‘ದುಪಡಿ’ ಚಂದ್ರಮತಿ ಸೋಂದಾ ಅವರ ಕಾದಂಬರಿಯಾಗಿದೆ. ಕೃತಿ ಕುರಿತು ಲೇಖಕಿ ಗೀತಾ ವಸಂತ ಹೀಗೆ ಹೆಳಿದ್ದಾರೆ; ಯಾವ ತಾತ್ವಿಕ ಪ್ರಶ್ನೆಗಳನ್ನೆತ್ತದೇ, ಸಂಘರ್ಷಗಳನ್ನು ಎದುರಿಗಿಡದೇ, ನಿರುಮ್ಮಳವಾಗಿ ಹರಿಯುವ ಹೊಳೆಯಂತೆ ಕಥನವು ಹರಿಯತ್ತದೆ. ಬಾಳ್ವೆಯೆಂಬುದನ್ನು ಅಂಗುಲಂಗುಲ ಬದುಕಿಯೇ ಕಟ್ಟಬೇಕು. ಒಡಲ ತಪನೆಯಲ್ಲೇ ಸತ್ಯಗಳು ಹೊಮ್ಮಬೇಕು. ಇದು ಕಾದಂಬರಿಯ ಮನೋಧರ್ಮ. ಇಂಥ ನಿರುದ್ವಿಗ್ನ ಶೈಲಿಯಲ್ಲಿ ಕತೆ ಹೇಳುವಿಕೆ ಎಂ.ಕೆ.ಇಂದಿರಾ ಅವರ ಕಥನವನ್ನು ನೆನಪಿಸುತ್ತದೆ. ಕಾಲದ ಕನ್ನಡಿಯಂತೆ ಯುಗಧರ್ಮವನ್ನು ಕಟ್ಟಿಕೊಡುವ ಕಥನವಿದು. ಕಾದಂಬರಿ ಕಟ್ಟಿಕೊಡುವ ಪ್ರಾದೇಶಿಕ ಹಾಗೂ ಭಾಷಿಕ ಅನನ್ಯತೆಯ ಬಗ್ಗೆ ಒಂದು ಮಾತು ಹೇಳದೇ ಈ ಓದಿನ ಅನುಭವ ಪೂರ್ಣವಾಗುವುದಿಲ್ಲ. ಇಂಥ ಅನನ್ಯತೆಯನ್ನು ಕನ್ನಡದಲ್ಲಿ ಎಂ.ಕೆ.ಇಂದಿರಾ, ವೈದೇಹಿ, ಗೀತಾ ನಾಗಭೂಷಣ, ನಾಗವೇಣಿ. ಮಿತ್ರಾ ವೆಂಕಟರಾಜ, ಎಂ.ಎಸ್.ವೇದಾ ಮುಂತಾದವರು ಸೃಷ್ಟಿಸಿದ್ದಾರೆ. ಮಲೆನಾಡಿನ ಅದರಲ್ಲೂ ಸೊರಬದ ಸುತ್ತಮುತ್ತಲಿನ ಹವ್ಯಕರ ಸಾಂಸ್ಕೃತಿಕ ಬದುಕಿನ ವಿವರಗಳಲ್ಲಿ ಕಾದಂಬರಿ ಅರಳಿದೆ. ಯಾವ ರಾಜಕೀಯ ಮಹತ್ವಾಕಾಂಕ್ಷೆಯಿಲ್ಲದ ಅಪ್ಪಟ ಬದುಕು ಅಷ್ಟೇ ಇದು!. ಕಾಲಕ್ಕೆ ತಕ್ಕಂತೆ ಬದಲಾಗುತ್ತ ಯಾವ ಪೂರ್ವಗ್ರಹಗಳಲ್ಲದೇ ಬದುಕಿ ನಿರ್ಗಮಿಸಿದ ಜೀವಗಳ ಘನತೆಯ ಕಥನವಿದು. ತನ್ನ ನೆನಪುಗಳಲ್ಲಿ ಕಾಲ ದೇಶಗಳ ವಿವರಗಳನ್ನು ಅದರ ನೆರಳು ಬೆಳಕಿನೊಟ್ಟಗೆ ಮೆರವಣಿಗೆ ಹೊರಡಿಸಿದ ಚಂದ್ರಮತಿಯವರ ಬರಹದ ಧಾರಣಶಕ್ತಿಯೂ ದೊಡ್ಡದೇ. ಕನ್ನಡ ಕಾದಂಬರಿ ಲೋಕಕ್ಕೆ ಇದೊಂದು ವಿಶಿಷ್ಟ ಸೇರ್ಪಡೆ.
ಸ್ತ್ರೀವಾದಿ ನೆಲೆಗಟ್ಟಿನಲ್ಲಿ ಚಿಂತನಾ ಕೃತಿಗಳನ್ನು ರಚಿಸುವಲ್ಲಿ ಚಂದ್ರಮತಿ ಸೋಂದಾ ರವರು ಪ್ರಮುಖರಾಗಿರುತ್ತಾರೆ. 1954 ಆಗಸ್ಟ್ 06 ರಂದು ಜನಿಸಿದ ಅವರು ಉಪನ್ಯಾಸಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಚಿಪ್ಪೊಡೆದ ಮೌನ, ಮಾನಸಿ ಮಾನಸ (ಸ್ತ್ರೀವಾದಿ ಸಾಹಿತ್ಯ), ಜಯಲಕ್ಷ್ಮಿದೇವಿ, ವ್ಯಕ್ತಿ, ಅಭಿವ್ಯಕ್ತಿ (ಸಂಪಾದನೆ), ನೆರಳು ಬೆಳಕು (ಅನುವಾದ ಹಿಂದಿಯಿಂದ), ನಾರೀಮಿಡಿತ (ಅಂಕಣಬರಹ). ...
READ MORE