'ಒಲವಿನ ಋಣ' ಎಂಬ ಭಾವುಕ, ಅಷ್ಟೇ ಚಂದದ ಶೀರ್ಷಿಕೆಯುಳ್ಳ ಈ ಕಾದಂಬರಿ ಲೇಖಕ ಕುಮಾರ್ ಭದ್ರಾವತಿಯವರ ನವಿರಾದ ನಿರೂಪಣೆಯಲ್ಲಿ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಹೆಣ್ಣೆಂಬ ಮಹಾತಾಯಿಯ ಜವಾಬ್ದಾರಿಯುತ ಕಥನವನ್ನು ಅಷ್ಟೇ ಆಪ್ತತೆಯಿಂದ ಸರಳತೆಯ ಚೌಕಟ್ಟಿನೊಳಗೆ ಏಕಾಗ್ರತೆಯಿಂದ ಕಟ್ಟಿಕೊಡುವಲ್ಲಿ ಜಯಭೇರಿ ಹೊಡೆದಿದ್ದಾರೆ ಎಂದರೆ ಅದು ಸಿನಿಕತನವೆಂದು ಅನ್ನಿಸದು. ಕಾದಂಬರಿಯನ್ನು ಲೇಖಕರನ್ನು ವಿವರಿಸುತ್ತಾ ಸಾಗಿದರೆ ಹೊಗಳಿಕೆ ಎಂಬ ಹೊನ್ನ ಶೂಲಕ್ಕೆ ಏರಿಸಿಬಿಟ್ಟೇನೆಂಬ ಆರೋಪಕ್ಕೆ ನಾನು ಗುರಿಯಾಗ ಬಹುದೇನೋ ಎಂಬ ಆತಂಕ ನನ್ನನ್ನು ಆವರಿಸಿರುವುದು ದಿಟ. ಗೆಳೆಯ, ಆಪ್ತ, ಹಠಮಾರಿ, ಧೈರ್ಯವಂತ, ಹೃದಯವಂತನಾದ ಲೇಖಕ ಕುಮಾರ್ ಭದ್ರಾವತಿಗೂ ನನಗೂ ಬರೋಬ್ಬರಿ ಮೂವತ್ತ ನಾಲ್ಕು ವರ್ಷದ ಗೆಳೆತನ. ಅವಮಾನವನ್ನು ಅನುಮಾನಿಸದೆ, ಕ್ರೂರ ದಿನಗಳನ್ನು ಗಣನೆಗೇ ತೆಗೆದುಕೊಳ್ಳದೆ, ಹಸಿವನ್ನು ಹಿಮ್ಮೆಟ್ಟಿ ನೀರಿನೊಂದಿಗೆ ಕಳೆಯುತ್ತ ಇಬ್ಬರ ಕಾಲಿಗೂ ಪಾಠ ಕಲಿಸಿದ್ದೇವೆ. ನೈಜತೆಗೂ ಗಾವುದ ದೂರದ ಘಟನೆಗಳು ನಮ್ಮಿಬ್ಬರ ಬದುಕಲ್ಲಿ ಪ್ರವೇಶಿಸಿದಾಗಲೂ ನಾವು ಅಸಹನೆಗೆ ಅಂಟಿಕೊಳ್ಳದೆ ಬದುಕಿಗೇ ಸವಾಲೆಸೆಯುತ್ತ ಸಾಗಿದವರು.
ಕುಮಾರ್ ಭದ್ರಾವತಿ ತಂದೆ ದಿ. ನಿಂಗೇಗೌಡ ತಾಯಿ ದಿ. ಹೊಂಬಮ್ಮ. ಬಿ.ಎ, ಬಿ.ಲಿಬ್ ಸೈನ್ಸ್, ಎಂ.ಲಿಬ್ ಸೈನ್ಸ್ ವಿದ್ಯಾರ್ಹತೆ ಪಡೆದು ಕರ್ನಾಟಕ ಸರ್ಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯದ ವಿವಿಧ ಪತ್ರಿಕೆಗಳಲ್ಲಿ 40 ಕ್ಕೂ ಹೆಚ್ಚು ಕಥೆಗಳು ಪ್ರಕಟವಾಗಿವೆ. ರಂಗಭೂಮಿ ,ಸಂಪಾದಕೀಯ ಮಂಡಳಿಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಕಾದಂಬರಿಗಳು ಮೇಡಂ ಹೇಳಿದ ಕಥೆ (ಮಕ್ಕಳ ಕಾದಂಬರಿ) 1989, (2015 ರಲ್ಲಿ ಚಲನಚಿತ್ರವಾದ ಕಾದಂಬರಿ), ಮಿಸ್ಟರ್ ಎಕ್ಸ್ (ಪತ್ತೆದಾರಿ ಕಾದಂಬರಿ) 1990 , ಬಣ್ಣದ ಚಿಟ್ಟೆ (ಮಕ್ಕಳ ಸಾಹಿತ್ಯ) 1991 , ನಮ್ಮ ಚಂದಿರ (ಮಕ್ಕಳ ...
READ MORE