ಬಣ್ಣದ ನೆರಳುಗಳು

Author : ಮಲ್ಲಿಕಾರ್ಜುನ (ಢಂಗಿ)

Pages 132

₹ 120.00




Year of Publication: 2021
Published by: ಬೆನಕ ಬುಕ್ಸ್ ಬ್ಯಾಂಕ್
Address: ಯಳಗಲ್ಲು, ಕೋಡೂರು - ಅಂಚೆ, 577 418, ಹೊಸನಗರ-ತಾಲ್ಲೂಕು, ಶಿವಮೊಗ್ಗ -ಜಿಲ್ಲೆ
Phone: 7338437666

Synopsys

ಬಣ್ಣದ ನೆರಳುಗಳು; ಲೇಖಕ ಮಲ್ಲಿಕಾರ್ಜುನ (ಢಂಗಿ) ಅವರ ಕಾದಂಬರಿ. ’ಹೆಸರಿಲ್ಲದ ಹೂವುಗಳು’ ಎನ್ನುವ ಕವನ ಸಂಕಲನ ಹೊರ ತಂದಿರುವ ಮಲ್ಲಿಕಾರ್ಜುನ ಢಂಗಿ ಅವರ ಮೊದಲ ಕಾದಂಬರಿ ಇದು. ಬೆಳಗಾವಿಗೆ ಹತ್ತಿರದ ಬಾನೂರು ಎನ್ನುವ ಊರಿನಲ್ಲಿ ನಡೆಯುವ ಕಥಾಹಂದರ ವನ್ನೊಳಗೊಂಡಿದೆ. ಡಾ. ನಾ. ಡಿಸೋಜಾ ಅವರು ಈ ಕಾದಂಬರಿಗೆ ಮುನ್ನುಡಿ ಬರೆದಿದ್ದಾರೆ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ. 

About the Author

ಮಲ್ಲಿಕಾರ್ಜುನ (ಢಂಗಿ)
(05 June 1973)

ಮಲ್ಲಿಕಾರ್ಜುನ ಢಂಗಿ ಅವರು ಬಾಗಲಕೋಟೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿಯವರು. ವೃತ್ತಿಯಲ್ಲಿ ಶಿಕ್ಷಕರು. ಉತ್ತರ ಕರ್ನಾಟಕ ಜಾನಪದ ಶೈಲಿಯ ಧ್ವನಿಸುರುಳಿಗಳಿಗೆ  ಸಾಹಿತ್ಯ ಬರೆಯುವ ಮೂಲಕ ಪ್ರಸಿದ್ಧರು. ಕೃತಿಗಳು: ಹೆಸರಿಲ್ಲದ ಹೂವುಗಳು (ಕವನ ಸಂಕಲನ) ಬಣ್ಣದ ನೆರಳುಗಳು. (ಕಾದಂಬರಿ), ನಾನು ಮತ್ತು ನನ್ನ ಹೆಣ (ಕಥಾಸಂಕಲನ.)  ...

READ MORE

Excerpt / E-Books

’ಬಣ್ಣದ ನೆರಳುಗಳು’ ಕಾದಂಬರಿಯ 2ನೇ ಅಧ್ಯಾಯದ ಆಯ್ದ ಭಾಗ - ಸುಂದರ ವಸುಂಧರೆ. ಉಲ್ಲಸಿತ ಬೆಳಗು. ಚೈತನ್ಯಮಯಿ ಪ್ರಕೃತಿ. ತಂಪು ತಂಪು ತನ್ಮಯತೆ! ನವ ಬೆಳಗಿನಿಂದ ಹೊರಹೊಮ್ಮಿದ ನವ ಉನ್ಮೇಶ. ಯೌವ್ವನ ತುಂಬಿದ ಕೃಷ್ಣೆಯ ಸ್ಫಟಿಕದ ಮೈಯಲ್ಲೆಲ್ಲ ಮಂಜಿನ ಪರದೆ. ಹರೆಯ ತೀರದ ಆವರಣ. ಹಸಿರಲ್ಲಿ ಸುದೀರ್ಘ ಉಸಿರಾಟ. ಬೀಸುವ ಹುಲ್ಲು, ಕುಣಿಯುವ ಮರ, ರವಿಯ ರಾಗ, ಸೃಷ್ಟಿಯ ಧ್ವನಿಯಾಗುವ ಮೊದಲೇ ಮಂಜಿನ ಬೆಳಗಿನಡಿ ಅಲೆ ಅಲೆಗಳ ಸುಮಧುರ ಗೀತೆ. ತಂಗಾಳಿಯ ಮೃದು ಸ್ಪರ್ಶ. ಹಕ್ಕಿಗಳ ಕಣ್ಣುಗಳಲ್ಲಿ ಹೊಸ ಬೆಳಕಿನ ಅನುರಾಗ. ಕೂಗು, ಇಂಪು, ತಂಪು, ಇಂಚರ, ಸಂಚರ... ಎಳೆಗರುವಿನ ಚೆಲ್ಲಾಟ. ಪಟಪಟನೆ ಒಡೆಯುವ ಮೊಗ್ಗುಗಳ ಅರಳಾಟ. ಸೃಷ್ಟಿ ಸದಾ ನವವಧು...! ಅಕ್ಷಿಗಳ ಸಾರ್ಥಕತೆಗೊಂದು ವಿಸ್ಮಯದ ಸುಸಮಯ! ಚುಮು ಚುಮು ಚಳಿಯ ಆಹ್ಲಾದಕರ ಮುಂಜಾವಿನಲ್ಲಿ ನದಿಯೆಡೆಗೆ ವಾಯು ವಿಹಾರಕ್ಕೆ ಬಂದು ಎಷ್ಟೋ ವರ್ಷಗಳು ಉರುಳಿವೆ. ನಮ್ಮ ಬಳಗದ ವಿಹಾರ ಏನಿದ್ದರೂ ಸಂಜೆಯಲ್ಲಿ ಮಾತ್ರ ಅಧಿಕವಾಗಿತ್ತಾದರೂ ಉದಯದಷ್ಟೇ ಅಸ್ತಮಾನದಲ್ಲೂ ಸಂಭ್ರಮಿಸಬೇಕೆಂದು ಹೊಳೆದುದು ಈಗಷ್ಟೇ!

ನಮ್ಮೆಲ್ಲರಲ್ಲಿ ನಿಸರ್ಗದೆಡೆಗೊಂದು ಅಗಾಧ ಪ್ರೀತಿ, ಏಕತಾನತೆ, ಸಮರ್ಪಣೆಯ ಭಾವವಿತ್ತು. ಯಾರೂ ಕೊಡಲಾಗದ ಅನುಪಮ ಪ್ರೀತಿ ವಾತ್ಸಲ್ಯಗಳನ್ನು ಪ್ರಕೃತಿಯಿಂದ ಪಡೆಯುವ ಮನೋಭಾವ ನಮ್ಮಲ್ಲಿ ಕೃಷ್ಣಾ ತೀರದಿಂದ ತುಂಬಿತ್ತು. ನಮ್ಮ ತಾಯಿಗೆ ನಾವಷ್ಟೇ ಮಕ್ಕಳು. ಆದರೆ ಸೃಷ್ಟಿಗೆ ಜಗವೇ ತನ್ನ ಸಂತತಿ. ನಮ್ಮ ಜನರಲ್ಲಿ ಗಂಡು ಹೆಣ್ಣೆಂಬ ಭೇದ ಪ್ರತಿ ಸಂಬಂಧಗಳನ್ನು ಸಂಶಯಾಸ್ಪದವಾಗಿಯೇ ಕಾಣುವ ಸಂಕುಚಿತ ದೃಷ್ಟಿಕೋನವನ್ನು ತುಂಬಿದೆ. ಪರಿಸರದ ಪ್ರಭಾವವೋ ಸಾಮಾಜಿಕ ಹೇರಿಕೆಯೋ ಈ ಸಮಸ್ಯೆ ತಾಯಿ ಮಗನನ್ನೂ ಬಿಟ್ಟಿಲ್ಲ! ಮಗುವಿನ ಸಹಜ ವಾತ್ಸಲ್ಯದಾನಂದ ನಂತರದ ಬೆಳವಣಿಗೆಯ ಹೃದಯದಲ್ಲಾಗಲಿ, ಮೆದುಳಿನಲ್ಲಾಗಲಿ ನೆನಪಿನ ಕಾಣಿಕೆಯಾಗಿಯೂ ಉಳಿದಿಲ್ಲ. ಅದನ್ನು ಆಕ್ಷೇಪಿಸಿ ಅನುಭವಿಸುವ ಸಾಧ್ಯತೆಗಳೂ ಇಲ್ಲ. ಈ ಭಾವನೆ ಪರಮ ನೀಚತನ ಎಂಬ ಮನೋವೈಫಲ್ಯ ಕೆಲವೆಡೆ ಆಳಿದರೆ ಇನ್ನೂ ಕೆಲವರಲ್ಲಿ ಇದು ಬಹಿರಂಗದ ಅತಿಶಯದ ಕ್ರಿಯೆಯಾಗಿ ವಿಜೃಂಭಿಸುತ್ತಿದೆ. ಈ ಎಲ್ಲ ಅಕ್ಷರ ರೂಪಗಳನ್ನು ಮೀರಿದ್ದು ಪ್ರಕೃತಿಯ ಪ್ರೀತಿ. ಆನಂದ ಲೋಕದ ಅನುಕಂಪದಲ್ಲಿ ಬ್ಯಾರೇಜ್ ಮೇಲೆ ನಡೆಯುತ್ತಾ ಹೋದೆ. ಗಂಧ ಹೊತ್ತ ಗಾಳಿಗೆ ಮೈಯೊಡ್ಡಿ ಸುತ್ತಲೂ ಒಮ್ಮೆ ಕಣ್ಣಾಡಿಸಿ ಕೆಳಗೆ ಕುಳಿತೆ. ಮುಂದಿನ ಕೃಷ್ಣೆಯ ಮಡಿಲಿನಲ್ಲಿ ಈಜು ಬಿದ್ದ ಮೀಂಗುಲಿಗ. ಹೊಟ್ಟೆಗೆ ಬಲಿ ಕೊಡಲು ಬಲೆ ಬೀಸುತ್ತಿದ್ದ. ನಮ್ಮೂರ ಕಡೆಯ ದಡದಲ್ಲಿ ಅಷ್ಟೊಂದು ಸ್ವಾಭಾವಿಕ ಸಸ್ಯರಾಶಿ ಇಲ್ಲ. ದಡ ಮತ್ತು ನದಿಯ ಪಾತ್ರಗಳು ಕಲ್ಲು ಪದರುಗಳಿಂದ ಆವೃತವಾಗಿವೆ. ನದಿಯುದ್ದಕ್ಕೂ ಮೈಚೆಲ್ಲಿ ಮಲಗಿದ ಗದ್ದೆಗಳು ತುಂಬಿವೆ. ಆಚೆಯ ಕಾನೂರ ಗಡ್ಡೆಯ ತೀರದಲ್ಲಿ ವಿವಿಧ ಹಸಿರು ಕಾಶಿ. ನದಿಯಿಂದ ಸ್ವಲ್ಪ ಎತ್ತರದಲ್ಲಿರುವ ಆ ತೀರ ನಮ್ಮ ಬದುಕಿನ ಮರೆಯಲಾಗದ ಘಟನೆಗಳಿಗೆ ಪುರಾವೆಯ ಕಟ್ಟೆಯಾಗಿ ನಿಂತಿದೆ! ಅಲ್ಲಿ ನಾವಾಡಿದ ಮಾತುಗಳಿನ್ನೂ ಜೀವಂತವಾಗಿವೆ! ಓದಿದ ಹಲವಾರು ಪುಸ್ತಕಗಳ, ಪತ್ರಿಕೆಗಳ ಪುಟ ಪುಟದ ಅಕ್ಷರಗಳು ಇನ್ನೂ ಉಸಿರಾಡುತ್ತಿವೆ. ಹಸಿವಾದಾಗ ಕಬ್ಬು, ಪೇರಲ, ಮಾವು ಕೊಟ್ಟ ಮರಗಳು, ಮಕ್ಕಳಾಗಿ ಬೇಡಿದಾಗ ಮರಕೋತಿ ಆಟವಾಡಲು ಇಂಬು ಕೊಟ್ಟ ರೆಂಬೆಗಳು ಗೆಳೆಯರಾಗಿ ಆಡಲು ಕಾದಿವೆ. ದುಡುಂ...! ಬ್ಯಾರೇಜ್ ಮೇಲಿಂದ ಯಾರೋ ನದಿಯ ಹಿನ್ನೀರಿಗೆ ಜಿಗಿದು ಈಜಾಡತೊಡಗಿದರು. ಇಲ್ಲಿ ಇದು ಸಾಮಾನ್ಯ. ಬಹಳ ಜನ ಬೆಳಗಿನ ಸ್ನಾನಕ್ಕೆ ನದಿಗೆ ಬರುತ್ತಾರೆ. ಬ್ಯಾರೇಜ್ ನಿರ್ಮಿಸಿದ ಮೇಲಂತೂ ವಯಸ್ಸಿನ ಹುಡುಗರಿಗೆ ಮಜವೋ ಮಜ. ನದಿ ದಂಡೆಗೆ ಬಂದಂತೆ ಬ್ಯಾರೇಜ್‌ನ ಎತ್ತರ ಕಿರಿದಾಗಿದೆ. ಇಲ್ಲಿ ಜಿಗಿದು ಮತ್ತೆ ಮೇಲೆ ಹತ್ತಲು ಮೆಟ್ಟಿಲು ಒಂದುಂಟು. ಹೀಗಾಗಿ ಇಲ್ಲೇ ಜಿಗಿ ಜಿಗಿದು ಆಟವಾಡುವುದರ ಜೊತೆಗೆ ಸ್ನಾನ ಮುಗಿಸಿ ಬಿಡುತ್ತಾರೆ. ಮೊದಲು ದಡದಲ್ಲಿ ಹೆಣ್ಣುಮಕ್ಕಳು, ಹುಡುಗಿಯರು ಬಟ್ಟೆ ತೊಳೆಯುವುದು ಸಾಮಾನ್ಯ ದೃಶ್ಯವಾಗಿತ್ತು. ಆಗ ಹೊತ್ತಲ್ಲದ ಹೊತ್ತಿನಲ್ಲೂ ಹುಡುಗರು ಸ್ನಾನಕ್ಕೆ ಬರುತ್ತಿದ್ದರು. ಕೇಕೆ ಹಾಕಿ ಹುಡುಗಿಯರ ಗಮನ ತಮ್ಮೆಡೆಗೆ ಸೆಳೆದು ಪರಾಕ್ರಮ ತೋರಿಸುವಂತೆ ನದಿಗೆ ಹಾರಿ ದೂರ ದೂರ ಈಜುತ್ತಿದ್ದರು. ಒಮ್ಮೊಮ್ಮೆ ಹೀಗೆ ಮಾಡಲು ಹೋಗಿ ಹೊಟ್ಟೆ ಬಲವಾಗಿ ನೀರಿಗೆ ಅಪ್ಪಳಿಸಿ ನೋವು ತಡೆಯಲಾಗದೇ ತೋರ್ಪಡಿಸಲೂ ಆಗದೇ ವಿಲವಿಲ ಒದ್ದಾಡಿದ ಪ್ರಸಂಗಗಳಿಗೇನು ಕೊರತೆ ಇಲ್ಲ. ಸಂಜೆ ಹೊತ್ತು ಮಾತ್ರ ಶಾಂತವಾಗಿರುತ್ತಿತ್ತು. ಹೈಸ್ಕೂಲ್ ಮೈದಾನದಲ್ಲಿ ಆಟ ಮುಗಿಸಿ ನದಿಯ ಓಟಕ್ಕೆ ಸೇರಿಕೊಂಡಾಗ ಕನಸುಗಳು ಅರಳುತ್ತಿದ್ದವು. ಸಂದೀಪನಿಗೆ ಸಿನಿಮಾ ಹುಚ್ಚು. ವಾರಕ್ಕೆರಡಾದರೂ ಸಿನಿಮಾ ನೋಡುತ್ತಿದ್ದ. ಜಮಖಂಡಿಯಲ್ಲಿ ಹೊಸ ಸಿನಿಮಾಗಳು ಬರದಿದ್ದರೆ ಬನಹಟ್ಟಿ, ಗೋಕಾಕ, ಹುಬ್ಬಳ್ಳಿಗಾದರೂ ಹೋಗಿ ನೋಡಲೇಬೇಕು. ಬಹಳಷ್ಟು ಸಲ ಅವನ ಜೊತೆಗೆ ನಾನಿರುತ್ತಿದ್ದೆ. ಅವನು ಒಬ್ಬನೇ ನೋಡಿ ಬಂದಾಗ ನಾವೆಲ್ಲ ಸಿನಿಮಾ ಕಥೆ ಕೇಳಲು ಉತ್ಸುಕರಾಗಿರುತ್ತಿದ್ದೆವು. ಸಂದೀಪ ತಾನು ನೋಡಿದ ಸಿನಿಮಾದ ನಿರ್ಮಾಣ, ನಿರ್ದೇಶನ, ಸಹನಿರ್ದೇಶನ, ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ, ಸಂಕಲನ, ಸಾಹಸ, ಪ್ರಚಾರ, ಕಲೆ, ಹೊರಾಂಗಣ ಘಟಕ, ಹಿನ್ನೆಲೆ ಧ್ವನಿ, ತಾರಾಗಣ... ಒಂದನ್ನೂ ಬಿಡದೇ ವಿಸ್ತಾರವಾಗಿ ಹೇಳಿ ನಂತರ ಕಥೆ ಆರಂಭಿಸುತ್ತಿದ್ದ. ಒಂದು ವೇಳೆ ಆ ಸಿನಿಮಾದ ನಿರ್ದೇಶಕ, ಹೀರೋ, ಸಂಗೀತ ನಿರ್ದೇಶಕ ಇವರ ಪಾಲಿನ ಯಶಸ್ವಿ ಚಿತ್ರವಾಗಿದ್ದರಂತೂ ಮುಗಿದೇ ಹೋಯಿತು. ಅಂಥವರ ಹಿಂದಿನ ದಾಖಲೆಗಳು, ಈಗ ಈ ಸಿನಿಮಾದಲ್ಲಿ ಅವರು ನಿರ್ವಹಿಸಿದ ಪಾತ್ರಗಳ ಬಗ್ಗೆ ಮಾತಾಡುವುದರಲ್ಲೇ ಎರಡು ದಿನಗಳ ಸಮಯವೆಲ್ಲ ಕಳೆಯುತ್ತಿತ್ತು! ಪಾನ್‌ಶಾಪ್ ಮುತ್ತ ಸಿನಿಮಾ ನೋಡಿ ಬಂದರೆ ನಮ್ಮನ್ನು ದೇವರು ಮಾತ್ರ ಕಾಪಾಡಬಲ್ಲವನಾಗಿದ್ದ! ಒಮ್ಮೊಮ್ಮೆ ಅವನಿಗೂ ಆಗುತ್ತಿರಲಿಲ್ಲ! ಏಕೆಂದರೆ ಅವನ ಕಥೆ ನಮ್ಮೂರನ್ನು ಬಿಡುವಾಗಿನಿಂದಲೇ ಶುರುವಾಗುತ್ತಿತ್ತು! ಅವನು ಹತ್ತಿದ ಬಸ್ಸು, ಅದರಲ್ಲಿಯ ರಶ್ಶು, ಟಿಕೇಟು ತೆಗೆದುಕೊಳ್ಳದೇ ಪ್ರಯಾಣಿಸಿದ ಜಾಣ್ಮೆ, ಇಲ್ಲಿಂದ ಎಲ್ಲ ಮುಗಿದು ಸಿನಿಮಾಗಿಂತ ಮುಂಚೆ ಟಿಕೇಟು ತೆಗೆದುಕೊಂಡದ್ದು, ಅಲ್ಲಿನ ಗದ್ದಲ, ಅಂಗಿ ಹರಿದುಕೊಂಡಿದ್ದು, ಯಾರದೋ ಉಗುರು ಮೈ, ಕೈ, ಮುಖಗಳಿಗೆ ಪರಚಿಕೊಂಡಿದ್ದು (ಯಾವುದೇ ಭಾಗಕ್ಕೆ ಪರಚಿದರೂ ತೆರೆದು ತೋರಿಸುತ್ತಿದ್ದ!) ಜಗಳಾಡಿ ಸೀಟು ಹಿಡಿದು ಕುಳಿತದ್ದು... ಇವೆಲ್ಲ ಸೇರಿ ಒಂದು ಸುದೀರ್ಘ ಎಪಿಸೋಡ್ ಆಗುತ್ತಿತ್ತು! ಇನ್ಮುಂದೆ ಬಿಳಿ ಪರದೆ! ಅಲ್ಲಿ ಬರುವ ಮೊದಲ ಜಾಹೀರಾತು! ಧೂಮ್ರಪಾನ, ಮದ್ಯಪಾನ ನಿಷೇಧ. ನಂತರದ ವಾಶಿಂಗ್ ಪೌಡರ್ ನಿರ್ಮಾ...! ಎಲ್ಲ ಮುಗಿದು ನಿರ್ಮಾಣ ಸಂಸ್ಥೆಯ ಲೋಗೋ ಪರದೆ ಮೇಲೆ ಬಂದಾಗ ಬರುವ ಹಿನ್ನೆಲೆ ಸಂಗೀತವನ್ನು ತನ್ನ ದನಿಯಿಂದ ಹೊರಡಿಸುತ್ತಿದ್ದ. ಹೆಸರುಗಳ ಹಿಂದಿನ ಸಂಗೀತವೆಲ್ಲ ಅವನ ಜೊಲ್ಲು ತುಂಬಿದ ಬಾಯಿಯಲ್ಲಿ ಈಜಾಡಿ ಹೊರ ಬಂದು ಸಿನಿಮಾ ಪ್ರಾರಂಭವಾಗಬೇಕಾದರೆ ಪರ ಪರ ಅಂಗಿ ಹರಿದುಕೊಳ್ಳಬೇಕೆನಿಸುತ್ತಿತ್ತು. ಏಕೆಂದರೆ ಅಷ್ಟರೊಳಗಾಗಿ ನಾವು ಜಮಖಂಡಿಗೆ ಹೋಗಿ ಸಿನಿಮಾ ನೋಡಿ ಮರಳಿ ಊರಿಗೆ ಬರಬಹುದಾಗಿತ್ತು! ಹೀಗಾಗಿ ತಲೆ ತಿರುಗಿದ ಅಪ್ಪಣ್ಣ ಮತ್ತು ಮಾದೇವ ಅಲ್ಲಿ ಬಿದ್ದಿದ್ದ ದಪ್ಪ ಕಲ್ಲುಗಳನ್ನು ತೆಗೆದುಕೊಂಡು ಮುತ್ತ್ಯಾ ಮಗನ... ಸಾಕಿನ್ನ ಬಿಡತಿಯೋ! ತಲಿ ಒಡಿಲೋ? ಎಂದು ಹಲ್ಲು ಕಡಿಯುತ್ತಾ ಎದ್ದು ನಿಲ್ಲುತ್ತಿದ್ದರು. ಅಷ್ಟಾದರೂ ಮುತ್ತ ಬಿಡುತ್ತಿರಲಿಲ್ಲ! ಅವನದು ಒಂದೇ ಪ್ರಶ್ನೆ! ನೀವು ಹೇಳಿದ್ದು ನಾ ಕೇಳಬೇಕು! ನಾ ಹೇಳಿದ್ದು ನೀವ್ ಕೇಳಾಂಗಿಲ್ಲಂದ್ರ ಬಿಡವರ‌್ಯಾರ? ಹಿಂದಿಗಡೆ ಅಂಗಡಿ ಕಡೆ ಬರ್ಲ್ಯಾ ಗೊತ್ತಾಗತೈತಿ! ಅಂತಿದ್ದ. ನಮ್ಮ ಉದ್ರಿಗೆ ದಿಕ್ಕಿದ್ದವ ಅವನೊಬ್ಬನೆ! ಅದಕ್ಕೆ ಸುಮ್ಮನೆ ಕೇಳುತ್ತಿದ್ದೆವು. ವಿಲನ್ ಎಂಟ್ರಿ ಆದಾಗಿನ ಹಿನ್ನೆಲೆ ಸಂಗೀತವಂತೂ ಭಯಂಕರವಾಗಿರುತ್ತಿತ್ತು. ಕಣ್ಣುಗಳನ್ನಗಲಿಸಿ ಬಾಯಿ ಅಗಲ ಮಾಡಿ, ಮೂಗು ಹಿಗ್ಗಿಸಿ ಬೆರಳುಗಳನ್ನು ಬೇರ್ಪಡಿಸಿದ ಎರಡೂ ಕೈಗಳನ್ನು ಮೇಲಕ್ಕೆತ್ತಿ ಸಮೀಪ ತರುತ್ತಾ, ಡಂವ್...ಡಂವ್...ಡಂವ್...ಹಾಂ...ವ್...! ಅಂತ ಶಬ್ದ ಮಾಡಿದನೆಂದರೆ ತೀರದಲ್ಲಿ ನೀರು ಕುಡಿಯುತ್ತಿದ್ದ ಎಮ್ಮೆಗಳು ಗಾಬರಿಯಾಗುತ್ತಿದ್ದವು! ನಾನು, ಸಂದೀಪ ಸೇರಿ ಒಂದು ಸಿನಿಮಾ ಕಥೆ ಬರೆದಿದ್ದೆವು. ನಿರ್ಮಾಣ ಮತ್ತು ನಿರ್ದೇಶನ ನಮ್ಮದೇ! ಅಂದು ಸಂಗೀತ ಮತ್ತು ನಾಯಕರ ಬಗ್ಗೆ ಚರ್ಚಿಸುತ್ತಿದ್ದಾಗ ಮಧ್ಯ ಬಾಯಿ ಹಾಕಿದ ಮಿರ‌್ಯಾಕಲ್ ಮಾದೇವ ಸಾಹಸ ನಿರ್ದೇಶಕ ನಾನೇ! ಅಂದ. ಸಂದೀಪ ಒಪ್ಪಿಕೊಂಡ. ಮಾದೇವ ಆಗಲೇ ಹಲವು ಸಾಹಸಗಳನ್ನು ಮಾಡುತ್ತಿದ್ದ ಅಥವಾ ನಮಗೆ ಹಾಗೆ ಅನಿಸುತ್ತಿತ್ತು! ಫೈಟಿಂಗ್ ವೇಳೆ ಹೀರೋ ಹಾರುವುದು, ಎರಡು ಕಾಲುಗಳನ್ನು ಅಗಲಿಸಿ ಕೆಳಗೆ ಕೂಡ್ರುವುದು, ಮೇಲಿನಿಂದ ಜಿಗಿಯುವುದು... ಎಲ್ಲ ಮಾಡುವುದರ ಜೊತೆಗೆ ನುಣುಪಾದ ಮನೆಯ ಗೋಡೆಯನ್ನು ಏಣಿಯ ಸಹಾಯವಿಲ್ಲದೇ ಮೂರೇ ಹೆಜ್ಜೆಗಳಲ್ಲಿ ಏರಿ ಮಾಳಿಗೆ ಮೇಲೆ ನಿಲ್ಲುತ್ತಿದ್ದ! ಟೆಲಿಫೋನ್ ಕಂಬವನ್ನೂ ಅಷ್ಟೇ. ಮೂರನೇ ಹೆಜ್ಜೆ ಅದರ ತುದಿಗೆ ಇರುತ್ತಿತ್ತು. ಗಿಡ ಏರಿ ಟೊಂಗೆಯ ಮೇಲೆ ತಲೆ ಕೆಳಗೆ ಮಾಡಿ ಜೋತಾಡುವುದು, ಒಂದು ಟೊಂಗೆಯಿಂದ ಇನ್ನೊಂದು ಟೊಂಗೆಗೆ ಸರಸರನೇ ಹಾರುವುದು ಅವನಿಗೆ ಸಲೀಸಾದ ಕೆಲಸಗಳು. ಇದರಿಂದ ನಮಗೆ ಮಾವಿನ ಸೀಸನ್‌ನಲ್ಲಿ ತುಂಬಾ ಅನುಕೂಲವಾಗುತ್ತಿತ್ತು! ನಾನು ಸಾಹಿತ್ಯ ಬರೆಯುವುದು ನಿರ್ಧಾರವಾಗಿತ್ತು. ಹೀರೋ, ಹೀರೋಯಿನ್ ಸಂಗೀತ ನಿರ್ದೇಶಕರ ಬಗ್ಗೆ ಸೀರಿಯಸ್ ಆಗಿ ಮಾತಾಡುವಾಗ ಸೈಕಲ್ ಮೇಲೆ ಬಂದ ಓಂಕಾರ ಸೈಕಲ್ ಹಾರಿಯ ಮೇಲೆ ತನ್ನ ಮಧ್ಯ ಭಾಗ ಇರಿಸಿ ಎರಡೂ ಕಡೆಗೆ ಕಾಲುಗಳನ್ನು ಹಾಕಿ ನಿಂತ. ನಮ್ಮ ಚರ್ಚೆಯಲ್ಲಿ ತಾನೂ ಸಹ ಗಂಭೀರವಾಗಿ ಭಾಗವಾಗುವ ಹಂತದಲ್ಲಿದ್ದೇನೆ ಎಂದು ಅವನ ಮುಖಚರ್ಯೆ ತೋರಿಸುತ್ತಿತ್ತು!

ನಾವೆಲ್ಲ ಗಂಭೀರ ಚರ್ಚೆಯಲ್ಲಿದ್ದರೆ ಮಧ್ಯ ಪ್ರವೇಶಿಸಿದ ಅಡ್ನಾಡಿ ಅಪ್ಪಣ್ಣ ಉಡಾಫೆಯಿಂದ, ಲೇ... ಬೀಡಿ ತಗೊಳ್ಳಾಕ ಐದ ಪೈಸೆ ಇಲ್ಲ. ಸಿನಿಮಾ ಏನ್ ಮಾಡತೀರಿ ಬಿಡ್ರೋ ಕಿಸಬಾಯಿಗೊಳ್ರಾ! ಎಂದು ಲೇವಡಿ ಮಾಡಿದ. ಲೇ... ಅಪ್ಪಣ್ಣ ನೀನೂ ಮಾಡಾಂಗಿಲ್ಲ ಮಾಡಾವರಿಗಿ ಮಾಡಲಾಕ ಬಿಡಾಂಗಿಲ್ಲ. ಬರೇ ಅಡಿಗಲ್ಲ ಸಮಾರಂಭನ ಮಾಡತೀ ನೋಡ?! ಎನ್ನುತ್ತಾ, ಅತ್ತ ಪ್ಯಾಂಟೂ ಅಲ್ಲದ ಇತ್ತ ಚಡ್ಡಿಯೂ ಅಲ್ಲದ ಪ್ಯಾಂಟ್-ಚಡ್ಡಿಯೊಳಗಿಂದ ಬೀಡಿ ಹೊರತೆಗೆದ. ಅದಕ್ಕೆ ಕೈಯ್ಯೊಡ್ಡುತ್ತಾ ಅಪ್ಪಣ್ಣ, ಹಾಂಗಂದ್ರ ಏನೋ ವಂಕಾ? ಅಂತ ಕೇಳಿದ. ಅವನಿಗೆ ಬೀಡಿ ಕೊಟ್ಟು ಬರೀ ಬಾಯಿಗೆ ಗೀರಿದ ಕಡ್ಡಿ ಹಚ್ಚಿ ಸುಟ್ಟುಕೊಂಡ ಓಂಕಾರ, ಹೋಗೋ ಮಳ್ಳ ಹೋಗ... ನಿನ್ನ ಜೋಡಿ ಕೂಡಿದ್ರ ಬರೇ ಸುಟ್ಟಕೊಳ್ಳುದ ಆಕೈತಿ ಎಂದು ಬಾಯಿ ತಿಕ್ಕಿಕೊಳ್ಳುತ್ತಾ ಅಡಿಗಲ್ಲ ಸಮಾರಂಭ ಅಂದ್ರ ಮತ್ತೇನ? ಬರೇ ಕಲ್ಲ ಹಾಕೋ ಕೆಲಸ! ಅನ್ನುತ್ತಾ ಬೇರೆ ಬೀಡಿ ಬಾಯಿಗಿಟ್ಟು ಬೆಂಕಿ ಹಚ್ಚಿದ. ಅಪ್ಪಣ್ಣ ಅವನನ್ನು ದುರುಗುಟ್ಟಿ ನೋಡಿದರೂ ಬೀಡಿ ಸಿಕ್ಕ ಸಂತಸದಲ್ಲಿದ್ದ. ಓಂಕಾರ ಹೊಗೆಯುಗುಳುತ್ತಾ ಹೊಗೆಯೇ ಮಾತಿನ ರೂಪ ತಳೆದವರಂತೆ, ಸಂದೀಪಣ್ಣ, ಸಿನಿಮಾ ಹ್ಯಾಂಗ ಇರಬೇಕಂದ್ರ...! ಎಂದು ಸೈಕಲ್ ಸ್ಟ್ಯಾಂಡ್ ಹಚ್ಚುವುದರೊಳಗಾಗಿ ಮಾದೇವ, ನೋಡಿದವರ ಕುಂಡಿ ಕಡ್ಯಾಂಗ ಇರಬೇಕು...! ಎಂದು ಗಹಗಹಿಸಿ ನಗತೊಡಗಿದ. ಹಾಂಗ್ಯಾಕೋಪಾ ಮಾವಾ? ಭಾರಿ ಭಾರಿ ಧಾಡಸಿ ಇರಬೇಕ! ಎಂದು ಬಂದು ಕುಳಿತ. ಆಗ ಬಾಯಿ ತೆರೆದವನು ಆಗ ತಾನೇ ನಮ್ಮ ಬಳಗಕ್ಕೆ ಎಂಟ್ರಿ ಕೊಟ್ಟಿದ್ದ ರಾಯಲ್ ರಾಯಪ್ಪ! ರಾಯಪ್ಪ ಚಿತ್ರವಿಚಿತ್ರವಾದರೂ ಸಚಿತ್ರ ಮನುಷ್ಯ. ನಿಷ್ಕಪಟಿ. ನಿಜವಾಗಿಯೂ ಶಕ್ತಿವಂತ. ಹುಗ್ಗಿ, ಸಜ್ಜಕ ಅವನ ಪ್ರೀತಿಯ ಆಹಾರಗಳು. ಒಂದೆರಡು ತಾಟು ಸಜ್ಜಕ, ತುಪ್ಪ, ಹಾಲು ಸೇರಿಸಿ ಉಂಡು ತೇಗಿದರೆ ಮುಗೀತು. ಇಂದಿನ ಜಿಮ್‌ನಲ್ಲಿ ಸಿಕ್ಸ್‌ಪ್ಯಾಕ್ ಮಾಡಿದ ಯಾವನೂ ಅವನ ಎಡಗಾಲ ಕಿರುಬೆರಳಿಗೂ ಸಮವಾಗುತ್ತಿರಲಿಲ್ಲ! ನನಗಾಗಿಯೇ ನಮ್ಮ ಅಜ್ಜ ಒಂದು ಎಮ್ಮೆ ಕಟ್ಟಿದ್ದಾನೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದ. ಮಾತು ಮಾತ್ರ ಬಹಳ ಕಡಿಮೆ. ಏಕೆಂದರೆ ಅವನಿಗೆ ಬಣ್ಣ ಹಚ್ಚಿ ಮಾತನಾಡಲು ಬರುತ್ತಿರಲಿಲ್ಲ! ಇಂಥ ರಾಯಪ್ಪ ಬ್ಯಾಟ್ ಹಿಡಿಯಲು ಬರದಿದ್ದರೂ ಕ್ರಿಕೆಟ್‌ನಲ್ಲಿ ಹಿಟ್ ಪ್ಲೇಯರ್ ಆಗಿದ್ದೊಂದು ದಂತಕತೆ! ಬಾಲ್ ಎಷ್ಟೇ ಸ್ಪೀಡಾಗಿ ಬಂದರೂ ಔಟಾಗುತ್ತಿರಲಿಲ್ಲ. ಆಗ ನಮ್ಮ ಆಟದಲ್ಲಿ ಎಲ್.ಬಿ.ಡಬ್ಲ್ಯೂ ಇಲ್ಲದ ಕಾರಣ ಸ್ಟಂಪಿಗೆ ಬಡಿಯುವ ಚೆಂಡನ್ನು ಕಾಲಿನಿಂದ ಒದ್ದು ತಟ್ಟಿಸುತ್ತಿದ್ದ. ನಮಗೆ ಇದ್ದಕ್ಕಿದ್ದಂತೆ ಚೆಂಡು ಬಡಿದರೆ ನಾವು ಎರಡು ನಿಮಿಷ ಒದ್ದಾಡಿ ಬಿಡುತ್ತಿದ್ದೆವು. ರಾಯಪ್ಪ ಮಾತ್ರ ತಾನಾಗೇ ಚೆಂಡು ಒದ್ದು ಹಿಸ್ ಎನ್ನದೇ ಮುಂದಿನ ಬಾಲ್‌ಗೆ ಕಾಯುತ್ತಿದ್ದ. ಬಾಲ್ ತಾನಾಗಿಯೇ ಬಂದು ಇವನ ಬ್ಯಾಟ್‌ಗೆ ತಾಗಿ ಪುಟಿದು ಹೋಗಬೇಕು. ಬಹಳ ಸಲ ಕಣ್ಣು ಮುಚ್ಚಿ ಬ್ಯಾಟನ್ನು ಚಕ್ರಾಕಾರವಾಗಿ ತಿರುಗಿಸಿ ಬಿಡುತ್ತಿದ್ದ. ಹಾಗೆ ಬ್ಯಾಟ್ ತಿರುಗಿದರೆ ಸಿಕ್ಸರ್ ಕಟ್ಟಿಟ್ಟ ಬುತ್ತಿ! ಇರದಿದ್ದರೆ ಚೆಂಡು ವಿಕೆಟ್‌ಕೀಪರ್ ಕೈಗೆ! ಬೋಲ್ಡ್ ಆಗಲು ಕಾಲುಗಳು ಬಿಡುತ್ತಿರಲಿಲ್ಲ! ಹೊಡೆದರೆ ಬಾಲು ಬೌಂಡ್ರಿ ಆಚೆ! ಸ್ಟಂಪ್ ಔಟ್ ಆಗತಿರಲಿಲ್ಲ. ಏಕೆಂದರೆ ಅವನ ಭಾಷೆಯಲ್ಲಿ ಅವನು ಕ್ರೀಜ್...ನಲ್ಲೇ ಇರತಿದ್ದ! ಹೀಗಾಗಿ ರಾಯಪ್ಪನನ್ನು ಔಟ್ ಮಾಡಲು ಎಂಟೆದೆಯೇ ಬೇಕಾಗಿತ್ತು! ನಮ್ಮ ಮಾತುಗಳನ್ನು ಸುಮ್ಮನೆ ಆಲಿಸುತ್ತಾ ಕೂಡ್ರುತ್ತಿದ್ದ ರಾಯ ಏನಾದರೂ ಹೇಳಲು ಪ್ರಯತ್ನಿಸುತ್ತಿದ್ದ. ಆದರೆ ಅವನಿಗೆ ಏನು ಹೇಳಬೇಕೆಂಬುದೇ ಅರ್ಥವಾಗುತ್ತಿರಲಿಲ್ಲ.

ಮಾದೇವಣ್ಣ, ಸಿನಿಮಾ ಹ್ಯಾಂಗ ಇರಬೇಕಂದ್ರ ಆಂ... ಹೇಂಗಿರಬೇಕಲಾ... ಹಾಂಗ ಇರಬೇಕ ಅಂದ! ನಾವೆಲ್ಲ ಏನೂ ತಿಳಿಯದೇ ಮುಖ ಮುಖ ನೋಡಿಕೊಂಡೆವು. ಇದಪ್ಪ ಮಾತ ಅಂದ್ರ! ಅಂತ ಅಪ್ಪಣ್ಣ ನಕ್ಕು ಸುಮ್ಮನಾದ. ರಾಯಪ್ಪನೂ ನಕ್ಕು ಬಿಟ್ಟ! ಸಿನಿಮಾ ಕತೆ ಕತೆಯಾಗಿಯೇ ಉಳಿಯಿತು. ಮುಂದೆ ಎಲ್ಲರೂ ನಿರರ್ಥಕ ಮಾತುಗಳ ದಾಸರಾಗಿ ಕುಳಿತೆವು. ರಾಯಪ್ಪ ಪಾಪ ಬಲು ಮುಗ್ಧ, ಹೃದಯವಂತ. ಆದರೆ ಅವನ ಅಂತ್ಯ ಮಾತ್ರ ಅಕಾಲಿಕ. ಸೃಷ್ಟಿಯ ನಿಗೂಢತೆ ಅರ್ಥವಾಗುವದಿಲ್ಲ. ಹಾಗೇನಾದರೂ ಪ್ರಕೃತಿ ತನ್ನ ಗೂಢಾರ್ಥವನ್ನು ಹೆಜ್ಜೆ ಹೆಜ್ಜೆಗೆ ಬಿಟ್ಟು ಕೊಡುತ್ತಿದ್ದರೆ ನಾವಿಷ್ಟು ಸುಖವಾಗಿ ಬಾಳುವುದು ಸಾಧ್ಯವಾಗುತ್ತಿರಲಿಲ್ಲವೇನೋ! ಸಾವೊಂದು ಕೇವಲ ಘಟನೆಯಲ್ಲ. ಅದು ನಿರಂತರ ಪ್ರಕ್ರಿಯೆ. ಆದರೆ ನಮ್ಮಂಥ ಸಾಧಾರಣ ಜನರಿಗೆ ಅದೊಂದು ದಾರುಣ ಘಟನೆಯೇ ಸರಿ! ಜೀವಾತ್ಮ-ಪರಮಾತ್ಮ, ಬಂಧ-ಮೋಕ್ಷ, ಭಿನ್ನ-ಅಭಿನ್ನ ಇಂಥ ನಿಗೂಢ, ಜಟಿಲ ವ್ಯಾಪಾರಗಳು ನಮ್ಮ ಬುದ್ಧಿಗೆ ನಿಲುಕದ ವಿಷಯಗಳು. ನಾವು ಸಾವನ್ನು ವರ್ಣಿಸುವುದು ಇಷ್ಟೇ. ತುಂಬಾ ಒಳ್ಳೆಯ ಸಾವು! ಘೋರವಾದುದು! ಅಕಾಲಿಕ! ದೇವರಿಗೆ ಪ್ರಿಯನಾದುದರಿಂದ ಬೇಗ ಹೋದ! ಕಾಡಲಿಲ್ಲ, ಬೇಡಲಿಲ್ಲ, ಯಾರಿಗೂ ಹೊರೆಯಾಗಲಿಲ್ಲ! ಒಳ್ಳೆಯವರು ಬಹಳ ದಿನ ಬದುಕಲಾರರು! ಸತ್ತಿದ್ದೇ ಒಳ್ಳೆಯದಾಯಿತು! ಕೊಡಬೇಕೇಕೆ? ಕಸಿದುಕೊಳ್ಳಬೇಕೇಕೆ? ದೇವರ ಆಟ ನಮಗೇನು ತಿಳಿಯುತ್ತದೆ?! ......................!.....................? ಕೆಲವು ಉದ್ಗಾರಗಳು, ಕೆಲವು ಪ್ರಶ್ನಾರ್ಥಕಗಳು. ಇವುಗಳಾಚೆ ನಮ್ಮ ಸಾವು ಗೌಣ, ಸ್ತಬ್ಧ, ನಿರ್ಲಿಪ್ತ, ಮೌನ, ಅಚಾಕ್ಷುಷ. ರಾಯಪ್ಪನಿಗೊಬ್ಬ ಅಜ್ಜನಿದ್ದನಲ್ಲ! ಅವನ ಹೆಸರೇನೋ... ನೆನಪಾಗುತ್ತಿಲ.್ಲ ಅಕಾರಣ ವೃದ್ಧಾಪ್ಯವಿರಬೇಕು! ಅಜ್ಜ ಸುಮ್ಮನೇ ಮನೆಯಲ್ಲಿ ಕೂಡ್ರಲಿಲ್ಲ.

Reviews

‘ಕಾವ್ಯದ ಬಣ್ಣಗಳಲ್ಲಿ’ ಕಾದಂಬರಿ ವಿಮರ್ಶೆ

ಮಲ್ಲಿಕಾರ್ಜುನ ಢಂಗಿ, ಜಮಖಂಡಿ(ಬಾಗಲಕೋಟೆ) ಇವರ ಮೊದಲ ಕಾದಂಬರಿ ‘ಬಣ್ಣದ ನೆರಳುಗಳು’ ಕುತೂಹಲದಿಂದ ಓದಿಸಿಕೊಂಡು ಹೋಗುವ ಕೃತಿ. ಬೆಳಗಾವಿಗೆ ಹತ್ತಿರದ ಬಾನೂರು ಅತ್ತ ಬಯಲು ಸೀಮೆಯೂ ಅಲ್ಲ, ಇತ್ತ ಮಲೆನಾಡೂ ಅಲ್ಲ. ಈ ಊರಿನ ಸುತ್ತ ಇರುವ ಕಾಡು, ಬೆಟ್ಟ, ನದಿ, ಇವರಲ್ಲಿ ಅಡಗಿರುವ ಕವಿಗೆ ಸ್ಪೂರ್ತಿ ಕೊಡುತ್ತದೆ. ಕಾದಂಬರಿ ಉದ್ದಕ್ಕೂ ಕಂಡು ಬರುವ ಸಾಲುಗಳು ಕಾದಂಬರಿಯನ್ನು ಒಂದು ಕವನ ಸಂಕಲನದಂತೆ ಸುಂದರಗೊಳಿಸುತ್ತದೆ. ಕಾದಂಬರಿಯ ಸುಮಾರು 120 ಪುಟಗಳ ವ್ಯಾಪ್ತಿಯಲ್ಲಿ ಕಾಣ ಸಿಗುವ ಅಸಂಖ್ಯಾತ ಕಾವ್ಯ ತುಣುಕುಗಳು ಕಾದಂಬರಿಯ ವಸ್ತು, ವಿನ್ಯಾಸ, ಧ್ವನಿ ಇತ್ಯಾದಿಗಳನ್ನು ಸೂಕ್ಷ್ಮವಾಗಿ ಮಾರ್ದನಿಸುತ್ತ ಕಾದಂಬರಿಗೆ ಬೇರೊಂದು ಸೊಬಗನ್ನು ನೀಡುತ್ತದೆ. ಕೆಲವೆಡೆಗಳಲ್ಲಿ ಅಸ್ಪಷ್ಟವಾಗಿ ಕಂಡರೂ ಉತ್ತಮ ಭಾಷೆ, ಶೈಲಿ, ರಚನೆ, ಮತ್ತು ಉದ್ದೇಶಗಳಿಂದಾಗಿ ಓದುಗರ ಗಮನ ಸೆಳೆಯುತ್ತದೆ. 

(ಕೃಪೆ : ವಾರ್ತಾಭಾರತಿ, ಬರಹ : ಕಾರುಣ್ಯ)

 

Related Books