ಶಾಂತಿನಾಥ ದೇಸಾಯಿಯವರ ‘ಮುಕ್ತಿ’ ಕೃತಿಯು ಕನ್ನಡ ಸಾಹಿತ್ಯಲೋಕದ 10 ಕಾದಂಬರಿಗಳಲ್ಲಿ ಪ್ರಮುಖವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಯಶವಂತ ಚಿತ್ತಾಲ ಅವರು, `ತನ್ನಬದುಕನ್ನು ತಾನೇ ಬದುಕಬೇಕು. ತನ್ನ ಅನುಭವಗಳ ಶಿಲುಬೆಯ ಭಾರವನ್ನು ಬಾಳಿನುದ್ದಕ್ಕೂ ತಾನೇ ಹೊರಬೇಕು. ತನ್ನ ಜೀವನದ ರೀತಿನಿಯಮಗಳನ್ನು, ಮೌಲ್ಯಗಳನ್ನು ತನ್ನ ಇರುವಿಕೆಯೇ ನಿಶ್ಚಯಿಸಬಲ್ಲುದೇ ಹೊರತು ಪರರಿಂದ ಎರವಲು ತಂದ ಮೌಲ್ಯಗಳು ತನಗೆ ಸಾಲವು ಎಂಬ ಪ್ರಜ್ಞೆಯುಳ್ಳ, ಬಹುಶಃ ಕನ್ನಡದ ಮೊತ್ತಮೊದಲಿನ ವಿಶಿಷ್ಟ ಕಾದಂಬರಿ ‘ಮುಕ್ತಿ’. ಕಾದಂಬರಿಯ ಕೇಂದ್ರ ವ್ಯಕ್ತಿ ಗೌರೀಶ, ತನಗೆ ಬಂದ ಪ್ರಚಂಡ ಅನುಭವಗಳಿಂದ, ರೂಪ ಆಕಾರವಿಲ್ಲದೆ ಘಾಸಿಗೊಳಿಸುವ ಭೂತಕಾಲದ ಭೂತದಿಂದ ಬಿಡುಗಡೆ ಪಡೆಯಲು ನಡೆಸಿದ ಹೋರಾಟವೇ ಈ ಕಾದಂಬರಿಯ ವಸ್ತು. ತಾನು ಪಾರಾಗ ಬಯಸುವ ಈ ನಿರಾಕಾರ ಅನುಭವಗಳಿಗೆ ಭಾಷೆಯಲ್ಲೇ ಒಂದು ಆಕಾರ ಕೊಡಬಯಸಿದಾಗ ಹುಟ್ಟಿದ ಆಕೃತಿಬದ್ದವಾದ ನೆನವರಿಕೆಯೇ ಈ ಕಾದಂಬರಿಯ ಹರವು. ಬದುಕು ಮತ್ತು ಕಲೆಗಳ ನಡುವಿರುವ ಸಂಬಂಧವನ್ನು ಅರಿಯುವ ದೃಷ್ಟಿ ಈ ಕಾದಂಬರಿಯ ತಂತ್ರವನ್ನು ನಿಶ್ಚಯಿಸಿದೆ. ಬದುಕಿನಿಂದ ಪಲಾಯನ ಹೇಳಬೇಕು ಎಂಬ ನಿಶ್ಚಯದಿಂದ ಆರಂಭವಾದ ಕತೆ, ಅದೇ ತಾನೇ ಜೀವ ತಳೆಯುತ್ತಿರುವ ಆರೋಗ್ಯವಂತ ಸದೃಢ ಹೊಸ ಸಂಬಂಧದ ಸೂಚನೆಯೊಂದಿಗೆ ಮುಗಿಯುತ್ತದೆ. ಮೇಲುನೋಟಕ್ಕೆ ಅನೈತಿಕವೆನ್ನಿಸಬಹುದಾದ ಸಂಬಂಧದ ನಿಜವಾದ ಅರ್ಥಮೌಲ್ಯಗಳನ್ನು ಅರಿಯುವುದೇ ಇಡೀ ಕಾದಂಬರಿಯ ಕಾಳಜಿಯಾಗಿದೆ. ಅನುಭವವನ್ನು ನೋಡುವ ದೃಷ್ಟಿಯಲ್ಲಿಯಂತೆ ಅದನ್ನು ಭಾಷೆಯಲ್ಲಿ ಸಾಕಾರಗೊಳಿಸುವಲ್ಲಿ ವ್ಯಕ್ತಪಡಿಸಿದ ದಿಟ್ಟತನ, ಪ್ರಾಮಾಣಿಕತೆ, ಉಪಯೋಗಿಸಿದ ತಂತ್ರದಲ್ಲಿನ ನಾವೀನ್ಯ- ಈ ಕಾದಂಬರಿಯ ಮಹತ್ವದ ಗುಣಗಳಾಗಿವೆ’ ಎನ್ನುತ್ತಾರೆ.
ನವ್ಯಕಾದಂಬರಿಕಾರರು, ವಿಮರ್ಶಕರು, ಕಥೆಗಾರರೆಂದೇ ಪ್ರಸಿದ್ಧರಾಗಿದ್ದ ಶಾಂತಿನಾಥ ದೇಸಾಯಿಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ. ಪ್ರಾಥಮಿಕ ಮತ್ತು ಮೆಟ್ರಿಕ್ ವಿದ್ಯಾಭ್ಯಾಸವನ್ನು ಧಾರವಾಡದಲ್ಲಿ ಮುಗಿಸಿದರು. ಮುಂದೆ ಮುಂಬಯಿಯ ವಿಲ್ಸನ್ ಕಾಲೇಜಿನಿಂದ ಬಿ.ಎ. ಹಾಗೂ ಎಂ.ಎ. ಪದವಿ ಪಡೆದರು. ಆನಂತರ ಬ್ರಿಟಿಷ್ ಸ್ಕಾಲರ್ಷಿಪ್ ಪಡೆದು ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಅಧ್ಯಯನ ಮಾಡಿದರು.ಅಲ್ಲಿಂದ ಹಿಂದಿರುಗಿ ಬಂದನಂತರ ಕರ್ನಾಟಕ ವಿಶ್ವವಿದ್ಯಾಲಯ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಉಪ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ನಂತರ 1988ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸಲ್ಲಿಸಿದ ಸೇವೆಸಲ್ಲಿಸಿದರು. ಕರ್ನಾಟಕ ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಮತ್ತು ಜ್ಞಾನಪೀಠ ...
READ MORE