‘ಪಸಾ’ ರಂಜನೀ ಕೀರ್ತಿ ಅವರ ರೋಚಕ ಕಿರು ಕಾದಂಬರಿ. ಈ ಕೃತಿಯ ಕುರಿತು ಬರೆದಿರುವ ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರು 'ಕಥನದ ವೇಗ ಮತ್ತು ಅನಿರೀಕ್ಷಿತ ತಿರುವುಗಳು ಈ ಕೃತಿಯ ಓದನ್ನು ಒಂದು ಥ್ರಿಲ್ಲಿಂಗ್ ಅನುಭವವಾಗಿಸುತ್ತವೆ. ಪ್ರಖ್ಯಾತ ಶಾಸ್ತ್ರೀಯ ಸಂಗೀತ ವಿದ್ವಾಂಸ ಸಾರಂಗಪಾಣಿಶಾಸ್ತ್ರಿಗಳು ಒಮ್ಮೆಗೇ ಕಾಣೆಯಾಗುವುದು, ಅವರಿಗೆ ಪರಮಾಪ್ತರಾದ ಸಂಗೀತ ಮತ್ತು ರತ್ನಾಕರ ಗುರುಗಳ ಶೋಧದಲ್ಲಿ ತೊಡಗುವುದು ಕಾದಂಬರಿಗೆ ರೋಮಾಂಚಕವಾದ ಆರಂಭವನ್ನು ಕಲ್ಪಿಸುತ್ತದೆ. ಅಮೆರಿಕಾದಲ್ಲಿರುವ ಗೆಳೆಯರು ಈ ಶೋಧನೆಯಲ್ಲಿ ತೊಡಗಿಕೊಳ್ಳುತ್ತಾರೆ. ಮುಂದೆ ಕಾದಂಬರಿ ಅಮೆರಿಕಾ ಮತ್ತು ಭಾರತದ ನಿಗೂಢ ವನ್ಯಪ್ರದೇಶದಲ್ಲಿ ಸಮಾನಾಂತರವಾಗಿ ಸಾಗುತ್ತದೆ. ಸಂಗೀತ ಮತ್ತು ರತ್ನಾಕರನಿಗೆ ಮಾರ್ಗದರ್ಶಿಯಾಗಿ ಒದಗುವ ಹಳ್ಳಿಯ ತರುಣ ಮಾರ ಸ್ವತಃ ಜಾನಪದ ಗಾಯಕ. ಹೀಗೆ ಶೋಧದಲ್ಲಿ ತೊಡಗುವ ಪಾತ್ರಗಳೆಲ್ಲಾ ಸಂಗೀತ ಬಲ್ಲವರು. ಗುರುಗಳ ಹುಡುಕಾಟದ ನಡುವೆ ಸೂಕ್ಷ್ಮವಾದ ಸಂಗೀತದ ಚರ್ಚೆಯೂ ಕೃತಿಗೆ ಭಾರವಾಗದಂತೆ ಸಹಜವಾಗಿ ನಡೆಯುತ್ತದೆ. ಲೇಖಕಿ ರಂಜನಿಯವರೂ ಸ್ವತಃ ಸಂಗೀತಗಾರ್ತಿ! ಶೋಧದಲ್ಲಿ ಒದಗುವ ಚಿಹ್ನೆಗಳೂ ರಾಗಾಧಾರಿತವೇ. ಹಾಗಾಗಿ ಇದೊಂದು ಸಂಗೀತಾತ್ಮಕ ರೋಚಕ ಥ್ರಿಲ್ಲರ್. ಕಾದಂಬರಿಯ ಕೊನೆಯವರೆಗೂ ಉಸಿರು ಬಿಗಿ ಹಿಡಿದು ಓದಬೇಕಾಗುತ್ತದೆ. ಇಂತಹ ರೋಮಾಂಚಕ ಸಾಹಸಮಯ ಶೋಧಕ ಕೃತಿಗಾಗಿ ರಂಜನೀ ಕೀರ್ತಿ ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.