ಎಚ್. ಗಿರಿಯಮ್ಮ ಅವರ ಕೃತಿ ಸಂಜೆ ಮಲ್ಲಿಗೆ. "ಕಾಲ್ ಗರ್ಲ್" ಎಂಬ ಹೆಸರಿನಲ್ಲಿ ನಡೆಸುವ ಆಧುನಿಕತೆಯ ಮುಖವಾಡ ಹೊತ್ತ ವೇಶ್ಯಾವೃತ್ತಿಗೆ ಎಲ್ಲ ಸ್ತ್ರೀಯರು ಕೇವಲ ಹಣಕ್ಕಾಗಿ, ಸ್ವಯಂ ಇಷ್ಟಪಟ್ಟು ಬರುತ್ತಾರೆಯೇ? ಅಥವಾ ಆ ವೃತ್ತಿ ವರ್ತುಲಕ್ಕೆ ಬಂದು ಸಿಲುಕಿದ ಮೇಲೆ ಅದು ಅವರಿಗೆ ಅನಿವಾರ್ಯ ಎನಿಸುವುದೇ? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಈ ಕಥೆಯಲ್ಲಿದೆ.
ಕಥೆಯೊಳಗಿನ ಕಥೆಗಾರ್ತಿ, ಮೇಲೆ ಉಲ್ಲೇಖಿಸಿದ ವಿಷಯವನ್ನು ಅಧ್ಯಯನ ಮಾಡಲಿಕ್ಕಾಗಿ ಆ ವಲಯದ ಹಲವು ವ್ಯಕ್ತಿಗಳನ್ನು ಒಂದು ಲಾಡ್ಜ್ ನಲ್ಲಿ ಭೇಟಿಯಾಗುತ್ತಾರೆ. ಆಗ ಒಬ್ಬಾಕೆ ತನ್ನ ದಿನಚರಿ ಬರೆಯುವ ಪುಸ್ತಕವನ್ನು ಕೊಡುತ್ತಾಳೆ. ಅದನ್ನು ಓದಿ ಅದಕ್ಕೆ ಕಥೆಯ ರೂಪ ಕೊಡಬೇಕಂಬ ತನ್ನ ಕೋರಿಕೆಯನ್ನೂ ಮುಂದಿಡುತ್ತಾಳೆ. ಆ ಡೈರಿಯನ್ನು ಓದಿದ ಲೇಖಕಿ ಬರೆದ ಕಥೆಯಲ್ಲೇನಿದೆ? ನೋಡೋಣ: ಸುಂದರಿಯಾದ ಪೂಜಾ, ದೊಡ್ಡ ಫಾರ್ಮಾಸ್ಯೂಟಿಕಲ್ ಕಂಪೆನಿಯ ಮಾಲಿಕ ಸದಾಶಿವನನ್ನು ಮದುವೆಯಾಗಿ ಅರಮನೆಯಂತಹ ಮನೆಗೆ ಬರುತ್ತಾಳೆ. ಒಂದು ಮಗು ಆಗುವವರೆಗೆ ಜೀವನದಲ್ಲಿ ವಸಂತಮಾಸವೇ ಹಬ್ಬಿತ್ತು. ಆಮೇಲೆ ಗಂಡ ತನ್ನ ಮನೆಗೇ ಅತಿಥಿಯಂತೆ ಆಗೊಮ್ಮೆ ಈಗೊಮ್ಮೆ ಬರತೊಡಗಿದ. ಅವನಿಗೆ ಪತ್ನಿ ಪೂಜಾಳ ಅಗತ್ಯವೇ ಇರಲಿಲ್ಲ. ಗಂಡನ ಮೋಹದ ಅತಿವೃಷ್ಟಿಯಲ್ಲಿ ಮಿಂದ ಪೂಜಾಳಿಗೆ ಅವನ ನಿರಾಸಕ್ತಿಯನ್ನು ಸಹಿಸಲಾಗದೆ, ಪ್ರಶ್ನಿಸಿದಾಗ ಸದಾಶಿವನಿಂದ ಸಿಕ್ಕಿದ ಉತ್ತರ ಅವಳ ಬದುಕಿನ ದಿಕ್ಕನ್ನೇ ಬದಲಾಯಿಸಿತು. "ಸಂಜೆಮಲ್ಲಿಗೆ ನನಗಿಷ್ಟ. ಕೆಲವೇ ನಿಮಿಷಗಳಷ್ಟು ಆಕರ್ಷಕವಾಗಿ ಅರಳಿನಿಂತು ಖುಷಿಕೊಡುವ ಆ ಹೂಗಳು ಬೇಗ ಬಾಡಿ ಮುದುಡಿಹೋಗಿ ಬಿಡುತ್ತವೆ....... ಒಮ್ಮೆ ಮುಡಿದ ಹೂವನ್ನು ನಾನು ಮತ್ತೆ ಮುಟ್ಟುವುದಿಲ್ಲ..... ಅಷ್ಟಕ್ಕೂ ನಿನಗೆ ಗಂಡಿನ ಸಂಗ ಬೇಕೆನ್ನಿಸಿದರೆ ನೀನು ನಿನಗಿಷ್ಟ ಬಂದವರೊಡನೆ ಹೋಗಬಹುದು." ಮುಂದೆ, ತನ್ನ ವ್ಯಾಪಾರದಲ್ಲಿ ಹಾಸುಹೊಕ್ಕಾಗಿದ್ದ ಕಾನೂನಿನ ಸಿಕ್ಕುಗಳನ್ನು ಬಿಡಿಸಿಕೊಳ್ಳಲಿಕ್ಕಾಗಿ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳನ್ನು ಮನೆಯ ಬಳಿ ಕಟ್ಟಿಸಿದ್ದ ಗೆಸ್ಟ್ ಹೌಸ್ ಗೆ ಕರೆಸಿ ಪತ್ನಿ ಪೂಜಾಳನ್ನು ಹೆದರಿಸಿ, ಹೊಡೆದು ಅವರ ಬಳಿಗೆ ಕಳಿಸುತ್ತಾನೆ. ಹೋಗುವುದಿಲ್ಲವೆಂದು ಅವಳು ಹಠಮಾಡಿದಾಗ, ಮಾತು ಮೀರಿ ವರ್ತಿಸಿದರೆ ತಮ್ಮಿಬ್ಬರ ಎಳೆಯ ಮಗುವಿನ ಹತ್ಯೆ ಮಾಡಲೂ ತಾನು ಹೇಸುವುದಿಲ್ಲವೆಂದ ಸದಾಶಿವನ ಆದೇಶವನ್ನು ಪೂಜಾಳಿಂದ ಮೀರಲಾಗಲಿಲ್ಲ. ಪೂಜಾ ಆ ಕ್ಷಣದಲ್ಲಿ ಕೇವಲ ಒಬ್ಬಳು ತಾಯಿಯಾಗಿ ಯೋಚಿಸುತ್ತಾಳೆ. ದಿನ ಹೋದಂತೆ ಅವಳಿಗೆ ಎಲ್ಲವೂ ರೂಢಿಯಾಗುತ್ತದೆ. ಆಕಸ್ಮಿಕವಾಗಿ ಆವರಿಸಿದ ಬಣ್ಣದ ಬದುಕು ಮುಂದೆ ಅನಿವಾರ್ಯವಾಗುತ್ತದೆ. ಹಲವರ ಜೀವನದಲ್ಲಿ "ಸಂಜೆಮಲ್ಲಿಗೆ" ಯಾಗಿ ಅರಳಿ ಬಾಡುತ್ತಾ ಇರುತ್ತಾಳೆ. ಜೊತೆಗೆ ಗಂಡನ ಮೇಲೆ ಸೇಡಿನ ಭಾವನೆಯೂ ಬೆಳೆಯುತ್ತಾ ಹೋಗುತ್ತದೆ. ತನ್ನನ್ನು ಅನುದಿನವೂ ಸುಡುತ್ತಿರುವ ಬೆಂಕಿಯಲ್ಲಿಯೇ ಗಂಡ ಸದಾಶಿವನೂ ಸುಟ್ಟು ಬೂದಿಯಾಗಬೇಕೆಂದು ಬಯಸುತ್ತಾಳೆ. ಮುಂದೇನು? ಈ ಸತ್ಯ ಕಥೆಗೆ ಮುಕ್ತಾಯ ಹೇಗಿರಬೇಕು ಎಂದು ರಾತ್ರಿಯೆಲ್ಲಾ ಕುಳಿತು ಪೂಜಾಳ ಡೈರಿ ಓದಿದ ಕಥೆಯೊಳಗಿನ ಲೇಖಕಿ ಯೋಚಿಸುತ್ತಾ ನಿದ್ರಾವಶರಾಗುತ್ತಾರೆ. ಬೆಳಿಗ್ಗೆ ಎದ್ದಾಗ, ಬಂದ ಪೂಜಾಳ ಫೋನ್ ಕಾಲ್ ಕಥೆಗೆ ಸೂಕ್ತ ಮುಕ್ತಾಯ ಸೂಚಿಸುತ್ತದೆ. ಅದೇನು? ತಿಳಿಯಲು ಪುಸ್ತಕ ಓದಳೇಬೇಕು.
ಡಾ. ಎಚ್. ಗಿರಿಜಮ್ಮ- ಹುಟ್ಟಿದ್ದು ದಾವಣಗೆರೆ. ಪಿಯುಸಿವರೆಗೆ ಓದಿದ್ದು ಅಲ್ಲಿಯೇ. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ. ಯಶಸ್ವಿ ವೈದ್ಯಳಾಗಬೇಕು ಎನ್ನುವ ಅವರ ತಾಯಿಯ ಆಸೆ ಅವರನ್ನು ವೈದ್ಯಕೀಯ ಅಧ್ಯಯನದಲ್ಲಿ ತೊಡಗಿಕೊಳ್ಳುವಂತೆ ಮಾಡಿತು. ಚಿಕ್ಕ ವಯಸ್ಸಿನಲ್ಲಿ ಕಾದಂಬರಿಗಾರ್ತಿ ತ್ರಿವೇಣಿ ಬರಹದಿಂದ ಪ್ರಭಾವಿತರಾದವರು ಗಿರಿಜಮ್ಮ. ಅವರ ಮೊದಲ ಕತೆ ಹೂಬಳ್ಳಿಗೆ ಈ ಆಸರೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ಚಂದಮಾಮ, ತಮಸೋಮ ಜ್ಯೋತಿರ್ಗಮಯ, ಅಂಬರತಾರೆ, ಸೇರಿದಂತೆ ಒಟ್ಟು 27 ಕಾದಂಬರಿಗಳು ಪ್ರಕಟವಾಗಿವೆ. ಅರ್ಧಾಂಗಿ, ಸಂಜೆಮಲ್ಲಿಗೆ, ಅನಾವರಣ, ಅನೇಕ ನೀಳ್ಗತೆಗಳು ಮಯೂರದಲ್ಲಿ ಪ್ರಕಟವಾಗಿವೆ. ಒಟ್ಟು 50 ಕತೆಗಳನ್ನು ಬರೆದಿದ್ದಾರೆ. ಐದು ಕಥಾಸಂಗ್ರಹಗಳು ...
READ MORE