‘ಲಾವಣ್ಯವತಿ’ ತ.ರಾ.ಸು ಅವರ ಕಾದಂಬರಿ. ಕತೆ ಹೇಳುವುದರಲ್ಲಿ ತ.ರಾ.ಸು ಭಾಷೆಯ ಹರವು ವಿಶಾಲ. ಚಿತ್ರಮಯ ವರ್ಣನೆ, ಅಂತಃಕರಣ ಉಕ್ಕಿಬರುವ ಸಂಭಾಷಣೆ, ರೋಮಾಂಚಕಾರಕ ಕಾರ್ಯಕಾರಣ ಪುರಸ್ಸರ ಘಟನೆಗಳ ನಿರೂಪಣೆ ಸಿಡಿಲಿನಂತಹ ಭಾವಗಳು, ಪಾರಿಜಾತ ಸ್ಪರ್ಶದಂತಹ ಮಾರ್ದವತೆ, ವೀರ್ಯವತ್ತಾದ ಭಾಷೆ, ಪರಿಣಾಮಕಾರಿ ದೃಶ್ಯಗಳ ನಿರೂಪಣೆ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ ಶೈಲಿ. ದೃಶ್ಯ ವರ್ಣನೆಗಳನ್ನು ಓದುತ್ತಿದ್ದರೆ ನಾಟಕಶಾಲೆಯಲ್ಲಿ ಕುಳಿತು ದೃಶ್ಯ ವೀಕ್ಷಿಸುತ್ತಿದ್ದೇವೆಯೋ ಎನಿಸುತ್ತದೆ. ಒಬ್ಬರ ಧ್ವನಿಯ ಶಕ್ತಿಯು ಮೈ ಜುಮ್ಮೆನಿಸಿದರೆ, ಇನ್ನೊಬ್ಬರ ಮನದ ಮೆಲು ನಿಟ್ಟುಸಿರು ಕೇಳಿಸುತ್ತದೆ. ಮಗದೊಬ್ಬರ ಕಣ್ಣಂಚಿನಲ್ಲಿ ಅಂತಃಕರಣದ ಆಳದಿಂದ ಹೊರ ತುಳುಕುವ ಕಂಬನಿ ಕಾಣುತ್ತದೆ. ಅವರ ಲಾವಣ್ಯವತಿ ಕಾದಂಬರಿ ಕೂಡ ಓದುಗರ ಮನವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಬಲ್ಲ ಅಂತಃಕರಣವನ್ನು ತಾಕಬಲ್ಲ ಕತೆಯನ್ನು ಒಳಗೊಂಡಿದೆ. ಹೆಣ್ಣಿನ ಸೌಂದರ್ಯ ಪ್ರಜ್ಞೆಯನ್ನೇ ಕಥಾ ವಸ್ತುವನ್ನಾಗಿಸಿಕೊಂಡು ರಚಿತವಾಗಿರುವ ಈ ಕೃತಿ ಓದುಗರಿಗೆ ವಿಶೇಷವಾದ ಒಳನೋಟಗಳನ್ನು ಕಟ್ಟಿ ಕೊಡುತ್ತದೆ.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE