ಉಷಾ ನವರತ್ನರಾಂ ಅವರ ಸಾಮಾಜಿಕ ಕಾದಂಬರಿ ಪೇಯಿಂಗ್ ಗೆಸ್ಟ್. ಕಥೆಯ ನಾಯಕಿ ಮಾಳವಿಕಾ, ಮದುವೆಯ ವಯಸ್ಸಿಗೆ ಬಂದ ಹುಡುಗಿ. ಅವಳಿಗೂ ಒಂದು ದುರಂತ ಇತಿಹಾಸವಿದೆ! ಅವಳು ಪ್ರೀತಿಸಿದ, ಮದುವೆ ಗೊತ್ತಾಗಿದ್ದ ಹುಡುಗ ಮಧುಕರ. ಮಧುಕರ ಮದುವೆಗೆ ಒಂದು ವಾರ ಇದ್ದಾಗ ಅಪಘಾತವೊಂದರಲ್ಲಿ ಮರಣಿಸುತ್ತಾನೆ. ಆ ನೋವಿನಿಂದ ಬಳಲಿದ ಮಾಳವಿಕಾ, ತನ್ನ ಅತ್ತಿಗೆ ಮಾರ್ಗರೇಟ್ ಳ ಒತ್ತಾಸೆಯ ಮೇರೆಗೆ ಉದ್ಯೋಗಸ್ಥೆಯಾಗುತ್ತಾಳೆ. ಒಂದಿಷ್ಟು ನವಿರು ಪ್ರೇಮದ ಸಿಂಚನವಿದ್ದರೂ, ಕಾದಂಬರಿಯುದ್ದಕ್ಕೂ ಮೆರೆಯುವುದು ಇಂದುಮತಿಯ ಸೇವಾ ಮನೋಭಾವ ಹಾಗೂ ಹೃದಯ ವೈಶಾಲ್ಯತೆ. ಸ್ವಂತ ಮಕ್ಕಳಿಲ್ಲದಿದ್ದರೂ, ಅನಾಥ ಮಕ್ಕಳೆಡೆಗೆ ಆಕೆ ತೋರುವ ಮಮತೆ ಮಾದರಿಯಾಗಿ ನಿಲ್ಲುತ್ತದೆ. ಪೇಯಿಂಗ್ ಗೆಸ್ಟ್ ಎಂದು ಕರೆದರೂ, ಇಷ್ಟು ಬಾಡಿಗೆಯೆಂಬ ಕಟ್ಟಳೆಯಿಲ್ಲ! ಮಾಳವಿಕಾಗೆ ಇಷ್ಟವಿದ್ದಷ್ಟು ಹಣ ಅನಾಥಾಶ್ರಮಕ್ಕೆಂದು ಮೀಸಲಾದ ಗೋಲಕದಲ್ಲಿ ಹಾಕಲು ಹೇಳುತ್ತಾಳೆ. ಮಾಳವಿಕಾಳನ್ನು ತನ್ನ ಮಗಳಂತೆ ಕಾಣುತ್ತಾಳೆ. ತನ್ನ ಗಂಡನ ತಪ್ಪಿಗೆ ಹುಟ್ಟಿದ ಮಗುವನ್ನು ತನ್ನ ಮಗನೆಂದೇ ಪ್ರೀತಿಸುತ್ತಾಳೆ. ಅಷ್ಟೇ ಏಕೆ? ಗಂಡನ ಎರಡನೇ ಹೆಂಡತಿಯ ಮಗಳಿಗೂ ಮಮತೆ ಹರಿಸುತ್ತಾಳೆ! ಪುಟ್ಟಮಾದಿಯ ಜೀವನಕ್ಕೆ ದಾರಿಯಾಗುತ್ತಾಳೆ. ಮುಂದೆ ಅವಳ ಮಕ್ಕಳ ಭವಿಷ್ಯ ಭದ್ರವಾಗಿಸುತ್ತಾಳೆ. ಹೀಗೆ ಕಾದಂಬರಿಯುದ್ದಕ್ಕೂ ಮಾದರಿ ಜೀವನ ಕಾಣಿಸಿದರೂ, ಇಂದುಮತಿಯ ತಪ್ಪು ನಿರ್ಧಾರಗಳನ್ನೂ ಲೇಖಕಿ ತೋರಿಸುತ್ತಾರೆ. ಆದರ್ಶದ ಬೆನ್ನತ್ತಿ, ವಾಸ್ತವಕ್ಕೆ ಕುರುಡಾಗುವ ಅಪಾಯದ ಎಚ್ಚರಿಕೆ ನೀಡುತ್ತಾರೆ. ಸಂಬಂಧಗಳ ಗೋಜಲುಗಳು ಮನಸ್ಸಿನ ಮೇಲೆ ಬೀರುವ ಪ್ರಭಾವ, ಪ್ರೀತಿ-ಮಮತೆಯ ಅಭಿವ್ಯಕ್ತಿಯ ಕೊರತೆ ತಂದೊಡ್ಡುವ ಅಪಾಯಗಳನ್ನು ಬಿಚ್ಚಿಡುತ್ತದೆ ಈ ಕಾದಂಬರಿ.
ಲೇಖಕಿ ಉಷಾ ನವರತ್ನರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ಎಂ.ವಿ. ಸುಬ್ಬರಾವ್. ತಾಯಿ- ಶಾಂತಾ. ಪ್ರಾರಂಭಿಕ ಶಿಕ್ಷಣವನ್ನು ಶಿವಮೊಗ್ಗದ ಮೇರಿ ಇಮ್ಯಾಕುಲೇಟ್ ಕಾನ್ವೆಂಟ್ ಹಾಗೂ ಬೆಂಗಳೂರಿನ ಮಹಿಳಾ ಸೇವಾ ಸಮಾಜದಲ್ಲಿ ಪೂರ್ಣಗೊಳಿಸಿದರು. ಆನಂತರ ಮೌಂಟ್ ಕಾರ್ಮಲ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯ ಹಾಗೂ ಇತಿಹಾಸದಲ್ಲಿ ಪದವಿ ಪಡೆದರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪೂರೈಸಿದರು. ವಿದ್ಯಾರ್ಥಿನಿಯಾಗಿದ್ದಾಗಲೇ ಹಲವು ಲೇಖನಗಳನ್ನು ಪ್ರಕಟಿಸಿದರು. ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಅಂಕಣಗಾರ್ತಿಯಾಗಿದ್ದು, ಗೆಳತಿ ಮತ್ತು ಉಷಾ ಪತ್ರಿಕೆಗಳ ಸಂಪಾದಕಿಯಾಗಿದ್ದರು. ಮಹಿಳಾ ಸೇವಾ ಸಮಾಜದಲ್ಲಿ ಅಧ್ಯಾಪಕಿಯಾಗಿ 27 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ನಾಲ್ಕು ವರ್ಷ ರೀಜನಲ್ ಫಿಲಂ ಸೆನ್ಸಾರ್ ...
READ MORE