‘ಹಸಿವು’ ತಿರುಪತಿ ಭಂಗಿ ಅವರ ಕಾದಂಬರಿ. ಕೃತಿಗೆ ಬೆನ್ನುಡಿ ಬರೆದಿರುವ ಸಿ.ಎಸ್. ಭೀಮರಾಯ ಅವರು, `ಈ ಕಾದಂಬರಿಯ ವಸ್ತು ಗ್ರಾಮೀಣ ಪರಿಸರದ್ದು, ಈ ಕಾದಂಬರಿಯಲ್ಲಿ ಬಡತನ, ಆಚರಣೆ, ಸಂಚು, ಕಾರ್ಯಪಾಳೆಗಾರಿಕೆ, ಕಾಮ, ಅನೈತಿಕ ಸಂಬಂಧ, ಏಕಾಕಿತನ, ಪ್ರೇಮ, ಮೋಸ, ವಂಚನೆ, ನಂಬಿಕೆ ಇವುಗಳ ಸಮಸ್ಯೆಯೇ ಕೇಂದ್ರದಲ್ಲಿದೆ. ಮೇಲ್ವರ್ಗ-ಕೆಳವರ್ಗದ ಜನರ ಹೊರಗಿನ ನಯ, ಸಾಮರಸ್ಯ ಪ್ರೀತಿ, ಸ್ನೇಹಗಳ ತೋರಿಕೆ ಇವುಗಳ ಹಿಂದಿರುವ ರಾಗದ್ವೇಷಗಳು ಘರ್ಷಣೆಗಳನ್ನು ಈ ಕಾದಂಬರಿಯಲ್ಲಿ ಭಂಗಿಯವರು ನೈಜವಾಗಿ ಚಿತ್ರಿಸಿದ್ದಾರೆ. ಸಮಾಜದಲ್ಲಿ ಗಂಡು-ಹೆಣ್ಣಿನ ಸಂಬಂಧಗಳ ವಿಷಯವಾಗಿ ವಿಚಾರಿಸಿದಾಗ ಮತ್ತೆ ಮತ್ತೆ ನೈತಿಕ ಪ್ರಶ್ನೆಗಳು ಏಳುತ್ತವೆ. ಯಾವುದು ನಿಜ, ಯಾವುದು ನಿಜವಲ್ಲ, ಯಾವುದು ಸತ್ಯ, ಯಾವುದು ಸುಳ್ಳು ಇಂತಹ ಪ್ರಶ್ನೆಗಳು ಏಳುತ್ತವೆ. ಇವುಗಳ ಕುರಿತು ಓದುಗರೇ ನಿರ್ಧರಿಸಬೇಕಾಗುತ್ತದೆ. ತಿರುಪತಿ ಭಂಗಿಯವರು ಒಂದು ಕುಟುಂಬದ ಮೂಲಕ ಇಡೀ ಸಮಾಜದ ಬಹುಮುಖಗಳನ್ನು ಸಹಜವಾಗಿ ಈ ಕಾದಂಬರಿಯಲ್ಲಿ ಬಿಡಿಸಿದ್ದಾರೆ. ಲೇಖಕರು ಸಮಾಜ-ವ್ಯಕ್ತಿಯ ಸಂಬಂಧವನ್ನು ಬಹು ಸೂಕ್ಷ್ಮವಾಗಿ, ಮನುಷ್ಯನ ಒಳಜಗತ್ತಿನ ದೃಷ್ಠಿಯಿಂದ ವಿಶ್ಲೇಷಿಸಿದ್ದಾರೆ. ಕಾದಂಬರಿ ಘಟನೆಗಳ ಸಂಕೀರ್ಣತೆ, ಗ್ರಾಮೀಣ ಭಾಷೆಯ ಸೊಗಡಿನಿಂದ ಓದುಗರ ಮನಸ್ಸನ್ನು ಆಕರ್ಷಿಸುತ್ತದೆ. ಈ ಕಾದಂಬರಿಯಲ್ಲಿ ಜೀವಂತ ಪಾತ್ರಗಳಿವೆ: ಗಟ್ಟಿ ಕಥಾವಸ್ತುವಿದೆ. ಕುತೂಹಲಕರವಾದ ಮಾನಸಿಕ ವ್ಯಾಪಾರಗಳ ಅನಾವರಣವಿದೆ. ಹಾಗೆಯೇ, ಈ ಕಾದಂಬರಿಯಲ್ಲಿ ಲೇಖಕರ ಕಸುಬುದಾರಿಕೆ ಪಳಗಿದೆ; ಜೀವನದೃಷ್ಟಿ ಹೆಚ್ಚು ಪ್ರಬುದ್ಧವಾಗಿದೆ.ಇಲ್ಲಿ ಒಳಗೊಂಡಿರುವ ಅನುಭವಲೋಕ ಸಾಕಷ್ಟು ವ್ಯಾಪಕವೂ, ಸಮೃದ್ಧವೂ ಆಗಿದೆ' ಎಂದು ಪ್ರಶಂಸಿಸಿದ್ದಾರೆ.
ಕತೆಗಾರ ತಿರುಪತಿ ಭಂಗಿ ಅವರು ಬಾಗಲಕೋಟೆ ಸಮೀಪದ ದೇವನಾಳ ಎಂಬ ಹಳ್ಳಿಯಲ್ಲಿ 1984 ರಲ್ಲಿ ಜನಿಸಿದರು. ತಂದೆ ಮಲ್ಲಪ್ಪ ತಾಯಿ ಗೌರವ್ವ. ಬಾಲ್ಯದಲ್ಲಿಯೇ ಹೆತ್ತವರನ್ನು ಕಳೆದುಕೊಂಡರು. ಹೈಸ್ಕೂಲ್ ಶಿಕ್ಷಣ ಮಾಡುತ್ತಿರುವಾಗಲೇ ಅಜ್ಜ-ಅಜ್ಜಿಯರೂ ತೀರಿಕೊಂಡರು. ಸಾಹಿತ್ಯ ರಚನೆಗೆ ಇವರ ಬಡತನ, ಹಸಿವು, ಅವಮಾನಗಳೇ ಮೂಲ ದ್ರವ್ಯ. . ಬಾಗಲಕೋಟೆಯ ಬಸವೇಶ್ವರ ಸಿ.ಬಿ.ಎಸ್.ಇ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಹೃದಯರಾಗ, ಅವ್ವ, ಕವಳೆಗಣ್ಣಿನ ಹುಡುಗಿ, ಮನಸು ಕೊಟ್ಟವಳು, ಅಪ್ಪ’ ಕವನ ಸಂಕಲನಗಳು ಪ್ರಕಟವಾಗಿವೆ. ಅವರ ಮೊದಲ ಕಾದಂಬರಿ ‘ಫೋಬಿಯಾ' 2017ರಲ್ಲಿ ಪ್ರಕಟಣೆ ಕಂಡಿತು. ಅವರ ‘ಜಾತಿ ಕುಲುಮ್ರಾಗ ಅರಳಿದ ಪ್ರೀತಿ’ ಚೊಚ್ಚಲ ಕೃತಿ ...
READ MORE