ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ’ದುರ್ಗಾಸ್ತಮಾನ’. ಕನ್ನಡ ಕಾದಂಬರಿ ಲೋಕದ ಮೇರು ಪ್ರತಿಭೆ ತರಾಸು ಅವರು ಚಿತ್ರದುರ್ಗದ ಮದಕರಿನಾಯಕನ ಕತೆಯನ್ನು ಕಾದಂಬರಿ ರೂಪದಲ್ಲಿ ಕನ್ನಡಿಗರಿಗೆ ತೆರೆದಿಟ್ಟ ಪುಸ್ತಕವಿದು.
ಹೈದರಾಲಿಯ ಬಿರುಗಾಳಿಯ ದಾಳಿಯನ್ನು ಎದುರಿಸಲಾಗದೇ, ತಮ್ಮ ಸರ್ವಸ್ವವನ್ನೂ ಅರ್ಪಿಸಿ ಪ್ರಾಣರಕ್ಷಣೆ ಮಾಡಿಕೊಳ್ಳುತ್ತಿದ್ದ ಹಲವಾರು ಪಾಳೆಯಗಾರರಿದ್ದರು. ಆದರೆ, ಅಪ್ರತಿಮ ಶೌರ್ಯ-ಸಾಹಸ, ಜನತೆಯ ಅಭಿಮಾನದ ರಕ್ಷಾಬಲದಿಂದ ಸುಮಾರು 2 ವರ್ಷ ಕಾಲ ಹೈದರಾಲಿಗೆ ಸವಾಲಾಗಿ ನಿಂತು ಸೆಣಸಿದ ಏಕೈಕ ಪಾಳೆಯಗಾರ-ಚಿತ್ರದುರ್ಗದ ಮದಕರಿನಾಯಕ. ಶತಮಾನಗಳ ಹಿಂದೆ ನಡೆದುಹೋಗಿರಬಹುದಾದ ಇತಿಹಾಸವನ್ನು, ತಮ್ಮ ಪ್ರತಿಭೆಯ ಪರಶುಮಣಿ ಸ್ಪರ್ಶದಿಂದ ಸುವರ್ಣಾಧ್ಯಾಯವನ್ನಾಗಿಸಿ, ಮದಕರಿ ನಾಯಕರ ವ್ಯಕ್ತಿತ್ವವನ್ನು ಕಣ್ಣಿಗೆ ಕಟ್ಟುವಂತೆ ಪುನರ್ ಸೃಷ್ಟಿಸಿದ್ದಾರೆ ತ.ರಾ.ಸು.
ಸುಳಿಯಲ್ಲಿ ಸಿಕ್ಕವನಂತೆ ದುರಂತದೆಡೆಗೆ ಸಾಗುವ ಮದಕರಿನಾಯಕನ ಬದುಕಿನ ವಿವಿಧ ಮುಖಗಳು ಅನಾವರಣಗೊಳಿಸಿದ್ದಾರೆ. ಪುಟಪುಟಗಳಲ್ಲೂ ತಮ್ಮ ಮಣ್ಣಿನ ಮೇಲಣ ಅಭಿಮಾನವನ್ನು ಅಭಿವ್ಯಕ್ತಿಸಿದಂತೆ ಕಾಣುವ, ನೆತ್ತರು ಕುದಿಸುವ ತಮ್ಮ ಎಂದಿನ ಸಿಡಿಲ ಭಾಷೆಯಲ್ಲಿ, ಕಣ್ಣುಕೋರೈಸುವ ಮಿಂಚಿನ ಶೈಲಿಯಲ್ಲಿ, ಆಳ ಅನುಭವ-ಚಿಂತನಗಳ ರಸಪಾಕದಲ್ಲಿ ಈ ಕೃತಿಯು ಮೇರು ಸಾಲಿನಲ್ಲಿ ನಿಲ್ಲುತ್ತದೆ.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE