ಅ.ನ.ಕೃ (ಅ.ನ. ಕೃಷ್ಣರಾಯ) ಅವರ ಐತಿಹಾಸಿಕ ಕಾದಂಬರಿ ರಣ ವಿಕ್ರಮ. ಹದಿನಾರನೇ ಶತಮಾನದ ಈ ಐತಿಹಾಸಿಕ ಕಥೆಯ ಬಗ್ಗೆ ಬರೆಯುವಾಗ ಆಗಿನ ಚಾರಿತ್ರಿಕ ಹಿನ್ನೆಲೆಯನ್ನೂ ತಿಳಿಸಬೇಕಾಗುತ್ತದೆ. ಹದಿನಾಲ್ಕನೆಯ ಶತಮಾನದಲ್ಲಿ ಮಹರ್ಷಿ ವಿದ್ಯಾರಣ್ಯರು ಸ್ಥಾಪಿಸಿದ ವಿಜಯನಗರ ಸಾಮ್ರಾಜ್ಯ, ದಕ್ಷಿಣದಲ್ಲಿ ಬಲವಾದ ರಕ್ಷಣಾಕೋಟೆ ರಚಿಸಿ ಇಸ್ಲಾಮಿನ ದಾಳಿಯನ್ನು ತಡೆಗಟ್ಟಿತು. ದಿಲ್ಲಿಯ ಬಾದಶಹನಿಂದ ವಿಜಯನಗರವನ್ನು ಮಣಿಸಲು ಸಾಧ್ಯ ವಾಗಲಿಲ್ಲ. ಆದರೆ ಕೃಷ್ಣದೇವರಾಯನು ಕಾಲವಾದ (೧೫೩೦) ನಂತರ ದುರ್ಬಲ ಅರಸರ ಸ್ವಾರ್ಥ ಮತ್ತು ಪರಸ್ಪರ ಕಾಳಗಗಳಿಂದ ಬಹಮನಿ ಸುಲ್ತಾನರ ಮತ್ತು ದಿಲ್ಲಿಯ ಸುಲ್ತಾನ್ ಶಾಹಿಯ ಪ್ರಾಬಲ್ಯ ವರ್ಧಿಸಿತು. ೧೫೩೯ ಹುಮಾಯೂನ್ ಆಳುತ್ತಿದ್ದ ಮೊಘಲ್ ಸಾಮ್ರಾಜ್ಯವನ್ನು ಪಠಾನ್ ಷೇರ್ ಷಹ ಕಿತ್ತುಕೊಂಡ. ೧೫೪೨ ಸಾಮ್ರಾಜ್ಯ ಕಳೆದುಕೊಂಡು,ದಿಕ್ಕೆಟ್ಟು ಹೆಂಡತಿ ಮಕ್ಕಳೊಂದಿಗೆ ಅಲೆಯುತ್ತಿದ್ದ ಹುಮಾಯೂನ್ ನಿಗೆ ಅಮರಕೋಟೆಯಲ್ಲಿ ಮಗ ಹುಟ್ಟಿದ. ಅವನೇ ಅಕ್ಬರ್. ೧೫೫೫ ರಲ್ಲಿ ತನ್ನ ಹದಿಮೂರನೇ ವಯಸ್ಸಿನಲ್ಲಿ ತಂದೆಯಿಂದ ಸೈನ್ಯಾಧಿಕಾರ ವಹಿಸಿಕೊಂಡ ವೀರ ಅಕ್ಬರನು ಷೇರಷಹನ ಸೈನ್ಯವನ್ನು ಹಿಮ್ಮೆಟ್ಟಿಸಿ ತಂದೆ ಹುಮಾಯೂನ್ ಕಳೆದುಕೊಂಡಿದ್ದ ದಿಲ್ಲಿಯ ಸಿಂಹಾಸನವನ್ನು ಪುನಃ ಪಡೆದುಕೊಳ್ಳುತ್ತಾನೆ. ಆದರೆ ಹುಮಾಯೂನ್ ಒಂದೇ ವರ್ಷದಲ್ಲಿ ಮೃತನಾಗಿ ಅಕ್ಬರ್ ಪಟ್ಟಾಭಿಷಿಕ್ತನಾಗುತ್ತಾನೆ. ಅಕ್ಬರನ ವೀರ ದಳಪತಿ ಬೈರಾಮಖಾನನ ಶೌರ್ಯದ ಫಲವಾಗಿ ಹಿಂದೆ ಕೈಬಿಟ್ಟು ಹೋಗಿದ್ದ ಪ್ರಾಂತ್ಯಗಳು ಮತ್ತೆ ಅಕ್ಬರನ ಕೈ ಸೇರುತ್ತವೆ. ಆಮೇಲೆ ರಜಪೂತರ ಕಡೆಗೆ ತಿರುಗಿದ ಅಕ್ಬರ್ ಮಾರವಾರದ ಕೆಲಭಾಗವನ್ನು ವಶಪಡಿಸಿಕೊಳ್ಳುತ್ತಾನೆ. ಅಂಬರ ಸಂಸ್ಥಾನದ ದೊರೆ ಬಿಹಾರಿಲಾಲ್ ಶರಣಾಗತನಾಗಿ ಕಪ್ಪಕಾಣಿಕೆಯನ್ನು ಕೊಡಲೊಪ್ಪಿ, ತನ್ನ ಮಗಳು ಜೋಧಬಾಯಿಯನ್ನು ಅಕ್ಬರನಿಗೆ ಕೊಟ್ಟು ಮದುವೆ ಮಾಡುತ್ತಾನೆ. ಅಂಬರ ಸಂಸ್ಥಾನದ ರಾಜ ಮಾನಸಿಂಹ ಅಕ್ಬರನ ದಳಪತಿಯಾಗಿ ರಜಪೂತರ ವಿರುದ್ಧ ಹೋರಾಡುತ್ತ ಅವರನ್ನು ಚಕ್ರಾಧಿಪತ್ಯದೆದುರು ಮಣಿಸಲು ಅಕ್ಬರನಿಗೆ ಸಹಾಯಕನಾಗಿ ನಿಲ್ಲುತ್ತಾನೆ. ಆದರೆ ದೇಶಭಕ್ತ, ಸ್ವಾಭಿಮಾನಿ ವೀರರಿಂದ ತುಂಬಿದ ಚಿತ್ತೂರು ಬಾದಶಹನಿಗೆ ಬಗ್ಗುವುದಿಲ್ಲ. ಇದರಿಂದ, ಚಿತ್ತೂರಿನ ಸೀಸೋದಿಯ ರಾಜವಂಶವನ್ನು ತೊಡೆದುಹಾಕಿ, ತನ್ನ ಏಕಸಾಮ್ರಾಜ್ಯಾಧಿಪತ್ಯವನ್ನು ಸ್ಥಾಪಿಸಲೇಬೇಕೆಂಬ ಮಹತ್ವಾಕಾಂಕ್ಷೆ ಅಕ್ಬರನನ್ನು ಬಾಧಿಸುತ್ತದೆ. ಚಿತ್ತೂರನ್ನು ವಶಪಡಿಸಿಕೊಳ್ಳಬೇಕೆಂದು ಸ್ವತಃ ದೊಡ್ಡ ಸೈನ್ಯವನ್ನು ತೆಗೆದುಕೊಂಡು ಹೊರಟು ಚಿತ್ತೂರಿನ ಕೋಟೆಯ ಸುತ್ತಲೂ ತೋಪುಗಳ ವರ್ತುಲವನ್ನು ರಚಿಸಿದ ಅಕ್ಬರನ ಹಠ ಈ ಕೆಳಗಿನ ಮಾತುಗಳಲ್ಲಿ ಕಾಣುತ್ತದೆ: "ಇಂದು ಅಖಿಲ ಭಾರತವೇ ನನ್ನ ಕೈಯಲ್ಲಿದೆ. ಆದರೂ ನನಗೆ ತೃಪ್ತಿ ಇಲ್ಲ. ಚೋಟುದ್ದದ ಈ ಗುಡ್ಡಗಾಡು, ನನ್ನ ಮಹಾಬಲವನ್ನು ಕಡೆಗಾಣಿಸುತ್ತಿದೆಯಲ್ಲಾ ಎಂಬ ದುಮ್ಮಾನ ನನ್ನನ್ನು ದುಃಖಿಯನ್ನಾಗಿಸಿದೆ. ಚಿತ್ತೂರೇ ನನ್ನ ಕಬರಸ್ಥಾನವಾದರೂ ಚಿಂತೆಯಿಲ್ಲ. ಇದನ್ನು ನೆಲಸಮಗೊಳಿಸಿದಲ್ಲದೆ, ಇಲ್ಲಿಂದ ನಾನು ಕಾಲು ತೆಗೆಯುವುದಿಲ್ಲ." ಅಕ್ಬರ್ ಛಲದಿಂದ ತನ್ನ ಸೈನಿಕರನ್ನು ಹುರಿದುಂಬಿಸುತ್ತ, ಹೋರಾಡಿ ಚಿತ್ತೂರನ್ನು ವಶಪಡಿಸಿಕೊಳ್ಳುತ್ತಾನೆ. ಅವನ ಸೈನಿಕರು ಕೋಟೆಯೊಳಗೆ ನುಗ್ಗಿ ಮೂವತ್ತು ಸಾವಿರ ರೈತರು ಸಮೇತವಾಗಿ ಎದುರು ಸಿಕ್ಕವರನ್ನೆಲ್ಲ ತರಿದು ಕೊಲ್ಲುತ್ತಾರೆ. ಎಲ್ಲಾ ದೇವಾಲಯಗಳನ್ನು ನಾಶಮಾಡುತ್ತಾರೆ. ಸೈನಿಕರ ಕ್ರೂರ ಆಕ್ರಮಣರಿಂದ ಪಾರಾಗಲು ಮಹಿಳೆಯರು 'ಜೋಹರ್' ಬೆಂಕಿಯಲ್ಲಿ ಬೆಂದು ಹೋಗುತ್ತಾರೆ. ಆದರೆ ಪ್ರತಾಪಸಿಂಹ ಬಾದಷಹನ ವಶಕ್ಕೆ ಸಿಗುವುದಿಲ್ಲ. ಚಿತ್ತೂರಿನ ಅಮಾತ್ಯರಾಗಿದ್ದ ಭೀಮಸಿಂಹರು ಉಪಾಯದಿಂದ ರಾಣಾ ಪ್ರತಾಪಸಿಂಹ, ಅವನ ತಂದೆ ಉದಯಸಿಂಹ ಮತ್ತು ರಾಜ ಕುಟುಂಬದವರನ್ನು ಮೊದಲೇ ರಹಸ್ಯ ಮಾರ್ಗದಿಂದ, ಬಲವಾದ ಕೋಟೆಯೊಳಗೆ ಸುರಕ್ಷಿತವಾಗಿರುವ ಉದಯಪುರಕ್ಕೆ ಕಳಿಸಿದ್ದರು. ಉದಯಪುರಕ್ಕೆ ಹೋದ ಮೇಲೆ ರಾಜ ಉದಯಸಿಂಹನ ನಿಧನವಾಗಿ, ಹಿರಿಯ ಮಗ ಪ್ರತಾಪಸಿಂಹ ಸಿಂಹಾಸನವೇರುತ್ತಾನೆ. ಇತರ ಗಂಡು ಮಕ್ಕಳಾದ ಜಗಮಲ್ಲ ಮತ್ತು ಶಕ್ತಸಿಂಹ ಸಿಂಹಾಸನ ತಪ್ಪಿದ ಸಿಟ್ಟಿನಲ್ಲಿ ಹೊರಗೆ ಹೋಗಿ ಶತ್ರುಪಕ್ಷ ಸೇರುತ್ತಾರೆ. ತನ್ನವರಿಂದ ದೂರವಾಗಿ ರಾಣಾ ಮೊಘಲರ ವಿರುದ್ಧ ಒಬ್ಬನೇ ಹೋರಾಡಬೇಕಾಯಿತು. ಮೊದಲನೆಯ ಹಳದಿಘಟ್ಟದ ಯುದ್ಧದಲ್ಲಿ ಅವನು ಎಲ್ಲವನ್ನೂ ಕಳೆದುಕೊಂಡು ಅರಾವಳಿ ತಪ್ಪಲು ಸೇರಿ ಸೈನ್ಯ ಸಂಘಟಿಸುತ್ತಾ ಮತ್ತೆ ಯುದ್ಧದ ತಯಾರಿ ಮಾಡುತ್ತಾನೆ. ಚಿತ್ತೂರನ್ನು ಶತ್ರುಗಳ ಕೈಯಿಂದ ಬಿಡಿಸಿಕೊಳ್ಳುವುದೇ ಅವನ ಧ್ಯೇಯವಾಗಿತ್ತು. ಚಿತ್ತೂರನ್ನು ಹೊಕ್ಕ ಮೊಘಲ ಸೈನಿಕರಿಗೆ ಕೋಟೆಯಿಂದ ಹೊರಗೆ ಬರುವುದೇ ಪ್ರಯಾಸದಾಯಕವಾಯಿತು. 'ಭಿಲ್ಲರ ರಾಣಿ' ಎಂದು ಹೇಳಿಕೊಳ್ಳುವ ವೀರವನಿತೆಯೊಬ್ಬಳು ಅವರನ್ನು ಕಂಡಲ್ಲೆಲ್ಲ ಕೊಲ್ಲುತ್ತಿದ್ದಳು. "ವಿಂಧ್ಯಾದ್ರಿಯ ಗುಡ್ಡಗಾಡು ಸೇರಿಕೊಂಡು, ನಮ್ಮ ಸರಬರಾಯಿಯನ್ನು ತಡೆಗಟ್ಟಿ, ದಾರಿಗಳನ್ನು ದೋಚುತ್ತಿರುವ ಈ ಸೈತಾನಿ 'ಭಿಲ್ಲರ ರಾಣಿ' ಯಾರು?", ಎಂದು ಅಕ್ಬರ್ ಯೋಚಿಸುವಂತಾಯಿತು. ಹಿಂದೆ ಕೇಳಿರದ, ಹೊಸದಾಗಿ ಸುದ್ಧಿಯಲ್ಲಿರುವ ಈ 'ಭಿಲ್ಲರ ರಾಣಿ' ಚುಪ್ಪಸ್ಸಿನ ಭಿಲ್ಲದೊರೆ ಮಾನನ ಮಗಳೆಂದು ಗುರುತಿಸಿಕೊಂಡಿದ್ದಳು. ಚಿತ್ತೂರನ್ನು ಆಕ್ರಮಿಸಿಕೊಂಡ ಮೊಘಲ್ ಸೈನಿಕರನ್ನು ಅವಳು ಕಂಡ ಕಂಡಲ್ಲಿ ತುಂಡರಿಸುತ್ತಿದ್ದಳು. ಗುಡ್ಡಗಾಡಿನ ಪ್ರದೇಶದಲ್ಲಿ ಅಡಗಿರುವುದರಿಂದ ಅವಳನ್ನು ತಡೆಯುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಮೊಘಲ್ ಸೈನ್ಯಕ್ಕೆ ಅವಳು ಸಿಂಹಸ್ವಪ್ನವಾಗಿದ್ದಳು. ಅಕ್ಬರನಿಗೂ ಅವಳು ದೊಡ್ಡ ಸಮಸ್ಯೆಯಾದಳು. "ಪ್ರತಾಪರು ಬರೀ ಹೆಸರಿಗೆ ನಮ್ಮ ಸಾಮಂತರಾದರೆ ಸಾಕು - ಅವರು ಕಪ್ಪಕಾಣಿಕೆಗಳನ್ನು ಕೊಡಬೇಕಾಗಿಲ್ಲ. ನಮ್ಮ ಸರ್ವಾಧಿಕಾರವನ್ನು ಒಪ್ಪಿಕೊಂಡು, ಅವರು ಸ್ನೇಹಿತರಾಗಿದ್ದರೆ ಸಾಕು." ಎಂದು ಸಂಧಿವಿಗ್ರಹಿ ಮೂಲಕ ಸಂದೇಶ ಕಳಿಸಿದ್ದ ಅಕ್ಬರನಿಗೆ ಪ್ರತಾಪಸಿಂಹ ಸ್ವತಂತ್ರವಾಗಿರುವುದು ಸಹನವಾಗುತ್ತಿರಲಿಲ್ಲ. ಆದರೆ ಅವನ ಆಸೆ ಎಂದಿಗೂ ಪೂರ್ಣವಾಗುವುದಿಲ್ಲ. ಅಕ್ಬರನು ಉದಯಪುರವನ್ನು ಗೆದ್ದುಕೊಂಡರೂ ರಾಣಾ ಪ್ರತಾಪಸಿಂಹ ಅವನ ಕೈಗೆ ಸಿಗುವುದಿಲ್ಲ. ಗುಡ್ಡಗಾಡು ಪ್ರದೇಶಗಳಲ್ಲಿ ಪತ್ನಿ ಲಕ್ಷ್ಮಿ ಮತ್ತು ಮಕ್ಕಳೊಂದಿಗೆ ಅಲೆದಾಡುತ್ತಾ, ಚಿತ್ತೂರನ್ನು ಶತ್ರುಗಳ ಕೈಯಿಂದ ಬಿಡುಗಡೆ ಮಾಡುವ ಕನಸಿನೊಂದಿಗೆ ಸೈನ್ಯವನ್ನು ಕಟ್ಟಿಕೊಳ್ಳುತ್ತಾನೆ. ಶತ್ರುಗಳ ಜೊತೆಗಿದ್ದ ಅವನ ತಮ್ಮ ಶಕ್ತಸಿಂಹ ಪಶ್ಚಾತ್ತಾಪ ಪಟ್ಟು, ಯುದ್ಧದಲ್ಲಿ ಮೊಘಲರ ವಶವಾಗುವುದರಲ್ಲಿದ್ದ ಅಣ್ಣನಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಾನೆ. ಕಾಲಿಗಾದ ಗಾಯ ವ್ರಣವಾಗಿ ಅಸ್ವಸ್ಥನಾದ ರಾಣಾ ಇಹಲೋಕ ತ್ಯಜಿಸುತ್ತಾನೆ. ಚಿತ್ತೂರನ್ನು ಹಿಂದೆ ಪಡೆಯುವ ಅವನ ಕನಸು ಮಾತ್ರ ನನಸಾಗಲಿಲ್ಲ. ಮಗ ಅಮರಸಿಂಹನಿಗೆ ಆ ಕರ್ತವ್ಯ ವಹಿಸಿ ಹೋಗುತ್ತಾನೆ. ಮೊಘಲರು ಸಾಗಿಸುತ್ತಿದ್ದ ಆಹಾರ ಸಾಮಾಗ್ರಿಗಳನ್ನು ದೋಚಿ ತಂದು ಗುಡ್ಡಗಾಡು ಪ್ರದೇಶಗಳಲ್ಲಿ ಅವಿತಿದ್ದ ಪ್ರತಾಪಸಿಂಹನ ಸೈನಿಕರಿಗೆ ಒದಗಿಸುತ್ತಿದ್ದ, ಗುಡ್ಡಗಳ ಹಿಂದೆ ಅಡಗಿ ಮೊಘಲ್ ಸೈನಿಕರನ್ನು ಸಾಯಿಸುವುದರ ಮೂಲಕ ರಜಪೂತ ಸೈನ್ಯಕ್ಕೆ ಸಹಾಯ ಮಾಡುತ್ತಿದ್ದ ಆ 'ಭಿಲ್ಲರ ರಾಣಿ' ಯಾರು? ಎಂದು ತಿಳಿಯಬೇಕೆ? ಈ ಪುಸ್ತಕವನ್ನು ಓದಿ. ಕಾದಂಬರಿ ಸಾರ್ವಭೌಮ ಅ. ನ. ಕೃಷ್ಣರಾಯರು ತಮ್ಮ ಸತ್ವಪೂರ್ಣ ಭಾಷೆಯಲ್ಲಿ ಬರೆದ ಈ ಪುಸ್ತಕವನ್ನು ಓದಿದಾಗಲೆ ಅದರ ಹಿರಿಮೆಯನ್ನು ಅರಿಯಬಹುದು. ಪ್ರಥಮ ಮುದ್ರಣ ೧೯೫೯. ದ್ವಿ. ಮುದ್ರಣ ೨೦೦೭
©2024 Book Brahma Private Limited.