ಮರಗಳ್ಳರಿಗೆ ಸಿಂಹಸ್ವಪ್ನವಾಗಿದ್ದ ಕೊಡಗಿನ ಅರಣ್ಯಾಧಿಕಾರಿಯೊಬ್ಬರ ರೋಚಕ ಕತೆಯನ್ನು ಹೇಳುವ ಕಾದಂಬರಿ ಕೃತಿ ʻಫಾರೆಸ್ಟರ್ ಪೊನ್ನಪ್ಪʼ. ನೌಶಾದ್ ಜನ್ನತ್ತ್ ಅವರು ಬರೆದ ಈ ಕೃತಿಯು ಮಲೆನಾಡಿನಲ್ಲಿ ಬದಲಾದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ತೆಯ ಸುತ್ತ ಹೆಣೆದಿರುವ ಕಾದಂಬರಿ. ಆದರೆ ಬದಲಾವಣೆಯನ್ನು ಜೀರ್ಣಸಿಕೊಳ್ಳಲು ಆಗದ ಆರ್ದ್ರತೆಯೂ ಇಲ್ಲಿದೆ. ಹೆಣ್ಣು, ಹಣದ ಹಿಂದೆ ಹೋಗಿ ಕೊನೆಗೆ ಭಿಕ್ಷೆ ಬೇಡುವಂತಾದವನ ದುರಂತ, ದಾರಿ ತಪ್ಪಿದ ಮಗನಿಗಾಗಿ ಚಡಪಡಿಸುವ ಹಿರಿಜೀವಗಳ ದಾರುಣ ಸ್ಥಿತಿ, ಗುಡ್ಡಗಾಡಿನ ವಾಸ್ತವತೆ ಮತ್ತು ಅಂತರಾತ್ಮ ಹೀಗೆ ಬದುಕಿನ ದುರಂತಗಳನ್ನು ಬೇರೆ ಬೇರೆ ಆಯಾಮಗಳಲ್ಲಿ ಕಟ್ಟಿಕೊಡುವ ಕಾದಂಬರಿ.
ಲೇಖಕ ನೌಶಾದ್ ಜನ್ನತ್ತ್ ಮೂಲತಃ ಕೊಡಗಿನ ಮಡಿಕೇರಿ ಬಳಿಯ ಬೋಯಿಕೇರಿ ಗ್ರಾಮದವರು. ಸದ್ಯ ಕುಶಾಲನಗರದಲ್ಲಿ ವಾಸವಾಗಿದ್ದು, ಜನ್ನತ್ತ್ ಟಿಂಬರ್ಸ್ ಅಂಡ್ ಫರ್ನಿಚರ್ಸ್ ಎಂಬ ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ಬಿ. ಎ. ಪದವೀಧರರು. ‘ಕೊಡಗು’ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಸಾಮಾಜಿಕ ಚಟುವಟಿಕೆ ನಡೆಸುತ್ತಿದ್ದಾರೆ. ಇವರ ಮೊದಲ ಕೃತಿ-’ಕಡಮ್ಮಕಲ್ಲು ಎಸ್ಟೇಟ್’’ ...
READ MOREಫಾರೆಸ್ಟರ್ ಪೊನ್ನಪ್ಪ ಪುಸ್ತಕದಲ್ಲಿ ವಿನಯ್ ಮಾಧವ್ ಬರೆದ ಮುನ್ನುಡಿಯ ಸಾಲುಗಳು...
ಫಾರೆಸ್ಟರ್ ಪೊನ್ನಪ್ಪ ಸಹ ಮಲೆನಾಡಿನಲ್ಲಿ ಬದಲಾದ ಮತ್ತು ಸಾಮಾಜಿಕ ವ್ಯವಸ್ಥೆಯ ಸುತ್ತಲೂ ಹೆಣೆದಿರುವ ಆರ್ಥಿಕ ಕಾದಂಬರಿ. ಇಲ್ಲೊಂದು ಜೀವನವಿದೆ, ಬದಲಾವಣೆ ಇದೆ ಮತ್ತು ಆ ಬದಲಾವಣೆಯನ್ನು ಜೀರ್ಣಿಸಿಕೊಳ್ಳಲು ಆಗದ ಆರ್ದ್ರತೆ ಇದೆ. ಸೈನ್ಯ ಪೋಲಿಸ್ ಮತ್ತು ಅರಣ್ಯ ಇಲಾಖೆ ಸೇರುತ್ತಿದ್ದ ಕೊಡವರಲ್ಲಿ, ಗೌರವಕ್ಕಾಗಿ ಬದುಕುವ ಪರಿಪಾಠವಿತ್ತು. ನಮ್ಮ ಪೀಳಿಗೆ, 'ಅಂಥ ಒಳ್ಳೆಯ ಮನುಷ್ಯನಿಗೆ ಎಂತಹಾ ಮಗ ಹುಟ್ಟಿದ?' ಎಂದು ಸಮಾಜ ಮಾತನಾಡುವುದು ಸಾಮಾನ್ಯವಾಗುತ್ತಿದ್ದ ಕಾಲ. ಏಕೆಂದರೆ, ಅದು ಬದಲಾವಣೆಯ ಕಾಲವೂ ಹೌದು. ಅಂತಹ ಸಂದರ್ಭಗಳಲ್ಲಿ, ಜೀವನದುದ್ದಕ್ಕೂ ಗೌರವಯುತವಾಗಿ, ಎದೆ ಎತ್ತಿ ಬದುಕಿದ ವ್ಯಕ್ತಿಗಳು, ತಮ್ಮ ಆರಡಿಯ ದೇಹವನ್ನು ಹಿಡಿಯಷ್ಟಕ್ಕೆ ಕುಗ್ಗಿಸಿ ಓಡಾಡುವುದನ್ನೂ ನೋಡಿದ್ದೇವೆ.
ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ನೌಶಾದ್ ಬಹಳ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಇಲ್ಲಿ ಒಬ್ಬ ದಕ್ಷ ಅರಣ್ಯಾಧಿಕಾರಿಯ ಕಥೆಯಿದೆ. ಅಪ್ಪನಷ್ಟೇ ಯೋಗ್ಯನಾಗಿ, ಸೈನ್ಯಕ್ಕೆ ಸೇರಿದ ಮಗನ ಕಥೆಯಿದೆ. ಹಾಗೆಯೇ, ಒಂದೇ ತಪ್ಪಿನಿಂದ ದಾರಿ ತಪ್ಪಿ, ಹಣದ ಹಿಂದೆ ಹೋದ ಇನ್ನೊಬ್ಬ ಮಗನಿದ್ದಾನೆ. ಬದಲಾದ ಪರಿಸ್ಥಿತಿಯಲ್ಲಿನ ಜೀವನದ ಚಿತ್ರಣವಿದೆ. ಮಲೆನಾಡಿನ ವಾಸ್ತವತೆಯನ್ನು ಮತ್ತು ಅಂತರಾತ್ಮವನ್ನು ನೌಶಾದ್ ಈ ಕಾದಂಬರಿಯಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ ಎಂದು ಮಾತ್ರ ಹೇಳಬಲ್ಲೆ.