ಕಾದಂಬರಿಕಾರ, ಭಾಷಾತಜ್ಞ, ಸಮರ್ಥ ಪ್ರಾಧ್ಯಾಪಕರೆನಿಸಿದ ಕೆ.ಟಿ. ಗಟ್ಟಿಯವರು ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ ಜನಿಸಿದರು. ತಂದೆ ಧೂಮಪ್ಪಗಟ್ಟಿಯವರು ಕೃಷಿಕರಾದರೂ ಯಕ್ಷಗಾನ ಕಲೆಯ ಬಗ್ಗೆ ಅಪಾರ ಒಲವಿದ್ದವರು. ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಕಲಿತವರು. ಉತ್ತಮ ಭಾಷೆ, ಆಕರ್ಷಕ ಶೈಲಿ, ಹೊಸ ಹೊಸ ವಸ್ತು, ಸರಳ ನಿರೂಪಣೆಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಮನೆ ಮಾತಾದ ಹಿರಿಯ ಕಥೆಗಾರ ಕೆ.ಟಿ.ಗಟ್ಟಿ ಅವರು ಎಲ್ಲಾ ಓದುಗರಿಗೆ ಚಿರಪರಿಚಿತರು. ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿಎಡ್ ಪದವಿ ಪಡೆದಿರುವ ಕೆ.ಟಿ.ಗಟ್ಟಿ ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯವರು. ಜನಿಸಿದ್ದು 1938ರಲ್ಲಿ. ಸದ್ಯ ಮಂಗಳೂರಿನಲ್ಲಿ ನೆಲೆಸಿದ್ದಾರೆ.
ತಮ್ಮ ಹದಿನೇಳರ ಹರೆಯದಲ್ಲಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿದ ಇವರು ಇಂಥಿಯೋಪಿಯಾದಲ್ಲಿ ಒಂಬತ್ತು ವರ್ಷ ಸೇರಿದಂತೆ ಒಟ್ಟು 25 ವರ್ಷ ಇಂಗ್ಲಿಷ್ ಪ್ರಾಧ್ಯಾಪಕರಾಗಿ ದುಡಿದವರು. 1957ರಿಂದ ಲೇಖನಿ ಹಿಡಿದು ಸಾಹಿತ್ಯ ಕೃಷಿ ಆರಂಭಿಸಿದ ಈ ಹಿರಿಯ ಕಥೆಗಾರ ನಿರಂತರವಾಗಿ ಕಥೆ, ಕಾದಂಬರಿ, ಕವನ, ಪ್ರಬಂಧ ಸಂಕಲನ, ನಾಟಕಗಳನ್ನು ಬರೆಯುತ್ತಲೇ ಬಂದವರು. ಇವರ ಮೊದಲ ಕಾದಂಬರಿ ‘ಶಬ್ದಗಳು’ 1973ರಲ್ಲಿ ಪ್ರಕಟವಾಯಿತು. ಈವರೆಗೆ 48 ಕಾದಂಬರಿಗಳು 5 ಕಥಾಸಂಕಲನಗಳು, 6 ಪ್ರಬಂಧ ಸಂಕಲನಗಳು, 22 ನಾಟಕಗಳು, 14 ಬಾನುಲಿ ನಾಟಕಗಳು, 2 ಕವನ ಸಂಕಲನಗಳಲ್ಲದೆ ಆತ್ಮಕಥೆ, ವ್ಯಕ್ತಿಚಿತ್ರ ಹಾಗೂ ಪ್ರವಾಸ ಕಥನಗಳನ್ನೂ ಬರೆದು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ಇವರದು. ತುಳು ಭಾಷೆಯಲ್ಲೂ ಒಂದು ಕವನ ಸಂಕಲನ ಹಾಗೂ ಕಾದಂಬರಿ ಪ್ರಕಟಿಸಿದ್ದಾರೆ. ಕೆ.ಟಿ.ಗಟ್ಟಿಯವರು ರಚಿಸಿದ 30 ಮಕ್ಕಳ ನಾಟಕಗಳು ಕನ್ನಡ ಅಂತರ್ಜಾಲ ಮ್ಯಾಗಜಿನ್ ನಲ್ಲಿ ಪ್ರಕಟಗೊಂಡಿವೆ. ಇತರ 10 ಮಕ್ಕಳ ನಾಟಕಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ.ಮಂಗಳೂರು ಆಕಾಶವಾಣಿಯಲ್ಲಿ ಹಲವು ಭಾಷಣಗಳು, 50 ಚಿಂತನಗಳು, ಕಥೆಗಳು ಪ್ರಸಾರವಾಗಿವೆ. ಕಳೆದ 40 ವರ್ಷಗಳಿಂದ ನಾಡಿನ ಹೆಸರಾಂತ ದಿನಪತ್ರಿಕೆಗಳು, ವಾರ ಹಾಗೂ ಮಾಸಪತ್ರಿಕೆಗಳಲ್ಲಿ ಇವರ ಹಲವಾರು ಲೇಖನಗಳು, ಕವನಗಳು ಪ್ರಕಟವಾಗಿವೆ. ಹೆಸರಿಗೆ ತಕ್ಕಂತೆ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿ ಕುಳ ಎನಿಸಿರುವ ಕೆ.ಟಿ.ಗಟ್ಟಿ ಅವರ ಒಟ್ಟು 16 ಕಾದಂಬರಿಗಳು ಸುಧಾ ವಾರಪತ್ರಿಕೆ ಒಂದರಲ್ಲೇ ಪ್ರಕಟವಾಗಿವೆ.