About the Author

ಕನ್ನಡ ನಾಟಕ ಸಾಹಿತ್ಯ ಮತ್ತು ಕಾದಂಬರಿ ಲೋಕಕ್ಕೆ ತಮ್ಮ ವಿಶಿಷ್ಟ ಕೊಡುಗೆಗಳ ಮೂಲಕ ಗಮನ ಸೆಳೆದವರು ಬಿ. ಪುಟ್ಟಸ್ವಾಮಯ್ಯ. ಪತ್ರಿಕೋದ್ಯಮಿ, ನಾಟಕಕಾರ, ಕಾದಂಬರಿಕಾರ, ಕಥೆಗಾರ, ಕವಿಯಾಗಿ ಅನುಪಮ ಕೊಡುಗೆ ನೀಡಿದ ಪುಟ್ಟಸ್ವಾಮಯ್ಯ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. 1897ರ ಮೇ 27ರಂದು ಜನಿಸಿದ ಪುಟ್ಟಸ್ವಾಮಿ ಅವರ ತಂದೆ ಬಸಪ್ಪಯವರು ರೇಷ್ಮೆ ವ್ಯಾಪಾರಿಯಾಗಿದ್ದರು. ತಾಯಿ ಬಸಮ್ಮ. ಬೆಂಗಳೂರಿನ ಸುಲ್ತಾನ್‌ಪೇಟೆ ಹಿಂದೂ ಎ.ವಿ. ಶಾಲೆಯಲ್ಲಿ  ಆರಂಭಿಕ ಶಿಕ್ಷಣ ಪಡೆದರು. ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಸೈಂಟ್ ಜೋಸೆಫ್ ಕಾಲೇಜ್ ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ ತಂದೆಯವರನ್ನು ಕಳೆದುಕೊಂಡದ್ದರಿಂದ ಕುಟುಂಬದ ಜವಾಬ್ದಾರಿ ಹೊರಬೇಕಾಯಿತು. ಅದರಿಂದಾಗಿ ಮುಂದೆ ಶಿಕ್ಷಣ ಪಡೆಯುವುದು ಸಾಧ್ಯವಾಗಲಿಲ್ಲ. ಬಾಲ್ಯದ ದಿನಗಳಿಂದಲೂ ಓದುವ ಹವ್ಯಾಸ ಇಟ್ಟುಕೊಂಡಿದ್ದ ಅವರು ಸ್ವಂತ ಪರಿಶ್ರಮದಿಂದ ಕನ್ನಡ, ಇಂಗ್ಲಿಷ್, ಸಂಸ್ಕೃತ, ಹಿಂದಿ, ಬಂಗಾಳಿ ಮತ್ತು ಮರಾಠಿ ಕಲಿತಿದ್ದರು. ಮತ್ತು ಆಯಾ ಭಾಷೆಯ ಸಾಹಿತ್ಯ ಕೃತಿಗಳನ್ನು ಓದಿ ಸಾರ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಬೆಂಗಳೂರಿನ ಅವರ ಮನೆಯ ಹಿಂಭಾಗದಲ್ಲಿದ್ದ ತುಳಸಿ ತೋಟದಲ್ಲಿ ಪ್ರದರ್ಶನ ಗೊಳ್ಳುತ್ತಿದ್ದ ಪಾರಸೀ ನಾಟಕ ಹಾಗೂ ವರದಾಚಾರ್ಯ ಕಂಪನಿ ನಾಟಕಗಳೆಂದರೆ ಅವರಿಗೆ ವಿಶೇಷ ಆಸಕ್ತಿ. ರಂಗಭೂಮಿಯ ಮೇಲಿನ ಅವರ ಪ್ರೀತಿ ವಿಶಿಷ್ಟವಾದುದು.

ಪತ್ರಿಕೋದ್ಯಮಿ ಆಗಿ ವೃತ್ತಿ ಜೀವನ ಆರಂಭಿಸಿದ ಅವರು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿಯೇ 'ನ್ಯೂ ಮೈಸೂರ್', 'ಮೈಸೂರ್ ಸ್ಟಾರ್' ಪತ್ರಿಕೆಗಳಿಗೆ ವರದಿಗಾರರಾಗಿ ಕಾರ್ಯಾರಂಭ ಮಾಡಿದರು. ನಂತರ 'ಒಕ್ಕಲಿಗ ಪತ್ರಿಕೆ', 'ಪ್ರಜಾಮತ', 'ಜನವಾಣಿ', `ಮಾತೃಭೂಮಿ' ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. 'ಪ್ರಜಾವಾಣಿ' ಪತ್ರಿಕೆ ಆರಂಭವಾದಾಗ ಅದಕ್ಕೆ ಪುಟ್ಟಸ್ವಾಮಯ್ಯ ಅವರೇ ಸಂಪಾದಕರಾಗಿದ್ದರು.

ಅನಂತರ ತಾವೇ ’ಪ್ರತಿಭಾ' ಎಂಬ ಮಾಸಪತ್ರಿಕೆ ಆರಂಭಿಸಿದರು. ಪತ್ರಿಕೋದ್ಯಮದಲ್ಲಿ ಕೈ ಸುಟ್ಟುಕೊಂಡ ಅವರು ನಂತರವೂ ಹಲವಾರು ಕನ್ನಡ ಪತ್ರಿಕೆಗಳಿಗೆ ಸಹಾಯ ಮಾಡಿದರು. ಲೇಖಕಿ ಶ್ರೀಮತಿ ಕಲ್ಯಾಣಮ್ಮನವರ 'ಸರಸ್ವತಿ' ಅಂಥ ಪತ್ರಿಕೆಗಳಲ್ಲಿ ಒಂದಾಗಿತ್ತು. ಪ್ರತಿಭಾವಂತ ಪತ್ರಿಕೋದ್ಯಮಿಗಳನ್ನು ಬೆಳಕಿಗೆ ತಂದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.

ವೃತ್ತಿಯಿಂದ ಪತ್ರಿಕೋದ್ಯಮಿಯಾಗಿದ್ದರೂ  ಅವರ ವಿಶೇಷ ಪ್ರೀತಿ ಮಾತ್ರ ನಾಟಕ-ರಂಗಭೂಮಿಯ ಮೇಲಿತ್ತು. ದ್ವಿಜೇಂದ್ರ ಲಾಲಾರಾಮ್ ನಾಟಕದ ಅನುವಾದ 'ಷಾಜಹಾನ್' ಅವರ ಮೊದಲ ನಾಟಕ. ’ಲೈಟ್ ಆಫ್ ಏಷಿಯಾ' ಕೃತಿಯಿಂದ ಪ್ರೇರಣೆ ಪಡೆದು ರಚಿಸಿದ 'ಗೌತಮ ಬುದ್ದ'. ಚಂದ್ರಕಲಾ ನಾಟಕ ಮಂಡಳಿಯ ಹೆಸರಾಂತ ನಟ ಮಹಮದ್ ಪೀರ್ ಅವರು ಈ ಎರಡೂ ನಾಟಕಗಳನ್ನು ರಂಗದ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿದರು. ಕನ್ನಡ ರಂಗಭೂಮಿಗೆ ಹೊಸ ಆಯಾಮವಿತ್ತ ಈ ನಾಟಕಗಳಿಂದ ಪ್ರೇರಿತರಾದ ಪುಟ್ಟಸ್ವಾಮಯ್ಯ ಅವರು 'ಕುರುಕ್ಷೇತ್ರ', `ಯಾಜ್ಞಸೇನಿ', 'ಅಕ್ಕಮಹಾದೇವಿ', 'ಸಂಪೂರ್ಣ ರಾಮಾಯಣ', 'ದಶಾವತಾರ', 'ಪ್ರಚಂಡ ಚಾಣಕ್ಯ', 'ಬಿಡುಗಡೆಯ ಬಿಚ್ಚುಗತ್ತಿ' ಮುಂತಾದ ನಾಟಕಗಳನ್ನು ರಚಿಸಿ ರಂಗಭೂಮಿಗೆ ವಿಶಿಷ್ಟ ಕೊಡುಗೆ ನೀಡಿದರು.  'ಕುರುಕ್ಷೇತ್ರ', 'ದಶಾವತಾರ', 'ಅಕ್ಕಮಹಾದೇವಿ' ನಾಟಕಗಳನ್ನು ಗುಬ್ಬಿ ವೀರಣ್ಣನವರು ಹಾಗೂ `ಸಂಪೂರ್ಣ ರಾಮಾಯಣ', 'ಚಿರಕುಮಾರ ಸಭಾ' ಮೊದಲಾದ ನಾಟಕಗಳನ್ನು ಕನ್ನಡ ಥಿಯೇಟರ್‌ನ ಎಂ.ಸಿ. ಮಹಾದೇವಯ್ಯನವರು ಯಶಸ್ವಿಯಾಗಿ ಪ್ರದರ್ಶಿಸಿದರು. ಕನ್ನಡ ಮಾತನಾಡುವ ಪ್ರದೇಶಗಳೆಲ್ಲೆಲ್ಲ ಈ ನಾಟಕಗಳು ಹಲವಾರು ಪ್ರದರ್ಶನ ಕಂಡವು. ಚುರುಕಾದ ಸಂಭಾಷಣೆ, ಇಂಪಾದ ಸಂಗೀತ ಪುಟ್ಟಸ್ವಾಮಯ್ಯನವರ ನಾಟಕಗಳ ವೈಶಿಷ್ಟ್ಯ.

ಪುಟ್ಟಸ್ವಾಮಯ್ಯ ಅವರು ಕೇವಲ ನಾಟಕಗಳನ್ನು ಮಾತ್ರ ರಚಿಸಿರಲಿಲ್ಲ. ವಿಜಯನಗರದ ದೊರೆ ಪ್ರೌಢ ದೇವರಾಯನ ಕಾಲವನ್ನು ಕುರಿತ `ರೂಪಲೇಖಾ' ಇವರ ಮೊದಲ ಕಾದಂಬರಿ. `ಮಲ್ಲಮ್ಮನ ಪವಾಡ' ಅವರ ಮತ್ತೊಂದು ಜನಪ್ರಿಯ ಕಾದಂಬರಿ. ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ಈ ಕಾದಂಬರಿ ಚಲನಚಿತ್ರವಾಗಿಯೂ ಯಶಸ್ವಿಯಾಯಿತು. ಹನ್ನೆರಡನೆಯ ಶತಮಾನದ ವಚನ ಚಳವಳಿಯ ನೇತಾರ ಬಸವಣ್ಣನವರನ್ನು ಕುರಿತು ಹಲವಾರು ಕೃತಿಗಳನ್ನು ಅವರು ರಚಿಸಿದ್ದಾರೆ. ’ಉದಯ ರವಿ', 'ರಾಜ್ಯಪಾಲ', `ಕಲ್ಯಾಣೇಶ್ವರ', 'ನಾಗಬಂಧ', 'ಮುಗಿಯದ ಕನಸು' ಅವುಗಳಲ್ಲಿ ಪ್ರಮುಖವಾದವು. 'ಚಾಲುಕ್ಯ', 'ತೈಲಪ', 'ಅಭಿಸಾರಿಕೆ', 'ಹೂವು ಕಾವು'ಮುಂತಾದವು ಅವರ ಇನ್ನಿತರ ಕಾದಂಬರಿಗಳು. 'ದೈವಸ್ವಾಮಿನಿ, 'ನಾಟ್ಯಮೋಹಿನಿ'- ಅವರ ಪ್ರಕಟಿತ ಕಥಾ ಸಂಗ್ರಹಗಳು. 'ಶ್ರೀದುರ್ಗಾ', `ಚಂಗಲೆಯ ಬಲಿದಾನ' ಮಕ್ಕಳ ನಾಟಕಗಳು. 'ಇವನಲ್ಲ' ತಾರಾ ಶಂಕರರಾಮ್ ಅವರ ಪ್ರಸಿದ್ದಿ ಬಂಗಾಳಿ ಕಾದಂಬರಿಯ ಅನುವಾದ. 'ನಾಟ್ಯರಂಗ', `ಚಿತ್ರರಂಗ - ಪ್ರಬಂಧ ಸಂಕಲನಗಳು.

ಪುಟ್ಟಸ್ವಾಮಯ್ಯ ಅವರ ’ಕುರುಕ್ಷೇತ್ರ' ನಾಟಕ ತೆಲುಗು ಭಾಷೆಗೂ, 'ಕಲ್ಯಾಣ ಕ್ರಾಂತಿ' ಕಾದಂಬರಿ ಹಿಂದಿ ಭಾಷೆಗೂ ಅನುವಾದವಾಗಿವೆ.. ಪುಟ್ಟಸ್ವಾಮಯ್ಯ ಚಲನಚಿತ್ರ ರಂಗದಲ್ಲೂ ಕಾರ್ಯನಿರ್ವಹಿಸಿದ್ದಾರೆ. 'ಸುಭದ್ರಾ', 'ಜೀವನ ನಾಟಕ ಚಲನಚಿತ್ರಗಳಿಗೆ ಸಹ ನಿರ್ದೇಶಕರಾಗಿದ್ದರು. 'ಕ್ರಾಂತಿ ಕಲ್ಯಾಣ' ಕಾದಂಬರಿಗೆ 1964ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 'ಕುರುಕ್ಷೇತ್ರ' ನಾಟಕಕ್ಕೆ ಮೈಸೂರು ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ. 1978ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅವರಿಗೆ ಫೆಲೋಶಿಪ್ ನೀಡಿ ಗೌರವಿಸಿತ್ತು.  ಪುಟ್ಟಸ್ವಾಮಯ್ಯ ಅವರು 1984 ರ ಜನವರಿ 25 ರಂದು ನಿಧನರಾದರು.

 

ಬಿ. ಪುಟ್ಟಸ್ವಾಮಯ್ಯ

(27 May 1897-25 Jan 1984)

Awards