ಅಂತರಂಗ ಮತ್ತು ಬಹಿರಂಗವನ್ನು ಏಕಕಾಲಕ್ಕೆ ದರ್ಶನ ಮಾಡಿಸುವುದು ಅಷ್ಟು ಸುಲಭವಲ್ಲ. ಲೌಕಿಕದಲ್ಲಿ ಮುಳುಗಿದಾಗ ಅಲೌಕಿಕ ರುಚಿಸುವುದಿಲ್ಲ, ರಾಗ, ರತಿ, ಆಕರ್ಷಣೆ, ಅತಿರೇಕ ಮತ್ತು ಅನೂಹ್ಯಗಳ ಮೊತ್ತದಂತಿರುವ ಚಿತ್ತರಂಗ ಕಾದಂಬರಿಯ ಅಂತರಾಳದಲ್ಲಿರುವುದು ಸ್ಮೃತಿ-ವಿಸ್ಮೃತಿಗಳ ತಾಕಲಾಟ. ಕತ್ತಲು-ಬೆಳಕು, ಸತ್ಯ-ಸುಳ್ಳು, ಅಭಿನಯ-ವಾಸ್ತವ, ಜೀವನ-ನಾಟಕಗಳ ಸಮಗ್ರ ಚಿತ್ರ. ಚಿತ್ರೋದ್ಯಮವನ್ನು ಮೂವತ್ತೆರಡು ವರ್ಷಗಳಿಂದ ಅತೀ ಹತ್ತಿರದಿಂದ ನೋಡಿದವನಾಗಿ ಹೇಳುವುದಾದರೆ, ಈ ಕಾದಂಬರಿ ಚಿತ್ರರಂಗದ ಅಂತರಂಗದ ಚಿತ್ರ. ಶಂಕರ್‌ನಾಗ್ ಹೇಳುತ್ತಿದ್ದ ಒಂದು ಮಾತು ಇದನ್ನು ಓದುತ್ತಿದ್ದಂತೆ ನೆನಪಿಗೆ ಬಂತು; `ಇಡೀ ಸಿನಿಮಾ ಮೊದಲು ನನ್ನ ಮನಸ್ಸಿನಲ್ಲಿ ನಡೆಯುತ್ತದೆ. ನಂತರ ಅದನ್ನು ನಾನು ಶೂಟ್ ಮಾಡುತ್ತೇನೆ.' ಆ ಅರ್ಥದಲ್ಲಿ ಚಿತ್ರರಂಗ ಅನ್ನುವುದನ್ನು ಚಿತ್ತರಂಗ ಎಂದು ಕರೆಯುವುದೇ ಸರಿ. ನಿರ್ಮಾಪಕ, ನಿರ್ದೇಶಕ, ಕತೆಗಾರ, ಛಾಯಾಗ್ರಾಹಕ, ಸಹನಟ, ವಿಮರ್ಶಕ, ಪತ್ರಕರ್ತ, ಪ್ರೇಕ್ಷಕ- ಹೀಗೆ ಚಿತ್ರರಂಗವೆಂಬುದು ಹಲವು ಸ್ತರಗಳ ಜಗತ್ತು. ಅಲ್ಲಿ ಎದುರಾಗುವ ಪ್ರತಿಯೊಂದು ಪಾತ್ರವೂ ಸತ್ಯ ಸುಳ್ಳುಗಳ ನಡುವೆ ತುಯ್ದಾಡುತ್ತಿರುತ್ತದೆ. ನಿಜವಾದ ಸ್ನೇಹವಾಗಲೀ, ಪ್ರೀತಿಯಾಗಲೀ, ಮೆಚ್ಚುಗೆಯಾಗಲೀ, ವಿಮರ್ಶೆಯಾಗಲಿ ಅಲ್ಲಿ ಸಿಗುವುದಕ್ಕೆ ಸಾಧ್ಯವೇ ಇಲ್ಲ. ನನ್ನ ಮೆಚ್ಚಿನ ನಟಿ ಗ್ರೇಟಾ ಗಾರ್ಬೋ ಹೇಳುತ್ತಾಳೆ; ನಾನು ಒಂಟಿತನವನ್ನು ಇಷ್ಟಪಡುತ್ತೇನೆ ಅಂತ ಹೇಳುತ್ತಿಲ್ಲ. ನನ್ನನ್ನು ಒಂಟಿಯಾಗಿರಲು ಬಿಡಿ ಎನ್ನುತ್ತಿದ್ದೇನೆ. ಇವೆರಡರ ನಡುವೆ ದೊಡ್ಡ ವ್ಯತ್ಯಾಸವಿದೆ. ಅನುಭವಿ ಕಾದಂಬರಿಕಾರ್ತಿ ಆಶಾ ರಘು, ರಂಗಭೂಮಿ, ಕಿರುತೆರೆ, ಸಿನಿಮಾ, ಜೀವನ, ಪುರಾಣಗಳಿಂದ ಮೊಗೆದುಕೊಂಡ ಅನುಭವದ ಬೆಳಕಲ್ಲಿ ಚಿತ್ರಿಸಿದ ಈ ಕಾದಂಬರಿ ನನಗೆ ಹಲವು ಸತ್ಯಗಳನ್ನು ಹೊಳೆಯಿಸಿತು. ಅನುಭವವಾಗಿ ನನ್ನೊಳಗೆ ಇಳಿಯಿತು. ಇದು ಚಿತ್ತರಂಗದಲ್ಲಿ ನಡೆಯುವ ಮಹೋನ್ನತ ಚಿತ್ರರತ್ನ ಎಂದು ಲೇಖಕ ಜೋಗಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ಆಶಾ ರಘು ಅವರು ಕನ್ನಡದ ಪ್ರಮುಖ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಇವರು ಕೇಶವ ಅಯ್ಯಂಗಾರ್ ಹಾಗೂ ಸುಲೋಚನ ದಂಪತಿಗಳ ಹಿರಿಯ ಮಗಳಾಗಿ 1979ರ ಜೂನ್ 18 ನೇ ತಾರೀಖಿನಂದು ಬೆಂಗಳೂರಿನಲ್ಲಿ ಹುಟ್ಟಿದರು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿರುವ ಇವರು, ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಗಳಲ್ಲಿಯೂ ಕಲಾವಿದೆಯಾಗಿ, ಸಂಭಾಷಣೆಕಾರರಾಗಿ, ಸಹಾಯಕ ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. 'ಆವರ್ತ', 'ಗತ', 'ಮಾಯೆ', 'ಚಿತ್ತರಂಗ' ಮೊದಲಾದ ಕಾದಂಬರಿಗಳನ್ನೂ, 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು' ಮೊದಲಾದ ಕಥಾಸಂಕಲನಗಳನ್ನೂ, 'ಚೂಡಾಮಣಿ', 'ಕ್ಷಮಾದಾನ', 'ಬಂಗಾರದ ...
READ MORE