‘ಅಮೃತ ಕುಂಡ’ ವಾಣಿ ರಾವ್ ಅವರ ಕಾದಂಬರಿಯಾಗಿದೆ. ಕೃತಿಯ ಕುರಿತು ಲೇಖಕಿ ಹೀಗೆ ಹೇಳಿದ್ದಾರೆ; ಒಂದು ಸಲ ಹೀಗೇ ಪ್ರವಾಸ ಮಾಡುವಾಗ ನಮ್ಮ ವಾಹನ ಕೆಟ್ಟು ನಿಂತಿತ್ತು. ಅದೂ ಒಂದು ಕುಗ್ರಾಮ, ಏನೇನೂ ಸೌಕರ್ಯ ಸಿಕ್ಕದ ತಾಣ! ಅನಿವಾರ್ಯವಾಗಿ, ಅಲ್ಲಿ ಕೆಲವು ಕಾಲ ನಿಲ್ಲಬೇಕಾದ ಪ್ರಸಂಗ ಬಂದಾಗ, ಅದರ ಸುತ್ತಮುತ್ತಲ ಪರಿಸರವನ್ನು ಚಾರಣ ಮಾಡುತ್ತ ತಿರುಗುತ್ತಿದ್ದೆವು. ಅಲ್ಲೊಂದು ಹೊಂಡ, ಸುಂದರವಾದ ಶಿಲೆಯ ಮೇಲೆ, ಮತ್ತೊಂದು ಚಿಲುಮೆ, ಬೇಕೋ ಬೇಡವೋ ಎನ್ನುವಂತೆ ಒಸರುತ್ತಿತ್ತು ನೀರು, ಮೇಲೆ ಗುಡ್ಡದ ಮೇಲೊಂದು ದೇವಸ್ಥಾನ! ಪಾಳು ಬಿದ್ದ ಮೆಟ್ಟಿಲುಗಳು! ಎಲ್ಲವೂ ಏನೇನೋ ಪುರಾತನ ಕಥೆಗಳನ್ನು ಹೇಳುವಂತೆ ಶಬ್ದ ಮಾಡುತ್ತಿದ್ದುವು. ದೂರದಲ್ಲಿ ಕೆಲವು ಮರಗಳೂ ಅಲ್ಲಿಗೆ ಬರುವಂತೆ ಕರೆಯುತ್ತಿದ್ದುವು; ಹಾಗಾದರೆ ಒಂದಾನೊಂದು ಕಾಲದಲ್ಲಿ ಇದು ವೈಭವದಿಂದ್ದಿರಬಹುದೇನೋ. ಅಲ್ಲದಿದ್ದರೆ ಇಷ್ಟು ಅಂದವಾದ ಪುಷ್ಕರಣಿಯನ್ನು ಇಲ್ಲಿ ಏಕೆ ಕಟ್ಟಿದ್ದರು? ಅದೇನೆಂದು ನನಗೆ ಯಾರು ಹೇಳುತ್ತೀರಿ? ಎಂದು ಆ ಪುಷ್ಕರಿಣಿಯ ತೀರದಲ್ಲಿ ಕಾಲು ಚಾಚಿ ಆ ಮರಗಳ ತಂಪಿನಲ್ಲಿ ನಿದ್ದೆ ಹೋದೆ! ಅಮೃತ ಕುಂಡದಲ್ಲಿ ಸುಂದರಿಯೊಬ್ಬಳು ಬಂದು ತಣ್ಣನೆಯ ಕೈಗಳಿಂದ ತಲೆಯನ್ನು ಸವರಿ, “ಕೇಳುವಿಯ? ಈ ಕೊಳದ ಕತೆಯನ್ನು? ನಿನಗೆ ಸಮಯದ ಸಹನೆ ಇದೆಯೆ? ಇದನ್ನು ಕೇಳಲು ಯಾರೂ ಇಲ್ಲಿಗೆ ಬಾರರು" ಎಂದು ತನ್ನ ಕಥೆಯನ್ನು ಹೇಳುತ್ತ ಹೋದಳು; ನಾನು ಹೂಂ ಗುಟ್ಟುತ್ತ ಹೋದೆ.... ಜೋರಾಗಿ ಕೇಳಿಸಿದ ನಮ್ಮ ಸ್ಕೋರ್ಪಿಯೋದ ಹಾರನ್ನು ನನ್ನನ್ನು ಗಡಿಬಿಡಿಯಿಂದ ಮೇಲೇಳುವಂತೆ ಮಾಡಿತು; ಆ ಸುಂದರಿ "ನನ್ನ ಮರೆಯಬೇಡ” ಎನ್ನುವಂತೆ ಸಂಜ್ಞೆ ಮಾಡುತ್ತ ಆ ಪುಷ್ಕರಿಣಿಯೊಳಗಿಳಿದು ಮಾಯವಾದಳು ಎಂಬುವುದನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.
ಕವಿತೆ, ಕತೆ, ಕಾದಂಬರಿ ಕ್ಷೇತ್ರದಲ್ಲಿ ಬರವಣಿಗೆಯ ಮೂಲಕ ತಮ್ಮದೇ ಛಾಪು ಮೂಡಿಸಿದ ಬರಹಗಾರ್ತಿ ವಾಣಿ ರಾವ್ ಅವರು 1931 ಅಕ್ಟೋಬರ್ 4ರಂದು ಜನಿಸಿದರು. ತಾಯಿ ಇಂದಿರಾಬಾಯಿ. ತಂದೆ ಭೀಮಾಚಾರ್. ಹೋಮಿಯೋಪತಿಯಲ್ಲಿ ಪಿಎಚ್ಡಿ ಪದವೀಧರರು. ಕಾಲೇಜು ದಿನಗಳಿಂದಲೇ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ರಚಿಸಿದ ಕವಿತೆ, ಮಕ್ಕಳ ಕತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಾಣಿ ಅವರು ರಚಿಸಿದ ಪ್ರಮುಖ ಕೃತಿಗಳೆಂದರೆ ಸುಪ್ತಚೇತನ, ದರ್ಪಣ, ಆಕಾಶದೀಪ, ಹೇಮಶೃಂಗ (ಕಾದಂಬರಿ); ವನಸುಮ, ನೀಲಕೊಳ, ಗಣೇಶ ಎಲ್ಲಿ, ಮಾಯಾವಿ (ಮಕ್ಕಳ ಕತೆ), ಸಿಂಧು-ಬಿಂದು (ಭಾಷಾಂತರ); ಚಿನ್ನಯ ರಾಮಾಯಣ, ಮಗು, ಸ್ವಾಮಿ ಪ್ರಣವಾನಂದಜೀ (ವೈದ್ಯಕೀಯ); ಹೋಮಿಯೋಪತಿ, ಮೆಟೀರಿಯಾ ಮೆಡಿಕಾ ಸೂತ್ರಗಳು (ಕವನ ಸಂಕಲನ); ...
READ MORE