ದಿನೇಶ ಹುಲಿಮನೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಪಶ್ಚಿಮ ಘಟ್ಟದಲ್ಲಿರುವ ಸಿದ್ದಾಪುರ ತಾಲೂಕಿನ ಪುಟ್ಟ ಹಳ್ಳಿ ಹುಲಿಮನೆ ಇವರ ತವರೂರು. ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಪದವಿ ಪಡೆದ ಇವರು ವೃತ್ತಿಯಲ್ಲಿ ಇಂಜಿನಿಯರ್. ಬೆಂಗಳೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿರುವ ಇವರು, ಪ್ರವೃತ್ತಿಯಲ್ಲಿ ಲೇಖಕರು. ಕಾದಂಬರಿಗಳ ಮೂಲಕ ಜನರ ಮನಸ್ಸನ್ನು ಗೆದ್ದಿರುವ ಇವರು ಸಣ್ಣ ಕಥೆಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ಮಲೆನಾಡಿನ ಪ್ರಾಕೃತಿಕ ವರ್ಣನೆ, ಗ್ರಾಮೀಣ ಭಾಷೆಯ ಸೊಗಡು, ಕುತೂಹಲ ಕೆರಳಿಸುವ ಕಥೆಯ ತಿರುವುಗಳು, ಮಾನವ ಸಹಜ ಪ್ರೀತಿ, ಪ್ರಣಯ ಹಾಗೂ ವೈಚಾರಿಕ ವಿಚಾರಗಳನ್ನು ಇವರ ಬರಹಗಳಲ್ಲಿ ಕಾಣಬಹುದಾಗಿದೆ. ಕಾದಂಬರಿಗಳಲ್ಲಿ ಬರುವ ಕೆಲವು ಪಾತ್ರಗಳು ಮಲೆನಾಡಿನ ಗ್ರಾಮೀಣ ಭಾಷೆಯಲ್ಲಿ ನಡೆಸುವ ಸಂಭಾಷಣೆ ಗಮನ ಸೆಳೆಯುತ್ತದೆ. ಕಥಾವಸ್ತುವಿನಲ್ಲಿ ಗಟ್ಟಿತನವಿರುವುದರ ಜೊತೆಗೆ ಪಾತ್ರಗಳು ಜನರ ಮನಸ್ಸಿಗೆ ಹತ್ತಿರವೂ ಮತ್ತು ಆತ್ಮೀಯವೂ ಆಗಿಬಿಡುವುದು ಅವರ ಬರಹದ ವಿಶೇಷತೆ. ಸಣ್ಣ ಕಥೆಗಳಲ್ಲಿ ಲಘು ಹಾಸ್ಯದ ಜೊತೆಯಲ್ಲಿ ಕೌಟುಂಬಿಕ ಮತ್ತು ಭಾವನಾತ್ಮಕ ವಿಚಾರಗಳನ್ನು ಕಾಣಬಹುದಾಗಿದೆ. ಭಾಷೆಯ ಮೇಲೆ ಉತ್ತಮ ಹಿಡಿತ ಹೊಂದಿರುವ ಅವರ ಆಕರ್ಷಕ ನಿರೂಪಣಾ ಶೈಲಿ ಓದುಗರ ಕುತೂಹಲವನ್ನು ಹೆಚ್ಚಿಸುತ್ತದೆ.