ಜಿ.ಎಸ್. ಭಟ್ ಅವರ ’ಅಕ್ಕಮ್ಮಜ್ಜಿಯ ಗಂಡನೂ ವಾಣಾಸಜ್ಜನ ಹೆಣ್ತಿಯು’ ಕಾದಂಬರಿಯ ಮಡಿವಂತಿಕೆಯಿಂದ ಮಾತನಾಡಲು ಹೇಸುವ, ಕ್ರಿಯೆಯನ್ನು ಸದಾ ಗುಪ್ತವಾಗಿರಿಸಲು ಅದರೆ ಸದಾ ಜೊತೆಯಾಗಿರಬೇಕೆಂದು ಬಯಸುವ ವಸ್ತುವೊಂದರ ಸುತ್ತ ಹೆಣೆದಿರುವ ಕೃತಿ. ವಾತ್ಸಾಯನನ ಕಾಮಸೂತ್ರ, ವೃದ್ಧಾಪ್ಯದ ದಾಂಪತ್ಯ ಅಧ್ಯಯನಕಾರನ ದೃಷ್ಟಿಕೋನ ಮತ್ತು ತನ್ನದೇ ಮನೆ, ಸುತ್ತಮುತ್ತ ನಡೆಯುವ ವಾಸ್ತವ ಇವುಗಳ ಸುತ್ತ ಸಾಗುವ ಕಥೆ. ಮನುಷ್ಯ ಬದುಕಿನ ಮುಖ್ಯ ಆದರೆ ಸಾಮಾಜಿಕ ನೆಲೆಯ ಅಮುಖ್ಯ ಎಂದು ತೋರ್ಪಡಿಸಲ್ಪಡುವ ಹೆಣ್ಣುಗಂಡಿನ ಸಂಬಂಧಗಳ ಗಡಿಗಳನ್ನು ಬ್ರಹ್ಮಚಾರಿ ವಾತ್ಸಾಯನ ಗುರುತಿಸಿದ ರೀತಿ ಮತ್ತು ಇನ್ನೂ ಅನುಭವ ಪಡೆಯದ ತರುಣನೋರ್ವನ ಸಂಶೋಧನೆ ಇದನ್ನು ಸಮಾಜದ ವಾಸ್ತವದ ಜೊತೆಗೆ ಸಮೀಕರಿಸಿ ನೋಡುವ ಬಗೆ ಕಾದಂಬರಿಯ ತಿರುಳು. ಆದರೆ ಅನುಭವ ಪಡೆದ ದಂಪತಿಗಳ ಒಳಗಿನ ಬೇಗುದಿ, ಹತಾಶೆ, ಹಪಾಹಪಿ ಆ ಮೂಲಕ ಕಾಣುವ ದುರಂತಗಳು ಮಚ್ಚಿಡಲು ಬಯಸುವ ಒಂದು ಸಂಗತಿ ಏನೆಲ್ಲಾ ಪರಿಣಾಮವನ್ನು ಬೀರುತ್ತದೆ ಎನ್ನುವುದನ್ನು ಕಾದಂಬರಿ ಮೂಲಕ ಚಿತ್ರಿಸಲಾಗಿದೆ.
ಇಲ್ಲಿ ಓರ್ವ ಮನೋವಿಜ್ಞಾನಿ ಅಥವಾ ಲೈಂಗಿಕ ತಜ್ಞ ಹೇಳುವ ಸಹಜ ದಾಟಿಯಲ್ಲಿ ಕಾದಂಬರಿಗಾರ ಹೇಳಿದ್ದಾರೆ. ಕಾದಂಬರಿ ಪೂರ್ವಾರ್ಧದ ಉದ್ದೇಶಿತ ಗೊಂದಲಕ್ಕೆ ಉತ್ತರಾರ್ಧದ ನಿಖರ ಉತ್ತರ ಜಿ.ಎಸ್.ಭಟ್ಟರನ್ನು ಓರ್ವ ಉತ್ತಮ ಕಾದಂಬರಿಗಾರನ ಸಾಲಿಗೆ ತಂದು ನಿಲ್ಲಿಸುತ್ತದೆ. ತನ್ನ ಎಪ್ಪತ್ತಾರರ ಹರೆಯ ಅದರಲ್ಲೂ ಆಕಸ್ಮಿಕ ವೈಕಲ್ಯದ ಮಧ್ಯೆ ವಾತ್ಸಯನ ಮತ್ತು ನಮ್ಮ ಸುತ್ತಲಿನ ಅಗೋಚರ ಆದರೆ ಗೋಚರ ವಸ್ತುವನ್ನಿರಿಸಿ ಸಹಜ ಅಭಿವ್ಯಕ್ತಿಯಲ್ಲಿ ಕಾದಂಬರಿ ರಚಿಸಿರುವುದು ಜಿ.ಎಸ್.ಭಟ್ಟರ ಅಧ್ಯಯನ ಮತ್ತು ಬದುಕಿನ ಉತ್ಸಾಹದ ಪರಿಯನ್ನು ಪರಿಚಯಿಸುತ್ತದೆ. ಎಲ್ಲೂ ಗಡಿ ಮೀರದ, ಅಶ್ಲೀಲವೆಂದೆಣಿಸದ, ಪ್ರಕೃತಿ ನಿಯಮಕ್ಕೆ ಧಕ್ಕೆ ಬಾರದ ರೀತಿಯ ವಿವರಣೆ ಈ ಕಾದಂಬರಿಯದು. ಮನುಷ್ಯ ಸಂಬಂಧಗಳ ನೆಲೆಯಲ್ಲಿ ಕಾಮದ ಬಳಕೆ, ದುರ್ಬಳಕೆ ಹೇಗೆ? ಏನು? ಎನ್ನುವ ಚರ್ಚೆಗೆ ಈ ಕಾದಂಬರಿಯಲ್ಲಿ ಖಚಿತ ಉತ್ತರವಿದೆ.
ಹಿರಿಯ ಲೇಖಕ ಜಿ.ಎಸ್ ಭಟ್ (ಸಾಗರ) 1944ರಲ್ಲಿ ಹೊನ್ನಾವರದ ಗಜನಿ ಮಠದಲ್ಲಿ ಜನಿಸಿದರು. ಸಾಗರದ ಲಾಲ ಬಹುದ್ದೂರ್ ಶಾಸ್ತ್ರೀ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನಿವೃತ್ತರಾಗಿರುವ ಜಿ.ಎಸ್ ಭಟ್ ಅವರು ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಮತ್ತು ಪರಿಣತಿ ಹೊಂದಿರುವರು. ಇವರು ಯಕ್ಷಗಾನ ಕುರಿತ ಸಂಶೋಧನಾ ಲೇಖನಗಳು, ಕತೆ, ಕವಿತೆ, ಅಂಕಣಗಳಲ್ಲಿ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ರಂಗಭೂಮಿ, ಯಕ್ಷಗಾನ ವಿದ್ವಾಂಸರಾಗಿರುವ ಅವರು ಸಾಂಸ್ಕೃತಿಕ, ಸಂಘಟಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು: ಕುಮಾರವ್ಯಾಸನ ಕರ್ಣಾಟಭಾರತ ಕಥಾ ಮಂಜರಿ ಪ್ರವೇಶ, ರಾಘವಾಂಕನ ಹರಿಶ್ಚಂದ್ರಕಾವ್ಯ ಪ್ರವೇಶ, ಅಕ್ಕಮ್ಮಜ್ಜಿಯ ಗಂಡನೂ ವಾಣಾಸಜ್ಜನ ಹೆಣ್ತಿಯೂ, ಕೆರೆಮನೆ ಶಂಭು ಹೆಗಡೆ ಅಧ್ಯಯನ, ಪಾವೆಂ ಕಸ್ತೂರಿ, ಮಂಜೀ ಮಹಾದೇವನ ಗಂಜೀ ಪುರಾಣ, ನೆನಪಿನ ರಂಗಸ್ಥಳ, ...
READ MORE