"ಶ್ರೀರಾಜರಾಜೇಶ್ವರಿ" ಎನ್ನುವ ಹೆಸರಿನಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ಇವರ ನಿಜನಾಮಧೇಯ ರಮ್ಯ ಎಸ್. ವೃತ್ತಿಯಲ್ಲಿ ಶಿಕ್ಷಕಿ ಮತ್ತು ಆಪ್ತ ಸಮಾಲೋಚಕಿಯಾಗಿರುವ ಇವರು ಪ್ರವೃತ್ತಿಯಲ್ಲಿ ಬರಹಗಾರ್ತಿ.
ಸಕ್ಕರೆ ನಾಡು ಎಂದೇ ಪ್ರಸಿದ್ಧವಾಗಿರುವ ಮಂಡ್ಯ ತಾಲ್ಲೂಕಿನ ದ್ಯಾಪಸಂದ್ರ ಎನ್ನುವ ಗ್ರಾಮದವರಾದ ರಮ್ಯ, ಪದವಿ ಶಿಕ್ಷಣದ ವರೆಗೆ ಕಲಿತದ್ದು ಮಂಡ್ಯದ ಜನತಾ ಶಿಕ್ಷಣ ಸಂಸ್ಥೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಜೈವಿಕ ತಂತ್ರಜ್ಞಾನ, ಶಿಕ್ಷಣ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತ್ತಕೋತ್ತರ ಶಿಕ್ಷಣ ಪಡೆದಿರುವ ಇವರಿಗೆ ಓದು ಮತ್ತು ಬರವಣಿಗೆ ನೆಚ್ಚಿನ ಹವ್ಯಾಸ. ಪದವಿಪೂರ್ವ ಶಿಕ್ಷಣದ ಸಮಯದಲ್ಲಿ ಪತ್ರಿಕೆಗಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ವಿಭಾಗಕ್ಕೆ ಸಂಬಂಧಿಸಿದ್ದ ಲೇಖನಗಳನ್ನು ಬರೆಯುವ ಮೂಲಕ ಬರವಣಿಗೆ ಶುರುಮಾಡಿದರು.
ಜೈವಿಕ ತಂತ್ರಜ್ಞಾನದ ಸಂಶೋಧನಾ ವಿದ್ಯಾರ್ಥಿನಿಯಾಗಿ ಅನೇಕ ವೈಜ್ಞಾನಿಕ ಮತ್ತು ಸಂಶೋಧನಾ ಲೇಖನಗಳನ್ನು ಬರೆದಿರುವ ರಮ್ಯ, ಶಿಕ್ಷಕಿಯಾಗಿ ವಿಜ್ಞಾನದ ವಿಷಯಗಳನ್ನು ಸರಳ ಪ್ರಯೋಗಗಳು ಮತ್ತು ಕಥೆಗಳ ಮೂಲಕ ಕಲಿಸುವಲ್ಲಿ ಸಿದ್ಧಹಸ್ತರು. ಇವರು ಕಥೆ, ಕಾದಂಬರಿಗಳನ್ನು ಬರೆಯಲು ಶುರು ಮಾಡಿದ್ದು ಇಡೀ ವಿಶ್ವವೇ ಕೋವಿಡ್ ಎನ್ನುವ ಮಹಾಮಾರಿಯ ಹಿಡಿತದಲ್ಲಿ ಸಿಕ್ಕಿ ನಲುಗುತ್ತಿದ್ದ ಸಮಯದಲ್ಲಿ. ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಒಂಟಿಯಾಗಿ ಉಳಿಯುವಂತಹ ಸಂದರ್ಭ ಬಂದಾಗ, ತಮ್ಮ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಅಕ್ಷರ ರೂಪಕ್ಕೆ ಇಳಿಸಲು ಶುರು ಮಾಡಿದರು. ಅಲ್ಲಿಂದ ಶುರುವಾದ ಇವರ ಸಾಹಿತ್ಯ ಪಯಣದಲ್ಲಿ ಮೂಡಿದ ಕಥೆಗಳು ಮಂಗಳ, ಮಯೂರ, ಸುಧಾ, ಸೂತ್ರ, ಜನಮಿಡಿತ ಮುಂತಾದ ಕನ್ನಡದ ಪತ್ರಿಕೆಗಳಲ್ಲಿ ಹಾಗೂ ಪ್ರತಿಲಿಪಿ, ಮೊಮ್ಸ್'ಪ್ರೇಸ್ಸೋ ಮುಂತಾದ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗಿವೆ.