‘ಇದ್ದರೂ ಚಿಂತೆ’ ಎಂಬುದು ಡಾ. ಶಿವರಾಮ ಕಾರಂತರ ಕಾದಂಬರಿ. ಸೀಗೆಮನೆ ಗಣಪತಿ ಹೆಗ್ಗಡೆ ಭಾರೀ ಶ್ರೀಮಂತರು, ವ್ಯವಹಾರ ಕ್ಷೇತ್ರದಲ್ಲಿ ನಂಬಿಕೆಯ ನೌಕರರಿಂದ ವಂಚನೆಗೊಳಗಾಗಿ ಜುಗುಪ್ಸೆ ಪಟ್ಟು, ವ್ಯಾಪಾರವನ್ನು ಸ್ಥಗಿತಗೊಳಿಸಿ, ತನ್ನ ಹುಟ್ಟೂರಿಗೆ ಹಿಂದಿರುಗಿ, ಕೃಷಿಕ ವೃತ್ತಿಯನ್ನು ಕೈಗೊಳ್ಳುತ್ತಾರೆ. ಇದ್ದ ಒಬ್ಬ ಮಗ ಮತಿಭ್ರಮಣೆಗೊಳಗಾಗಿ ಸಾವನ್ನಪ್ಪುತ್ತಾನೆ. ತನ್ನ ಬಂಧುಗಳ ಸಂಸಾರಕ್ಕೆ ಸಹಾಯ ಮಾಡುತ್ತಾರೆ. ಆ ಬಂಧುಗಳು ಗಣಪತಿ ಹೆಗಡೆಯವರ ಆಸ್ತಿಗಾಗಿ ಬಾಯಿ ಬಿಡುತ್ತ, ಅವರ ನಂತರ ಅದು ತಮಗೆ ಸಿಗಬೇಕೆಂದು ಒತ್ತಾಯ ತರುತ್ತಾರೆ. ಆದರೆ, ಹೆಗ್ಗಡೆಯವರಿಗೆ ತನ್ನ ಆಸ್ತಿಯನ್ನು ಹಾಗೆ ಬಟವಾಡೆ ಮಾಡಲು ಇಷ್ಟವಿರುವುದಿಲ್ಲ, ಅವರಿಂದ ಸಾಲ ಪಡೆದು, ಕಷ್ಟಪಟ್ಟು ಕೃಷಿ ಮಾಡಿ, ದುಡಿದು, ಗಳಿಸಿ, ಸಾಲದ ಹಣವನ್ನು ಹಿಂದಿರುಗಿಸುತ್ತಿದ್ದ ಗೋಳಿಮನೆ ಶಂಕರಯ್ಯ ಮತ್ತವರ ಮಕ್ಕಳ ಕುರಿತು ಗಣಪತಿ ಹೆಗ್ಗಡೆಯವರಗೆ ವಿಶೇಷ ಮೆಚ್ಚುಗೆ. ಅದೇ ರೀತಿ, ತನ್ನ ವ್ಯಾಪಾರೀ ಸಂಸ್ಥೆಯ ನೌಕರನಾಗಿದ್ದು, ತನ್ನಿಂದ ಉಪಕೃತನಾಗಿಯೂ, ಕೃತಘ್ನತೆಯಿಂದ ವಂಚಿಸಿ, ತನ್ನನ್ನು ಬಿಟ್ಟು ತೆರಳಿದ್ದ ರಾಘವೇಂದ್ರನ ಬಗ್ಗೆ ಜುಗುಪ್ಸೆ. ಅದೇ ರಾಘವೇಂದ್ರ ಗತಿಸಿದ ಬಳಿಕ ಅವನ ಮಗ ಆಕಸ್ಮಿಕವಾಗಿ ತನ್ನ ಕೃಷಿಕ ಭೂಮಿಯನ್ನು ಸಂದರ್ಶಿಸಲು ಬಂದಾಗ, ಅವನು ತನ್ನ ವೈರಿಯ ಮಗನೆಂಬ ನಿಜಸಂಗತಿ ತಿಳಿದ ಬಳಿಕವೂ, ಅವನಿಗೆ ಸಸ್ಯಶಾಸ್ತ್ರದ ಮೇಲಿದ್ದ ವಿಶೇಷ ಒಲವನ್ನು ತಿಳಿದು, ಅವನ ಮೇಲೆ ಮಮತೆ ಉಂಟಾಗುತ್ತದೆ. ಹೀಗೆ, ಧರ್ಮದ ದುಡ್ಡಿಗೆ ಬಾಯಿಬಿಟ್ಟು ದೊಡ್ಡವರಾಗಲು ಹವಣಿಸುತ್ತಿದ್ದ ತನ್ನ ಆಪ್ತ ಬಂಧುಗಳಿಗಿಂತಲೂ, ತನ್ನಿಂದ ಸಾಲ ಪಡೆದಾದರೂ, ಕಷ್ಟಪಟ್ಟು, ದುಡಿದು ಕೃಷಿಕರಾಗಿ, ಪಡೆದ ಸಾಲವನ್ನು ತನ್ನ ದುಡಿಮೆಯಿಂದಲೇ ಹಿಂದಿರುಗಿಸುತಿದ್ದ ಗೋಳಿಮನೆ ಶಂಕರಯ್ಯನ ಕುರಿತು ಅಭಿಮಾನವೆನಿಸುತ್ತದೆ. ಇದರಿಂದ, ತನ್ನ ಸಂಪತ್ತನ್ನು ಸಾರ್ಥಕಗೊಳಿಸಲು ದುಡಿಯಬಲ್ಲ ಶಂಕರಯ್ಯನಿಗೆ ಮತ್ತು ಜ್ಞಾನಪಿಪಾಸೆಯಿಂದ ಕೃಷಿಯಲ್ಲಿ ಹೊಸ ಸಂಶೋಧನೆ ನಡೆಸಿ, ದೇಶಕ್ಕೆ ನೆರವಾಗಬಲ್ಲ ಯೋಗ್ಯತೆಯಿರುವ ಸೀತಾರಾಮನಿಗೆ ಧಾರೆ ಎರೆಯಲು ನಿರ್ಧರಿಸುತ್ತಾರೆ.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE