ತೇಜೋ ತುಂಗಭದ್ರಾ

Author : ವಸುಧೇಂದ್ರ

Pages 464

₹ 450.00




Year of Publication: 2022
Published by: ಛಂದ ಪುಸ್ತಕ
Address: ಐ-004, ಮಂತ್ರಿಪ್ಯಾರಡೈಸ್‌ ಬನ್ನೇರುಘಟ್ಟ ರಸ್ತೆ, ಬೆಂಗಳೂರು-560076
Phone: 9844422782

Synopsys

ವಸುಧೇಂದ್ರ ಅವರ ವಿಶಿಷ್ಟ ಕಾದಂಬರಿ ’ತೇಜೋ ತುಂಗಭದ್ರ’. ವಿಜಯನಗರ ಸಾಮ್ರಾಜ್ಯ, ಪೋರ್ಚುಗೀಸ್‌, ಬಹುಮನಿ ಸುಲ್ತಾನರ ಕಾಲದ ಇತಿಹಾಸವನ್ನು ಅಧ್ಯಯನ ಮಾಡಿ ಬರೆದಿದ್ದು, ಆ ಕಾಲದ ಜನಜೀವನವನ್ನು ಕಟ್ಟಿಕೊಡುವ ಸಾಮಾಜಿಕ ಕಾದಂಬರಿಯಾಗಿದೆ.

15-16ನೇ ಶತಮಾನದ ಸಾಮಾನ್ಯರ ಹಾಗೂ ರಾಜ್ಯಾಡಳಿತವನ್ನು ಚಿತ್ರಿಸಿರುವ ಕೃತಿ ಇದು. ಇಲ್ಲಿ ಹೃದಯವಿರುವ ಜನಸಾಮಾನ್ಯರೇ ನಾಯಕರು. ಚರಿತ್ರೆ ಮತ್ತು ಸಮಕಾಲೀನತೆಗಳ ಗಡಿರೇಖೆಗಳನ್ನು ಅಳಿಸಿ ಹಾಕುವ ಸತ್ಯ, ಸೃಜನಶೀಲತೆಯ ಹಿನ್ನೆಲೆಯಲ್ಲಿ ಕಂಡರಿಸಲಾಗಿದೆ.

ಶತಮಾನಗಳ ಹಿಂದಿನ ವಿಶಿಷ್ಟ ಕಥೆಯನ್ನು ಯಾವುದೇ ಗೊಂದಲಗಳಿಲ್ಲದೇ,  ಪ್ರಸ್ತುತ ಕಾಲಮಾನಕ್ಕೆ ಒಗ್ಗೂಡಿಸಿದ ಕಲೆಯ ಚಿತ್ರಣ ಇದಾಗಿದೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡಮಾಡುವ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ದೊರೆತಿದೆ. 

2019ರಲ್ಲಿ ಮೊದಲ ಮುದ್ರಣ ಕಂಡಿದ್ದ ಈ ಪುಸ್ತಕವು  ಇದುವರೆಗೆ ಹನ್ನೊಂದು ಮುದ್ರಣಗಳನ್ನು ಕಂಡಿದೆ ಹಾಗೂ ಇಂಗ್ಲಿಷ್‌ ಭಾಷೆಗೂ ಅನುವಾದಗೊಂಡಿದೆ.

About the Author

ವಸುಧೇಂದ್ರ

ವಸುಧೇಂದ್ರ ಅವರು ಕನ್ನಡದ ಪ್ರಸಿದ್ಧ ಬರಹಗಾರರು ಹಾಗೂ ಪುಸ್ತಕ ಪ್ರಕಾಶಕರು. ಮುಖ್ಯವಾಗಿ ಕತೆ, ಕಾದಂಬರಿ, ಲಲಿತ ಪ್ರಬಂಧಗಳು ಇವರ ಬರವಣಿಗೆಯ ಪ್ರಕಾರಗಳು. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 1969ರಲ್ಲಿ ಜನಿಸಿದ ವಸುಧೇಂದ್ರ ಅಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಆನಂತರ ಸುರತ್ಕಲ್ ನಿಂದ ಇಂಜಿನಿಯರಿಂಗ್ ಪದವಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಯ್ ನಿಂದ ಎಂ.ಇ. ಪದವಿ ಪಡೆದಿದ್ದಾರೆ. ಸುಮಾರು 20 ವರ್ಷಗಳ ಕಾಲ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅವರು ಸದ್ಯ ಬೆಂಗಳೂರಿನಲ್ಲಿ ವಾಸವಿದ್ದು, ಸದ್ಯಕ್ಕೆ ಸಾಹಿತ್ಯಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮನೀಷೆ, ಯುಗಾದಿ, ಚೇಳು, ಹಂಪಿ ಎಕ್ಸ್ ...

READ MORE

Awards & Recognitions

Reviews

ನಾ ಕಂಡ ತೇಜೋ ತುಂಗಭದ್ರಾ-ಸಿರಿ ಹುಲಿಕಲ್

ತೇಜೋ ತುಂಗಭದ್ರಾ- ಬುಕ್ ಬ್ರಹ್ಮ

......................................................................................................................................................................................................................

ಕನ್ನಡಕ್ಕೊಂದು ಮಹತ್ವದ ಕಾದಂಬರಿ

ಇದನ್ನು ಕ್ಲಾಸಿಕ್ ಅಥವಾ ಅಭಿಜಾತ ಕೃತಿ ಎಂದು ಕರೆಯಲು ಕಾರಣ ಇದು ಒಂದು ಕಾಲಕ್ಕೆ ಸಂಬಂಧಿಸಿದ ಜನರ ಬದುಕನ್ನು ಕಾಲಾತೀತವಾಗಿ ಓದುಗರ ಭಾವಲೋಕದ ಭಾಗವಾಗುವಂತೆ ಮಾಡುವುದು ಮತ್ತು ಹಲವು ವ್ಯಾಖ್ಯಾನಗಳಿಗೆ ಮತ್ತು ವಿಶ್ಲೇಷಣೆಗಳಿಗೆ ತೆರೆದುಕೊಳ್ಳುವಂಥದ್ದು. (ಈಗಾಗಲೇ ಇದು 3ನೆಯ ಮುದ್ರಣ ಕಂಡದ್ದು, ಗಣ್ಯ ಸಾಹಿತಿಗಳಿಂದ ಶ್ಲಾಘನೆ ಪಡೆದುಕೊಂಡದ್ದು ಮತ್ತು ವಾಗ್ವಾದಗಳಿಗೆ ವೇದಿಕೆಯಾದುದು ಇದನ್ನು ಸಮರ್ಥಿಸುತ್ತದೆ. ನನ್ನ ಪ್ರಕಾರ ಇದು 21ನೆಯ ಶತಮಾನದ ಕನ್ನಡದ ಪ್ರಮುಖ ಸಾಹಿತ್ಯ ಚಳುವಳಿಯಾಗಿರುವೆ ನವ ಚಾರಿತ್ರಿಕ ಪಂಥದ ಶ್ರೇಷ್ಠ ಕೃತಿ. ಈ ಕಾದಂಬರಿ ಎರಡು ಸಂಸ್ಕೃತಿ ಗಳನ್ನು ಮುಖ್ಯವಾಗಿ ಪ್ರಭುತ್ವಗಳನ್ನು - ಪರಿಚಯಿಸಲು ಎರಡು ಜೋಡಿ ಪ್ರೇಮಿಗಳ ಕಥೆಯನ್ನು ಸೂತ್ರವಾಗಿ ಹೊಂದಿದೆ. ಲಿಸ್ಬನಿನ ಕ್ರೈಸ್ತ ಯುವಕ ಗೇಬ್ರಿಯಲ್ ಮತ್ತು ಯಹೂದಿ ಯುವತಿ ಬೆಲ್ಲಾ ನಡುವಿನ ಪ್ರೇಮದಿಂದ ಕಾದಂಬರಿ ಪ್ರಾರಂಭವಾಗುತ್ತದೆ. 

ಲಿಸ್ಬನ್ನಿನ ಎಲ್ಲಾ ಯಹೂದಿಗಳನ್ನು ಬಲವಂತವಾಗಿ ಕ್ರೈಸ್ತ ಮತಕ್ಕೆ ಮತಾಂತರ ಮಾಡಿದ ಕಾರಣ ನಂತರ ಬೆಲ್ಲಾ ಕೂಡ ಕ್ರೈಸ್ತಳೇ. ಬೆಲ್ಲಾಳ ಅಪ್ಪ ಬೆಲ್ಮಾಮ್, ಬಡವನೆಂದು ಅವನನ್ನು ತಿರಸ್ಕರಿಸುತ್ತಾನೆ. ಆ ಕಾಲದಲ್ಲಿಯೇ ವಾಸ್ಕೋಡಗಾಮ ಭಾರತಕ್ಕೆ ಸಮುದ್ರ ಮಾರ್ಗ ಕಂಡು ಹಿಡಿದು ಅಪಾರ ಬೆಲೆಯ ಕಾಳು ಮೆಣಸು ಇತ್ಯಾದಿ ಸಂಬಾರ ಪದಾರ್ಥಗಳನ್ನು ತುಂಬಿಕೊಂಡು ಹಿಂದಿರುಗುತ್ತಾನೆ. ಇದ್ದಕ್ಕಿದ್ದಂತೆ ಪೋರ್ಚುಗಲ್ ಶ್ರೀಮಂತವಾಗುತ್ತದೆ ಮತ್ತು ಅಲ್ಲಿನ ಯುವಕರಿಗೆ ಭಾರತ ಒಂದು ಸ್ವರ್ಗವೆಂದು ಭಾಸವಾಗುತ್ತದೆ. ಹಣ ಸಂಪಾದಿಸಲು ಅಲ್ಲಿಗೆ ಹೋಗಲು ಸಾಲುಗಟ್ಟಿ ನಿಲ್ಲುತ್ತಾರೆ. ಬೆಲ್ದಾಳನ್ನು ಪಡೆಯಲಾಗದ ನೋವನ್ನು ಮರೆಯಲು ಗೇಬ್ರಿಯಲ್ ಭಾರತಕ್ಕೆ ಹೋಗುತ್ತಾನೆ. ಬೆಲ್ಲಾ ತನ್ನಿಂದ ಪ್ರೇಮಿಯನ್ನು ಕಿತ್ತುಕೊಳ್ಳುವ ಭಾರತಕ್ಕೆ ಶಾಪ ಹಾಕುತ್ತಾಳೆ. 

ಭಾರತದ ವಿಜಯನಗರದ ರಾಜಧಾನಿಯ ಸಮೀಪದ ತೆಂಬಕಪುರದಲ್ಲಿ ವೈಷ್ಣವ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಶಿಲ್ಪಿಯಾಗಿದ್ದ ವೈಷ್ಣವ ಯುವಕ ಕೇಶವ ಶೈವ ಯುವತಿ ಹಂಪವ್ವಳನ್ನು ಮದುವೆಯಾಗಲು, ತನ್ನಂತೆ ಅವಳನ್ನು ವರಿಸಲು ಬಯಸಿದ್ದ ಜಟ್ಟಿ ಮಾಪಳನಾಯಕನ ಜತೆಗೆ ಮಲ್ಲಯುದ ಮಾಡಿ, ಅವನ ಕತ್ತುಮುರಿದು ಹಂಪವಳನ್ನು ಗೆಲ್ಲುತ್ತಾನೆ. ಮಾಪಳನಾಯಕನಿಗೆ ಮೊದಲ ಪತ್ನಿ ತೆಂಟನಲ್ಲಿ ಗಂಡುಮಕ್ಕಳಿಲ್ಲದ ಕಾರಣ ಅವಳ ಅಪೇಕ್ಷೆಯಂತೆಯೇ ಅವನು ಹಂಪವ್ವಳನ್ನು ಬಯಸಿದ್ದಾಗಿತ್ತು. ತೆಂಬಕ್ಕೆ ಅವನ ಜತೆಗೆ ಸತಿ ಹೋಗುತ್ತಾಳೆ, ಕೇಶವನ ಸಂಸಾರವೂ ಸುಖವಾಗಿರುವುದಿಲ್ಲ. ಇನ್ನೊಬ್ಬನನ್ನು ಕೊಂದ ಅವನಿಗೆ ಸ್ವಧರ್ಮವನ್ನು (ಶಿಲ್ಪಿ) ಪಾಲಿಸಲು ಸಾಧ್ಯವಾಗದೆ, ಮನಶ್ಯಾಂತಿ ಇಲ್ಲದೆ, ಕ್ಷಾತ್ರ ಧರ್ಮವನ್ನಪ್ಪಿಕೊಳ್ಳಲು ವಿಜಯನಗರಕ್ಕೆ ಹೋಗುತ್ತಾನೆ. ಸೈನ್ಯ ಸೇರಲು ಹೋದ ಅವನನ್ನು ಪ್ರಭುತ್ವ ಲೆಂಕಸೇವೆಗೆ ಬಳಸಿಕೊಳ್ಳುತ್ತದೆ. ಅದರಂತೆ ಕೃಷ್ಣದೇವರಾಯನಿಗೆ ಗಂಡು ಸಂತಾನವಾದಾಗ ಲೆಂಕನಾದ ಕೇಶವ ಪ್ರಾಣಾಹುತಿ ಮಾಡಬೇಕಾಗುತ್ತದೆ. ಅವನ ಜತೆಗೆ ಹಂಪವ್ವನನ್ನು ಸತಿ ಮಾಡಲು ಎಲ್ಲ ಸಿದ್ಧತೆ ನಡೆದಿತ್ತಾದರೂ ಅವಳು ತಪ್ಪಿಸಿಕೊಂಡುಹೋಗಿ, ಕಿವಿ ಮೂಗು ಕತ್ತರಿಸಲ್ಪಟ್ಟು ವಿಕಾರನಾಗಿದ್ದ ಅಮ್ಮದಕಣ್ಣ ಎಂಬ ಸಂದೇಶವಾಹಕನ ಜತೆಗೆ ಗೋವಾದತ್ತ ಪರಾರಿಯಾಗುತ್ತಾಳೆ. ಈ ಅಮ್ಮದಕಣ್ಣ ಆದಿಲ್ ಷಾನಿಂದ ಬಲಾತ್ಕಾರವಾಗಿ ಮತಾಂತರಕ್ಕೊಳಗಾಗಿ ಅಹಮದ್ ಖಾನ್ ಎಂಬ ಹೆಸರು ಹೊತ್ತಿದ್ದ ಗೇಬ್ರಿಯಲ್ ಆಗಿದ್ದ. ಅಮ್ಮದಕಣ್ಣ ಗೋವದ ಪೋರ್ಚುಗೀಸ್‌ ಅಧಿಕಾರಿ ಕ್ರಿಸ್ಲಾವೋನ ಬಂಗಲೆಗೆ ಹಂಪವ್ವಳನ್ನು ಆಶ್ರಯಕ್ಕಾಗಿ ಕರೆತರುತ್ತಾನೆ. ಅಲ್ಲಿ ಅವನಿಗೆ ಆಘಾತವಾಗುವಂತೆ ಕ್ರಿಸ್ಲಾವೋನ ಹೆಂಡತಿ, ತನ್ನ ಪ್ರೀತಿಯ ಹುಡುಗಿ ಬೆಲ್ಲಾ ಎಂದು ತಿಳಿಯುತ್ತದೆ. ಕೊನೆಯಲ್ಲಿ ಗೇಬ್ರಿಯಲ್ ತನ್ನನ್ನು ಅಲ್ಲಿಯೇ ಬಿಟ್ಟು ಹೊರಟಾಗ ಹಂಪವ್ವ ಅವನನ್ನು ಹಿಂಬಾಲಿಸಿ, ತನ್ನ ಬಾಳಸಂಗಾತಿಯಾಗುವಂತೆ ಅವನನ್ನು ಕೇಳಿಕೊಳ್ಳುತ್ತಾಳೆ.

ಈ ಕಾದಂಬರಿಯ ಸೂಕ್ಷ್ಮಗಳು ಹಲವು ಆಯಾಮಗಳಲ್ಲಿವೆ. ಸಾಂಕೇತಿಕತೆ, ನಾಟಕೀಯ ವ್ಯಂಗ್ಯ, ಧ್ವನಿ ಎಲ್ಲವುಗಳಿಗೂ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ಗೆಬ್ರಿಯಲ್ ನ ಪ್ರೇಯಸಿ ಬೆಲ್ಲಾ ತೇಜೋ ನದಿಯಲ್ಲಿ ಹಿಡಿದು ಭಾರತದ ಪವಿತ್ರ ನದಿಯೊಂದರಲ್ಲಿ ಬಿಡಬೇಕೆಂದು ಹೇಳಿ ಅವನ ಬಳಿ ಕೊಟ್ಟ ಎರಡು ಮೀನುಗಳನ್ನು ಅವನು ತುಂಗಭದ್ರಾ ನದಿಯಲ್ಲಿ ಬಿಡುವುದು ಒಂದು ಪ್ರಮುಖ ಸಂಕೇತ, ಲೆಂಕವಾಳಿ ಪದ್ದತಿಯ ಬಗ್ಗೆ ವಸುಧೇಂದ್ರ ಅವರು ಬಹಳ ಸೂಕ್ಷ್ಮ ಅಂಶವೊಂದನ್ನು ಹೇಳುತ್ತಿದ್ದಾರೆ ಅನಿಸುತ್ತದೆ. ಇದು ಬಹುಶಃ ನಿಯೋಗ ಪದ್ಧತಿಯಾಗಿರಬಹುದೆ ಎನ್ನುವ ಸಂಶಯ ಬರುವಡೆ ಇದೆ.

ವಸುಧೇಂದ್ರ ಅವರ ವರ್ಣನಾ ಸಾಮರ್ಥ ಅದುಶವಾದುದು. ಕಾದಂಬರಿಯನ್ನು ಮುಂದೊಯ್ಯಲು ಕುತೂಹಲ ಕೆರಳಿಸುವ ಮಾಹಿತಿಯೊಂದನ್ನು ಬಿಟ್ಟುಕೊಟ್ಟು ಅದರ ವಿವರಗಳು ಸಿಗುವವರೆಗೆ ವೇಗವಾಗಿ ಮುಂದೆ ಹೋಗೋಣ ಎಂದು ಓದುಗರಿಗೆ ಅನಿಸುವಂತಹ ತಂತ್ರವನ್ನು ಬಹಳ ಸಹಜವಾಗಿ ಬಳಸುತ್ತಾರೆ. ಉದಾಹರಣೆಗೆ, “ತೆಂಕಪುರದ ಹಂಪಮ್ಮನು ಈ ಮೂಗು ಕಿವಿಗಳು ಇಲ್ಲದ ಅಹಮದ ಖಾನ್ ಎಂಬ ಅಧರ್ಮಿಯನ್ನು ಒಂದೆರಡು ವರ್ಷಗಳಲ್ಲಿ ವರಸಿ ಬಾಳಲಿದ್ದಾಳೆ ಎಂಬ ವಿಪರೀತ ಸತ್ಯವನ್ನು ಈ ಹೊತ್ತಿನಲ್ಲಿ ಸಾಕ್ಷಾತ್ ತೆಂಬಕಸ್ವಾಮಿಯೇ ಜನರ ಮುಂದೆ ಬಂದು ಹೇಳಿದ್ದರು ಯಾರೂ ನಂಬುತ್ತಿರಲಿಲ್ಲ” (ಪುಟ 172) ಎಂಬ ಮಾತು ಕಾದಂಬರಿಯ ಅರ್ಧದಾರಿಯಲ್ಲೇ ಸಿಕ್ಕಿದರೂ, ಆ ಮಾತು ನಿಜವಾಗುವುದು ಕೊನೆಯ ಪುಟದಲ್ಲಿ. ಆಗಲೇ ನಮಗೆ ಪುಸ್ತಕವನ್ನು ಕೆಳಗಿರಿಸಲು ಸಾಧ್ಯವಾಗುವುದು! ಕಾದಂಬರಿಯ ಕೊನೆಯಲ್ಲಿ ಸಾಕಷ್ಟು ನೊಂದ ಅವರಿಬ್ಬರು ಒಂದುಗೂಡುವ ನಿಧಾರ ಮಾಡುವ  ಮೂಲಕ 'ತೇಜೋ ತುಂಗಭದ್ರಾ' ಎಂಬ ಶೀರ್ಷಿಕೆಯನ್ನು ನಿಜಗೊಳಿಸುತ್ತಾರೆ.

ಈ ಕಾದಂಬರಿಯ ಸೂಕ್ಷಾತಿಸೂಕ್ಷ್ಮ ವಿವರಗಳನ್ನು ವಸುಧೇಂದ್ರ ಅವರು ಜತೆಗೂಡಿಸಿರುವ ರೀತಿ, ಮಧ್ಯಕಾಲದ ಬದುಕಿನ ರೀತಿ ರಿವಾಜು, ಆಚರಣೆ, ಬದುಕಿನ ವಿವರಗಳನ್ನು ಶಮ್ಮ ಕಥನದೊಳಗೆ ಹೆಣೆದಿರುವ ರೀತಿ ಅದ್ಭುತವಾಗಿದೆ. ತುರುಗೋಳ್, ಪೆಣ್ಮುಯ್ಯಲ್, ಸತಿ ಪದ್ಧತಿ ಮತ್ತು ಲೆಂಕವಾಳಿ (ವೇಳೆವಾಳಿ) ಇವುಗಳ ವಿವರಗಳು ಕಣ್ಣಿಗೆ ಕಟ್ಟುವಂತಿವೆ ಮತ್ತು ಭಯಾವಹವಾಗಿವೆ. ಸತಿಯಲ್ಲು ಕೂಡ ಶೈವಳಾದ ತೆಂಬಕ್ಕನನ್ನು ಜೀವಂತ ಸಮಾಧಿ ಮಾಡುವ ವಿವರಗಳು, ವೈಷ್ಣವ ಕೇಶವನ ಪತ್ನಿ ಹಂಪವ್ವನನ್ನು ಚಿತೆಯೇರಿಸುವ ವಿವರಗಳು ಲೇಖಕರ ಸೂಕ್ಷ್ಮ ಗ್ರಹಿಕೆ ಮತ್ತು ಅಧ್ಯಯನಕ್ಕೆ ಸಾಕ್ಷಿಯಾಗಿವೆ. ಹಂಪವ್ವ ಸತಿಯಾಗಲು ಮನಸ್ಸಿಲ್ಲದೆ ತಪ್ಪಿಸಿಕೊಂಡು ಹೋಗುವಾಗ ಅವಳ ಅಣ್ಣಂದಿರೇ ಖಡ್ಗ ಹಿಡಿದು ಮತ್ತೆ ಅವಳನ್ನು ತಂದು ಚಿತೆಯೇರಿಸುವ ಸಲುವಾಗಿ ಅಟ್ಟಿಸಿಕೊಂಡು ಹೋಗುತ್ತಾರೆ. ಈ ಸಂದರ್ಭದಲ್ಲಿ, ಹೆಂಗಸರನ್ನು ಬಲವಂತವಾಗಿ ಸತಿಯಾಗಿ ಸುವಲ್ಲಿ ಆಸ್ತಿ ವಿಚಾರ ಹೇಗೆ ಮುಖ ವಾಗುತ್ತದೆ ಎಂದು ಕಾದಂಬರಿ ದಾಖಲಿಸುತ್ತದೆ. ಎಲ್ಲ ಪ್ರಭುತ್ವಗಳು ಲೊಳಲೊಟ್ಟೆ ಎಂದು ಹಾಡುವ ಪುರಂದರದಾಸರು ಈ ಕಾದಂಬರಿಯಲ್ಲಿ ಬರುತ್ತಾರೆ. ಜನರ ಬದುಕಿನ ಆಶೋತ್ತರಗಳು ಪ್ರಭುತ್ವಗಳ ಮರ್ಜಿಯಲ್ಲಿ ಚಿಂದಿಯಾಗಿ ಹೋಗುತ್ತಿರುವಾಗ ಈ ಪದ್ಯಕ್ಕೆ ಬೇರೆಯೇ ವಿಷಾದಪೂರ್ಣ ಅರ್ಥ ಬರುತ್ತದೆ. ಪೋರ್ಚುಗೀಸರ ಕ್ರೌರ್ಯ, ಅದಕ್ಕೆ ಸರಿಯಾಗುವಂತಹ ಬಿಜಾಪುರದ ಆದಿಲ್ ಶಾಹಿಗಳ ಕ್ರೌರ್ಯವನ್ನು ವಸುಧೇಂದ್ರ ಚಿತ್ರಿಸುತ್ತಾರೆ. ಕ್ರೈಸ್ತರು ಮತ್ತು ಮುಸಲ್ಮಾನರು ಮತಾಂತರ ಮಾಡುವುದರಲ್ಲಿ ತೀವ್ರಾಸಕ್ತರು; ಮತ್ತು ಪರಸ್ಪರ ಬದ್ಧ ದ್ವೇಷಿಗಳು, ಕ್ರೌರ್ಯ ದಲ್ಲಿ ವಿಜಯನಗರದ ಅರಸರೂ ಕಡಿಮೆ ಇಲ್ಲದಿದ್ದರೂ ಅವರು ಮತಾಂತರ ಮಾಡುವುದಿಲ್ಲ. ಮೂರು ಪ್ರಭುತ್ವಗಳ ಮೇಲಾಟ ದಲ್ಲಿ ಇವೆಲ್ಲವನ್ನೂ ಕಂಡ ನತದೃಷ್ಟ ಭೂಮಿ ಗೋವಾ. ಬಹುಶಃ ಇಲ್ಲಿನ ಎಲ್ಲ ಚಿತ್ರಣಗಳಿಗೂ ಆಧಾರಗಳಿವೆ. ವಸುಧೇಂದ್ರರು ಈ ಕೃತಿ ರಚನೆಗಾಗಿ ನಡೆಸಿದ ಅಧ್ಯಯನದ ಮಾಹಿತಿಯನ್ನು ಅನುಬಂಧದಲ್ಲಿ ಕೊಟ್ಟಿದ್ದಾರೆ. ವಸಾಹತೀಕರಣ ಮತ್ತು ರಾಜಕೀಯದ ನಡೆಗಳನ್ನೂ ಈ ಕಾದಂಬರಿಯಲ್ಲಿ ಕಾಣಬಹುದಾದರೂ ಸಾಮಾನ್ಯರ ಬದುಕಿನ ಮೂಲಕವೇ ಆ ಕಾಲದ ಜನರ ಸಮಗ್ರ ಜೀವನವನ್ನು, ಅವರ ಕಷ್ಟಸುಖ, ಪ್ರೀತಿ ಪ್ರೇಮ, ಅವರ ಪಿಸುಮಾತು, ಗೋಳಾಟ, ಪುರುಷರ ಬಯಕೆಗಳ ತೊತ್ತಾಗುವ ಸ್ತ್ರೀಯರ ಶೋಷಣೆ ಎಲ್ಲವನ್ನೂ ಒಂದು ದೊಡ್ಡ ಕ್ಯಾನ್ವಾಸಿನಲ್ಲಿ ನೈಜವಾಗಿ ಕಟ್ಟಿಕೊಟ್ಟ ವಸುಧೇಂದ್ರ ಮಹತ್ವದ ಕೃತಿಯೊಂದನ್ನು ಕನ್ನಡಕ್ಕೆ ನೀಡಿದ್ದಾರೆ.

- ಜನಾರ್ಧನ ಭಟ್‌ 

ಕೃಪೆ : ಹೊಸ ದಿಗಂತ (2020 ಫೆಬ್ರುವರಿ 16)
...............................................................................................................................................

ವರ್ತಮಾನದಲ್ಲಿ ಇತಿಹಾಸದ ಕಥನ-ಸಂಧ್ಯಾ ಪೈ-ಉದಯವಾಣಿ
...........................................................................................................................................................................................................

ಆಳದ ಹಂಗಿಲ್ಲದ ನದೀಯಾನ

ಲಲಿತಪ್ರಬಂಧ ಮತ್ತು ಸಣ್ಣಕತೆಗಳಿಂದ ಜನಪ್ರಿಯರಾದ ವಸುಧೇಂದ್ರ ಅವರ ಎರಡನೇ ಕಾದಂಬರಿ ‘ತೇಜೋ–ತುಂಗಭದ್ರಾ’. ಸಾಮಾನ್ಯವಾಗಿ ಚರಿತ್ರೆ ಎಂದರೆ ಅದು ಆಳಿದವರ, ಯುದ್ಧ ಮಾಡಿದವರ ಕಥೆಯೇ ಆಗಿರುತ್ತದೆ. ಆದರೆ ‘ತೇಜೋ–ತುಂಗಭದ್ರಾ’ ಆಳಿಸಿಕೊಂಡವರ ಕಥೆಯನ್ನು ಹೇಳುತ್ತದೆ. ಧರ್ಮದ ಅಮಲು, ಪ್ರಭುತ್ವಗಳ ಕರಿನೆರಳು ಜನಸಾಮಾನ್ಯರ ಬದುಕನ್ನು ಹೇಗೆ ಹಿಂಡಿ ಹಿಪ್ಪೆ ಮಾಡುತ್ತದೆ ಎಂಬುದನ್ನೇ ನಿರೂಪಿಸುತ್ತ ಹೋಗುತ್ತದೆ. ಈ ಹರಿವಿನಲ್ಲಿ ಹಲವು ಧರ್ಮ, ಸಮುದಾಯ, ದೇಶ, ಕಾಲಗಳ ಘರ್ಷಣೆಗಳು ಬೆರೆತುಹೋಗಿವೆ. ಕ್ರೌರ್ಯ ಮತ್ತು ಪ್ರೇಮಗಳು ಪರಸ್ಪರ ಮುಖಾಮುಖಿಯಾಗಿವೆ. ಪರಸ್ಪರ ಗುದ್ದಿಕೊಂಡು ಮುರಿದುಕೊಂಡು ಬಿದ್ದಿವೆ. ಮತ್ತೆ ಎದ್ದು ಹೋರಾಟಕ್ಕೆ ನಿಂತಿವೆ.  

ಇತಿಹಾಸದ ಹರವಿನ ಬಿರುಕುಗಳಲ್ಲಿ ವರ್ತಮಾನದ ಬಿಂಬಗಳನ್ನು ಈ ಕಾದಂಬರಿ ಅಲ್ಲಲ್ಲಿ ಕಾಣಿಸುತ್ತದೆ. ಉದಾಹರಣೆಗೆ, ವಿಜಯನಗರ ಸಾಮ್ರಾಜ್ಯದ ತೆಂಬಕಪುರವನ್ನು ಕೃಷ್ಣದೇವರಾಯ ‘ಕೃಷ್ಣರಾಯಪುರ’ ಎಂದು ಹೆಸರು ಬದಲಿಸುವ ಸನ್ನಿವೇಶ, ಇಂದಿನ ಹೆಸರು ಬದಲಾವಣೆಯ ರಾಜಕೀಯ ಪ್ರಹಸನಗಳ ನೆನಪಿಗೆ ತರುತ್ತದೆ. ಹೀಗೆ ವರ್ತಮಾನಕ್ಕೆ ಕನ್ನಡಿಯಾಗುವ ಹಲವು ಜಾಗಗಳು ಈ ಕಾದಂಬರಿಯಲ್ಲಿವೆ.

ಸ್ಥಾಪಿತವಾದ ಇತಿಹಾಸದ ಸತ್ಯವನ್ನು ನಾವು ನಿಂತಿರುವ ದಿಕ್ಕಿನಿಂದಲೇ ಅರ್ಥ ಮಾಡಿಕೊಳ್ಳುವ ನಾವು ಅದಕ್ಕೆ ಮತ್ತೊಂದು ಆಯಾಮವೂ ಇರಬಹುದಾದ ಸಾಧ್ಯತೆಯನ್ನು ಮರೆತುಬಿಡುತ್ತೇವೆ. ಆ ಮತ್ತೊಂದು ಆಯಾಮವನ್ನೂ ನೋಡಲೂ ಈ ಕಾದಂಬರಿ ಒತ್ತಾಯಿಸುತ್ತದೆ. ಪೋರ್ಚುಗೀಸರ ಆಗಮನವನ್ನು ಭಾರತದ ಅಧಃಪತನದ ಆರಂಭದ ಸೂಚನೆಯಾಗಿ ನಾವು ಗುರ್ತಿಸುತ್ತೇವೆ. ಆದರೆ ಸಾವಿರ ಸಾವಿರ ಕಿಲೋಮೀಟರ್ ದೂರ ಇರುವ ಆ ದೇಶಕ್ಕೆ ಭಾರತವೂ ಒಂದು ಇವಿಲ್ ಆಗಿ ಕಾಣಿಸಬಹುದಾದ ಸಾಧ್ಯತೆಯೊಂದನ್ನು ಮರೆತುಬಿಡುತ್ತೇವೆ. ಬೆಲ್ಲಾಳಿಗೆ ಭಾರತ, ತನ್ನೂರಿನ ಜನರ ನೆಮ್ಮದಿ ಕೆಡಿಸಿದ, ತನ್ನ ಇನಿಯನನ್ನು ತನ್ನಿಂದ ಕಿತ್ತುಕೊಂಡು ಬದುಕನ್ನು ನಾಶಗೊಳಿಸುತ್ತಿರುವ ಇವಿಲ್. ಇದೇ ಕೋಪದಲ್ಲಿ ಅವಳು ಭಾರತಕ್ಕೆ ಶಾಪವನ್ನೂ ಹಾಕುತ್ತಾಳೆ! 

ಯಾವುದೇ ಕಾಲ ದೇಶ ಆಗಿರಲಿ. ಪುರುಷಾಹಂಕಾರದ ಮೆರೆದಾಟಗಳ ಫಲವಾದ ಯುದ್ಧ, ಧರ್ಮಯುದ್ಧಗಳ ಪರಿಣಾಮವನ್ನು ಬರ್ಬರವಾಗಿ ಉಣ್ಣುವುದು ಮಹಿಳೆಯರೇ ಆಗಿರುತ್ತಾರೆ. ‘ತೇಜೋ–ತುಂಗಭದ್ರಾ’ ಕಾದಂಬರಿಯಲ್ಲಿ ಬರುವ ಬಹುತೇಕ ಎಲ್ಲ ಸ್ತ್ರೀಯರೂ ಒಂದಲ್ಲ ಒಂದು ಬಗೆಯಲ್ಲಿ ಪ್ರಭುತ್ವದಿಂದ, ಧರ್ಮದ ವೇಷತೊಟ್ಟ ಕ್ರೂರನಖಗಳಿಂದ ಜರ್ಜರಿತರಾದವರು. ಆದರೆ ಅವರೆಲ್ಲರೂ ತಮ್ಮದೇ ರೀತಿಯಲ್ಲಿ ಅದಕ್ಕೆ ಪ್ರತಿಭಟನೆಯನ್ನು ದಾಖಲಿಸುತ್ತಾರೆ ಎನ್ನುವುದೂ ಗಮನಾರ್ಹ ಸಂಗತಿ. ಲಿಸ್ಬಾ ಭಾರತಕ್ಕೆ ಹಾಕುವ ಶಾಪದಿಂದ ಹಿಡಿದು ಹಂಪಮ್ಮ ಹೊಟ್ಟೆಯಲ್ಲಿನ ಮಗುವನ್ನು ಹೊತ್ತು ಸತಿ ಹೋಗುವುದರಿಂದ ತಪ್ಪಿಸಿಕೊಂಡು ಅಮ್ಮದಕಣ್ಣನ ಜೊತೆ ಓಡಿಹೋಗುವುದರವರೆಗೆ ಹತ್ತು ಹಲವು ಸ್ತ್ರೀ ಪ್ರತಿರೋಧದ ಮಾದರಿಗಳನ್ನು ಈ ಕಾದಂಬರಿ ದಾಖಲಿಸುತ್ತದೆ. 

ಇತಿಹಾಸದ ಕಥನವನ್ನು ಜನಸಾಮಾನ್ಯರ ಬದುಕಿನ ಮೂಲಕ ಕಟ್ಟುವುದು ಸುಲಭವಲ್ಲ. ಅದಕ್ಕೆ ಅಧ್ಯಯನ ಮತ್ತು ಕಲ್ಪನಾಶಕ್ತಿ ಎರಡೂ ಬೇಕು. ಈ ಕಾದಂಬರಿಯ ಪುಟಪುಟಗಳಲ್ಲಿಯೂ ಅಧ್ಯಯನಶೀಲತೆ ಎದ್ದು ಕಾಣುತ್ತದೆ. ಅತಿಯಾದ ಅಧ್ಯಯನವೇ ಈ ಕಾದಂಬರಿಗೆ ಭಾರವೂ ಆಗಿದೆ. 

ಲಿಸ್ಬನ್‌ ನಗರದ ವಿವರಗಳೆಲ್ಲ ಡ್ರೋನ್ ಕ್ಯಾಮೆರಾದಲ್ಲಿ ತೆಗೆದ ಏರಿಯಲ್ ಶಾಟ್‌ಗಳ ಹಾಗೆ ಭಾಸವಾಗುತ್ತದೆ. ಅವು ಇತಿಹಾಸದ ಪುಟಗಳನ್ನು ಓದಿದ ಅನುಭವ ನೀಡುತ್ತದೆ.‌ ತೇಜೋ ನದಿಯ ದಡದಲ್ಲಿನ ಲಿಸ್ಬಾ–ಗೇಬ್ರಿಯಲ್ ಮತ್ತು ತುಂಗಾ ನದಿಯ ಮಡಿಲಲ್ಲಿನ ಕೇಶವ–ಹಂಪಮ್ಮ ಈ ಎರಡು ಜೋಡಿಯ ಪ್ರೇಮಕಥೆಯ ಮೂಲಕವೇ ಎರಡು ನಾಗರಿಕತೆಗಳ ಹೊಯ್ದಾಟಗಳು, ಹುಡುಕಾಟಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಆದರೆ ಲೇಖಕರಿಗೆ ಈ ಎರಡು ಪ್ರೇಮಕಥೆಗಳು ಅಷ್ಟೊಂದು ಮುಖ್ಯ ಅನಿಸಿದಂತಿಲ್ಲ. ಮಾಹಿತಿಗಳ ಮಹಾಪೂರದಲ್ಲಿ ಲಿಸ್ಬಾ ಮತ್ತು ಗೇಬ್ರಿಯಲ್ ಎನ್ನುವ ಕುಸುಮಕೋಮಲ ಪ್ರೇಮಕಥೆ ತನ್ನ ನವಿರುಗುಣವನ್ನೆಲ್ಲ ಕಳೆದುಕೊಂಡು ಕೃಶವಾಗಿದೆ. ಹಾಗೆಯೇ ಆಚರಣೆಗಳ ವಿವರಣೆಗಳಲ್ಲಿ ಕೇಶವ ಮತ್ತು ಹಂಪಮ್ಮನ ಪ್ರೇಮ ಮಸುಕಾಗುತ್ತದೆ. 

ಕಥನಕ್ರಮಣದ ನಡುವೆ ಲೇಖಕರು ಆಗಾಗ ತೂರಿಸುವ ಸ್ಟೇಟ್‌ಮೆಂಟ್‌ಗಳು ಸುಂದರವಾಗಿದ್ದರೂ (‘ದ್ವೇಷ ಮಾಡಲು ಯಾರೂ ಇಲ್ಲದ ಸ್ಥಿತಿಯಲ್ಲೂ ಮನುಷ್ಯ ತಲ್ಲಣಿಸಿಬಿಡುತ್ತಾನೆ’) ಅನಪೇಕ್ಷಿತ ಅತಿಕ್ರಮಣದಂತೆ ಕಾಣಿಸುತ್ತದೆ. ಬಹುಶಃ ತನ್ನ ಕಥನದ ಅನುರಣನಶಕ್ತಿಯ ಮೇಲೆ ಪೂರ್ತಿ ನಂಬಿಕೆ ಇಲ್ಲದಿದ್ದಾಗ ಲೇಖಕ ಇಂಥ ಆಕರ್ಷಣೆಯ ಮೂಲಕ ಓದುಗರನ್ನು ತಣಿಸಲು ಹೊರಡುತ್ತಾನೆ. ಪಾತ್ರಗಳ ಸಂಭಾಷಣೆಯಲ್ಲಿಯೂ ಕೆಲವು ಕಡೆ ಅತಿಯಾದ ಗ್ರಂಥಸ್ಥ ಭಾಷೆ ಕೃತಕವಾಗಿ ತೋರುತ್ತದೆ. ತೆಂಬಕಪುರದ ಪಾತ್ರಗಳು ಮಾತಾಡುವಾಗ ಇದ್ದ ಆಡುಭಾಷೆ ಮಲೆನಾಡಿನಲ್ಲಿ ಕೇಶವ ಮತ್ತು ಅವನ ತಂದೆ ಮಾತಾಡುವಾಗ ಮಾಯವಾಗಿಬಿಡುತ್ತದೆ.  

ಕಾದಂಬರಿಯಲ್ಲಿ ಬರುವ ಕಲಘಟ್ಟದ ಜನಜೀವನದ ವಿವರಗಳು ಮಾಹಿತಿಯಾಗಿಷ್ಟೇ ದಾಟುವುದು ಈ ಕಾದಂಬರಿಯ ಬಹುದೊಡ್ಡ ಮಿತಿ. ಕಥೆಯನ್ನು ಹೇಳುವುದರ ಜೊತೆಗೆ ಅದು ಘಟಿಸುವ ಜೀವಂತ ಪರಿಸರವೊಂದನ್ನು ಸೃಷ್ಟಿಸುವುದು ಲೇಖಕರಿಗೆ ಬಹುತೇಕ ಕಡೆ ಸಾಧ್ಯವಾಗಿಲ್ಲ. ಕಾದಂಬರಿಯ ಕೊನೆಯ ಭಾಗದಲ್ಲಿ ಅಮ್ಮದಕಣ್ಣ, ಹಂಪಮ್ಮನನ್ನು ಗೋವಾಕ್ಕೆ ಕರೆದುಕೊಂಡು ಹೋಗುವ ಸನ್ನಿವೇಶವನ್ನೇ ನೋಡಬಹುದು. ದಟ್ಟ ಕಾಡಿನ ಆ ಇಡೀ ಪ್ರಯಾಣದಲ್ಲಿ ನಮಗೆ ಆ ಪಾತ್ರಗಳು ಕಾಣುತ್ತವೆಯೇ ಹೊರತು ಅವರು ಸಾಗುವ ಕಾಡಿನ ಪರಿಸರ ಜೀವಂತ ಅನುಭವವಾಗಿ ದಕ್ಕುವುದೇ ಇಲ್ಲ. ಗೇಬ್ರಿಯಲ್‌ ಪ್ರಯಾಣ ಭಾರತಕ್ಕೆ ಪ್ರಯಾಣ ಬರುವ ಹಡಗಿನ ಪ್ರಯಾಣದ ಸನ್ನಿವೇಶ, ತೆಂಬಕ್ಕ ಸತಿ ಹೋಗುವ ಸಂದರ್ಭ, ಅಡವಿಸ್ವಾಮಿಯ ಪ್ರತಿಭಟನೆಯಂಥ ಕೆಲವು ಸನ್ನಿವೇಶಗಳು ಇದಕ್ಕೆ ಅಪವಾದ.

ಪಾತ್ರಗಳಿಗೆ ಒಂದು ಶುಭಾಂತ್ಯ ಕೊಡಲೇಬೇಕು ಎಂಬ ಲೇಖಕರ ಹಟ ಕಾದಂಬರಿಯ ಅಂತ್ಯವನ್ನು ಗಾಢವಾಗಿಸಿಲ್ಲ. ಗೇಬ್ರಿಯಲ್ ತಂದಿದ್ದ ಬಣ್ಣದ ಮೀನುಗಳು ಎಷ್ಟೋ ವರ್ಷಗಳ ನಂತರ ತುಂಗಾನದಿಯಲ್ಲಿ ಕಾಣಿಸಿಕೊಳ್ಳುವುದು, ಗೇಬ್ರಿಯಲ್‌ಗೆ ಮತ್ತೆ ಲಿಸ್ಬಾ ಭೇಟಿಯಾಗುವುದು, ಹಂಪಮ್ಮ, ಅಮ್ಮದಕಣ್ಣನನ್ನು ಪ್ರೇಮಿಸುವುದೆಲ್ಲವೂ ಪಾತ್ರಗಳನ್ನು ದಡಮುಟ್ಟಿಸಲು ಮಾಡಿದ ಕೃತಕಜೋಡಣೆಯಂತೆ ಭಾಸವಾಗುತ್ತದೆ. 

ವಸ್ತು, ಅಧ್ಯಯನ, ಹರಹು ಈ ಎಲ್ಲದರಲ್ಲಿಯೂ ಈ ಕಾದಂಬರಿ ಮೆಚ್ಚುಗೆ ಗಳಿಸುತ್ತದೆ. ಆದರೆ ಲೇಖಕ ವಸುಧೇಂದ್ರ ಅವರಿಗೆ ಈ ಕಾದಂಬರಿಯ ಮೂಲಕ ಸೃಜನಶೀಲಯಾನದಲ್ಲಿ ದೊಡ್ಡ ಯಶಸ್ಸು ಸಾಧ್ಯವಾಗಿದೆಯೇ ಎಂದು ಕೇಳಿದರೆ... ಹೌದೆನ್ನುವುದು ಕಷ್ಟ.

- ಪದ್ಮನಾಭ ಭಟ್

ಕೃಪೆ : ಪ್ರಜಾವಾಣಿ, (2020 ಮಾರ್ಚಿ 01)

..................................................................................................

ಮಾನವತೆಯ ಹೆಸರಿನಲ್ಲಿ ಓದಿ ಓದಿ ಮರುಳಾಗಿ ಎಂದು ಹೇಳುವ ತೋರುಗಾಣಿಕೆಯ ಕತೆ-ರೇಣುಕಾರಾಧ್ಯ ಎಚ್. ಎಸ್.-ವಾರ್ತಾಭಾರತಿ
 
ಭಿನ್ನ ಧರ್ಮೀಯ ಆಚರಣೆ-ಸಂಸ್ಕೃತಿಗಳ ಪಾಕ-ತೇಜೋ ತುಂಗಭದ್ರಾ   

----

 ‘ತೇಜೋ ತುಂಗಭದ್ರಾ’ ಎಂಬ ಐತಿಹಾಸಿಕ ಚಂದಮಾಮ ಶೈಲಿಯ ಕಾದಂಬರಿ

---

 

Related Books