ಶಂಬಾಲ ಜಯಲಲಿತಾ ಅವರ ಕೃತಿಯಾಗಿದೆ. ಸಾಮಾನ್ಯವಾಗಿ ಮೊದಲನೆಯ ಅಧ್ಯಾಯದಲ್ಲಿ ಆರಂಭವಾಗಿ ಕೊನೆಯ ಅಧ್ಯಾಯದಲ್ಲಿ ಕಥೆಯು ಮುಗಿಯುತ್ತದೆ. ಆದರೆ ಈ ಕಾದಂಬರಿಯು ಆ ಪದ್ಧತಿಯನ್ನು ಮುರಿದಿದೆ. ಇದರಲ್ಲಿ ಮೊದಲ ಅಧ್ಯಾಯದಲ್ಲಿ ಆರಂಭವಾಗುವ ಕಥೆಯು ಆ ಕಥೆಯನ್ನು ಹೇಳುವವನ ಮನದಲ್ಲಿ ಮೂಡುವ ಮತ್ತೊಂದು ಕಥೆಯಾಗಿ ಒಡಮೂಡುತ್ತದೆ. ಇದೊಂದು ಅನನ್ಯವಾದ ಕಥಾ ತಂತ್ರವಾಗಿದೆ. ಹೀಗೆ ಒಂದೊಂದು ಅಧ್ಯಾಯವನ್ನು ದಾಟುತ್ತಾ ದಾಟುತ್ತಾ ಇನ್ನೊಂದು ಕಥೆಯಾಗಿ ಬೆಳೆಯುತ್ತಾ ಹೋಗುತ್ತದೆ. ಇದೇ ಹಿಟ್ಲರ್ನ ಕಥೆ. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಹಿಟ್ಲರ್ ಎಂಬ ಸರ್ವಾಧಿಕಾರಿಯನ್ನು ನೆನೆದು ಇಡೀ ಜಗತ್ತೇ ನಡುಗಿತು. ಈ ಕಾದಂಬರಿಯಲ್ಲಿ ಬರುವ ಹಿಟ್ಲರ್ಗೂ ಇತಿಹಾಸದಲ್ಲಿ ಕಾಣಿಸಿಕೊಂಡ ಹಿಟ್ಲರ್ಗೂ ಯಾವುದೇ ಸಂಬಂಧವಿಲ್ಲ. ಅಷ್ಟು ಮಾತ್ರವಲ್ಲ ಇಲ್ಲಿನ ಹಿಟ್ಲರ್ಗೆ ಎರಡನೆ ಮಹಾಯುದ್ಧಕ್ಕೆ ಕಾರಣವಾದ ವ್ಯಕ್ತಿಯೊಬ್ಬನಿಗೆ ತನ್ನದೇ ಹೆಸರಿತ್ತು ಎಂಬ ಅರಿವೂ ಇಲ್ಲ. ಅದೂ ಒಂದು ರೀತಿ ಒಳ್ಳೆಯದೇ ಎಂಬುದು ಇಲ್ಲಿನ ಕಥಾಪಾತ್ರವಾದ ಹಾರ್ವರ್ಡ್ನಲ್ಲಿ ಓದಿದ್ದ ಮುಖ್ಯಮಂತ್ರಿಯ ಅಭಿಪ್ರಾಯ.