‘ರೂಹಿಲ್ಲದ ಚೆಲುವ’ ವಿ.ಮಾ ಜಗದೀಶ್ ಅವರ ಅಕ್ಕಮಹಾದೇವಿ ಕುರಿತ ಐತಿಹಾಸಿಕ ಕಾದಂಬರಿಯಾಗಿದೆ. ಕೃತಿ ಕುರಿತು ಶಾಂತಾ ಇಮ್ರಾಪುರ ಹೀಗೆ ಹೇಳಿದ್ದಾರೆ; ಸಾಂಪ್ರದಾಯಿಕ ಸ್ತ್ರೀ ವಿರೋಧಿ ವ್ಯವಸ್ಥೆಯಲ್ಲಿ ಹುಟ್ಟಿ ಅಸಾಂಪ್ರದಾಯಿಕವಾಗಿ ಬದುಕು ಕಟ್ಟಿಕೊಂಡವಳನ್ನು ಸಮಾಜ ಅರಗಿಸಿಕೊಂಡೀತೇ? ಹೆಣ್ಣಿಗೆ ವಿವಾಹವೇ ಮೋಕ್ಷದ ಮಾರ್ಗವೆಂದು ನಂಬಿದ ಸಮಾಜಕ್ಕೆ ಇಹಕೊಬ್ಬ ಗಂಡನೇ? ಪರಕ್ಕೊಬ್ಬ ಗಂಡನೇ?” “ಈ ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕಾ ಎನ್ನ ಗಂಡ ಚೆನ್ನಮಲ್ಲಿಕಾರ್ಜುನ ದೇವನಲ್ಲದೇ ಮಿಕ್ಕಿದ ಗಂಡರ ಸಂಬಂಧವೆನಗಿಲ್ಲವಯ್ಯ” ಇತ್ಯಾದಿ ಅಕ್ಕನ ನಿಷ್ಠುರ ಪ್ರಹಾರಗಳಿಗೆ ಪ್ರತಿಕ್ರಿಯಿಸಿದ ಬಗೆ ಹೇಗೆ? ಇತ್ಯಾದಿ ಅಕ್ಕನ ವೃತ್ತಾಂತದ ಸಂಭಾವ್ಯತೆಗಳತ್ತ ಸೂಕ್ಷ್ಮ ಗಮನ ಹರಿಸುವ ಕಾದಂಬರಿಯಿದು. ಲೋಕದಲ್ಲಿ ಮಾನವ ಸಮಾಜದ ಗುಣಾತ್ಮಕ -ಋಣಾತ್ಮಕ ಆಯಾಮಗಳ ವಾಸ್ತವ ನೋಟವಿದೆ. ಏರುಜವ್ವನದ ಒಂಟಿ ಹುಡುಗಿ ದೈವೀ ಪ್ರೀತಿಯ ಉನ್ಮಾದದಲ್ಲಿ ಕಾಡುಮೇಡು ಅಲೆಯುತ್ತ ನಡೆದಾಗ ಹುಚ್ಚಿಯೆಂದು ಹಿಯ್ಯಾಳಿಸಿದವರು, ಹರೆಯದ ಹೆಣ್ಣೆಂದು ಬೆನ್ನಟ್ಟಿದವರು, ಅಪಮಾನಿಸಿದವರೊಂದಿಗೇ ಆಕೆಯ ಪಾರಮಾರ್ಥಿಕ ಹಂಬಲವನ್ನು ಪುರಸ್ಕರಿಸಿ, ಅವಳ ತಪೋಯಾತ್ರೆಗೆ ಆಸರೆಯಾದ ಅಂತಃಕರಣದ ಭಾವ ಸಂಬಂಧಗಳ ಹೆಣಿಗೆಯಲ್ಲಿ ಭವಹರನ ಬೆಳಗನುಟ್ಟು ಬಯಲಾದ ಮಹಾದೇವಿಯಕ್ಕನ ಹೆಜ್ಜೆ ಗುರುತುಗಳನ್ನು ಕಂಡರಿಸುವ ಸಾಹಸ 'ರೂಹಿಲ್ಲದ ಚೆಲುವ'. ದಶಕಗಳ ಅಧ್ಯಯನ, ಕ್ಷೇತ್ರಕಾರ್ಯ, ಸಂಶೋಧನೆಯ ಶ್ರಮದಿಂದ ದಕ್ಕಿಸಿಕೊಂಡ ಲೌಕಿಕ ವ್ಯಕ್ತಿತ್ವ ಮತ್ತು ಅಧ್ಯಾತ್ಮಿಕ ಕರ್ತೃತ್ವವನ್ನು ಶರಣ ಸಂಸ್ಕೃತಿಯ ಪಾರಮಾರ್ಥಿಕ ಪ್ರಭಾವಲಯದಲ್ಲಿ ಮೂರ್ತಿಕರಿಸುವಲ್ಲಿ ಲೇಖಕರ ದಾರ್ಶನಿಕ ಪ್ರಜ್ಞೆ, ಭಾವಸಂಸ್ಕಾರದ ಬೆಳಕು ಕೆಲಸ ಮಾಡಿದೆ.
ಹಿರಿಯ ಲೇಖಕ, ನಾಟಕಕಾರ ವಿ.ಮಾ. ಜಗದೀಶ್ ಶಿವಮೊಗ್ಗ ಜಿಲ್ಲೆಯ ಚಾಮೇನಹಳ್ಳಿ ಗ್ರಾಮದವರು. ತಂದೆ ವಿ.ರಾಜಶೇಖರಯ್ಯ. ಕನ್ನಡ ಎಂ.ಎ. ಪದವೀಧರರಾದ ಅವರು ಆಲ್ ಇಂಡಿಯಾ ರೇಡಿಯೋ ಆಕಾಶವಾಣಿಯಲ್ಲಿ 1976ರಿಂದ 1987 ರವರೆಗೆ ಪ್ರಸಾರ ನಿರ್ವಾಹಕರಾಗಿ ಕಾರ್ಯನಿರ್ವಹಿಸಿ ಆ ನಂತರ ಇಎಂಪಿಸಿ - ಐಜಿಎನ್ಓಯು (ಜ್ಞಾನವಾಣಿ)ಯಲ್ಲಿ ನಿಲಯ ನಿರ್ವಾಹಕರಾಗಿ ಸೇವೆಸಲ್ಲಿಸಿ ಆನಂತರದಲ್ಲಿ ಕ್ಷೇತ್ರ ಪ್ರಚಾರ ಅಧಿಕಾರಿಯಾಗಿಯೂ ಸೇವೆಸಲ್ಲಿಸಿದ್ದಾರೆ. ಕವಿತೆ, ಕಾದಂಬರಿ, ನಾಟಕ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ಪ್ರಕಟಿಸಿದ್ದಾರೆ. ...
READ MORE