ಪ್ರೀತಿ ಎಂಬುದು ಚಂದ್ರನ ದಯೆ

Author : ಎಸ್.ಎಫ್‌. ಯೋಗಪ್ಪನವರ

Pages 258

₹ 180.00




Year of Publication: 2015
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಅಂಚೆ, ಎಮ್ಮಿಗನೂರು (ವಯಾ) ಬಳ್ಳಾರಿ-583113
Phone: 08394-228567 /9480728393

Synopsys

ಪತ್ರಕರ್ತ, ಬರಹಗಾರ, ಅನುವಾದಕ ಎಸ್‌.ಎಫ್‌ ಯೋಗಪ್ಪನವರ ಕಾದಂಬರಿ ’ಪ್ರೀತಿ ಎಂಬುದು ಚಂದ್ರನ ದಯೆ’. ಒಟ್ಟು 71 ಅಧ್ಯಾಯಗಳಲ್ಲಿ ಹರಡಿಕೊಂಡಿರುವ ಕಾದಂಬರಿ ಪ್ರೀತಿ- ಪ್ರೇಮ- ಪ್ರಣಯ ಹುಟ್ಟಿಸುವ ಬೆರಗನ್ನು ತಿಳಿಸುತ್ತದೆ. 

’ಪ್ರಜಾವಾಣಿ’ ಪತ್ರಿಕೆಗೆ ಕೃತಿಯನ್ನು ಪರಿಚಯಿಸುತ್ತಾ ಕತೆಗಾರ ಸಂದೀಪ ನಾಯಕ, ’ಬದುಕಿನಲ್ಲಿಯ ವಾಸ್ತವ, ಭ್ರಮೆ, ನಿಜ, ಸುಳ್ಳು, ವರ್ತಮಾನ, ನೆನಪು, ಪ್ರೀತಿ, ಕಾಮಗಳನ್ನು ಅವು ಇರುವಂತೆಯೇ ದಾಖಲು ಮಾಡಿದರೆ ಹೇಗಿರುತ್ತದೆ ಎಂಬುದಕ್ಕೆ ಎಸ್.ಎಫ್. ಯೋಗಪ್ಪನವರ್ ಅವರ ಪ್ರೀತಿ ಎಂಬುದು ಚಂದ್ರನ ದಯೆ' ಎಂಬ ಈ ಕಾದಂಬರಿ ಉದಾಹರಣೆಯಾಗಿದೆ. ನಮ್ಮ ಮುಂದಿನ ಅಥವಾ ನಮ್ಮನ್ನು ಸುತ್ತುವರಿದಿರುವ, ಯಾವಾಗಲೂ ಸುಳಿಯುತ್ತಲೇ ಇರುವ ಮಾಯಾವಾಸ್ತವವನ್ನು ಇಲ್ಲಿ ಆಧುನಿಕ ಪುರಾಣವನ್ನಾಗಿಸಿ ನೋಡಲಾಗಿದೆ. ಇದು ಕಥೆಯ ಹಂಗು ತೊರೆದ ಅಥವಾ ಅದರಿಂದ ಬಿಡಿಸಿಕೊಂಡ ಕಾದಂಬರಿ. ಪುರಾಣವನ್ನು ಸೃಷ್ಟಿಸಿ ಅದನ್ನೇ ಕಥನದ ಹರಿವನ್ನಾಗಿಸುವ, ಸಂಚಾರಿ ಭಾವಗಳನ್ನೇ ಕಥನವನ್ನಾಗಿಸುವ ಕುಶಲತೆ ಇಲ್ಲಿದೆ’ ಎಂದಿದ್ದಾರೆ. 

ಕನ್ನಡ ಪ್ರಭ ಪತ್ರಿಕೆಗೆ ಕೃತಿಯನ್ನು ಪರಿಚಯಿಸುತ್ತ ವಿಮರ್ಶಕ ವಾಸುದೇವ ಶೆಟ್ಟಿ, ’ಲೇಖಕರ ವರ್ಣನಾಶಕ್ತಿ, ಕಲ್ಪನಾಪ್ರತಿಭೆ, ನವಿರೇಳಿಸುವ ತಣ್ಣಗಿನ ಶೈಲಿ, ಜೋಗುಳ ಹಾಡುವಹಾಗಿನ ಕಥನ ಕಲೆಯಿಂದಾಗಿ ಓದುಗನನ್ನು ಇದು ಹಿಡಿದಿಟ್ಟುಕೊಳ್ಳುತ್ತದೆ. ಇದನ್ನು ಅವರು ಕಾದಂಬರಿ ಎಂದು ಕರೆದಿರುವ ಕಾರಣಕ್ಕೆ ನಾವು ಕಾದಂಬರಿ ಎಂದು ಓದಿಕೊಳ್ಳುತ್ತೇವೆ ಅಷ್ಟೇ. ಇಲ್ಲದಿದ್ದರೆ ಇದು ಪ್ರತ್ಯೇಕವಾದ ಕವಿತೆಗಳು ಅನಿಸಿಕೊಳ್ಳುವಷ್ಟು ಗದ್ಯಗಂಧಿಯಾಗಿದೆ. ಅಧ್ಯಾಯಗಳೂ ಪುಟ್ಟಪುಟ್ಟವು. ಇದರಲ್ಲಿರುವುದು ಒಂದೇ ವಾಕ್ಯಗುಚ್ಛದ ಕತೆ. ಕಾದಂಬರಿಯಲ್ಲಿಯ ನಿರೂಪಕಿ - ಅವಳೇ ನಾಯಕಿ- (ಅವಳ ಹೆಸರು ಎಲ್ಲಿಯೂ ಉಲ್ಲೇಖಗೊಂಡಿಲ್ಲ) ಮೋಹನ ಎಂಬವನನ್ನು ಗಾಢವಾಗಿ ಪ್ರೀತಿಸಿ ತನ್ನನ್ನು ಅವನಿಗೆ ಸರ್ವರೀತಿಯಿಂದಲೂ ಅರ್ಪಿಸಿಕೊಂಡುಬಿಟ್ಟವಳು. ಆದರೆ ಈ ಮೋಹನ ಅವಳಿಗೆ ಕೈಕೊಟ್ಟು ಬೇರೆಯವಳನ್ನು ಮದುವೆಯಾಗುತ್ತಾನೆ. ಆದರೆ ಅವನಿಗೆ ಅಲ್ಲಿ ಯಾವುದೇ ಸುಖ ಸಿಕ್ಕುವುದಿಲ್ಲ. ಅವಳು ಸತ್ತ ಮೇಲೆಯೇ ಅವನ ಆತ್ಮನಿವೇದನೆಯ ಒಂದು ಅಧ್ಯಾಯ ಮಾತ್ರ ಇರುವುದು. ಪ್ರಿಯತಮನ ಹೆಂಡತಿಯ ಆತ್ಮನಿವೇದನೆಯ ಒಂದು ಅಧ್ಯಾಯವೂ ಇಲ್ಲಿದೆ.’ ಎಂಬ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 

ಲೇಖಕ ಪ್ರಶಾಂತ್‌ ಭಟ್ ವಿವರಿಸಿರುವಂತೆ ’ಇದು ಬರಿಯ ಕಾದಂಬರಿಯಲ್ಲ. ಆ ನೆಪದಲ್ಲಿ ಒಂದು ಊರಿನ ,ಈ ಭೂಮಿಯ ಒಂದೊಂದು ಜೀವಿಯ ಒಳಗಿನ ಪ್ರೇಮದ ಕಥೆಯ,ವ್ಯಥೆಯ ಹೇಳಿಬಿಡುವ ಪುಟ್ಟ ಪುಟ್ಟ ಗುಚ್ಛಗಳು. ಕೆಲವೊಮ್ಮೆ ಕಾವ್ಯವಾಗುವ ಇನ್ನು ಕೆಲವೊಮ್ಮೆ ವಿಷಾದದ ಹಾಡಾಗುವ ಗುಣ ಇವಕ್ಕಿದೆ. ಹಾಗಾಗಿಯೇ ಈ ಕೃತಿ ಕನ್ನಡ ಸಾಹಿತ್ಯದಲ್ಲಿ ಮಹತ್ವದ್ದು. ಯಾಕೆಂದರೆ ಸಾರ್ವಕಾಲಿಕ ಸತ್ಯವೊಂದನ್ನು ಅದು ಯಾವುದೇ ಸಂಕೋಚವಿಲ್ಲದೆ ಹೇಳುತ್ತದೆ’. 

About the Author

ಎಸ್.ಎಫ್‌. ಯೋಗಪ್ಪನವರ

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಬೇಲೂರು ಗ್ರಾಮದವರಾದ ಯೋಗಪ್ಪನವರ್ ಕೆ.ಎ.ಎಸ್. ಅಧಿಕಾರಿಯಾಗಿ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 'ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ', 'ಪ್ರೀತಿ ಎಂಬುದು ಚಂದ್ರನ ದಯೆ', 'ಶೋಧ' ಎಂಬ ಕಾದಂಬರಿಗಳನ್ನು, 'ಆರಾಮ ಕುರ್ಚಿ ಮತ್ತು ಇತರ ಕತೆಗಳು', 'ಮೂಟೇಶನ್' ಕಥಾ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. 'ಮಾಯಾ ಕನ್ನಡಿ-ಚಾರ್ಲ್ಸ್ ಬೋದಿಲೇರ್‌ನ ಐವತ್ತು ಗದ್ಯ ಕವಿತೆಗಳು', ಜೆ.ಡಿ. ಸಾಲಿಂಜರ್‌ನ ಕಾದಂಬರಿ 'ಹದಿಹರೆಯದ ಒಬ್ಬಂಟಿ ಪಯಣ' ಅವರ ಅನುವಾದಿತ ಪುಸ್ತಕಗಳು. ...

READ MORE

Related Books