‘ರಾಜಾ ಕೆಂಪೇಗೌಡ’ ಕಾದಂಬರಿಯು ಮಂಜುನಾಥ ಹಾಲುವಾಗಿಲು ಅವರ ಐತಿಹಾಸಿಕ ಕಾದಂಬರಿ. ಕೃತಿಗೆ ನಾಲ್ನುಡಿ ಬರೆದಿರುವ ರಾ. ನಂ ಚಂದ್ರಶೇಖರ ಅವರು, `ಇತಿಹಾಸ ರಚಿಸುವಾಗ ಇತಿಹಾಸಕಾರನ ವೈಯಕ್ತಿಕ ಅಭಿಪ್ರಾಯ ಮತ್ತು ಕಲ್ಪನೆಗಳಿಗೆ ಆಸ್ಪದ ಇರುವುದಿಲ್ಲ. ಆದರೆ, ಐತಿಹಾಸಿಕ ಕಾದಂಬರಿ ರಚಿಸುವ ಸಾಹಿತಿಗೆ ಹೆಚ್ಚಿನ ಸ್ವಾತಂತ್ರವಿರುತ್ತದೆ. ಅಂಶಗಳ ಆಯ್ಕೆ, ಬದಲಾವಣೆ, ಅಷ್ಟಿಷ್ಟು ಕಾಲ್ಪನಿಕ ಅಂಶಗಳನ್ನು ಜೋಡಿಸಲು ಕೃತಿಕಾರನಿಗೆ ಅವಕಾಶವಿರುತ್ತದೆ. ಈ ಕಾದಂಬರಿಗೆ 'ಬೆಂಗಳೂರು ನಿರ್ಮಾತೃ ರಾಜಾ ಕೆಂಪೇಗೌಡ' ಎಂದು ಹೆಸರಿಸಿದ್ದರೂ ಕೆಂಪೇಗೌಡರ ವಂಶದ ಮೂಲ ಪುರುಷ ರಣಭೈರೇಗೌಡರಿಂದ(1341) ಮುಮ್ಮುಡಿ ಕೆಂಪವೀರಪ್ಪಗೌಡನವರೆಗೆ(1728) ಸುಮಾರು ಎರಡು ತಲೆಮಾರಿನ ವಿವರವನ್ನು ಸರಳವಾಗಿ ಸುಲಲಿತ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಜೊತೆಗೆ, ಸನ್ನಿವೇಶಕ್ಕೆ ಹೊಂದುವಂತೆ ಹೊಯ್ಸಳರ, ವಿಜಯನಗರದ ಇತಿಹಾಸವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಮಧ್ಯದಲ್ಲಿ ಕೆಲವು ಕವಿತೆಗಳನ್ನು ಸೇರಿಸಿರುವುದು ಪರಿಣಾಮಕಾರಿಯಾಗಿದೆ. ಇದು ಚಿತ್ರಕಥೆ ಓದಿದ ಅನುಭವ ನೀಡುತ್ತದೆ. ಇನ್ನೂ, ಕೆಂಪೇಗೌಡ ಜೀವನದ ಕುರಿತು ಬೆಳಕು ಚೆಲ್ಲುವ ಈ ಕಾದಂಬರಿಯು ಕೃಷ್ಣದೇವರಾಯನ ಆಸ್ಥಾನಕ್ಕೆ ನಾಲ್ಕಾರು ಭಾರಿ ಭೇಟಿ ನೀಡಿದ್ದ ಕೆಂಪೇಗೌಡನ ಮೇಲೆ ವಿಜಯನಗರದ ರಾಜಧಾನಿಯ ವೈಭವ ಗಾಢವಾದ ಪರಿಣಾಮ ಬೀರಿತ್ತು ಎನ್ನುವುದನ್ನು ತಿಳಿಸುತ್ತದೆ. ಹೊಸ ರಾಜಧಾನಿಯನ್ನು ನಿರ್ಮಿಸಿ ಅದೇ ಮಾದರಿಯಲ್ಲಿ ರಾಜ್ಯಾಡಳಿತ ನಡೆಸಲು ಉದ್ದೇಶಿಸಿದ. 1537ರಲ್ಲಿ ಹೊಸ ರಾಜಧಾನಿಗೆ ಗುದ್ದಲಿ ಪೂಜೆ ನಡೆಯಿತು. ಹೊಸರಾಜಧಾನಿಗೆ 'ದೇವರಾಯ ಪಟ್ಟಣ' ಎಂದು ನಾಮಕರಣ ಮಾಡಲಾಯಿತೆಂದು ಪ್ರತೀತಿ ಇದೆ.
ಆದರೆ, ಹೊಸ ರಾಜಧಾನಿಗೆ 'ಬೆಂಗಳೂರು' ಎಂಬ ಹೆಸರೇ ಸ್ಥಿರವಾಯಿತು. ಬೆಂಗಳೂರೆಂದರೆ ಕೆಂಪೇಗೌಡ, ಕೆಂಪೇಗೌಡ ಎಂದರೆ ಬೆಂಗಳೂರು' ಅನ್ನುವಂತೆ ಹದಿನಾರನೇ ಶತಮಾನದಿಂದ ಇಂದಿನವರೆಗೆ ಕೆಂಪೇಗೌಡನ ಹೆಸರಿನೊಂದಿಗೆ ಬೆಂಗಳೂರು ಸೇರಿಕೊಂಡಿದೆ. ಇಮ್ಮಡಿ ಕೆಂಪೇಗೌಡ ಬೆಂಗಳೂರಿನ ನಾಲ್ಕು ಕಡೆ ಕಾವಲು ಗೋಪುರಕಟ್ಟಿಸಿದ. ಅವು ಪೂರ್ವಕ್ಕೆ ಹಲಸೂರು ಕೆರೆ ಏರಿಯ ಮೇಲೆ, ಪಶ್ಚಿಮಕ್ಕೆ ಕೆಂಪಾಂಬುದಿ ಕೆರೆ ಏರಿಯ ಮೇಲೆ, ಉತ್ತರಕ್ಕೆ ಹೆಬ್ಬಾಳದ ರಸ್ತೆಯ ಕಡೆ, ದಕ್ಷಿಣಕ್ಕೆ ಲಾಲ್ಬಾಗಿನ ಬಂಡೆಯ ಮೇಲೆ ಇವೆ. ಇದು ಇತಿಹಾಸದ ಕಿರು ನೋಟ, ಈ ವಂಶವೃಕ್ಷಕ್ಕೆ ಪೂರಕವಾಗಿ ಸಾಕಷ್ಟು ಪಾತ್ರ, ಸನ್ನಿವೇಶ ಮತ್ತು ರೋಚಕ ಸಂಗತಿಗಳನ್ನು ಸೃಷ್ಟಿಸಿ ಕಾದಂಬರಿ ರಚಿಸುವುದು ದೊಡ್ಡ ಸವಾಲು. ಈ ಸವಾಲನ್ನು ಸಮರ್ಥವಾಗಿ ಮಂಜುನಾಥ ಹಾಲುವಾಗಿಲು ಯಶಸ್ವಿಯಾಗಿ ಎದುರಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಮಂಜುನಾಥ ಹಾಲುವಾಗಿಲು ಮೂಲತಃ ಹಾಸನದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಿಂದ ಪದವೀಧರರು. ಓದು-ಬರಹ ಅವರ ಆಸಕ್ತಿ ಕ್ಷೇತ್ರಗಳು. ಕೃತಿಗಳು: ರಾಜಕುಮಾರ ಪಂಚಪದಿ, ರಾಜಾ ಕೆಂಪೇಗೌಡ ...
READ MORE