖ್ಯವಲ್ಲ. ತಾವೇ ರೂಪಿಸಿದ ವ್ಯವಸ್ಥೆಯ ಸೂತ್ರದಲ್ಲಿ ಈ ಎಲ್ಲರೂ ತಾವೇ ಬಂಧಿಯಾದವರು. ಈ ಕಾದಂಬರಿಯು ಅದನ್ನೇ ಶೋಧಿಸುತ್ತದೆ.
ಕತೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಅವರು ಮೂಲತಃ ಉಡುಪಿ ಜಿಲ್ಲೆಯ ಬಾರಕೂರಿನವರು. 1949 ಜೂನ್ 25ರಂದು ಜನಿಸಿದರು. ಬಿ.ಕಾಂ. ಪದವೀಧರರಾಗಿದ್ದ ಅವರು ಬ್ಯಾಂಕ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ’ಗೋರಿ ಕಟ್ಟಿಕೊಂಡವರು’, ’ನೋಂಬು’, ’ದಜ್ಜಾಲ’, ’ಅತ್ತರ್ ಹಾಜಿಕ್ ಮತ್ತು ಇತರ ಕತೆಗಳು’, ’ಪಚ್ಚ ಕುದುರೆ’ ಕತಾಸಂಕಲನಗಳು. ನೀಳ್ಗತೆಗಳ ಸಂಕಲನ ’ಕಡವು ಮನೆ’ ಹಾಗೂ ’ಸರಕುಗಳು’ ಮತ್ತು ’ಕಚ್ಚಾದ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ’ಬೇರೂತಿನಿಂದ ಜರುಸಲೇಮಿಗೆ (2010) ಮತ್ತು ಮಂಟೋ ಬರೆದ ದೇಶ ವಿಭಜನೆಯ ಕತೆಗಳು’ ಅನುವಾದ ಕೃತಿಗಳು. ’ಕಯ್ಯೂರಿನ ರೈತವೀರರು’, ’ರಾಷ್ಟ್ರೀಯತೆ ಮತ್ತು ಮುಸ್ಲಿಮರು’, ’ಸೂಫಿ ಸಂತರು’ ...
READ MORE