ರಂಗಮ್ಮನ ವಠಾರ

Author : ನಿರಂಜನ

Pages 284

₹ 1.00




Year of Publication: 1954
Published by: ವಾಹಿನಿ ಪ್ರಕಾಶನ
Address: ಜಯಚಾಮರಾಜ ರಸ್ತೆ, ಬೆಂಗಳೂರು-2

Synopsys

ರಂಗಮ್ಮನ ವಠಾರ-ನಿರಂಜನ ಅವರ ಕಾದಂಬರಿ. "ವಠಾರ ಜೀವನವೆಂದರೆ ಅತ್ಯಂತ ಕೀಳುತಮವಾದ ಬದುಕಲ್ಲ. ಅದಕ್ಕೂ ಮಾನವೀಯ ಮುಖವಿದೆ. ಅಲ್ಲಿಯೂ ಮನುಷ್ಯರೇ ವಾಸಿಸುತ್ತಾರೆ. ಎಂದು ಪ್ರತಿಪಾದಿಸುವ ಕೃತಿ ಇದು. 

ಮಧ್ಯಮ ವರ್ಗದ ಜನತೆಗೆ ಅದೂ ಬೆಂಗಳೂರಿನಂತಹ ನಗರದಲ್ಲಿ ವಠಾರ ಜೀವನವೇ ಆಶ್ರಯ. ವಠಾರ ಜೀವನ ಎಂದರೆ ಕೊಳಚೆ ಪ್ರದೇಶವಲ್ಲ. ಅಲ್ಲಿ ಹೃದಯವಂತರೂ ಇರುತ್ತಾರೆ. ಹತ್ತು ಹಲವು ಅಸಾಮಾನ್ಯವಾದ ನೋವುಗಳನ್ನು ಸಹಿಸಿಯೂ ಅವರು ಜೀವನ ಪ್ರೀತಿಸುತ್ತಾರೆ. ಇತರರೊಂದಿಗೆ ಸಹಬಾಳ್ವೆಯ ಬದುಕನ್ನು ಸಾಗಿಸುತ್ತಾರೆ. ದುಃಖದ ಮಧ್ಯೆಯೂ ಹೇಗೆ ನಗುನಗುತ್ತಾ ಬರ್ಬರ ದಿನಗಳನ್ನು ದೂಡುತ್ತಾರೆ ಎಂಬುದರ ಹೃದಯಂಗಮವಾದ ಚಿತ್ರಣ ಇಲ್ಲಿದೆ. 

ವಠಾರ ಜೀವನದಲ್ಲಿಯೂ ನೈಜ ಪ್ರೇಮ ಜನ್ಮ ತಾಳುತ್ತದೆ. ಸರಸವೂ ವಿರಸವಾಗುತ್ತದೆ. ಶಿಕ್ಷಕಿತರು, ಸುಸಂಸ್ಕೃತರು, ಅನಾಗರಿಕರೂ ಒಂದೆಡೆ ಬಾಳುತ್ತಾರೆ. ಅದೊಂದು ತುಂಬಾ ಕುತೂಹಲಕಾರಿಯಾಗ ಜಗತ್ತು. ಇಲ್ಲಿಯ ಒಂದೊಂದು ಕುಟುಂಬವೂ ದಿನಕ್ಕೆ ಮೂರೇ ಕೊಡ ನೀರಿನಲ್ಲಿ ದಿನಗಳನ್ನು ದೂಡುವ ಸಹನೆ, ಮನೋಸ್ಥೈರ್ಯ ಹೊಂದಿದೆ. ಒಟ್ಟಿನಲ್ಲಿ, ವಠಾರದ ಕುತೂಹಲಕಾರಿ ಹಾಗೂ ಅಚ್ಚರಿಯ ಜಗತ್ತನ್ನು ರಸವತ್ತಾಗಿ ಚಿತ್ರಿಸಿದ ಕಾದಂಬರಿ ಇದು. 

ವಠಾರದ ಜನ ಎಂದು ಮೂಗು ಮುರಿಯುವವರು ಒಂದು ಬಾರಿ ಆತ್ಮಾವಲೋಕನ ಮಾಡಿಕೊಳ್ಳುವಂತೆ, ಅವರೆಡೆಗೂ ನೋಡಿ ಜೀವನ ಪ್ರೀತಿ ಹೆಚ್ಚಿಸಿಕೊಳ್ಳುವಂತೆ ಪ್ರೇರೇಪಿಸುವ ಕಾದಂಬರಿ ಇದು. 

About the Author

ನಿರಂಜನ
(15 June 1924 - 12 March 1992)

ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು.    ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...

READ MORE

Reviews

ತಾಯಿನಾಡು ಮತ್ತು ಚಿತ್ರಗುಪ್ತ ಪತ್ರಿಕೆಗಳಿಗೆ 50-60 ರ ದಶಕದಲ್ಲಿ ಪುಸ್ತಕ ವಿಮರ್ಶೆಗಳನ್ನು ಮಾಡುತ್ತಿದ್ದವರು - ‘ಪುಸ್ತಕಪ್ರಿಯ’ ಹೆಸರಿನ ಹೆಚ್.ಆರ್.  ನಾಗೇಶರಾವ್ ಅವರು ಐದು ದಶಕಗಳ ಹಿಂದಿನ ವಿಮರ್ಶೆಯ ಸ್ವರೂಪದ ಸ್ಯಾಂಪಲ್‍ಗಳು ಇಲ್ಲಿದೆ. ರಂಗಮ್ಮನ ವಠಾರ (ಕಾದಂಬರಿ. ಲೇಖಕರು: ಶ್ರೀ ‘ನಿರಂಜನ’, ಪ್ರಕಾಶಕರು: ವಾಹಿನಿ ಪ್ರಕಾಶನ, ಜಯಚಾಮರಾಜ ರಸ್ತೆ, ಬೆಂಗಳೂರು-2, ಬೆಲೆ: ಒಂದೂವರೆ ರೂಪಾಯಿ)

  • "ವಠಾರ ಜೀವನವೆಂದರೆ ‘ಗಟಾರ’ ಜೀವನವಲ್ಲ" ಎಂಬುದನ್ನು ಬಿತ್ತರಿಸುವ ಶ್ರೇಷ್ಠ ಕೃತಿ, ಈ ೨೭೪ ಪುಟಗಳ ಕೈ ಹೊತ್ತಿಗೆ. ಬೆಂಗಳೂರಿನಂತಹ ನಗರದಲ್ಲಿ, ಮಧ್ಯಮ ವರ್ಗದ ಜನರು ವಸತಿಗಾಗಿ ‘ಕಡಿಮೆ’ ಬಾಡಿಗೆಯ ವಠಾರಗಳನ್ನು ಅವಲಂಬಿಸಿ, ಎಂತಹ ಕಷ್ಟಗಳನ್ನೂ ನುಂಗಿಕೊಂಡು ಜೀವನ ನಡೆಸುತ್ತಿರುವುದನ್ನು ನಿರಂಜನರು ಹೃದಯಂಗಮವಾಗಿ ವಿವರಿಸಿದ್ದಾರೆ. ಇಂತಹ ದುರ್ಭರ ಸ್ಥಿತಿಯಲ್ಲೂ ಜೀವನದ ಕಹಿಯನ್ನು ಮರೆತು ತಮ್ಮ ಪ್ರೇಮದ ಬಾಳ್ವೆಯಿಂದ, ವಿನೋದ ರಸಿಕತೆಯಿಂದ ವಾತಾವರಣವನ್ನೇ ಆಹ್ಲಾದಗೊಳಿಸಬಹುದೆಂಬುದಕ್ಕೆ ಉತ್ತಮ ನಿದರ್ಶನವಾಗಿ ಬರುತ್ತಾರೆ, ಚಂಪಾವತಿ ಮತ್ತು ಶಂಕರನಾರಾಯಣರಾಯರು. ವಠಾರ ಜೀವನವನ್ನು ವಿಷಮಯವಾಗಿ ಮಾಡಲು ಪ್ರಯತ್ನಿಸುವ ಪಾತ್ರಗಳೂ ಇಲ್ಲದೇ ಇಲ್ಲ.
  • ಎಂತಹ ದ್ವೇಷವಿದ್ದರೂ ಸಾವಿನ ಮುಂದೆ ಮತ್ತು ಸಾರ್ವತ್ರಿಕ ಗಂಡಾಂತರದ ಮುಂದೆ ಮರೆತು ವಿಶಾಲ ಹೃದಯವನ್ನು ತೋರುವ ವ್ಯಕ್ತಿಗಳೂ ಇಲ್ಲಿ ಚಿತ್ರಿತವಾಗಿದ್ದಾರೆ; ಕೊಡ ನೀರಿಗಾಗಿ ಮತ್ತು ಒಂದು ನಿಮಿಷ ಮುಂಚಿತವಾಗಿ ನೀರು ಹಿಡಿಯುವುದಕ್ಕಾಗಿ ಕಚ್ಚಾಡುವ ‘ಮಹಾರಾಯಿತಿ’ ಯರೂ ಇದ್ದಾರೆ. ವಠಾರ ಜೀವನದಲ್ಲಿ ನಿಜ ಪ್ರೇಮ ಹುಟ್ಟುತ್ತದೆ; ಕಾಮ ತಲೆದೋರುತ್ತದೆ. ದ್ವೇಷ ಅಸೂಯೆಗಳು ಕೆರಳುತ್ತವೆ; ಸರಸ ವಿರಸವಾಗುತ್ತದೆ; ಸುಸಂಸ್ಕೃತರೂ ಅನಾಗರಿಕರೂ ಒಟ್ಟಿಗೆ ಬಾಳ ಬೇಕಾಗುತ್ತದೆ. ಮಾನವತೆಯ ಭಿನ್ನ ಭಿನ್ನ ವಿಭಾಗಗಳನ್ನು ಮತ್ತು ಪ್ರಕೃತಿ ವಿಶೇಷಗಳನ್ನಿಲ್ಲಿ ಕಾಣಬಹುದಾಗಿದೆ. ಚಿಕ್ಕ ಜಗತ್ತನ್ನೇ ನೋಡಬಹುದಾಗಿದೆ.
  • ಕೇವಲ ಬಾಡಿಗೆ ಆಸೆಯ ಮನೆಯೊಡತಿ ರಂಗಮ್ಮನಲ್ಲೂ ಮಾನವೀಯ ಅನುಕಂಪ, ಸಹಾನುಭೂತಿ, ಸುಖದ ಹಾರೈಕೆ ಮತ್ತು ಕಷ್ಟ ಕಾಲದಲ್ಲಿ ನೆರವಾಗುವ ಬುದ್ಧಿ ಇರುವುದೆಂಬುದನ್ನೂ ಲೇಖಕರು ತೋರಿಸಿದ್ದಾರೆ. ವಠಾರ ಜೀವನದಲ್ಲಿ ಎಲ್ಲ ಬಗೆಯ ಜನರ ಪ್ರತಿಬಿಂಬವನ್ನೂ ಕಾಣ ಬಹುದಾಗಿದೆ. ಈ ಸಂಗ್ರಹಾರ್ಹ ಕಾದಂಬರಿ ಕೆಲವೆಡೆ ಬರುವ ಕೋಮುವಾರು ಪ್ರಸ್ತಾಪಗಳಿಲ್ಲದೆಯೇ ಸಾಗಬಹುದಾಗಿತ್ತು; ದಿನಕ್ಕೆ ಮೂರೇ ಕೊಡ ನೀರಿನಲ್ಲಿ ಒಂದೊಂದು ಕುಟುಂಬವೂ ಕಾಲ ಹಾಕುತ್ತಿತ್ತೆಂದು (ಬಾವಿಯ ಸೌಕಯದ ವ್ಯವಸ್ಥೆಯೇನನ್ನೂ ಕಲ್ಪಿಸದೆ!) ಹೇಳುವುದು ವಿಪರೀತ ಉತ್ಪ್ರೇಕ್ಷೆಯೆನ್ನಬೇಕು. ಪುಸ್ತಕದಲ್ಲಿ ಬರುವ ಸಂವಾದಾತ್ಮಕ ಹಿನ್ನುಡಿ ಬಹಳ ಉದ್ದವಾಯಿತೆಂದೇ ಹೇಳಬೇಕಾಗಿದೆ; ಪ್ರತಿಯೊಂದು ಪುಸ್ತಕದಲ್ಲೂ ಇದೇ ಬಗೆಯ ಪೀಠಿಕಾ ತಂತ್ರವನ್ನು ಉಪಯೋಗಿಸತೊಡಗಿದರೆ, ಇದು ಅಪ್ರತ್ಯಕ್ಷ ಆತ್ಮ ಪ್ರಶಂಸೆಯ ವಿನೂತನ ವಿಧಾನವೋ ಎಂಬ ಅನುಮಾನವನ್ನು ಓದುಗರಲ್ಲಿ ಮೂಡಿಸಿದರೂ ಅಚ್ಚರಿಯಿಲ್ಲ.

-ಪುಸ್ತಕಪ್ರಿಯ, ತಾಯಿನಾಡು, ‘ಪ್ರಕಟಣ ಪ್ರಪಂಚ’ ಅಂಕಣ; ೨೫-೯-೧೯೫೪

ಕೃಪೆ: ಗೂಗಲ್ 

Related Books