ಡಾ. ಎಚ್. ಗಿರಿಜಮ್ಮ- ಹುಟ್ಟಿದ್ದು ದಾವಣಗೆರೆ. ಪಿಯುಸಿವರೆಗೆ ಓದಿದ್ದು ಅಲ್ಲಿಯೇ. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ. ಯಶಸ್ವಿ ವೈದ್ಯಳಾಗಬೇಕು ಎನ್ನುವ ಅವರ ತಾಯಿಯ ಆಸೆ ಅವರನ್ನು ವೈದ್ಯಕೀಯ ಅಧ್ಯಯನದಲ್ಲಿ ತೊಡಗಿಕೊಳ್ಳುವಂತೆ ಮಾಡಿತು. ಚಿಕ್ಕ ವಯಸ್ಸಿನಲ್ಲಿ ಕಾದಂಬರಿಗಾರ್ತಿ ತ್ರಿವೇಣಿ ಬರಹದಿಂದ ಪ್ರಭಾವಿತರಾದವರು ಗಿರಿಜಮ್ಮ. ಅವರ ಮೊದಲ ಕತೆ ಹೂಬಳ್ಳಿಗೆ ಈ ಆಸರೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ಚಂದಮಾಮ, ತಮಸೋಮ ಜ್ಯೋತಿರ್ಗಮಯ, ಅಂಬರತಾರೆ, ಸೇರಿದಂತೆ ಒಟ್ಟು 27 ಕಾದಂಬರಿಗಳು ಪ್ರಕಟವಾಗಿವೆ. ಅರ್ಧಾಂಗಿ, ಸಂಜೆಮಲ್ಲಿಗೆ, ಅನಾವರಣ, ಅನೇಕ ನೀಳ್ಗತೆಗಳು ಮಯೂರದಲ್ಲಿ ಪ್ರಕಟವಾಗಿವೆ. ಒಟ್ಟು 50 ಕತೆಗಳನ್ನು ಬರೆದಿದ್ದಾರೆ. ಐದು ಕಥಾಸಂಗ್ರಹಗಳು ಪ್ರಕಟವಾಗಿವೆ. ಪ್ರಸ್ತುತ ದಾವಣಗೆರೆಯಲ್ಲಿ ನೆಲೆಸಿದ್ದಾರೆ.