ಲೇಖಕಿ ಭಾಗ್ಯ ಕೃಷ್ಣಮೂರ್ತಿ ಅವರ ‘ಶಾನುಭೋಗರ ಮಗಳು’ ಕಾದಂಬರಿಯಾಗಿದೆ. ಟಿಪ್ಪು ಸುಲ್ತಾನನ ಕಾಲದಲ್ಲಿ, ಬ್ರಿಟಿಷರ ಆಳ್ವಿಕೆಯಲ್ಲಿ, ಮೈಸೂರು ಪ್ರಾಂತ್ಯದಲ್ಲಿ ನಡೆದಂತೆ ಹೆಣೆದ ಕಾಲ್ಪನಿಕ ಕಥೆ ಇದು.ಭಾರತೀಯರ ಮೇಲೆ ಬ್ರಿಟಿಷರು ನಡೆಸಿದ ದೌರ್ಜನ್ಯ, ಧರ್ಮದ ಬಗ್ಗೆ ತೋರಿಸಿದ್ದ ಅನಾದರ, ಮೆರೆದ ಕ್ರೌರ್ಯ, ಅದರಲ್ಲೂ ತಮ್ಮ ಕಾರ್ಯಸಾಧನೆಗಾಗಿ ಹೆಣ್ಣು ಮಕ್ಕಳನ್ನು ಸೆರೆಹಿಡಿದು ನಡೆಸಿದ ಅತ್ಯಾಚಾರದ ವಿವರಗಳು ಈ ಕಥೆಯಲ್ಲಿದ್ದು, ವೀರಾವೇಶ ಹೊಂದುವಂತಿದೆ. ಸಾಮಾನ್ಯ ಜನರೂ ದೇಶಭಕ್ತಿಯಿಂದ ಬ್ರಿಟಿಷರ ಆಡಳಿತದ ವಿರುದ್ಧ ಬಂಡೆದ್ದು ಪ್ರತಿರೋಧ ತೋರಿದ ರೀತಿಯನ್ನು ಈ ಕಥೆಯಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಕಾದಂಬರಿಯ ಹೆಸರು ನೋಡಿದಾಗ ಸಾಂಸಾರಿಕ ಕಥೆ ಅನಿಸಿತ್ತು. ಓದಿದಾಗ ಇದು ಅಂದಿನ ರಾಜಕೀಯ, ಸಾಮಾಜಿಕ ಹಾಗೂ ವೈಯಕ್ತಿಕ ಜೀವನದ ಸಂಕೀರ್ಣ ಅಭಿವ್ಯಕ್ತಿ ಎಂಬ ಅಭಿಪ್ರಾಯ ಮೂಡಿತು.
ಕಾದಂಬರಿಗಾರ್ತಿ, ಪತ್ರಕರ್ತೆ ಭಾಗ್ಯ ಕೃಷ್ಣಮೂರ್ತಿ ಅವರು ಸಂವೇದನೆಯುಳ್ಳ ಬರಹಗಾರ್ತಿಯಾಗಿದ್ದು 1964 ಮೇ 20 ಮೈಸೂರಿನಲ್ಲಿ ಜನಿಸಿದರು. ’ನಿರ್ಮಾಲ್ಯ, ಗ್ರೀಷ್ಠರಾಗ, ಶಿಶಿರದ ಹೂವು, ಕಡಲು, ದಹನ, ಮಾಂಡವಿ, ಅಭಿನೇತ್ರಿಯ ಅಂತರಂಗ, ಇರುವುದೆಲ್ಲವ ಬಿಟ್ಟು, ಮನಸುಗಳ ಮೃದಂಗ, ಒಂದು ಮಗುವಿನ ಪ್ರಕರಣ, ಶಾನುಭೋಗರ ಮಗಳು ಇತ್ಯಾದಿ 23 ಕಾದಂಬರಿಗಳನ್ನು ರಚಿಸಿದ್ದಾರೆ. ’ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ’ಗಳು ಲಭಿಸಿವೆ. ...
READ MORE