ಪ್ರಖ್ಯಾತ ಲೇಖಕರಾದ ಎಸ್. ಎಲ್. ಭೈರಪ್ಪನವರ ’ಸಾರ್ಥ’ ಕಾದಂಬರಿಯು ಭಾರತದಲ್ಲಿ ನಡೆದ ಧರ್ಮಗಳ ತಿಕ್ಕಾಟದ ಕುರಿತ ಕಾದಂಬರಿ. ಸಾರ್ಥ ಒಂದು ಹಳೆಯ ಪದವಾಗಿದ್ದು, ಸರಕು ಸಾಮಾನುಗಳನ್ನು ಹೊತ್ತು ಸಾಗಿಸುವ ಜನಗಳ ಗುಂಪು ಮತ್ತು ಜನಗಳ ಪ್ರಯಾಣವನ್ನು ಸೂಚಿಸುತ್ತದೆ. ಈ ಕಾದಂಬರಿಯು ಕ್ರಿಸ್ತ ಶಕ ೮ನೇ ಶತಮಾನದಲ್ಲಿ ಭಾರತದಲ್ಲಿ ಆದ ರಾಜಕೀಯ, ಧಾರ್ಮಿಕ, ಮತ್ತು ಆಧ್ಯಾತ್ಮಿಕ ಸಂಗತಿಗಳ ಆಧಾರದಮೇಲೆ ರಚಿತವಾಗಿದೆ.ಐತಿಹಾಸಿಕ ವ್ಯಕ್ತಿಗಳಾದ ಆದಿ ಶಂಕರಾಚಾರ್ಯ, ಮಂಡನ ಮಿಶ್ರ, ಉಭಯ ಭಾರತಿ, ಕುಮಾರಿಲ ಭಟ್ಟರನ್ನು, ಮತ್ತು ಹಳೆಯ ನಳಂದ ವಿಶ್ವವಿದ್ಯಾನಿಲಯಗಳನ್ನು ಒಳಗೊಂಡಿದೆ.
ವೈದಿಕ ಸಂಪ್ರದಾಯದಲ್ಲಿ ಜನಿಸಿದ ನಾಗಭಟ್ಟನು ಭಾರತದ ವಿವಿಧ ಪ್ರದೇಶಗಳಲ್ಲಿ ಸಂಚರಿಸುವದು ಕಥೆಯ ಒಂದು ಮುಖವಾದರೆ, ಇನ್ನೊಂದು ಮುಖ ಅವನ ಆಧ್ಯಾತ್ಮಿಕ ಅಂತರ್ಯಾತ್ರೆ. ಹೀಗೆ ಎಂಟನೇ ಶತಮಾನದ ಐತಿಹಾಸಿಕ ಕಥಾವಸ್ತುವನ್ನು ಹೊಂದಿರುವ 'ಸಾರ್ಥ' ಒಂದು ವಿಶಿಷ್ಟ ಕೃತಿಯಾಗಿದೆ. ನಾಗಭಟ್ಟನು ಸಾಂಪ್ರದಾಯಿಕ ಹಿನ್ನಲೆಯಿಂದ ಬಂದವನಾದರೂ ಇತರ ಧಾರ್ಮಿಕ ಸಂಪ್ರದಾಯಗಳನ್ನು ತಿಳಿದುಕೊಳ್ಳುವ ಆಸಕ್ತಿಯುಳ್ಳವನು; ವಿಚಿತ್ರವೆನಿಸುವ ವಿಧಿವಿಧಾನಗಳಲ್ಲೂ ತನ್ನನ್ನು ತೊಡಗಿಸಿಕೊಳ್ಳುವ ನೈತಿಕ ಮತ್ತು ಆಧ್ಯಾತ್ಮಿಕವಾಗಿ ಸಾಹಸೀ ಮನೋಭಾವವುಳ್ಳವನು.
ಸೆಳೆದು ಓದಿಸಿಕೊಂಡು ಹೋಗುವ ಕಥಾನಿರೂಪಣೆ, ಪುರಾವೆಗಳನ್ನು ಆಧರಿಸಿದ ಚಾರಿತ್ರಿಕ ಸಂಗತಿ ಮತ್ತು ವ್ಯಕ್ತಿಗಳನ್ನು ಆಧರಿಸಿರುವ ಕಥಾವಸ್ತು ಈ ಕಾದಂಬರಿಯ ವೈಶಿಷ್ಟ್ಯ. ದೇಶ-ಕಾಲಗಳ ಮಿತಿಯನ್ನು ಮೀರಿದ 'ಸನಾತನ ಭಾರತ'ವೆಂಬ ಆನುಭಾವಿಕ ಸತ್ಯವನ್ನು ಕಾದಂಬರಿ ಪ್ರಕಾರದ ಸಾಹಿತ್ಯದಲ್ಲಿ ವಿಶಿಷ್ಟರೀತಿಯಲ್ಲಿ ನಿರೂಪಿಸಲಾಗಿದೆ.
ಹವ್ಯಕ ಭಾಷೆಗೆ ಸಾರ್ಥ
ಎಸ್. ಎಲ್. ಭೈರಪ್ಪನವರ 'ಸಾರ್ಥ' ಕಾದಂಬರಿಯು ಅನುವಾದ ಪ್ರಕ್ರಿಯೆಯಲ್ಲಿ ಒಂದು ಹೊಸ ಮಜಲನ್ನು ತಲುಪಿದೆ. ಕನ್ನಡ ಭಾಷೆಯ ಒಂದು ಪ್ರಾದೇಶಿಕ ಪ್ರಭೇದ ಎನಿಸಿರುವ ಹವ್ಯಕ ಭಾಷೆಗೆ 'ಸಾರ್ಥ' ಅನುವಾದಗೊಂಡಿದ್ದು. ಆ ಮೂಲಕ ಅಪರೂಪದ ದಾಖಲೆಯನ್ನೂ ನಿರ್ಮಿಸಿದೆ. ಈಗಾಗಲೇ ಸಂಕೇತಿ ಭಾಷೆಗೆ ಈ ಕಾದಂಬರಿಯನ್ನು ಅನುವಾದಿಸಲಾಗಿದ್ದು, ಆ ಅನುವಾದವನ್ನು ಮಾಡಿರುವ ಡಾ| ಬಿ.ಎಸ್.ಪ್ರಣತಾರ್ತಿಹರನ್ ಅವರ ಸುದೀರ್ಘ ಅವಲೋಕ'ನವು ಈ ಪುಸ್ತಕದಲ್ಲಿ ಒಳಗೊಂಡಿದ್ದು ಹೊಸ ಆಯಾಮವನ್ನು ನೀಡಿದೆ.
ಸಾರ್ಥವನ್ನು ಹವ್ಯಕ ಭಾಷೆಗೆ ಅನುವಾದಿಸಿರುವ ಸುಬ್ರಾಯ ಮತ್ತಿಹಳ್ಳಿ ಅವರು, ಈ ಅನುವಾದವನ್ನು 'ಹವ್ಯಕ ಭಾಷಾ ಅನುಸ್ಪಂದನ' ಎಂದು ಕರೆದಿರುವುದು ಕುತೂಹಲಕಾರಿ. ಕಾದಂಬರಿಯೊಂದನ್ನು ಹವ್ಯಕದಂತಹ ವಿಶಿಷ್ಟ ಪ್ರಾದೇಶಿಕ ಭಾಷೆಗೆ ಅನುವಾದಿಸುವ ಕಾರ್ಯವು ಅನುಸ್ಪಂದನೆಯೇ ಸರಿ. ‘ಆಡುಭಾಷೆ ನಗರೀಕರಣದಿಂದ ಸಂಕರಗೊಳುತ್ತದೆ. ಅದೇ ಭಾಷೆಯ ನಡುವೆಯೇ ಉಸಿರಾಡುತ್ತಿರುವವರು ಮಾತ್ರ ಆ ಭಾಷೆಯ ಬನಿಯನ್ನು ಕಾಯ್ದುಕೊಳ್ಳಬಲ್ಲರು' ಎಂದ ಡಾ| ಭೈರಪ್ಪನವರ ಪ್ರೋತ್ಸಾಹದ ಮಾತುಗಳು ಅನುವಾದ ಕಾರ್ಯಕ್ಕೆ ವಿಶೇಷ ಸ್ಫೂರ್ತಿ ತುಂಬಿತು ಎಂದು ಅನುವಾದಕರು ಹೇಳಿಕೊಂಡಿರುವುದು ಅರ್ಥಪೂರ್ಣ. ಹಾಗೆ ನೋಡಿದರೆ 'ಸಾರ್ಥ' ಕಾದಂಬರಿಯನ್ನು ಅನುವಾದಿಸುವುದು, ಅದಕ್ಕೆ ಅನುಸ್ಪಂದಿಸುವುದು ಸರಳ ಪ್ರಕ್ರಿಯೆ ಅಲ್ಲ 350ಕ್ಕೂ ಹೆಚ್ಚು ಪುಟಗಳನ್ನು ಹೊಂದಿದ 'ಸಾರ್ಥ'ವು, ಎಂಟನೆಯ ಶತಮಾನದ ಭಾರತದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ತಲ್ಲಣಗಳನ್ನು ಕಟ್ಟಿಕೊಡುವ ಅರ್ಥಪೂರ್ಣ ಕಾದಂಬರಿ, ಈ ಬೃಹತ್ ಕೃತಿಯ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ, ವಿಮರ್ಷೆಗಳು ನಡೆದಿವೆ. ಈ ಪುಸ್ತಕಲ್ಲಿ ಅಡಕಗೊಂಡಿರುವ ‘ಅವಲೋಕನ'ದ ವಿಚಾರಗಳು ಇಲ್ಲಿ ಸಂಗತ, 'ಪ್ರಾರಂಭದಿಂದ ಕೊನೆಯವರೆಗೆ ಇರುವ ನಿರೂಪಣೆಯೂ ಕೇವಲ ಕಥೆಯೊಂದರ ಪ್ರಕಟಣೆಯಲ್ಲ ಅದು ಕೇವಲ ಕಥೆಯಾಗಿದ್ದರೆ ಅಲ್ಲಿ ಯಾವ ತಂತ್ರವೇ ಇರಲಿ, ಸ್ವಾರಸ್ಯವಿರಲಿ, ಕುತೂಹಲದ ಉದ್ಘಾಟನೆ ಇರಲಿ ಒಮ್ಮೆ ಓದಿದ ಮೇಲೆ ಮುಗಿದು ಹೋಗುತ್ತದೆ. ಬಹುಪಾಲು ಕಾದಂಬರಿಗಳ ಓದಿನ ಸಮಾಪ್ತಿ ಅದು. ಕಥೆಯ ಹೆಣಿಗೆಯೊಂದಿಗೆ ಇರುವ ಬೌದ್ದಿಕ ಕಾವು, ವೈಚಾರಿಕತೆಯ ಹರಿತ, ದರ್ಶನದ ಮೇಲೆ, ತೀವ್ರತೆ, ಉದ್ವೇಗ ಇಂತಹ ಎಲ್ಲವೂ ಅದೇ ಮಾದರಿಯವು.
ಆದರೆ ಮತ್ತೆ ಮತ್ತೆ ಓದಿಗೆ ತೆರೆದಕೊಳ್ಳುವ ಮತ್ತು ಪರಿಭಾವಿಸಿದಷ್ಟೂ ಅರ್ಥಗಳಿಗೆ ತೆರೆದುಕೊಳ್ಳುವ, ಆಕರ್ಷಣೆಯ ನವೀನವಾಗಿರುವ ಅಪೂರ್ವ ಗುಣವು ಈ ಕಾದಂಬರಿಗೆ ದಕ್ಕಿದೆ. ಶ್ರೇಷ್ಠ ಕಾದಂಬರಿಕಾರರ ಎಲ್ಲ ಪಟ್ಟು ಗಳೂ ಇಲ್ಲಿವೆ; ಆದರೆ ಅವೆಲ್ಲವೂ ಬೆರೆತಿರುವ ಹದದಲ್ಲಿಯೇ ಈ ಯಶಸ್ಸಿನ ರಹಸ್ಯವಿದೆ. ಈ ಅನುಪಮ ನೆಲೆಯೇ ಭೈರಪ್ಪನವರನ್ನು ಜಗತ್ತಿನ ಅತಿ ವಿಶಿಷ್ಟ ಕಾದಂಬರಿಕಾರರನ್ನಾಗಿಸಿದೆ.' (ಪುಟ 62) - ಸುಬ್ರಾಯ ಮತ್ತಿಹಳ್ಳಿಯವರು ಹವ್ಯಕ ಭಾಷೆಗೆ ಮಾಡಿರುವ ಅನುವಾದ ಅಥವಾ ಅನುಸ್ಪಂದನ ಮುದದಿಂದ ಓದಿಸಿಕೊಳ್ಳುತ್ತದೆ. ಕನ್ನಡವನ್ನೇ ಬಹುಪಾಲು ಹೋಲುವ, ಆದರೆ ಪೂರ್ವದ ಹಳಗನ್ನಡದ ಸ್ವರೂಪವನ್ನು ಮತ್ತು ಹಲವು ಪದಗಳನ್ನು ಇಂದಿಗೂ ಉಳಿಸಿಕೊಂಡಿರುವ ಹವ್ಯಕವು, ಅಪರೂಪದ ಭಾಷೆ ಎಂದೇ ಹೇಳಬೇಕು. ಮತ್ತಿಹಳ್ಳಿಯವರ ಅನುವಾದವನ್ನು ಓದಿದರೆ, ಹವ್ಯಕ ಭಾಷೆಯ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಅಸ್ಮಿತೆ ಮನತಟ್ಟುತ್ತದೆ. 'ಆನು ನಾಲಂದಕ್ಕೆ ಬಂದಿದ್ದೇ ಬುದ್ದನ ಆಳವಾದ ಪರಿಚಯ, ಅವ್ವ ತತ್ವದ್ ಚಿಗ್ರಿನ್ ಪರಿಮಳ ಸಿಕ್ಕು ಹೇಳಿ, ಆದ್ರ ಮಾತ್ರ ಯಿಲ್ನೋಡೀರೆ ತರ್ಕದ ಗಂಟೇ ತುಂಬೈಂಜು. ಅದ್ರಲ್ಲಿ ಉಪಭೇದಾ ಹೇಳು ವಜ್ರಯಾನ, ಸಹಜಯಾನ ಯಂಬ ಕವ್ಲಾಗಿ, ವಂದ್ರ ಸಂತೀಗೆ ಮತ್ತೊಂದು ಖಂಡ್ಸದು ಮಡ್ಸದ್ರಲ್ಲಿ ತೊಡಕ್ಕಂಜ. ಅದಲ್ಲಿ ಬೇರೆ ಬೇರೆ ದೇಶದ್ ಬಣ್ಣವೂ ಶೇರಂಜು. ತಂತ್ರಮಾರ್ಗ ಹಿಡ್ಕಂಡು ನಮ್ಮ ಸ್ಥಪತಿ ಹೊಸಾದಾರೀನೇ ಮಾಡ್ಕ್ಯಂಜ. ಅಂವ ಮಣ್ಣಲ್ಲಿ ಮಾಡಿದ್ ಶಿಲ್ಪನೋಡಿ ಯನ್ನ ಮನಸೆಂತೋ ಚಂಚಲಾ ಗ್ಹೋಜು, ಪ್ರೀತಿ, ಬುದ್ದಿ, ಬಾವಯೆಲ್ಲ ಕೂಡ್ಕೊಂಡಿರ ಜೋಡಿ ಯಾ ಸಂಭೋಗಾನಂತ್ರದಲ್ಲಿ ಕಣ್ಯಾಗಂಬ ಆ ಅದ್ಭುತ ಶಾಂತಿ ಯಿದ್ದಲೀ! ಅದೇ ಯಂಗೂ ಬೇಕು ಅನ್ನಸ್ತಾಯಿದ್ದು, ಚಂದ್ರಿಕೆ ನೆನಾಗು. ಹತಾಶೆ ವಂದ್ವದಿಗೆ, ಶೂನ್ಯ ಮತ್ತೆ ಕಾಡಲೆ ಹಿಡ್ಕೊತು, ಕಲೆ ಹೇಳದು ಗಂಡು-ಹೆಣ್ಣಿನ ಆಕರ್ಶಣಿಂದ ಆಚೀಚಿ ಯಂತಕ್ಕೆ ಜಿಗೀತಿಲ್ಲ? ಅಕಸ್ಮಾತ್ ಪ್ರಯತ್ನ ಮಾಡಿರೆ ಯದೇ ಆಕರ್ಶಣೆ ಆಧಾರಲ್ಲಿ ಸ್ವಲ್ಪ ಮಾತ್ರ ತಪ್ಪಕ್ಕು. ಯಿದ್ದ ದಾಟೇಹೋದ್ರೆ ಅಧ್ಯಾತ್ಮ ಸಿದ್ದಿಯಾಗಿ ಬುದ್ಧ ಹೇಳಿದ್ದು ಯದನ್ನೇಯಾ , ನಮ್ಮ ಯಾನ ಅಲ್ಲ, ಯುಗನದ್ದ ಶಿಲ್ಪ ಅಲ್ಲ ಅನ್ನಲೆ ಹಿಡು. ಬುದ್ಧನ ಮೂಲ ಬೋಧೆಯಾ ಯಾರ್ ತೆಳ್ಶಕೊಡ್ತ? ಯಿಲ್ಲಿ ತ್ರಿಪಿಟಕವಾ ಯೆಲ್ಲರೂ ಕಲಸ್ತ, ಆನೂ ವೋಡ್ತಾನೇ ಯಿದ್ದಿ, ವೇದ ಉಪನಿಷತ್ತಿಗೆಲ್ಲಾವ, ಸೂತ್ರ ಭಾಷ್ಯಯೆಲ್ಲ ಹಗ್ಗಾ ಆಗಿ, ಕ್ವಾಳಾಗಿ ಸುತ್ತೆ೦ಡ್ಹಾಂಗೆ, ಬುದ್ದನ್ ಸಂಸಾರದ್ ಉಪದೇಶಕ್ಕೂ ಮಹಾಮಹಾ ಆಚಾರ್ಯಂದಿಕ್ಕಾ ವೈಖ್ಯಾನದ್ ಹಗ್ಗ ಸುತ್ಂಜು. ಅದ್ರಿಂದ ಬಿಡಂಗಡು ಸರಳಾದ ಬೋಧ್ಯೆಯ ವೋದವು. ಅಲ್ಲಲ್ಲಾ ವೋಳವು.” (ಪುಟ 257)
ಸುಬ್ರಾಹ ಮತ್ತಿಹಳ್ಳಿಯವರ 'ಸಾರ್ಥ'ದ ಅನು ಸ್ಪಂದನೆಯನ್ನು ಕನ್ನಡದ ಓದುಗರು ತುಸು ಶ್ರಮಪಟ್ಟರೆ ಓದಲು, ಅರ್ಥಮಾಡಿಕೊಳ್ಳಲು ಸಾಧ್ಯ ಎನಿಸುತ್ತದೆ. ಕನ್ನಡದ ಪ್ರಮುಖ ಕಾದಂಬರಿಗಳಲ್ಲಿ ಒಂದು ಎನಿಸಿದ 'ಸಾರ್ಥ'ವು ಹವ್ಯಕ ಭಾಷೆಗೆ ಅನುವಾದಗೊಂಡ ವಿಚಾರವು ಈ ಕಾದಂಬರಿಯ ಪ್ರಾಮುಖ್ಯತೆಯನ್ನೂ ಗುರುತಿಸುತ್ತದೆ. ಜತೆಗೆ ಈ ಅನುವಾದ - ಅನುಸಂಧನವು, ಅಪರೂಪದ ಸಾರಸ್ವತ ದಾಖಲೆಯನ್ನು ನಿರ್ಮಿಸಿದೆ ಎಂದೇ ಹೇಳಬೇಕು.
ಶ. ಹಾ.
ಕೃಪೆ : ವಿಶ್ವವಾಣಿ, (2020 ಮಾರ್ಚಿ 01)
©2024 Book Brahma Private Limited.